ಬಸವರಾಜ ಹಿರೇಮಠ
ಧಾರವಾಡ:ರಾಜ್ಯ ಸರ್ಕಾರ ಧಾರವಾಡ ಜಿಲ್ಲೆ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಿಗೆ 150 (75 ಬಾಲಕರ, 75 ಬಾಲಕಿಯರ) ಹಾಸ್ಟೆಲ್ ಮಂಜೂರು ಮಾಡಿದ್ದು, ಇನ್ಮುಂದೆ ಹಾಸ್ಟೆಲ್‌ಗಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡುವ ದುಸ್ಥಿತಿ ವಿದ್ಯಾರ್ಥಿಗಳಿಗೆ ತುಸುವಾದರೂ ಕಡಿಮೆಯಾಗಲಿದೆ ಎಂಬ ಭರವಸೆ ದೊರೆತಂತಾಗಿದೆ.
ಧಾರವಾಡದಲ್ಲಿ ವಿಶ್ವವಿದ್ಯಾಲಯಗಳು, ಪದವಿ, ಪಿಯು ಕಾಲೇಜುಗಳು ಸೇರಿದಂತೆ ಹತ್ತಾರು ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆಗಳಿವೆ. ಹೀಗಾಗಿ ಉತ್ತರ ಕರ್ನಾಟಕ ಭಾಗದ ಎಲ್ಲ ಜಿಲ್ಲೆಗಳಿಂದಲೂ ಶಿಕ್ಷಣಕ್ಕಾಗಿ ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳು ಇಲ್ಲಿಗೆ ಆಗಮಿಸುತ್ತಾರೆ. ಆದರೆ, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹಾಸ್ಟೆಲ್ ಇಲ್ಲದಿರುವುದರಿಂದ ಪ್ರತಿ ವರ್ಷ ಹಾಸ್ಟೆಲ್‌ಗಾಗಿ ತೀವ್ರ ಪರದಾಡಬೇಕಾದ ಸ್ಥಿತಿ ಇದೆ. ಹಾಸ್ಟೆಲ್‌ಗಾಗಿ ಸ್ಥಳೀಯ ಶಾಸಕರು ಮಾತ್ರವಲ್ಲದೇ, ಮಂತ್ರಿಗಳಿಂದಲೂ ಶಿಫಾರಸು ತರುವಷ್ಟು ಬೇಡಿಕೆ ಇಲ್ಲಿದೆ. ಅದರಲ್ಲೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಸತಿ ನಿಲಯಕ್ಕೆ ಸಾಕಷ್ಟು ಬೇಡಿಕೆ ಇದ್ದು ಹಲವು ವರ್ಷಗಳಿಂದ ಧಾರವಾಡಕ್ಕೆ ಹೊಸ ಹಾಸ್ಟೆಲ್‌ಗಳ ಬೇಡಿಕೆ ಬಹುವಾಗಿ ಕೇಳಿ ಬಂದಿತ್ತು.ಇದೀಗ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಘೋಷಣೆ ಮಾಡಿದಂತೆ ಹಿಂದುಳಿದ ವರ್ಗಗಳ ಇಲಾಖೆಗೆ ₹ 45 ಕೋಟಿ ವೆಚ್ಚದಲ್ಲಿ 75 ಬಾಲಕ ಹಾಗೂ 75 ಬಾಲಕಿಯರ ಹಾಸ್ಟೆಲ್ ಮಂಜೂರು ಮಾಡಿದೆ. ರಾಜ್ಯದಲ್ಲಿಯೇ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಬರೋಬ್ಬರಿ 15 (ಎಂಟು ಬಾಲಕರ, ಏಳು ಬಾಲಕಿಯರ) ಹಾಸ್ಟೆಲ್‌ಗಳನ್ನು ಧಾರವಾಡ ಜಿಲ್ಲೆಗೆ ಮಂಜೂರು ಮಾಡಿದೆ. ಇವುಗಳನ್ನು ಮುಂಬರುವ ದಿನಗಳಲ್ಲಿ ಅನುದಾನಕ್ಕೆ ತಕ್ಕಂತೆ ನಿರ್ಮಿಸಲಿದ್ದು ಸದ್ಯಕ್ಕೆ ಬಾಡಿಗೆ ಕಟ್ಟಡದಲ್ಲಿ ಆರಂಭಿಸಲು ತೀರ್ಮಾನಿಸಲಾಗಿದೆ.
ಪ್ರವೇಶದ ಮಾರ್ಗಸೂಚಿ ಬದಲು:ಬರೀ ಹಾಸ್ಟೆಲ್ ಮಂಜೂರಿ ಮಾತ್ರವಲ್ಲದೇ ಈ ಬಾರಿ ಸರ್ಕಾರ ವಿದ್ಯಾರ್ಥಿಗಳ ಪ್ರವೇಶಾತಿ ಕಲ್ಪಿಸುವಲ್ಲಿಯೂ ಮಾರ್ಗಸೂಚಿ ಬದಲಾವಣೆ ಮಾಡಿ ಆದೇಶ ಹೊರಡಿಸಿದೆ. ಪ್ರಸ್ತುತ ಜಾರಿಯಲ್ಲಿರುವ ಮಾರ್ಗಸೂಚಿಯಂತೆ ವಿದ್ಯಾರ್ಥಿಗಳಿಗೆ ಮೆರಿಟ್ ಆಧಾರದ ಮೇಲೆ ಕೌನ್ಸೆಲಿಂಗ್ ಮಾದರಿಯಲ್ಲಿ ಪ್ರವೇಶ ನೀಡಲಾಗುತ್ತಿತ್ತು. ಮೀಸಲಾತಿ ಹಾಗೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಮಾತ್ರ ವಸತಿ ನಿಲಯ ಪಡೆಯುತ್ತಿದ್ದು, ಇದು ಹೆಚ್ಚಾಗಿ ಹೊರ ಜಿಲ್ಲೆಯ ವಿದ್ಯಾರ್ಥಿಗಳ ಪಾಲಾಗುತ್ತಿತ್ತು. ಇದರಿಂದ ಸ್ಥಳೀಯ ಜಿಲ್ಲೆಯ ದೂರದ ಊರುಗಳ ವಿದ್ಯಾರ್ಥಿಗಳು ವಸತಿ ನಿಲಯದಿಂದ ವಂಚಿತರಾಗುತ್ತಿದ್ದರು. ಸ್ಥಳೀಯ ರಾಜಕಾರಣಿಗಳು ಶಿಫಾರಸು ಪತ್ರ ನೀಡಿದರೂ ಪ್ರಯೋಜನ ಆಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಹೊಸ ಮಾರ್ಗಸೂಚಿಯಂತೆ ಶೇ. 50ರಷ್ಟು ಸ್ಥಾನಗಳನ್ನು ಸ್ಥಳೀಯ ಜಿಲ್ಲೆಯ ವಿದ್ಯಾರ್ಥಿಗಳಿಗೆ ಹಾಗೂ ಉಳಿದ ಶೇ. 50ರಷ್ಟು ಸೀಟುಗಳನ್ನು ಉಳಿದ ಜಿಲ್ಲೆಯ ವಿದ್ಯಾರ್ಥಿಗಳಿಗೆ ಮೀಸಲು ಇರುವಂತೆ ತಾಲೂಕು ಆಯ್ಕೆ ಸಮಿತಿ ಮೂಲಕ ಸೀಟ್ ನೀಡಲು ಆದೇಶ ಹೊರಡಿಸಲಾಗಿದೆ.
ವಿಶೇಷವಾಗಿ ಧಾರವಾಡ ಜಿಲ್ಲೆಗೆ ಹಾಸ್ಟೆಲ್‌ಗಳ ಅಗತ್ಯತೆ ಸಾಕಷ್ಟಿತ್ತು. ಪ್ರವೇಶದ ಸಂದರ್ಭದಲ್ಲಿ ಅರ್ಜಿ ಹಾಕಿದ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸಿಗದೇ ತೊಂದರೆಗೆ ಒಳಗಾಗುತ್ತಿದ್ದರು. ಇದೀಗ ಜಿಲ್ಲೆಗೆ ನೀಡಿರುವ ಹಾಸ್ಟೆಲ್‌ಗಳನ್ನು ಕೂಡಲೇ ಪ್ರಾರಂಭಿಸಲು ಇಲಾಖೆ ಕಾರ್ಯೋನ್ಮುಖವಾಗಿದೆ. ಸದ್ಯ ಬಾಡಿಗೆ ಕಟ್ಟಡಗಳಿಗೆ ಶೋಧ ನಡೆಸುತ್ತಿದ್ದು ಒಂದು ವಸತಿ ನಿಲಯಕ್ಕೆ 100ರಂತೆ 15 ನಿಲಯಗಳಿಗೆ 1500 ವಿದ್ಯಾರ್ಥಿಗಳಿಗೆ ಹೆಚ್ಚುವರಿ ಪ್ರವೇಶ ಸಿಗುತ್ತಿರುವುದು ಸಮಾಧಾನದ ಸಂಗತಿ ಎಂದು ಹಿಂದುಳಿದ ವರ್ಗಗಳ ಇಲಾಖೆ ಜಿಲ್ಲಾಧಿಕಾರಿ ಗೋಪಾಲ ಲಮಾಣಿ ಹೇಳಿದರು. ಹಾಸ್ಟೆಲ್‌ಗಳಿಗಾಗಿ ಮಕ್ಕಳು ಅಧ್ಯಯನ ಬಿಟ್ಟು ಕಚೇರಿಯಿಂದ ಕಚೇರಿಗೆ ಅಲೆದಾಡುವುದನ್ನು ನೋಡಿ ನಮಗೂ ಬೇಸರ ಬಂದಿತ್ತು. ಆದ್ದರಿಂದ ವಿಶೇಷವಾಗಿ ಧಾರವಾಡ ಜಿಲ್ಲೆಗೆ ಹೆಚ್ಚಿನ ಸಂಖ್ಯೆಯ ವಸತಿ ನಿಲಯಗಳ ಅಗತ್ಯತೆ ಅರಿತು ಸರ್ಕಾರದಿಂದ 15 ಹಾಸ್ಟೆಲ್ ಹಾಗೂ ಅವುಗಳ ನಿರ್ವಹಣೆಗೆ ಸಿಬ್ಬಂದಿ ಸಹ ಮಂಜೂರು ಮಾಡಿಸಲಾಗಿದೆ. ಈ ಹಾಸ್ಟೆಲ್‌ಗಳಲ್ಲಿ ಸ್ಥಳೀಯ ವಿದ್ಯಾರ್ಥಿಗಳಿಗೂ ಅವಕಾಶ ಸಿಗುವಂತೆ ಮಾರ್ಗಸೂಚಿ ಬದಲಾವಣೆ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದ್ದಾರೆ.