ಕನ್ನಡಪ್ರಭ ವಾರ್ತೆ ಕುಂದಾಪುರ
ಬೆಂಗಳೂರಿನ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಇಲ್ಲಿನ ಉಳ್ಳೂರು ಗ್ರಾಮದಲ್ಲಿ ತಲಾ 2.50 ಲಕ್ಷ ರು.ವೆಚ್ಚದಲ್ಲಿ ಕೊರಗರ ಕಾಲೋನಿಯಲ್ಲಿ 14 ಮನೆಗಳಿಗೆ ಶಿಲಾನ್ಯಾಸವನ್ನು ಸೋಮವಾರ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರು ನೆರವೇರಿಸಿದರು. ನಂತರ ಆರ್ಶೀವಚನ ನೀಡಿದ ಶ್ರೀಗಳು, ಸಮಾಜದಲ್ಲಿ ನಾವೆಲ್ಲರೂ ನೆಲದಂತೆ ಬದುಕದೇ, ನೀರಿನಂತೆ ಬದುಕಬೇಕು. ದೇವರ ಕೊಟ್ಟ ಸಂಪತ್ತು ಸಮಾದ ಏಳಿಗೆಗೆ ಹಂಚಬೇಕು. ಅದು ಎಲ್ಲೆಡೆ ಹಬ್ಬಿ, ಇತರರಿಗೂ ಸ್ಫೂರ್ತಿ ಆಗಬೇಕು. ಅದರಂತೆ ಹೆಚ್.ಎಸ್. ಶೆಟ್ಟಿ ಅವರ ಈ ಕಾರ್ಯವು ಅನೇಕರಿಗೆ ಪ್ರೇರಣೆಯಾಗಿದೆ ಎಂದು ಶ್ಲಾಘಿಸಿದರು.ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ ಆಚರಿಸುವ ಮಹನೀಯರು 10 ಲಕ್ಷ ರು. ಖರ್ಚು ಮಾಡಿ ಮನೆ ಕಟ್ಟಿಸಿಕೊಟ್ಟರೇ, ಆ ಮನೆಯಲ್ಲಿ ವಾಸಿಸುವವರು ಬದುಕಿರುವಷ್ಟು ಕಾಲವೂ ದಾನಿಗಳನ್ನು ನೆನಯುತ್ತಾರೆ. ಅದಕ್ಕಿಂತ ದೊಡ್ಡ ಆರ್ಶೀವಾದ ಬೇರೆಯಿಲ್ಲ ಎಂದರು. ಟ್ರಸ್ಟ್‌ನ ಅಧ್ಯಕ್ಷ ಡಾ.ಹೆಚ್.ಎಸ್.ಶೆಟ್ಟಿ ಪ್ರಾಸ್ತಾವಿಕ ಮಾತನಾಡಿ, ಒಳ್ಳೆಯ ಕೆಲಸಗಳು ಮಾಡುವಾಗ ಟೀಕೆ ಮತ್ತು ಪ್ರಶಂಸೆ ಸಾಮಾನ್ಯ. ನಾನು ಬಿಜೆಪಿಯವನೆಂಬ ಆರೋಪ ಇದೆ. ಆದರೆ ನಾನು ಬಿಜೆಪಿ ಅಲ್ಲ, ಅದರ ಸದಸ್ಯನೂ ಅಲ್ಲ. ಜನರು ಆಯ್ಕೆ ಮಾಡಿದ ಪ್ರತಿನಿಧಿಗಳಲ್ಲಿ ಹೆಚ್ಚಿನವರು ಬಿಜೆಪಿಯವರೇ ಇದ್ದಾರೆ. ಹೀಗಾಗಿ ಕಾರ್ಯಕ್ರಮದಲ್ಲಿ ಆ ಪಕ್ಷದವರು ಹೆಚ್ಚಿರುತ್ತಾರೆ. ನಾನು ಹಿಂದುತ್ವವಾದಿ. ಹಾಗೆಂದ ಮಾತ್ರಕ್ಕೆ ಇತರ ಮತಗಳ ದ್ವೇಷಿಯಲ್ಲ. ಜಾತಿ ಮತ ಭೇದವನ್ನು ಮರೆತು ಎಲ್ಲಾ ವರ್ಗಕ್ಕೂ ಸಹಾಯ ಮಾಡಿದ್ದೇವೆ ಎಂದವರು ತಿಳಿಸಿದರು. ಹಿಂದೂ ಧರ್ಮದವರಾದ ಕೊರಗರು ಅತ್ಯಂತ ಹಿಂದುಳಿದವರು. ಇವರಿಗೆ ಮೇಲ್ಜಾತಿಯವರು ತುಂಬಾ ಅನ್ಯಾಯ ಮಾಡಿದ್ದಾರೆ. ಆ ಅನ್ಯಾಯದ ಪಶ್ಚತ್ತಾಪಕ್ಕಾಗಿ ಅವರಿಗಾಗಿ ಕಿಂಚಿತ್ತು ಸೇವೆ ಮಾಡುತ್ತಿದ್ದೇನೆ ಎಂದರು. ಯಕ್ಷಗಾನ ಕಲಾರಂಗದ ಪ್ರ.ಕಾರ್ಯದರ್ಶಿ ಮುರುಲಿ ಕಡೆಕಾರ್ ಮಾತನಾಡಿ, ನಾವೆಲ್ಲರೂ ಸಾಧ್ಯವಾದರೇ ನಮ್ಮ ಹತ್ತಿರದಲ್ಲಿರುವ ನೊಂದವರಿಗೆ ಸಹಾಯ ಮಾಡೋಣ. ಯಾರ ಬಗ್ಗೆಯೂ ಲಘುವಾಗಿ ಮಾತನಾಡದೇ, ಒಳಿತನ್ನೇ ಬಯಸುವ, ಭಿನ್ನಾಭಿಪ್ರಾಯಗಳಿದ್ದಲ್ಲಿ ಮೌನವಾಗಿರುವುದು ಉತ್ತಮ ಎಂದವರು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಮಾತನಾಡಿ, ಉತ್ತಮ ಕಾರ್ಯಕ್ರಮಕ್ಕಾಗಿ ಹೆಚ್.ಎಸ್.ಶೆಟ್ಟಿಯವರು ಮಾಡಿರುವ ಸಂಕಲ್ಪ ದೊಡ್ಡದು. ಆ ಸಂಕಲ್ಪ ನಿರ್ವಿಘ್ನವಾಗಿ ನೆರವೇರಲಿ ಎಂದು ಹಾರೈಸಿದರು.ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ಉಳ್ಳೂರು ಗ್ರಾಪಂ ಅಧ್ಯಕ್ಷೆ ಕುಸುಮಾ ಶೆಟ್ಟಿ, ಟ್ರಸ್ಟ್‌ನ ಹಾಲಾಡಿ ನಾಗರಾಜ್ ಶೆಟ್ಟಿ, ಉಳ್ಳೂರು ಬನಶಂಕರಿ ದೇವಸ್ಥಾನದ ಮುಖ್ಯಸ್ಥರು ಸಂಜೀವ್ ಶೆಟ್ಟಿ ಉಪಸ್ಥಿತರಿದ್ದರು. ದಾಮೋದರ್ ಶರ್ಮ ಸ್ವಾಗತಿಸಿ, ನಿರೂಪಿಸಿದರು. ----------------------------
ಈಗಲೂ ಕೊರಗರನ್ನು ಅಸ್ಪಶ್ಯರನ್ನು ಕಾಣಲಾಗುತ್ತಿದೆ. ಸರ್ಕಾರ ಕೊರಗರಿಗಾಗಿ ಮಾಡುವ ಯೋಜನೆಗಳು ಪೂರ್ಣಗೊಳ್ಳುತ್ತಿಲ್ಲ. ಈ ವ್ಯವಸ್ಥೆ ಬದಲಾದರೇ ಮಾತ್ರ ಅತ್ಯಂತ ಹಿಂದುಳಿದ ವರ್ಗವು ಸಮಾಜದಲ್ಲಿ ಉತ್ತಮ ಜೀವನ ನಡೆಸಲು ಸಾಧ್ಯ. ಹೆಚ್‌ಎಸ್ ಶೆಟ್ಟಿಯವರಂತೆ ಕೊರಗರಿಗೆ ಮನೆಗಳನ್ನು ಕಟ್ಟಿಸಿ ಕೊಡುವ ಕಾರ್ಯವನ್ನು ಇದುವರೆಗೆ ಯಾರು ಮಾಡಿಲ್ಲ. ಅವರಿಂದ ಇನ್ನಷ್ಟು ಜನಪರ ಕಾರ್ಯಗಳು ನಡೆಯಲಿ ಎಂದು ಆಶಿಸುತ್ತೇವೆ.ಸುಶೀಲ ನಾಡ, ಅಧ್ಯಕ್ಷೆ, ಕರ್ನಾಟಕ - ಕೇರಳ ಕೊರಗಾಭಿವೃದ್ದಿ ಸಂಸ್ಥೆ