22ರಂದು ಭಾಲ್ಕಿಯಲ್ಲಿ ಡಾ.ಪಟ್ಟದ್ದೇವರ 134ನೇ ಜಯಂತ್ಯುತ್ಸವ

KannadaprabhaNewsNetwork | Published : Dec 20, 2023 1:15 AM

ಸಾರಾಂಶ

ಚನ್ನಬಸವಾಶ್ರಮದಲ್ಲಿ ಡಿ.22ರಂದು ಡಾ.ಚನ್ನಬಸವ ಪಟ್ಟದ್ದೇವರ 134ನೇ ಜಯಂತ್ಯುತ್ಸವ ಮತ್ತು ಮೂರ್ತಿ ಅನಾವರಣ ಸಮಾರಂಭ ಅರ್ಥಪೂರ್ಣ ಆಚರಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ

ಭಾಲ್ಕಿ: ಇಲ್ಲಿಯ ಚನ್ನಬಸವಾಶ್ರಮದಲ್ಲಿ ಡಿ.22ರಂದು ಡಾ.ಚನ್ನಬಸವ ಪಟ್ಟದ್ದೇವರ 134ನೇ ಜಯಂತ್ಯುತ್ಸವ ಮತ್ತು ಮೂರ್ತಿ ಅನಾವರಣ ಸಮಾರಂಭ ಅರ್ಥಪೂರ್ಣ ಆಚರಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್‌ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.

ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಟ್ಟದ್ದೇವರ ಜಯಂತ್ಯುತ್ಸವ ಅಂಗವಾಗಿ ಈಗಾಗಲೇ ಅವರ ಜನ್ಮಸ್ಥಳ ಕಮಲನಗರದಿಂದ ಭಾಲ್ಕಿಗೆ ಪಾದಯಾತ್ರೆ ಮೂಲಕ ಬಸವ ಜ್ಯೋತಿ ತರಲಾಗಿದೆ. ಶರಣತತ್ವ ದರ್ಶನ ಪ್ರವಚನ ಆರಂಭಗೊಂಡಿದೆ. ವಿವಿಧ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಪಟ್ಟದ್ದೇವರ ಜಯಂತಿ ಸಂಭ್ರಮದಿಂದ ಆಚರಿಸಲಾಗುತ್ತಿದೆ ಎಂದರು.

ಅಂದು ಬೆಳಗ್ಗೆ 6ಕ್ಕೆ ಹಿರೇಮಠ ಸಂಸ್ಥಾನದಿಂದ ಚನ್ನಬಸವಾಶ್ರಮದವರೆಗೆ ಬಸವಪ್ರಭಾತಫೇರಿ ನಡೆಯಲಿದೆ. 7ಕ್ಕೆ ಷಟಸ್ಥಲ ಧ್ವಜಾರೋಹಣ ನೆರವೇರುವುದು. 7.30ಕ್ಕೆ ವಚನಾಭಿಷೇಕ ಜರುಗಲಿದೆ. 10ಕ್ಕೆ ಪಟ್ಟದ್ದೇವರ ಮೂರ್ತಿ ಅನಾವರಣ, 10.30ಕ್ಕೆ ತೊಟ್ಟಿಲು ಕಾರ್ಯಕ್ರಮ, 11ಕ್ಕೆ ವೇದಿಕೆ ಕಾರ್ಯಕ್ರಮ, ವಿವಿಧ ಸ್ಪರ್ಧೆಯ ವಿಜೇತರಿಗೆ ಬಹುಮಾನ, ಸಾಧಕರಿಗೆ ಸನ್ಮಾನ, ಸಂಜೆ 4ಕ್ಕೆ ಸಮಾರೋಪ ಸಮಾರಂಭ ಜರುಗಲಿದೆ.

ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ಪೂಜ್ಯರ ಜಯಂತ್ಯುತ್ಸವ ಡಾ.ಬಸವಲಿಂಗ ಪಟ್ಟದ್ದೇವರ ಸಾನಿಧ್ಯದಲ್ಲಿ ವೈಭವದಿಂದ ನೆರವೇರಿಸಲು ಸಿದ್ಧತೆ ಪೂರ್ಣಗೊಂಡಿವೆ ಪಟ್ಟದ್ದೇವರ ಜಯಂತ್ಯುತ್ಸವ ಉದ್ಘಾಟನೆ ಸಮಾರಂಭದ ಸಾನ್ನಿಧ್ಯವನ್ನು ನಿಡಸೋಸಿ ಜಗದ್ಗುರು ದುರದುಂಡೇಶ್ವರ ಸಿದ್ಧಸಂಸ್ಥಾನ ಮಠದ ಜಗದ್ಗುರು ಪಂಚಮಶಿವಲಿಂಗೇಶ್ವರ ಸ್ವಾಮೀಜಿವಹಿಸಲಿದ್ದಾರೆ ಎಂದರು.

ವಿ.ಸಿದ್ಧರಾಮಣ್ಣ ಶರಣರು ಸಮ್ಮುಖ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಸಮಾರಂಭ ಉದ್ಘಾಟಿಸಲಿದ್ದಾರೆ.

ಸಚಿವ ರಹೀಮ್‌ ಖಾನ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಎಂಎಲ್ಸಿ ರಘುನಾಥ ಮಲ್ಕಾಪೂರೆ ಅವರು ಬಸವ ಗುರುವಿನ ಪೂಜೆ ನೆರವೇರಿಸುವರು. ನಿವೃತ್ತ ಐಪಿಎಸ್‌ ಅಧಿಕಾರಿ ಡಾ.ಡಿ.ವಿ.ಗುರುಪ್ರಸಾದ ಅನುಭಾವ ನೀಡಲಿದ್ದಾರೆ. ಮಾಜಿ ಶಾಸಕ ಪ್ರಕಾಶ ಖಂಡ್ರೆ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.

ಇದೇ ವೇಳೆ ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯ ಸಿಂಗ್‌, ಡಾ.ಅರವಿಂದ ಜತ್ತಿ, ಬೀದರ್‌ ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಅಭಿಷೇಕ ಪಾಟೀಲ್‌, ಡಾ. ಸಂತೋಷ ಕುಮಾರ ಓಂಕಾರ ಬಲ್ಲೂರೆ ಹಾಗೂ ಸುಧಾ ಸಚಿನ ಕುಂಬಾರ ಅವರನ್ನು ಗೌರವಿಸಲಾಗುತ್ತದೆ. ಸಮಾರಂಭದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಸಮಾರೋಪದ ನಂತರ ಮಹಾಕ್ರಾಂತಿ ನಾಟಕ ಪ್ರದರ್ಶನಗೊಳ್ಳಲಿದೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮಾರಂಭ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.

ಹುಗ್ಗಿ ಪಾಟೀಲ್‌ಗೆ ಡಾ.ಚನ್ನಬಸವ ಪಟ್ಟದ್ದೇವರ ಕಾಯಕ ಪ್ರಶಸ್ತಿ:

ಪಟ್ಟದ್ದೇವರ ಧ್ಯಾನ ಮಂದಿರದಲ್ಲಿ ಸ್ಥಾಪನೆ ಮಾಡಿರುವ ಡಾ.ಚನ್ನಬಸವ ಪಟ್ಟದ್ದೇವರ ಮೂರ್ತಿಯನ್ನು ನಿಡಸೋಸಿ ಪೂಜ್ಯರು ಅನಾವರಣಗೊಳಿಸಲಿದ್ದಾರೆ. 2023ನೇ ಸಾಲಿನ ಡಾ.ಚನ್ನಬಸವ ಪಟ್ಟದ್ದೇವರ ಕಾಯಕ ಪ್ರಶಸ್ತಿಯನ್ನು ಬೀದರ್‌ನ ಅಕ್ಕಮಹಾದೇವಿ ಮಹಿಳಾ ಕಾಲೇಜಿನ ಉಪನ್ಯಾಸಕ ಶಿವಶರಣಪ್ಪ ಹುಗ್ಗೆ ಪಾಟೀಲ್‌ ಅವರಿಗೆ ನೀಡಿ ಗೌರವಿಸಲಾಗುತ್ತಿದೆ ಎಂದು ತಿಳಿಸಿದರು.

Share this article