ಮುನಿರಾಬಾದ್ : ತುಂಗಭದ್ರಾ ಜಲಾಶಯದ ಎಲ್ಲ 33 ಗೇಟುಗಳನ್ನು ತೆರೆದು ನದಿಗೆ 1,41,484 ಲಕ್ಷ ಕ್ಯುಸೆಕ್ ನೀರು ನದಿಗೆ ಹರಿಸಲಾಗುತ್ತಿದೆ. ಜಲಾಶಯದ 33 ಗೇಟುಗಳ ಪೈಕಿ 25 ಗೇಟು 3.5 ಅಡಿ ಎತ್ತರಕ್ಕೆ ಹಾಗೂ 8 ಗೇಟುಗಳನ್ನು 1 ಅಡಿ ಎತ್ತಿ ನದಿಗೆ ನೀರನ್ನು ಹರಿಸಲಾಗುತ್ತಿದೆ.
ಪ್ರಸಕ್ತ ಸಾಲಿನಲ್ಲಿ ಇದೇ ಪ್ರಥಮ ಬಾರಿಗೆ ಜಲಾಶಯದ ಎಲ್ಲ 33 ಗೇಟುಗಳನ್ನು ತೆರದು ನದಿಗೆ ನೀರನ್ನು ಹರಿಸಲಾಗುತ್ತಿದೆ. ಶನಿವಾರ ತುಂಗಭದ್ರಾ ಜಲಾಶಯಕ್ಕೆ 1,10,943 ಲಕ್ಷ ಕ್ಯುಸೆಕ್ ನೀರು ಹರಿದು ಬಂದಿದೆ.
ನದಿ ಪಾತ್ರದಲ್ಲಿ ಪ್ರವಾಹ:
ಜಲಾಶಯದಿಂದ 1,41,484 ಲಕ್ಷ ಕ್ಯುಸೆಕ್ ನೀರು ಹರಿಸಿದ ಹಿನ್ನೆಲೆ ನದಿಪಾತ್ರದಲ್ಲಿ ಪ್ರವಾಹ ಉಂಟಾಗಿದೆ. ತುಂಗಭದ್ರಾ ಜಲಾಶಯದ ಮುಂದೆ ಹಳೆಯ ರೈಲು ಸೇತುವೆ ಸಂಪೂರ್ಣ ಜಲಾವೃತಗೊಂಡಿದೆ. ಪ್ರಸಿದ್ಧ ಪುಣ್ಯಕ್ಷೇತ್ರ ಶ್ರೀ ಹುಲಿಗೆಮ್ಮ ದೇವಸ್ಥಾನದ ಸ್ನಾನಘಟ್ಟ ಪ್ರವಾಹದ ನೀರಿನಲ್ಲಿ ಜಲಾವೃತಗೊಂಡಿದೆ. ಸಮೀಪದ ಶಿವಪುರ ಗ್ರಾಮದ 500 ವರ್ಷ ಇತಿಹಾಸವಿರುವ ಪ್ರಸಿದ್ಧ ಮಾರ್ಕೆಂಡೇಶ್ವರ ದೇವಸ್ಥಾನದ ಮೆಟ್ಟಿಲಿನ ವರೆಗೆ ನೀರು ಬಂದಿದೆ.
ನಿಷೇಧಾಜ್ಞೆ ಜಾರಿ:
ತುಂಗಭದ್ರಾ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರು ಬಂದ ಹಿನ್ನೆಲೆ ಸುಂದರ ದೃಶ್ಯವನ್ನು ನೋಡಲು ಪ್ರವಾಸಿಗರು ಮುಗಿ ಬೀಳುತ್ತಿದ್ದು, ಕೆಲವರು ಜಲಾಶಯದ ನೀರಿನಲ್ಲಿ ಇಳಿಯುತ್ತಿದ್ದರೆ ಇನ್ನು ಕೆಲವರು ನದಿಯ ಮುಂದೆ ಸೆಲ್ಫಿ ಹಾಗೂ ಪೋಟೋಗಳನ್ನು ತೆಗೆದುಕೊಳ್ಳುತ್ತಿದ್ದಾರೆ.
ತುಂಗಭದ್ರಾ ಜಲಾಶಯ ಸೂಕ್ಷ್ಮ ಪ್ರದೇಶವಾಗಿದ್ದು, ಜಲಾಶಯದ ಭದ್ರತೆ ಹಾಗೂ ಸಾರ್ವಜನಿಕರ ಸುರಕ್ಷಿತ ದೃಷ್ಟಿಯಿಂದ ಕೊಪ್ಪಳ ಜಿಲ್ಲಾಧಿಕಾರಿ ನಲಿನ್ ಅತುಲ್ ತುಂಗಭದ್ರಾ ಜಲಾಶಯದ ಲೇಕ್ ವ್ಯೂ ಪ್ರದೇಶದಲ್ಲಿ ಹಾಗೂ ಜಲಾಶಯದ ಮುಂದಿರುವ ಕಿರು ಸೇತುವೆ ಮತ್ತು ನದಿ ಪಾತ್ರದ ಸುತ್ತಮುತ್ತಲಿನ 100 ಮೀಟರಿನ ಪ್ರದೇಶದ ವ್ಯಾಪ್ತಿಯಲ್ಲಿ ಜು. 26ರಿಂದ ಆ. 10ರ ವರೆಗೆ ನಿಷೇಧಾಜ್ಞೆ ಜಾರಿ ಮಾಡಿದ್ದಾರೆ.
ನಿಷೇಧಾಜ್ಞೆ ಇದ್ದರೂ 20,000 ಸಾವಿರ ಪ್ರವಾಸಿಗರ ವೀಕ್ಷಣೆ:
ಕೊಪ್ಪಳ ಜಿಲ್ಲಾಧಿಕಾರಿ ಮುನಿರಾಬಾದದ ಲೇಕ್ ವ್ಯೂ ಸುತ್ತಮುತ್ತ ನಿಷೇಧಾಜ್ಞೆ ಜಾರಿ ಮಾಡಿದರೂ ಅದನ್ನು ಲೆಕ್ಕಿಸದೇ 20,000 ಸಾವಿರಕ್ಕೂ ಅಧಿಕ ಪ್ರವಾಸಿಗರು ಶನಿವಾರ ಜಲಾಶಯಕ್ಕೆ ಬಂದು ಜಲಾಶಯದ ಸುಂದರ ದೃಶ್ಯವನ್ನು ವೀಕ್ಷಿಸಿ ಆನಂದಿಸಿದರು.