₹150 ಕೋಟಿ ಆಫರ್‌, ಮುಡಾ, ವಾಲ್ಮೀಕಿ ಹಗರಣ ಸಿಬಿಐಗೆ ಕೊಡಲಿ : ಮಾಜಿ ಡಿಸಿಎಂ ಈಶ್ವರಪ್ಪ

KannadaprabhaNewsNetwork | Updated : Dec 17 2024, 11:59 AM IST

ಸಾರಾಂಶ

ವಕ್ಫ್‌ ವಿವಾದಕ್ಕೆ ಸಂಬಂಧಿಸಿದಂತೆ ಅನ್ವರ್ ಮಾಣಿಪ್ಪಾಡಿ ಅವರ ವರದಿ ಬಹಿರಂಗವಾಗಿಲ್ಲ. ಅದು ಬಹಿರಂಗವಾಗದಂತೆ ಸಿದ್ದರಾಮಯ್ಯ ಮತ್ತು ಪ್ರಿಯಾಂಕ್ ಖರ್ಗೆ ₹ 150 ಕೋಟಿ ಆಫರ್ ಮಾಡಿದ್ದಾರೆ ಎಂದು ಸ್ವತಃ ಮಾಣಿಪ್ಪಾಡಿ ಅವರೇ ಹೇಳಿದ್ದಾರೆ. 

ಹುಬ್ಬಳ್ಳಿ:  ವಕ್ಫ್‌ ವಿವಾದಕ್ಕೆ ಸಂಬಂಧಿಸಿದಂತೆ ಇದೀಗ ಅನ್ವರ್‌ ಮಾಣಿಪ್ಪಾಡಿ ಅವರಿಗೆ ₹150 ಕೋಟಿ ಆಮಿಷದ ಆರೋಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸಿಬಿಐ ತನಿಖೆ ಬಗ್ಗೆ ಪ್ರಸ್ತಾಪಿಸಿರುವುದು ಸಂತಸಕರ. ಸಿಬಿಐ ಮೇಲೆ ಈಗ ನಂಬಿಕೆ ಬಂದಿರುವುದು ಖುಷಿ ಸಂಗತಿ. ಅದೇ ರೀತಿ ಮುಡಾ, ವಾಲ್ಮೀಕಿ ನಿಗಮದ ಹಗರಣಗಳನ್ನು ಸಿಬಿಐಗೆ ವಹಿಸಲಿ ಎಂದು ಮಾಜಿ ಡಿಸಿಎಂ ಕೆ.ಎಸ್‌. ಈಶ್ವರಪ್ಪ ಆಗ್ರಹಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಬಿಐಗೆ ನೀಡುವ ಅಧಿಕಾರ ಇರುವುದು ರಾಜ್ಯ ಸರ್ಕಾರದ ಬಳಿಯೇ. ಆದಕಾರಣ ಎಲ್ಲ ಪ್ರಕರಣಗಳನ್ನು ಸಿಬಿಐಗೆ ಒಪ್ಪಿಸಬೇಕು ಎಂದರು.

ಅನ್ವರ್ ಮಾಣಿಪ್ಪಾಡಿ ಅವರ ವರದಿ ಬಹಿರಂಗವಾಗಿಲ್ಲ. ಅದು ಬಹಿರಂಗವಾಗದಂತೆ ಸಿದ್ದರಾಮಯ್ಯ ಮತ್ತು ಪ್ರಿಯಾಂಕ್ ಖರ್ಗೆ ₹150 ಕೋಟಿ ಆಫರ್ ಮಾಡಿದ್ದಾರೆ ಎಂದು ಸ್ವತಃ ಮಾಣಿಪ್ಪಾಡಿ ಅವರೇ ಹೇಳಿದ್ದಾರೆ. ಆದರೆ, ಮುಡಾ ಹಗರಣವನ್ನು ಸೈಡ್‌ಲೈನ್ ಮಾಡಲು ಸಿದ್ದರಾಮಯ್ಯ ಈ ಆರೋಪವನ್ನು ಬಿ.ವೈ. ವಿಜಯೇಂದ್ರ ಮೇಲೆ ಹಾಕುತ್ತಿದ್ದಾರೆ. ಸಿಬಿಐ ತನಿಖೆಯಿಂದಲೇ ಸತ್ಯಾಂಶ ಹೊರ ಬರಬೇಕಿದೆ ಎಂದರು.

ವಕ್ಫ್ ಪ್ರಕರಣದಲ್ಲಿ ಈ ಹಿಂದೆ ಮಲ್ಲಿಕಾರ್ಜುನ ಖರ್ಗೆ, ಖಮರುಲ್ ಇಸ್ಲಾಂ ಹಾಗೂ ರೆಹಮಾನ್ ಖಾನ್ ಸೇರಿ ಹಲವರು ಸಾವಿರಾರು ಕೋಟಿ ರೂ. ಅವ್ಯವಹಾರ ಮಾಡಿರುವ ಬಗ್ಗೆ ಮಾಹಿತಿ ಇದೆ. ಹೀಗಾಗಿ ಅನ್ವರ್ ಮಾಣಿಪ್ಪಾಡಿ ಅವರ ವರದಿಯನ್ನು ಸದನದಲ್ಲಿ ಬಿಡುಗಡೆ ಮಾಡಬೇಕು. ಅದು ಸಾರ್ವಜನಿಕವಾಗಿ ಚರ್ಚೆಯಾಗಬೇಕು. ಆಗ ಲೂಟಿಕೋರರ ಹೆಸರು ಬಹಿರಂಗವಾಗಲಿದೆ. ವಕ್ಫ್ ಗುಮ್ಮ ಇಡೀ ರಾಜ್ಯವನ್ನೇ ನುಂಗಿದೆ. ಇದರಲ್ಲಿ ರಾಜಕಾರಣ ಮಾಡಬಾರದು ಎಂದರು.

ಬಿಜೆಪಿ ತಾಯಿ ಇದ್ದಂತೆ 

ಸದ್ಯ ನಾನು ಬಿಜೆಪಿಯಿಂದ ದೂರ ಇರಬಹುದು. ಆದರೆ, ಮಾನಸಿಕವಾಗಿ ನಾನು ಈಗಲೂ ಬಿಜೆಪಿಗನೇ. ಬಿಜೆಪಿ ಮತ್ತು ನನ್ನದು ತಾಯಿ ಮಗನ ಸಂಬಂಧ. ತಾಯಿಗೂ ನನ್ನ ಮೇಲೆ ಪ್ರೀತಿ ಇದೆ. ನನಗೂ ತಾಯಿಯ ಮೇಲೆ ಪ್ರೀತಿ ಇದೆ. ಕೆಲವರ ಕಾರಣದಿಂದ ಪಕ್ಷದಿಂದ ದೂರವಾಗಿರಬಹುದು. ಆದರೆ, ಇಂದಲ್ಲ ನಾಳೆ ಮತ್ತೆ ಬಿಜೆಪಿ ಸೇರುತ್ತೇನೆ. ಅದು ಯಾವಾಗ ಎಂಬುದನ್ನು ಮುಂದಿನ ದಿನದಲ್ಲಿ ತಿಳಿಸುತ್ತೇನೆ ಎಂದು ಈಶ್ವರಪ್ಪ ಹೇಳೀದರು.

Share this article