ವಿಶೇಷ ವರದಿ ಕನ್ನಡಪ್ರಭ ವಾರ್ತೆ ಮಂಗಳೂರು ಮಂಗಳೂರಿನ ವೆನ್ಲಾಕ್ ಸರ್ಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಘಟಕ ಕೆಟ್ಟುನಿಂತು ಆರು ತಿಂಗಳು ಕಳೆದಿದೆ. ಇದನ್ನು ದುರಸ್ತಿಪಡಿಸಬೇಕಾದ ಏಜೆನ್ಸಿ ಅವಧಿ ಮುಕ್ತಾಯಗೊಳ್ಳುತ್ತಿರುವುದರಿಂದ ಉತ್ಸಾಹ ತೋರಿಸುತ್ತಿಲ್ಲ. ಹೊಸ ಏಜೆನ್ಸಿ ಬಂದ ಮೇಲೆ ಕೆಟ್ಟುಹೋದ ಡಯಾಲಿಸಿಸ್ ದುರಸ್ತಿ ಪಡಿಸುತ್ತದೋ ಅಥವಾ ಹೊಸ ಯಂತ್ರ ಖರೀದಿಸಿ ನೀಡುತ್ತದೋ ಎಂಬುದು ಸ್ಪಷ್ಟವಿಲ್ಲ. ಹೀಗಾಗಿ ಬೇಡಿಕೆ ಇದ್ದಷ್ಟು ಡಯಾಲಿಸಿಸ್ ನಿರ್ವಹಿಸಲಾಗದೆ ಪರದಾಟ ನಡೆಸುವಂತಾಗಿದೆ. ವೆನ್ಲಾಕ್ ಆಸ್ಪತ್ರೆಯಲ್ಲಿ ಒಟ್ಟು 23 ಡಯಾಲಿಸಿಸ್ ಯಂತ್ರಗಳಿತ್ತು. ಅದರಲ್ಲಿ ಒಂಭತ್ತು ಯಂತ್ರ ಕೆಟ್ಟುಹೋಗಿ ಆರು ತಿಂಗಳು ಕಳೆದಿದೆ. ಇದನ್ನು ದುರಸ್ತಿಪಡಿಸಬೇಕಾದ ಏಜೆನ್ಸಿ ಕೈಕಟ್ಟಿ ಕುಳಿತಿದೆ. ಕಳೆದ ಮೂರು ಅವಧಿಯಲ್ಲಿ ಇದೇ ಏಜೆನ್ಸಿ ಡಯಾಲಿಸಿಸ್ ನಿರ್ವಹಣೆ ನಡೆಸುತ್ತಿತ್ತು. ಪ್ರತಿ ಡಯಾಲಿಸಿಸ್‌ಗೆ 1,500 ರು. ಮೊತ್ತವನ್ನು ಏಜೆನ್ಸಿಗೆ ಸರ್ಕಾರ ಪಾವತಿಸುತ್ತದೆ. ಯಂತ್ರ ಮತ್ತು ಆಸ್ಪತ್ರೆ ವ್ಯವಸ್ಥೆ ಮಾತ್ರ ಸರ್ಕಾರದ್ದು, ಉಳಿದಂತೆ 4-5 ವೈದ್ಯ, ತಂತ್ರಜ್ಞ, ಸಿಬ್ಬಂದಿ, ಅವರ ವೇತನ, ಯಂತ್ರದ ನಿರ್ವಹಣೆ ಎಲ್ಲವನ್ನೂ ಏಜೆನ್ಸಿಯೇ ಮಾಡಬೇಕು. ಹಾಲಿ ಏಜೆನ್ಸಿಗೆ ಗುತ್ತಿಗೆ ಮುಂದುವರಿಯುವುದಿಲ್ಲ ಎಂದು ಖಚಿತವಾದ್ದೇ ತಡ ಕೆಟ್ಟು ನಿಂತ ಡಯಾಲಿಸಿಸ್ ದುರಸ್ತಿಗೆ ಮನಸ್ಸೇ ಮಾಡಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಇದರಿಂದಾಗಿ ಕಳೆದ ಆರು ತಿಂಗಳಿಂದ ಕೆಟ್ಟುನಿಂತ ಸ್ಥಿತಿಯಲ್ಲಿರುವ ಡಯಾಲಿಸಿಸ್ ಯಂತ್ರ ಮೂಲೆ ಸೇರಿದೆ. ಪ್ರಸಕ್ತ ಉಳಿದ 14 ಯಂತ್ರಗಳಷ್ಟೆ ಕಾರ್ಯನಿರ್ವಹಿಸುತ್ತಿದೆ. ಬೇಡಿಕೆ ಇದ್ದರೂ ಯಂತ್ರದ ಕೊರತೆ: 23 ಡಯಾಲಿಸಿಸ್ ಯಂತ್ರಗಳು ಇರುವಾಗ ದಿನದಲ್ಲಿ ಸುಮಾರು 80ರಷ್ಟು ಡಯಾಲಿಸಿಸ್ ನಡೆಯುತ್ತಿತ್ತು. ಈಗ ಅದು 40ಕ್ಕೆ ಇಳಿಕೆಯಾಗಿದೆ. ಒಳರೋಗಿಗಳಿಗೆ ಹಾಗೂ ಹೊರ ರೋಗಿಗಳಿಗೆ ಡಯಾಲಿಸಿಸ್ ನಡೆಯುತ್ತಿದೆ. ಈಗಿನ ಬೇಡಿಕೆಯನ್ನು ಗಮನಿಸಿದರೆ, ಸುಮಾರು 30 ಡಯಾಲಿಸಿಸ್ ಯಂತ್ರಗಳು ಬೇಕಾಗುತ್ತವೆ ಎನ್ನುತ್ತವೆ ಆಸ್ಪತ್ರೆ ಮೂಲ. ಕೆಟ್ಟುಹೋದ ಯಂತ್ರದ ಬದಲಿಗೆ ಹೊಸ ಯಂತ್ರ ಖರೀದಿಸಿ ನೀಡಲಾಗುವುದು ಎಂದು ಸರ್ಕಾರವೇ ಭರವಸೆ ನೀಡಿದೆ. ಈಗ ನೆಫ್ರೋ ಕೇರ್ ಹೆಸರಿನ ಕಂಪನಿ ಏಜೆನ್ಸಿ ಪಡೆದುಕೊಂಡ ಬಗ್ಗೆ ಮಾಹಿತಿ ಲಭಿಸಿದೆ. ಏನಿದ್ದರೂ ಸದ್ಯದ ಮಟ್ಟಿಗೆ ಡಯಾಲಿಸಿಸ್ ರೋಗಿಗಳಿದೆ ಪರದಾಟ ಮಾತ್ರ ತಪ್ಪಿದ್ದಲ್ಲ. ಸರ್ಕಾರ ಖರೀದಿಸಿದ ಯಂತ್ರವೇ ಕೆಟ್ಟಿದ್ದು ವೆನ್ಲಾಕ್ ಡಯಾಲಿಸಿಸ್ ಕೇಂದ್ರಕ್ಕೆ ಆರೋಗ್ಯ ಇಲಾಖೆ 11 ಡಯಾಲಿಸಿಸ್ ಯಂತ್ರಗಳನ್ನು ಖರೀದಿಸಿ ನೀಡಿತ್ತು. ಉಳಿದ 12 ಯಂತ್ರಗಳು ಕೊಡುಗೆಯಾಗಿ ಲಭಿಸಿತ್ತು. ಈ ಯಂತ್ರಗಳು ಉತ್ಕೃಷ್ಟವಾಗಿದ್ದು, ಈಗ ಡಯಾಲಿಸಿಸ್ ರೋಗಿಗಳಿಗೆ ನೆರವಾಗುತ್ತಿದೆ. ಸರ್ಕಾರ ನೀಡಿದ 11 ಯಂತ್ರಗಳ ಪೈಕಿ 9 ಯಂತ್ರ ಕೆಟ್ಟುಹೋಗಿದೆ. ಪೆರಿಟೋನಿಯಲ್ ಡಯಾಲಿಸಿಸ್‌ಗೆ ಸರ್ಕಾರವೇ ಉತ್ಸುಕ 20015-18ರಲ್ಲಿ ಮಂಗಳೂರಿನವರೇ ಆದ ಯು.ಟಿ.ಖಾದರ್ ಅವರು ಆರೋಗ್ಯ ಸಚಿವರಾಗಿದ್ದರು. ಆಗ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ, ಕೆ.ಸಿ.ಜನರಲ್ ಆಸ್ಪತ್ರೆ ಹಾಗೂ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಪೈಲಟ್ ಯೋಜನೆಯಡಿ ಪೆರಿಟೋನಿಯಲ್ ಡಯಾಲಿಸಿಸ್ ಆರಂಭಿಸಲಾಗಿತ್ತು. ಆಗ 30 ಮಂದಿಗೆ ಮಾತ್ರ ಅವಕಾಶ ನೀಡಿದ್ದು, ಬಳಿಕ ಯೋಜನೆ ಮುಂದುವರಿಯದೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮಾತ್ರ ಉಳಿದುಕೊಂಡಿತ್ತು. ರೋಗಿಗಳ ಸ್ನೇಹಿ ಎನಿಸಿಕೊಂಡ ಪೆರಿಟೋನಿಯಲ್ ಡಯಾಲಿಸಿಸ್‌ನ್ನು ಮಂಗಳೂರಿನಲ್ಲಿ ಆರಂಭಿಸುವಂತೆ ಮತ್ತೆ ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರು, ಶಾಸಕರ ಮುಂದೆ ಬೇಡಿಕೆ ಇರಿಸಲಾಗಿದೆ. ಅವರೂ ಉತ್ಸಾಹ ತೋರಿಸಿದ್ದಾರೆ. ಇದು ಅತ್ಯಂತ ಸರಳ ವಿಧಾನದ ಡಯಾಲಿಸಿಸ್ ಆಗಿದ್ದು, ಹೊಟ್ಟೆಯಲ್ಲಿ ಸಣ್ಣ ರಂಧ್ರ ಮೂಲಕ ಹೊಟ್ಟೆ ಶುದ್ಧೀಕರಣ ನಡೆಸಲಾಗುತ್ತದೆ. ಮಾಮೂಲು ಇರುವ ಹಿಮೋ ಡಯಾಲಿಸಿಸ್‌ನಲ್ಲಿ ದೈನಂದಿನ ಕೆಲಸ ಕಾರ್ಯನಿರ್ವಹಿಸಲು ಕಷ್ಟವಾದರೆ, ಇದರಲ್ಲಿ ಡಯಾಲಿಸಿಸ್ ಮಾಡಿಕೊಂಡೇ ನಿತ್ಯದ ಕೆಲಸಕ್ಕೆ ತೊಂದರೆಯಾಗದು. ಇದಕ್ಕೆ ವೆಚ್ಚವೂ ಕಡಿಮೆ, ಒಮ್ಮೆ ಆಸ್ಪತ್ರೆಗೆ ಬಂದುಹೋದರೆ, ಮತ್ತೆ ಮನೆಯಲ್ಲೇ ಈ ಡಯಾಲಿಸಿಸ್ ಮಾಡಬಹುದು. ಮುಖ್ಯವಾಗಿ ಮಕ್ಕಳಿಗೆ, ಉದ್ಯೋಗಕ್ಕೆ ತೆರಳುವವರಿಗೆ ಪೆರಿಟೋನಿಯಲ್ ಡಯಾಲಿಸಿಸ್ ಅತ್ಯಂತ ಉಪಯುಕ್ತ ಎನ್ನುತ್ತಾರೆ ವೆನ್ಲಾಕ್ ಆಸ್ಪತ್ರೆಯ ಮೂತ್ರಪಿಂಡ ವಿಭಾಗದ ತಜ್ಞ ಡಾ.ಭೂಷಣ್ ಸಿ.ಶೆಟ್ಟಿ.