ಹಾಸನ: ಹೃದಯಾಘಾತಕ್ಕೆ ಒಂದೇ ತಿಂಗಳಿನಲ್ಲಿ 15 ಯುವ ಜನರು ಬಲಿ

KannadaprabhaNewsNetwork |  
Published : Jun 27, 2025, 12:48 AM ISTUpdated : Jun 27, 2025, 10:58 AM IST
heart attack

ಸಾರಾಂಶ

ಕಳೆದ 1 ತಿಂಗಳಿನ ಅವಧಿಯಲ್ಲಿ ಹಾಸನ ಜಿಲ್ಲೆಯಲ್ಲೇ ಹೃದಯಾಘಾತಕ್ಕೆ 30 ವರ್ಷದೊಳಗಿನ 15 ಮಂದಿ ಸಾವನ್ನಪ್ಪಿರುವ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ.

 ಹಾಸನ :  ಹೃದಯಾಘಾತದಿಂದ ಹಾಸನದ 22 ವರ್ಷದ ಯುವತಿಯೊಬ್ಬರು ಬೆಂಗಳೂರಿನಲ್ಲಿ ಮೃತಪಟ್ಟಿರುವ ಘಟನೆ ಬುಧವಾರ ನಡೆದಿದೆ. ಒಟ್ಟಾರೆಯಾಗಿ ಕಳೆದ 1 ತಿಂಗಳಿನ ಅವಧಿಯಲ್ಲಿ ಹಾಸನ ಜಿಲ್ಲೆಯಲ್ಲೇ ಹೃದಯಾಘಾತಕ್ಕೆ 30 ವರ್ಷದೊಳಗಿನ 15 ಮಂದಿ ಸಾವನ್ನಪ್ಪಿರುವ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ.

ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಕಟ್ಟಳ್ಳಿ ಮೂಲದ ಸುಪ್ರಿಯಾ(22) ಮೃತ ಯುವತಿ. ಸುಪ್ರಿಯಾ ಅವರು ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ವಾಸವಿದ್ದು, ಮುಕ್ತ ವಿವಿಯಲ್ಲಿ ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಬುಧವಾರ ಮನೆಯಲ್ಲಿದ್ದಾಗ ಎದೆನೋವಿನಿಂದ ಕುಸಿದುಬಿದಿದ್ದಾರೆ. ತಕ್ಷಣ ಅವರನ್ನು ಪೋಷಕರು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯಯೇ ಕೊನೆಯುಸಿರೆಳೆದಿದ್ದಾರೆ.

ಕಳೆದ ಒಂದು ತಿಂಗಳಿನ ಅವಧಿಯಲ್ಲಿ ಹಾಸನ ಜಿಲ್ಲೆಯಲ್ಲಿ 15 ಮಂದಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಇದರಿಂದಾಗಿ ಜಿಲ್ಲೆಯ ಜನರು ಆತಂಕದಲ್ಲೇ ದಿನದೂಡುವಂತಾಗಿದೆ. ಹಾಸನ, ಬೇಲೂರು, ಸಕಲೇಶಪುರ, ಆಲೂರು, ಹೊಳೆನರಸೀಪುರ, ಚನ್ನರಾಯಪಟ್ಟಣ ತಾಲೂಕಿನ ಹಲವೆಡೆ ಯುವಕ ಯುವತಿಯರು ಜೀವ ಚೆಲ್ಲಿದ್ದಾರೆ. ಆಲೂರು ತಾಲೂಕಿನಲ್ಲಿ 14 ವರ್ಷದ ಬಾಲಕನೊಬ್ಬ ಮನೆಯಲ್ಲಿ ಮಲಗಿದ್ದಲ್ಲಿಯೇ ಮೃತಪಟ್ಟಿದ್ದ. ಇನ್ನು ಸಕಲೇಶಪುರದಲ್ಲಿ ಎಂಜಿನಿಯರಿಂಗ್‌ ಮುಗಿಸಿದ್ದ ಯುವಕನೊಬ್ಬ ಮನೆಯಲ್ಲಿ ಎದೆನೋವು ಕಾಣಿಸಿಕೊಂಡು ಸಾವನ್ನಪ್ಪಿದ್ದ. ಈ ಘಟನೆಯಾದ ಬಳಿಕ ವಾರಕ್ಕೊಂದು ಹೃದಯಾಘಾತ ಸುದ್ದಿಗಳು ನಡೆಯುತ್ತಲೇ ಇವೆ. ಹೀಗೆ ಸಾವನ್ನಪ್ಪಿದವರಲ್ಲಿ ಬಹುತೇಕರು ಹಾಸನ ಜಿಲ್ಲೆಯ ನಿವಾಸಿಗಳೇ ಆದರೂ, ಕೆಲವರು ಮಾತ್ರ ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಂಡಿದ್ದವರು.

ಘಟನೆಗೆ ಸಂಬಂಧಿಸಿದಂತೆ 10 ತಜ್ಞವೈದ್ಯರ ತಂಡಹಲವು ಸಂಶೋಧನೆಗಳನ್ನು ನಡೆಸಿ ಹೃದಯಾಘಾತಕ್ಕೆ ಕೋವಿಡ್‌ ಲಸಿಕೆ ಕಾರಣವಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. 

ಇದರ ಜತೆಗೆ ಇಂದಿನ ಯುವಜನತೆಯಲ್ಲಿ ಚಟವಾಗಿರುವ ಮದ್ಯ ಸೇವನೆ, ಧೂಮಪಾನ, ಗುಟ್ಕಾ ಸೇರಿ ಹಲವು ಚಟಗಳು ಹೃದಯಾಘಾತಕ್ಕೆ ಕಾರಣ ಎನ್ನುವ ಸಬೂಬು ನೀಡಿದ್ದಾರೆ.ಸಂಸದ ಶ್ರೇಯಸ್‌ ಪಟೇಲ್‌ ಅವರು ಹಿಮ್ಸ್‌ನಲ್ಲಿ ತಜ್ಞ ವೈದ್ಯರ ಸಭೆ ಕರೆದು ಜಿಲ್ಲೆಯಲ್ಲಿ ಆಗುತ್ತಿರುವ ಸಾವುಗಳ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಿ ಕಾರಣ ಏನೆಂದು ಪತ್ತೆಹಚ್ಚಲು ಸೂಚನೆ ನೀಡಿದ್ದರು. 

ಈ ನಿಟ್ಟಿನಲ್ಲಿ ಹಿಮ್ಸ್‌ ನ ತಜ್ಞ ವೈದ್ಯರು ಕೂಡ ಕಾರ್ಯೋನ್ಮುಖರಾಗಿದ್ದಾರೆ. ಸಾಮಾನ್ಯವಾಗಿ ಬದಲಾದ ಜೀವನ ಶೈಲಿ, ಆಹಾರ ಪದ್ಧತಿ, ದೈಹಿಕ ಕಸರತ್ತು ಇಲ್ಲದಿರುವುದು ಕಾರಣ ಎಂದು ಹೇಳಿದರು. ಆದರೆ ಈವರೆಗೆ ಹೃದಯಾಘಾತಕ್ಕೆ ಸ್ಪಷ್ಟ ಕಾರಣ ಮಾತ್ರ ಸಿಕ್ಕಿಲ್ಲ. ಹಾಗಾಗಿ ಜಿಲ್ಲೆಯ ಜನರು ಯಾವಾಗ ಯಾರ ಪ್ರಾಣಪಕ್ಷಿ ಹಾರಿಹೋಗಲಿದೆಯೋ ಎನ್ನುವ ಆತಂಕದಲ್ಲೇ ದಿನ ದೂಡುವಂತಾಗಿದೆ.

PREV
Read more Articles on

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ