ದಸರಾ ದೀಪಾಲಂಕಾರ, ಡ್ರೋನ್ ಶೋ ಪೋಸ್ಟರ್, ಟೀಸರ್ ಬಿಡುಗಡೆ

KannadaprabhaNewsNetwork |  
Published : Sep 15, 2025, 01:00 AM IST
7 | Kannada Prabha

ಸಾರಾಂಶ

ಎಂದಿನಂತೆ ಈ ಬಾರಿಯೂ ಸೆಸ್ಕ್ ವತಿಯಿಂದ ದೀಪಾಲಂಕಾರ ಮಾಡಲಾಗುತ್ತಿದ್ದು, ನಗರದ 135 ಕಿ.ಮೀ ವ್ಯಾಪ್ತಿಯ ರಸ್ತೆಗಳು ಹಾಗೂ 118 ವೃತ್ತಗಳಲ್ಲಿ ದೀಪಾಲಂಕಾರ ಮಾಡಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ವಿದ್ಯುತ್ ದೀಪಾಲಂಕಾರ ಹಾಗೂ ಡ್ರೋನ್ ಪ್ರದರ್ಶನದ ಪೋಸ್ಟರ್ ಹಾಗೂ ದೀಪಾಲಂಕಾರದ ಟೀಸರ್ ಅನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಬಿಡುಗಡೆಗೊಳಿಸಿದರು.

ಮೈಸೂರು ಅರಮನೆ ಆಡಳಿತ ಮಂಡಳಿ ಸಭಾಂಗಣದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ (ಸೆಸ್ಕ್) ವತಿಯಿಂದ ನಡೆಸಲಾಗುವ ದಸರಾ ದೀಪಾಲಂಕಾರ ಹಾಗೂ ಡ್ರೋನ್ ಪ್ರದರ್ಶನದ ಪೋಸ್ಟರ್ ಬಿಡುಗಡೆಗೊಳಿಸಿದ ಸಚಿವರು, ಟೀಸರ್ ಅನಾವರಣಗೊಳಿಸಿದರು.

ಎಂದಿನಂತೆ ಈ ಬಾರಿಯೂ ಸೆಸ್ಕ್ ವತಿಯಿಂದ ದೀಪಾಲಂಕಾರ ಮಾಡಲಾಗುತ್ತಿದ್ದು, ನಗರದ 135 ಕಿ.ಮೀ ವ್ಯಾಪ್ತಿಯ ರಸ್ತೆಗಳು ಹಾಗೂ 118 ವೃತ್ತಗಳಲ್ಲಿ ದೀಪಾಲಂಕಾರ ಮಾಡಲಾಗುತ್ತಿದೆ. ಅವುಗಳೊಂದಿಗೆ ಪ್ರಮುಖ ರಸ್ತೆಗಳು ಹಾಗೂ ವೃತ್ತಗಳಲ್ಲಿ ಆಕರ್ಷಕ ಪ್ರತಿಕೃತಿಗಳನ್ನು ಇರಿಸಲಾಗುತ್ತದೆ. ದೀಪಾಲಂಕಾರಕ್ಕಾಗಿ 300 ಕಿಲೋ ವ್ಯಾಟ್ ಗಳ, 257520 ಯೂನಿಟ್ ಗಳ ವಿದ್ಯುತ್ ಬಳಸಲಾಗುತ್ತಿದೆ.

ಆಕರ್ಷಕ ಡ್ರೋನ್ ಶೋ

ದಸರಾ ಮಹೋತ್ಸವದ ಸಂಭ್ರಮಕ್ಕೆ ಡ್ರೋನ್ ಪ್ರದರ್ಶನ ಈ ಬಾರಿ ಮತ್ತಷ್ಟು ಆಕರ್ಷಣೀಯವಾಗಿರಲಿದೆ. ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಸೆ.28, 29 ಮತ್ತು ಅ.1, 2 ರಂದು ಡ್ರೋನ್ ಪ್ರದರ್ಶನ ನಡೆಸಲಾಗುತ್ತಿದೆ. ಕಳೆದ ಬಾರಿ 1500 ಡ್ರೋನ್ ಬಳಸಿಕೊಂಡು ನಡೆಸಲಾಗಿದ್ದ ಡ್ರೋನ್ ಪ್ರದರ್ಶನದಲ್ಲಿ ಈ ಬಾರಿ 3000 ಸಾವಿರ ಡ್ರೋನ್ ಬಳಸಿಕೊಂಡು ನಡೆಸಲಾಗುತ್ತಿದೆ.

ಸೆಸ್ಕ್ ಅಧ್ಯಕ್ಷರಾದ ಶಾಸಕ ರಮೇಶ್ ಬಂಡಿಸಿದ್ದೇಗೌಡ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಡಾ. ಪುಷ್ಪಾ ಅಮರನಾಥ್, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ಜಿಪಂ ಸಿಇಒ ಎಸ್. ಯುಕೇಶ್ ಕುಮಾರ್, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ನಗರ ಪಾಲಿಕೆ ಆಯುಕ್ತ ಶೇಕ್ ತನ್ವೀರ್ ಆಸೀಫ್, ಎಸ್ಪಿ ಎನ್. ವಿಷ್ಣುವರ್ಧನ್, ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ. ಮುನಿಗೋಪಾಲರಾಜು, ಅಧೀಕ್ಷಕ ಎಂಜಿನಿಯರ್ ಸುನಿಲ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ. ಶಿವರಾಜು ಮೊದಲಾದವರು ಇದ್ದರು.

----

ಬಾಕ್ಸ್...

ಅಗತ್ಯ ಸುರಕ್ಷತಾ ಕ್ರಮಗಳು

ಈ ಬಾರಿಯ ದಸರಾ ವಿದ್ಯುತ್ ದೀಪಾಲಂಕಾರದಲ್ಲಿ ಸೆಸ್ಕ್ ವತಿಯಿಂದ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಲಾಗಿದ್ದು, ಆ ಮೂಲಕ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ. ಪ್ರಮುಖವಾಗಿ ದೀಪಾಲಂಕಾರದ ಕಂಬಗಳನ್ನು ಮುಟ್ಟದೆ, ಅಂತರ ಕಾಯ್ದುಕೊಳ್ಳುವುದು, ದೀಪಾಲಂಕಾರದ ಕಂಬಗಳ ಹತ್ತಿರ ನಿಂತು ಫೋಟೋ/ ವಿಡಿಯೋ ಶೂಟ್‌ ಮಾಡುವುದನ್ನು ತಪ್ಪಿಸುವುದು, ಮಳೆ ಸಂದರ್ಭದಲ್ಲಿ ವಿದ್ಯುತ್‌/ ದೀಪಾಲಂಕಾರದ ಕಂಬಗಳ ಹತ್ತಿರ ಹೋಗದೆ ಎಚ್ಚರವಹಿಸುವುದು, ನಗರದ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ದೀಪಾಲಂಕಾರಕ್ಕಾಗಿ ಕಂಬಗಳನ್ನು ಅಳವಡಿಸಿದ್ದು, ವಾಹನ ಸವಾರರು ಈ ಬಗ್ಗೆ ನಿಗಾ ವಹಿಸಿ ಸುರಕ್ಷಿತವಾಗಿ ಸಂಚರಿಸುವಂತೆ ಹಾಗೂ ವಿದ್ಯುತ್‌ ಸಂಬಂಧಿತ ದೂರು/ ದೀಪಾಲಂಕಾರದಿಂದ ತೊಂದರೆ ಆದಲ್ಲಿ 24x7 ಸಹಾಯವಾಣಿ 1912 ಸಂಪರ್ಕಿಸುವಂತೆ ಸೆಸ್ಕ್ ಎಂಡಿ ಕೆ.ಎಂ. ಮುನಿಗೋಪಾಲರಾಜು ಕೋರಿದ್ದಾರೆ.

PREV

Recommended Stories

ಟಿಕೆಟ್ ಆಯ್ತು, ಮಲ್ಟಿಪ್ಲೆಕ್ಸ್‌ಗಳಲ್ಲಿ ತಿಂಡಿ ದರ ಇಳಿಸಿ : ಸಿನಿ ಪ್ರಿಯರು
ಮಂಗಳಮುಖಿಯರು, ಮಹಿಳೆಯರಿಗೆ ಸರ್ಕಾರದಿಂದಲೇ ಉಚಿತ ಆಟೋ