ಸಿದ್ದರಾಮಯ್ಯ ಪುತ್ಥಳಿ ಮರುಸ್ಥಾಪಿಸಲು 15 ದಿನ ಗಡುವು

KannadaprabhaNewsNetwork |  
Published : Sep 27, 2026, 02:00 AM IST
25ಕೆಡಿವಿಜಿ11-ದಾವಣಗೆರೆಯಲ್ಲಿ ಶುಕ್ರವಾರ ಜಿಲ್ಲಾ ಕುರುಬರ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಬಿ.ಮಲ್ಲೇಶ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಅಹಿಂದ ವರ್ಗಗಳ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ಥಳಿಯನ್ನು ಕಸದ ಗಾಡಿಯಲ್ಲಿ ತೆರವು ಮಾಡಿದ ಕಲಬುರಗಿ ಮಹಾನಗರ ಪಾಲಿಕೆ ಇನ್ನು 15 ದಿನದಲ್ಲಿ ಅದೇ ಸ್ಥಳದಲ್ಲಿ ಗೌರವಯುತವಾಗಿ ಸಿದ್ದರಾಮಯ್ಯ ಪುತ್ಥಳಿ ಪ್ರತಿಷ್ಟಾಪಿಸದಿದ್ದರೆ ರಾಜ್ಯವ್ಯಾಪಿ ತೀವ್ರ ಹೋರಾಟ ನಡೆಸಬೇಕಾದೀತು ಎಂದು ಜಿಲ್ಲಾ ಕುರುಬರ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಬಿ.ಮಲ್ಲೇಶ ಎಚ್ಚರಿಸಿದ್ದಾರೆ.

- ಕಲಬುರಗಿ ಪಾಲಿಕೆ ಅಧಿಕಾರಿ ಅಮಾನತಿಗೆ ಕುರುಬರ ವಿದ್ಯಾವರ್ಧಕ ಸಂಘ ತಾಕೀತು

- - -

ಕನ್ನಡಪ್ರಭ ವಾರ್ತೆ, ದಾವಣಗೆರೆ, ಸೆ.25ಅಹಿಂದ ವರ್ಗಗಳ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ಥಳಿಯನ್ನು ಕಸದ ಗಾಡಿಯಲ್ಲಿ ತೆರವು ಮಾಡಿದ ಕಲಬುರಗಿ ಮಹಾನಗರ ಪಾಲಿಕೆ ಇನ್ನು 15 ದಿನದಲ್ಲಿ ಅದೇ ಸ್ಥಳದಲ್ಲಿ ಗೌರವಯುತವಾಗಿ ಸಿದ್ದರಾಮಯ್ಯ ಪುತ್ಥಳಿ ಪ್ರತಿಷ್ಟಾಪಿಸದಿದ್ದರೆ ರಾಜ್ಯವ್ಯಾಪಿ ತೀವ್ರ ಹೋರಾಟ ನಡೆಸಬೇಕಾದೀತು ಎಂದು ಜಿಲ್ಲಾ ಕುರುಬರ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಬಿ.ಮಲ್ಲೇಶ ಎಚ್ಚರಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಪುತ್ಥಳಿಯನ್ನು ಅಗೌರವಯುತವಾಗಿ ತೆರವು ಮಾಡಿದ ಕಲಬುರಗಿ ಪಾಲಿಕೆ ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸಬೇಕು. ಅದೇ ಸ್ಥಳದಲ್ಲಿ ಗೌರವಯುತವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಪುತ್ಥಳಿ ಪ್ರತಿಷ್ಟಾಪಿಸಬೇಕು. ಸಿದ್ದರಾಮಯ್ಯ ನಾಡು ಕಂಡ ಅಪರೂಪದ ವ್ಯಕ್ತಿತ್ವದ ನಾಯಕ. 2 ಸಲ ಮುಖ್ಯಮಂತ್ರಿಯಾಗಿ, 17 ಸಲ ದಾಖಲೆಯ ಬಜೆಟ್ ಮಂಡಿಸಿದ ಅನುಭವಿ ನಾಯಕ. ದೀರ್ಘಕಾಲದ ಮುಖ್ಯಮಂತ್ರಿ ಎಂಬ ದಾಖಲೆ ಮಾಡಿದ ಸಿದ್ದರಾಮಯ್ಯ ಅಹಿಂದ ವರ್ಗಗಳ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತ ಬಂದವರು. ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ ಸಿದ್ದರಾಮಯ್ಯ ಅವರ 9 ಅಡಿ ಕಂಚಿನ ಪುತ್ಥಳಿಯನ್ನು ಕಲಬುರಗಿ ಹೃದಯ ಭಾಗದ ಹೈಕೋರ್ಟ್ ವೃತ್ತದಲ್ಲಿ ಪ್ರತಿಷ್ಠಾಪಿಸಲಾಗಿತ್ತು ಎಂದು ತಿಳಿಸಿದರು.

ಕಲಬುರಗಿ ಹೈಕೋರ್ಟ್ ವೃತ್ತಕ್ಕೆ 2023ರಂದು ಸಿದ್ದರಾಮಯ್ಯ ವೃತ್ತವೆಂದೇ ನಾಮಕರಣ ಮಾಡಲಾಗಿದೆ. ಅದೇ ವೃತ್ತದಲ್ಲಿ ಸಿದ್ದರಾಮಯ್ಯನವರ ಕಂಚಿನ ಪುತ್ಥಳಿಯನ್ನು ಸೆ.17ರಂದು ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ಅಭಿಮಾನಿಗಳು ಸ್ವಯಂ ಪ್ರೇರಿತವಾಗಿ ಪ್ರತಿಷ್ಟಾಪಿಸಿದ್ದರು. ಆದರೆ, ಅಲ್ಲಿನ ಪಾಲಿಕೆ ಅಧಿಕಾರಿಗಳು ಯಾವುದೇ ಮುನ್ಸೂಚನೆ ನೀಡದೇ, ಬೆಳಗಿನ ಜಾವ 4 ಗಂಟೆ ವೇಳೆ ಕಸ ಸಾಗಿಸುವ ಲಾರಿ ತಂದು, ಸಿದ್ದರಾಮಯ್ಯ ಪುತ್ಥಳಿಯನ್ನು ಎಳೆದಾಡಿ ತೆರವು ಮಾಡಿದ್ದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಸಿದ್ದರಾಮಯ್ಯ ಪುತ್ಥಳಿಯನ್ನು ಕಸ ಸಾಗಿಸುವ ಲಾರಿಯನ್ನು ಎಳೆದಾಡಿ, ತೆರವುಗೊಳಿಸಿದ್ದು ಹಿಂದುಳಿದ ವರ್ಗಗಳು, ದಲಿತರು, ಅಲ್ಪಸಂಖ್ಯಾತ ಸಮುದಾಯಗಳ ನಾಯಕರಿಗೆ ಮಾಡಿದ ಘೋರ ಅವಮಾನ. ಈ ಘಟನೆಯಿಂದ ಇಡೀ ಕುರುಬ ಸಮಾಜಕ್ಕೆ ನೋವಾಗಿದೆ. ಸಿದ್ದರಾಮಯ್ಯ ವೃತ್ತವೆಂದು ನಾಮಕರಣವಾದ ವೃತ್ತದಲ್ಲಿ ಸಿದ್ದರಾಮಯ್ಯ ಪುತ್ಥಳಿ ಇರುವುದು ಒಳ್ಳೆಯದೆಂದು ಪ್ರತಿಷ್ಟಾಪಿಸಿದ್ದರು. ಪರವಾನಿಗೆ ಪಡೆದಿಲ್ಲವೆಂದು ಅಲ್ಲಿನ ಅಧಿಕಾರಿಗಳು ಹೇಳುತ್ತಿದ್ದಾರೆ. ಅದೇ ಊರಿನಲ್ಲಿ 20ಕ್ಕೂ ಹೆಚ್ಚು ಪುತ್ಥಳಿ ಅನಧಿಕೃತ ಆಗಿರುವುದು ಅದೇ ಅಧಿಕಾರಿಗಳ ಗಮನಕ್ಕೆ ಬಂದಿಲ್ಲವೇ ಎಂದು ಕಿಡಿಕಾರಿದರು.

ಸಂಘದ ಅಧ್ಯಕ್ಷ ವೈ.ವಿರುಪಾಕ್ಷಪ್ಪ, ಮುಖಂಡರಾದ ಎಚ್.ಜಿ.ಸಂಗಪ್ಪ ಪೈಲ್ವಾನ್, ದೇವನಗರಿ ಎಂ.ಮನು, ನಾಗರಾಜ, ಜಿ.ವಿ.ಮಾಲತೇಶ, ಷಣ್ಮುಖಪ್ಪ, ಶಂಕರಮೂರ್ತಿ, ಎಂ.ಬಿ.ದ್ಯಾಮಪ್ಪ, ಎನ್.ಮಾಲತೇಶ, ಭಗತ್ ಸಿಂಹ, ಜಿ.ಎನ್.ಮಾಲತೇಶ ಇತರರು ಇದ್ದರು.

- - -

(ಕೋಟ್‌) ದುರುದ್ದೇಶ ಪೂರ್ವಕವಾಗಿ ಸಿದ್ದರಾಮಯ್ಯ ಪುತ್ಥಳಿ ಗುರಿಯಾಗಿಸಿಕೊಂಡು, ಅವಮಾನಕರ ರೀತಿಯಲ್ಲಿ ತೆರವು ಮಾಡಿದ ಅಧಿಕಾರಿಗಳಿಗೆ ಅದೇ ಕಲಬುರಗಿಯಲ್ಲಿರುವ 20ಕ್ಕೂ ಹೆಚ್ಚು ಪುತ್ಥಳಿಗಳು ಕಾಣುತ್ತಿಲ್ಲವೇ? ಸಿದ್ದರಾಮಯ್ಯ ಪುತ್ಥಳಿ ಇಟ್ಟಿದ್ದಕ್ಕೆ ಅನ್ವಯಿಸುವ ಪರವಾನಿಗೆ ಅಂತಹ ಅನಧಿಕೃತ ಪುತ್ಥಳಿಗಳಿಗೆ ಅನ್ವಯಿಸುವುದಿಲ್ಲವೇ? ಸಿಎಂ ಡಿ.ಕೆ.ಶಿವಕುಮಾರ, ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಅಲ್ಲಿ ವಾಸ್ತವ್ಯ ಹೂಡಿದ್ದಾಗಲೇ ಪುತ್ಥಳಿ ತೆರವು ಮಾಡಿದ್ದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.

- ಬಿ.ಬಿ.ಮಲ್ಲೇಶ, ಪ್ರಧಾನ ಕಾರ್ಯದರ್ಶಿ.

- - -

-25ಕೆಡಿವಿಜಿ11:

ದಾವಣಗೆರೆಯಲ್ಲಿ ಜಿಲ್ಲಾ ಕುರುಬರ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಬಿ.ಮಲ್ಲೇಶ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೀಟ, ರೋಗ, ಕಳೆ ನಿಯಂತ್ರಣಕ್ಕೆ ಆರ್ಕಿವೋ ಅಸ್ತ್ರ!
ಕಲೆ, ಸಂಸ್ಕೃತಿ, ಪರಂಪರೆಗೆ ಹವ್ಯಕರ ಕೊಡುಗೆ ಅಪಾರ