ಸಾರಾಂಶ
ಕನ್ನಡಪ್ರಭ ವಾರ್ತೆ ಹುನಗುಂದ
ರಾಜ್ಯದ ರೈತರು ಬೆಳೆದ ಕಬ್ಬು ಬೆಳೆಗೆ ಸರ್ಕಾರ ₹3500 ರೂ ಬೆಲೆ ನಿಗದಿಗೊಳಿಸಿ ತಕ್ಷಣವೇ ಆದೇಶ ಹೊರಡಿಸುವಂತೆ ಒತ್ತಾಯಿಸಿ ಹುನಗುಂದ ಹಾಗೂ ಇಲಕಲ್ಲ ತಾಲೂಕುಗಳ ಕಬ್ಬು ಬೆಳೆಗಾರರು ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯಿಂದ ಮಂಗಳವಾರ ತಹಸೀಲ್ದಾರ್ ಪ್ರದೀಪಕುಮಾರ ಹಿರೇಮಠಗೆ ಮನವಿ ಸಲ್ಲಿಸಿದರು.ಈ ವೇಳೆ ರೈತ ಮುಖಂಡ ಮಲ್ಲಣ್ಣ ತುಂಬದ ಮಾತನಾಡಿ, ಮಹಾರಾಷ್ಟ್ರ ಮತ್ತು ಗುಜರಾತ ರಾಜ್ಯ ಸರ್ಕಾರಗಳು ಅಲ್ಲಿನ ಕಬ್ಬು ಬೆಳೆಗಾರರಿಗೆ ₹3500 ಏಕರೂಪದ ಬೆಲೆ ನಿಗದಿಗೊಳಿಸಿವೆ. ಆದರೆ ಕರ್ನಾಟಕದಲ್ಲಿ ಒಂದು ಕಾರ್ಖಾನೆಯಲ್ಲಿ ₹2800, ಇನ್ನೊಂದರಲ್ಲಿ ₹2900, ಮತ್ತೊಂದರಲ್ಲಿ ₹3000 ಹೀಗೆ ಒಂದೊಂದು ತರಹದ ಬೆಲೆ ಮಾಡಿ ರೈತರ ಕಬ್ಬುಗಳನ್ನು ಖರೀದಿಸಿ ಅನ್ಯಾಯ ಮಾಡಲಾಗುತ್ತಿದೆ. ಸರ್ಕಾರ ರೈತರ ಹಿತಕ್ಕಿಂತ ಕಾರ್ಖಾನೆ ಮಾಲೀಕರ ಹಿತ ಕಾಪಾಡುವ ಕೆಲಸ ಮಾಡುತ್ತಿದೆ ಎಂದು ಆರೋಪಿದರು. ಕಾರ್ಖಾನೆಯ ಮಾಲೀಕ ಕಬ್ಬಿನಿಂದ ಸಕ್ಕರೆ, ಬೆಲ್ಲ, ಎಥಿನಾಲ್, ವಿದ್ಯುತ್ ಸೇರಿದಂತೆ ಅನೇಕ ಮೂಲಗಳಿಂದ ಲಾಭ ಗಳಿಸುತ್ತಿದ್ದರೂ ಕೂಡಾ ಕಾರ್ಖಾನೆ ಮಾಲೀಕರು ಮಾತ್ರ ಸರ್ಕಾರ ಮುಂದೆ ಕಾರ್ಖಾನೆ ನಷ್ಟವನ್ನು ತೋರಿಸುವ ಮೂಲಕ ಕಬ್ಬು ಬೆಳೆಗಾರರಿಗೆ ಅನ್ಯಾಯ ಮಾಡುತ್ತಿದ್ದಾರೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ 5 ದಿನಗಳೊಳಗೆ ಕಬ್ಬಿಗೆ ರಾಜ್ಯಾದ್ಯಂತ ₹3500 ಏಕರೂಪದ ಬೆಲೆ ನಿಗದಿಗೊಳಿಸಬೇಕು. ನಿಗದಿಗೊಳಿಸಿದ್ದಿದರೇ ಹುನಗುಂದ ಇಳಕಲ್ಲ ತಾಲೂಕಿನ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಯನ್ನು ಬಂದ್ ಮಾಡಿ ಉಗ್ರವಾದ ಪ್ರತಿಭಟನೆ ಕೈಕೊಳ್ಳಲಾಗುವುದೆಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಕೃಷಿಕ ಸಮಾಜದ ಪ್ರಧಾನ ಕಾರ್ಯದರ್ಶಿ ಶ್ರೀಕೃಷ್ಣ ಜಾಲಿಹಾಳ ಮಾತನಾಡಿ, ಕಳೆದ ನಾಲ್ಕೈದು ವರ್ಷಗಳಿಂದ ಕಡಿಮೆ ದರದಲ್ಲಿ ಕಬ್ಬು ಖರೀದಿಸಿ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುತ್ತಿದ್ದಾರೆ. ಕಾರ್ಖಾನೆಗಳ ಈ ನೀತಿ ವಿರೋಧಿಸಿ ಈಗಾಗಲೇ ಬಾಗಲಕೋಟೆ, ವಿಜಯಪುರ ಬೆಳಗಾವಿ ರೈತರು ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ಕಬ್ಬಿನಿಂದ 9 ರೀತಿ ಉತ್ಪನ್ನಗಳನ್ನು ಸಿದ್ಧಗೊಳಿಸಬಹುದು. ಉತ್ಪಾದಿಸಿದ ವಸ್ತುಗಳನ್ನು ಕೇಂದ್ರ ಸರ್ಕಾರ ಕಾರ್ಖಾನೆಗಳ ಮೂಲಕವೇ ಖರೀದಿಸುವ ಕಾರ್ಯ ಮಾಡುತ್ತಿದೆ. ಆದರೇ ಕಾರ್ಖಾನೆ ಮಾಲೀಕರಿಗೆ ಲಾಭವಿದ್ದರೂ ಕೂಡಾ ರೈತರಿಗೆ ಅನ್ಯಾಯ ಮಾಡುವಂತಹ ಕೆಲಸ ನಡೆಯುತ್ತಿದೆ. ಅದರ ಜೊತೆಗೆ ದೀಪಾವಳಿ ಪಾಡ್ಯದ ಮರುದಿನ ಕಬ್ಬು ಕಟಾವು ಕಾರ್ಯ ಆಗಬೇಕಿತ್ತು. ಸದ್ಯ 15 ದಿನಗಳ ವಿಳಂಬವಾಗಿದ್ದರಿಂದ ಕಬ್ಬಿನ ತೂಕ ಕಡಿಮೆಯಾಗುತ್ತಿದ್ದು. ತಕ್ಷಣವೇ ಸಕ್ಕರೆ ಸಚಿವರಾದಂತಹ ಶಿವಾನಂದ ಪಾಟೀಲರು ಕಬ್ಬು ಬೆಳೆಗಾರರ ಪ್ರತಿಭಟನಾ ಸ್ಥಳಕ್ಕೆ ಹೋಗಿ ಅವರ ಸಮಸ್ಯೆ ಮತ್ತು ಬೇಡಿಕೆಗಳನ್ನು ಆಲಿಸಿ ರಾಜ್ಯದ್ಯಂತ ₹3500 ರೂ ಬೆಲೆ ನಿಗದಿಗೊಳಿಸಬೇಕೆಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ರೈತ ಮುಖಂಡರಾದ ಪಾಪನಗೌಡ ಬಾಲರೆಡ್ಡಿ, ಪರಶುರಾಮ, ರತ್ನಾಕರ, ಸೋಮಶೇಖರಗೌಡ ಫೈಲ, ಸಂಗಯ್ಯ ಹಿರೇಮಠ, ಮಹಾಂತೇಶ ಪಾರೂತಿ, ಬಸಯ್ಯ ಹಿರೇಮಠ, ಮಲ್ಲಿಕಾರ್ಜುನಗೌಡ ಪಾಟೀಲ ಸೇರದಂತೆ ಅನೇಕರು ಇದ್ದರು.
;Resize=(128,128))
;Resize=(128,128))