ಮಹಾದಾಸೋಹಕ್ಕೆ ಒರಳಲ್ಲಿ ಕುಟ್ಟಿದ 15 ಕ್ವಿಂಟಲ್ ಶೇಂಗಾ ಚಟ್ನಿ

KannadaprabhaNewsNetwork |  
Published : Jan 17, 2025, 12:48 AM IST
16ಕೆಪಿಎಲ್21 ಇದು ಅಕ್ಕಿಯ ನಿಟ್ಟಲ್ಲ, ಶೇಂಗಾಪುಡಿ ನಿಟ್ಟು 16ಕೆಪಿಎಲ್22 ಒರಳಲ್ಲಿಯೇ ಕುಟ್ಟಿ ಮಾಡಿರುವ ಶೇಂಗಾ ಪುಡಿ 16ಕೆಪಿಎಲ್23 ಕೊಪ್ಪರಕಿಯಲ್ಲಿ ಸಿದ್ಧ ಮಾಡಿರುವ  ಸಾಂಬರ್ 16ಕೆಪಿಎಲ್24 ಕ್ವಿಂಟಲ್ ಗಟ್ಟಲೇ ಸಿದ್ದ ಮಾಡಿರುವ ಕೆಂಪುಚಟ್ನಿ  | Kannada Prabha

ಸಾರಾಂಶ

ಮನೆಯಲ್ಲಿ ನಾಲ್ಕು ಜನರಿಗೆ ಶೇಂಗಾ ಚಟ್ನಿ (ಪುಡಿ)ಯನ್ನು ಕುಟ್ಟಿ ಮಾಡುವುದನ್ನು ಬಿಟ್ಟು, ಈಗ ಮಿಕ್ಸಿಯಲ್ಲಿ ಹಾಕಿಕೊಳ್ಳುತ್ತಾರೆ. ಆದರೆ, ಗವಿಸಿದ್ಧೇಶ್ವರ ಮಹಾದಾಸೋಹಕ್ಕೆ 15 ಕ್ವಿಂಟಲ್ ಶೇಂಗಾ ಪುಡಿಯ ಚಟ್ನಿಯನ್ನು ಕುಟ್ಟಿಯೇ ತಯಾರಿಸಿಕೊಂಡು ಬಂದು ಕೊಟ್ಟಿದ್ದಾರೆ.

ಗವಿಸಿದ್ಧೇಶ್ವರ ಸ್ವಾಮೀಜಿಗಳ ಊರಿನವರು ಕುಟ್ಟಿ ಸಿದ್ಧ ಮಾಡಿದ ಚಟ್ನಿ

ಎರಡು ಮೂರು ಹಳ್ಳಿಯ ಮಹಿಳೆಯರು ಕೈಜೋಡಿಸಿ ಮಾಡಿದ ಕಾರ್ಯಸೋಮರಡ್ಡಿ ಅಳವಂಡಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ಮನೆಯಲ್ಲಿ ನಾಲ್ಕು ಜನರಿಗೆ ಶೇಂಗಾ ಚಟ್ನಿ (ಪುಡಿ)ಯನ್ನು ಕುಟ್ಟಿ ಮಾಡುವುದನ್ನು ಬಿಟ್ಟು, ಈಗ ಮಿಕ್ಸಿಯಲ್ಲಿ ಹಾಕಿಕೊಳ್ಳುತ್ತಾರೆ. ಆದರೆ, ಗವಿಸಿದ್ಧೇಶ್ವರ ಮಹಾದಾಸೋಹಕ್ಕೆ 15 ಕ್ವಿಂಟಲ್ ಶೇಂಗಾ ಪುಡಿಯ ಚಟ್ನಿಯನ್ನು ಕುಟ್ಟಿಯೇ ತಯಾರಿಸಿಕೊಂಡು ಬಂದು ಕೊಟ್ಟಿದ್ದಾರೆ.

ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳ ಊರಾದ ಕಲಬುರಗಿಯ ಹಾಗರಗುಂಡಿ ಗ್ರಾಮದ ಭಕ್ತರು ಇಂತಹ ಸೇವೆ ಮಾಡಿದ್ದಾರೆ.

ಬರೋಬ್ಬರಿ 15 ಕ್ವಿಂಟಲ್ ಶೇಂಗಾ ಪುಡಿಯನ್ನು ಒರಳಲ್ಲಿಯೇ ಕುಟ್ಟಿ ಸಿದ್ಧಮಾಡಿಕೊಂಡು ಬಂದಿರುವುದು ವಿಶೇಷ. ಹೀಗಾಗಿ, ಈಗ ಮಹಾದಾಸೋಹದಲ್ಲಿ ಶೇಂಗಾ ಪುಡಿಯದ್ದೇ ಗುಣಗಾನ ನಡೆಯುತ್ತಿದೆ.

ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳ ಗ್ರಾಮವಾದ ಹಾಗರಗುಂಡಿ ಗ್ರಾಮದ ಭಕ್ತರು ಪ್ರತಿ ವರ್ಷವೂ ಒಂದಿಲ್ಲೊಂದು ವಿಶೇಷತೆ ಮಾಡಿಕೊಂಡು ಬರುತ್ತಾರೆ. ಈ ವರ್ಷ ಬರೋಬ್ಬರಿ 15 ಕ್ವಿಂಟಲ್ ಶೇಂಗಾ ಪುಡಿಯನ್ನು ಒರಳಲ್ಲಿ ಕುಟ್ಟಿ ಚಟ್ನಿ ಪೌಡರ್‌ ಮಾಡಿಕೊಂಡು ಬರುವ ಮೂಲಕ ವಿಶೇಷತೆ ಮೆರೆದಿದ್ದಾರೆ.

ಮಾಡಿದ್ದು ಹೇಗೆ:

ಗ್ರಾಮದವರೆಲ್ಲೂ ಸೇರಿ ಈ ವರ್ಷ ಒರಳಲ್ಲಿಯೇ ಕುಟ್ಟಿ ಮಾಡಿದ ಶೇಂಗಾ ಪುಡಿಯನ್ನು ಗವಿಸಿದ್ಧೇಶ್ವರ ಮಹಾದಾಸೋಹಕ್ಕೆ ಅರ್ಪಿಸೋಣ. ಮರೆತು ಹೋಗಿರುವ ಒರಳಲ್ಲಿ ಕುಟ್ಟುವ ಶೇಂಗಾ ಪುಡಿಯ ರುಚಿಯನ್ನು ಲಕ್ಷ ಲಕ್ಷ ಭಕ್ತರಿಗೂ ಉಣಬಡಿಸೋಣ ಎಂದು ನಿರ್ಧರಿಸುತ್ತಾರೆ.

ಅದರಲ್ಲಿ 14 ಕ್ವಿಂಟಲ್ ಶೇಂಗಾ, ಒಂದುವರೆ ಕ್ವಿಂಟಲ್ ಕಾರ, ಒಂದು ಕ್ವಿಂಟಲ್ ಬಳ್ಳೊಳ್ಳಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಂಡು ತಯಾರು ಮಾಡಿದ್ದಾರೆ.

ಇದನ್ನು ಎರಡು ಮೂರು ಕೆಜಿಯಂತೆ ವಿಂಗಡಣೆ ಮಾಡಿ, ಹಾಗರಗುಂಡಿ ಹಾಗೂ ಪಕ್ಕದ ಎರಡು-ಮೂರು ಹಳ್ಳಿಗಳಲ್ಲಿ ಮನೆ ಮನೆಗೆ ಕಳುಹಿಸಿ, ಅವರು ಕುಟ್ಟಿಕೊಂಡು ಸಿದ್ಧ ಮಾಡಿಸಿದ್ದಾರೆ. ಹೀಗೆ ಸಿದ್ಧಮಾಡಿಕೊಂಡು ಬಂದ ಶೇಂಗಾ ಪುಡಿಯನ್ನು ಗ್ರಾಮದ ಶರಣಬಸಪ್ಪನ ಗುಡಿಯಲ್ಲಿ ಹತ್ತು ಕೆಜಿ ಪಾಕೇಟ್ ಮಾಡಿದ್ದಾರೆ. ಬಳಿಕ ಹದಿನೈದು ಕ್ವಿಂಟಲ್ ಶೇಂಗಾ ಪುಡಿಯನ್ನು ಮಿನಿಲಾರಿಯೊಂದರಲ್ಲಿ ತಂದು ಶ್ರೀ ಮಠಕ್ಕೆ ಅರ್ಪಿಸಿದ್ದಾರೆ.

ಮಹಾದಾಸೋಹದಲ್ಲಿ ಈಗ ಈ ಶೇಂಗಾ ಪುಡಿಯದ್ದೆ ಬಣ್ಣನೆ ಶುರುವಾಗಿದೆ. ಭಕ್ತರು ದಾಸೋಹದಲ್ಲಿ ಕೇಳಿ ಕೇಳಿ ಪಡೆದು ಸಂತೃಪ್ತಿಯನ್ನು ಹೊಂದುತ್ತಿದ್ದಾರೆ. ಇದಪ್ಪಾ ಶೇಂಗಾ ಪುಡಿ ಎಂದರೆ, ಕುಟ್ಟಿದ್ದು ಎಂದರೆ ಆ ರುಚಿಯೇ ಬೇರೆ ಎಂದೆಲ್ಲಾ ಚಪ್ಪರಿಸುತ್ತಿದ್ದಾರೆ. ಭಕ್ತರು ಬಣ್ಣಿಸುತ್ತಿದ್ದಾರೆ.

ಇದಷ್ಟೇ ಅಲ್ಲಾ, ಇನ್ನು ಹೀಗೆ ಭಕ್ತರು ಚಟ್ನಿಪುಡಿಯನ್ನು ಕ್ವಿಂಟಲ್ ಗಟ್ಟಲೇ ತಂದುಕೊಟ್ಟಿದ್ದಾರೆ. ಸುಮಾರು 100 ಕ್ವಿಂಟಲ್‌ಗೂ ಅಧಿಕ ಚಟ್ನಿಪುಡಿಯೇ ದಾಸೋಹದಲ್ಲಿ ಬಳಕೆಯಾಗುತ್ತದೆ.

20 ಕ್ವಿಂಟಲ್‌ ಕೆಂಪು ಚಟ್ನಿ:

ಉತ್ತರ ಕರ್ನಾಟಕ ಊಟ ಎಂದರೇ ನೆನಪಾಗುವ ಕೆಂಪು ಚಟ್ನಿಯನ್ನು ಸಹ ಮಹಾ ದಾಸೋಹದಲ್ಲಿ ಮಾಡಲಾಗುತ್ತದೆ. ಎರಡೇ ದಿನಗಳಲ್ಲಿ ಬರೋಬ್ಬರಿ 5 ಕ್ವಿಂಟಲ್ ಕೆಂಪುಚಟ್ನಿ ಖರ್ಚಾಗಿದೆ. ತಾವಗೇರಾದಿಂದ ಬಂದಿರುವ 50 ಜನರ ತಂಡ ನಿತ್ಯವೂ ಈ ಕೆಂಪುಚಟ್ನಿ ಮಾಡುವುದನ್ನೇ ತಮ್ಮ ಸೇವೆ ಮಾಡಿಕೊಂಡಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಕೆಂಪುಚಟ್ನಿ ಮಾಡುವುದಕ್ಕಾಗಿಯೇ ಆಗಮಿಸುತ್ತಾರೆ.

ಒಂದುವರೆ ಲಕ್ಷ ಭಕ್ತರ ಪ್ರಸಾದ ಸ್ವೀಕಾರ:

ಗವಿಸಿದ್ಧೇಶ್ವರ ಜಾತ್ರಾಮಹೋತ್ಸವದ ಅಂಗವಾಗಿ ಪ್ರಾರಂಭವಾಗಿರುವ ಮಹಾದಾಸೋಹದಲ್ಲಿ ಮೊದಲ ದಿನವೇ ಬರೋಬ್ಬರಿ ಒಂದುವರೆ ಲಕ್ಷಕ್ಕೂ ಅಧಿಕ ಭಕ್ತರು ಪ್ರಸಾದ ಸ್ವೀಕಾರ ಮಾಡಿದ್ದಾರೆ.

130 ಕ್ವಿಂಟಲ್ ಅಕ್ಕಿ ಬಳಕೆಯಾಗಿದೆ. ಕಳೆದ ವರ್ಷ 115 ಕ್ವಿಂಟಲ್ ಅಕ್ಕಿ ಬಳಕೆಯಾಗಿತ್ತು. 12 ಕೊಪ್ಪರಿಗೆ ಸಾಂಬರ್, 6 ಕೊಪ್ಪರಿಗೆ ಹೆಸರುಬೇಳೆ ಫಲ್ಯ, 6 ಕೊಪ್ಪರಿಗೆ ಮಿಕ್ಸ್ ಬಾಜಿ ಬಳಕೆಯಾಗಿದೆ. ಇದಲ್ಲದೆ ಲಕ್ಷ ಲಕ್ಷ ಜಿಲೇಬಿಗಳು, ರೊಟ್ಟಿಗಳು ಹಾಗೂ 20-30 ಕ್ವಿಂಟಲ್ ಮಾದಲಿ ಬಳಕೆಯಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ