ಕನ್ನಡಪ್ರಭ ವಾರ್ತೆ, ತುಮಕೂರು ಪ್ರಧಾನಿ ಮೋದಿಯವರು ಭಾರತವನ್ನು ಶ್ರೇಷ್ಠಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಚಕ್ರವರ್ತಿ ಸೂಲಿಬೆಲೆ ಅಭಿಪ್ರಾಯಪಟ್ಟರು. ರಾಮಮಂದಿರದಲ್ಲಿ ಜನ ಗಣ ಮನ ಬೆಸೆಯೋಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಮೋದಿಯವರನ್ನು ನಾವು ಬೆಂಬಲಿಸಿ ಭಾರತವನ್ನು ಶ್ರೇಷ್ಠಗೊಳಿಸೋಣ ಎಂದ ಅವರು ಎಲ್ಲರೂ ಮೋದಿಯವರಿಗೆ ಬೆಂಬಲ ಕೊಡುವ ಸಂಕಲ್ಪ ಮಾಡಿ ಮತ್ತೊಮ್ಮೆ ಅವರ ಕೈಗೆ ಈ ರಾಷ್ಟ್ರವನ್ನು ಕೊಟ್ಟು ಭಾರತವನ್ನು ವಿಶ್ವ ಗುರು ಮಾಡಬೇಕು ಎಂದರು. 16 ದಿನಗಳಿಂದ ನಮೋ ಬ್ರಿಗೇಡ್ ಯಾತ್ರೆ ಕೈಗೊಂಡಿದ್ದು ಕೋಲಾರದಿಂದ ಕರಾವಳಿ ಭಾಗದಿಂದ ಉತ್ತರ ಕರ್ನಾಟಕದಲ್ಲಿ ಸುತ್ತಾಡಿ ತುಮಕೂರಿಗೆ ಬಂದಿದ್ದೇವೆ ಎಂದರು. ಜನ ಗಣ ಮನ ಜನರನ್ನು ಬೆಸೆಯುವ ಉದ್ದೇಶವಾಗಿದೆ. ಅಲ್ಲದೇ ರಾಷ್ಟ್ರವನ್ನು ಶ್ರೇಷ್ಠ ಗೊಳಿಸುವ ಉದ್ದೇಶದ ಯಾತ್ರೆ ಎಂದ ಅವರು ಒಟ್ಟು 3500 ಕಿ.ಮಿ. ಯಾತ್ರೆ ಮಾಡಿದ್ದಾಗಿ ತಿಳಿಸಿದರು. ಚಿತ್ರದುರ್ಗದಲ್ಲಿ ದಲಿತರ ಸಹಭೋಜನ ಮಾಡಿದೆವು. ಹೀಗೆ ಪ್ರತಿದಿನ ಎಲ್ಲಾ ಸಮುದಾಯದೊಂದಿಗೆ ಚರ್ಚೆ ಮಾಡುತ್ತಿದ್ದೇವೆ ಎಂದರು. ಉಚಿತ ಗ್ಯಾರೆಂಟಿಗಳ ಪೈಕಿ 2 ಸಾವಿರ ಒಂದು ತಿಂಗಳು ಬಂತು ಇನ್ನೊಂದು ಬರಲಿಲ್ಲ. ಕರೆಂಟ್ ಫ್ರೀ ಅಂತ ವೋಟ್ ಹಾಕಿದ್ರೂ ಕರೆಂಟ್ ಬರಲಿಲ್ಲ ಎಂದು ವ್ಯಂಗ್ಯವಾಡಿದರು. ರಾಜ್ಯದಲ್ಲಿ ಉಚಿತ ಗ್ಯಾರಂಟಿಯಿಂದ ಅಭಿವೃದ್ಧಿ ಚಟುವಟಿಕೆ ಸತ್ತೋಗುತ್ತದೆ. ನಮಗೆ ಅಭಿವೃದ್ಧಿ ಮಾಡಲಿಕ್ಕೆ ಆಗುತ್ತಿಲ್ಲ. ಎಲ್ಲಾ ಗ್ಯಾರೆಂಟಿಗಳಿಗೆ ಹಣ ಖರ್ಚಾಗುತ್ತಿದೆ ಅಂತ ಕಾಂಗ್ರೆಸ್ ಶಾಸಕರೆ ಹೇಳುತ್ತಿದ್ದಾರೆ ಎಂದರು. ದಲಿತರಿಗೆ ಮೀಸಲಾದ ಅನುದಾನವನ್ನು ಬಿಟ್ಟಿ ಭಾಗ್ಯಗಳಿಗೆ ಬಳಸಿಕೊಳ್ಳಲಾಗಿದೆ. ನಾಲ್ಕು ತಿಂಗಳಿಂದ ಬಿಸಿಯೂಟಕ್ಕೆ ಅನುದಾನ ಸಿಕ್ಕಿಲ್ಲ ಎಂದ ಅವರು ಇದೇ ರೀತಿ ಮುಂದುವರೆದರೆ ಕರ್ನಾಟಕದ ಅಭಿವೃದ್ಧಿ ನಿಲ್ಲುತ್ತದೆ ಎಂದರು. ಇಂತಹ ಸರ್ಕಾರ ಕೇಂದ್ರದಲ್ಲಿ ಬಂದರೆ ದೇಶದ ಕಥೆ ಏನಾಗುತ್ತದೆ ಎಂದು ಪ್ರಶ್ನಿಸಿದ ಅವರು ಅದಕ್ಕೆ ಇಲ್ಲಿ ಆಗಿದ್ದಂತಹ ತಪ್ಪು ಬೇರೆ ಕಡೆ ಆಗಬಾರದು ಎಂದರು. ಹಮಾಸ್ ನಂತಹ ರಾಕ್ಷಸ ಉಗ್ರರು ನಮ್ಮ ಪಕ್ಕದಲ್ಲೆ ಇದ್ದಾರೆ. ಪಾಕಿಸ್ತಾನದಲ್ಲಿ ಲಷ್ಕರೆ ತೊಯಿಬಾ, ಐಸಿಸ್ ಉಗ್ರರಿದ್ದಾರೆ. ಇಸ್ರೇಲ್ ನಲ್ಲಿ ಆದಂತಹ ದಾಳಿ ನಮ್ಮಮೇಲೆ ಆಗಬೇಕಾಗಿತ್ತು. ಆದರೆ ಪ್ರಧಾನಿ ಮೋದಿಯಂತಹ ದೊಡ್ಡ ರಕ್ಷಣಾ ಗೋಡೆ ಇದೆ ಎಂದರು. ಪ್ರಧಾನಿ ಸೋಲಿಸಬೇಕೆಂಬ ಇಂಡಿಯಾ ಒಕ್ಕೂಟದವರು ಹಮಾಸ್ ಉಗ್ರರಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಆರೋಪಿಸಿದ ಅವರು ಈ ಸರ್ಕಾರಕ್ಕೆ ರಾಕ್ಷಸರನ್ನು ಬೆಂಬಲಿಸುವುದು ರೂಡಿ. ಇಲ್ಲಿ ಮಹಿಷಾಸುರನನ್ನು ಬೆಂಬಲಿಸುತ್ತಾರೆ. ಅಲ್ಲಿ ಹಮಾಸ್ ಉಗ್ರರನ್ನು ಬೆಂಬಲಿಸುತ್ತಾರೆ ಎಂದರು. ಒಂದು ಪಕ್ಷದ ಅಧಿನಾಯಕಿ ಎನ್ ಕೌಂಟರ್‌ನಲ್ಲಿ ಸತ್ತ ಭಯೋತ್ಪಾದಕನಿಗಾಗಿ ಕಣ್ಣೀರು ಹಾಕುತ್ತಾರೆ ಎಂದು ವ್ಯಂಗ್ಯವಾಡಿದ ಅವರು ಈ ದೇಶದ ಮೇಲೆ ಆಕ್ರಮಣ ಮಾಡುವಂತಹ ಭಯೋತ್ಪಾದಕರನ್ನು ಬೆಂಬಲಿಸುವವರಿಗೆ ಈ ದೇಶದ ಅಧಿಕಾರ ಕೊಡೊಕಾಗುತ್ತಾ ಎಂದರು. ಪಿ.ಚಿದಂಬರಂ ಅವರು ಈ ದೇಶದ ಹಳ್ಳಿಗರನ್ನು ದಡ್ಡರೆಂದು ಕರೆದರು. ಪ್ರಧಾನಿ ಮೋದಿ ಭಾರತವನ್ನು ಡಿಜಿಟಲ್ ಎಕಾನಮಿಯಾಗಿ ಬದಲಾಯಿಸಿದರು ಎಂದರು.