ಕಳೆದ ಒಂದು ವರ್ಷದಲ್ಲಿ ವಿವಿಧ ಕಾಮಗಾರಿಗೆ ಹಣ ಬಿಡುಗಡೆ । ಮುಂದುವರೆದ ಕಾಮಗಾರಿಗೆ 164 ಕೋಟಿ ಮಂಜೂರು
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಒಂದು ವರ್ಷದಲ್ಲಿ ವಿವಿಧ ಕಾಮಗಾರಿಗಳಿಗೆ ಮಂಜೂರಾತಿ ನೀಡಿ 160 ಕೋಟಿ ರುಪಾಯಿ ಬಿಡುಗಡೆ ಮಾಡಲಾಗಿದೆ. ಮುಂದುವರಿದ ಕಾಮಗಾರಿಗಳಿಗೆ 164 ಕೋಟಿ ರು.ಗಳ ಮರು ಮಂಜೂರಾತಿ ನೀಡಿ ಕಾಮಗಾರಿಗಳನ್ನು ಪ್ರಾರಂಭಿಸಲಾಗಿದೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾವು ಶಾಸಕರಾದ ನಂತರ ಕಳೆದ ಒಂದು ವರ್ಷದ ಅವಧಿಯಲ್ಲಿ ಕೈಗೊಂಡಿರುವ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದರು. ರಾಜ್ಯದಲ್ಲಿ ಕಳೆದ ವರ್ಷದ ಅವಧಿಯಲ್ಲಿ ಬರಗಾಲ, 5 ಗ್ಯಾರಂಟಿಗಳ ಜಾರಿ ಮಾಡಿದ್ದರೂ ಕೂಡ ನಿರೀಕ್ಷೆಗೂ ಮೀರಿ ರಾಜ್ಯ ಸರ್ಕಾರ ಅಭಿವೃದ್ಧಿಗೆ ಅನುದಾನ ನೀಡಿದೆ ಎಂದ ಅವರು, ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಗೃಹಲಕ್ಷ್ಮೀ ಯೋಜನೆಯಡಿ 132 ಕೋಟಿ, ಗೃಹ ಜ್ಯೋತಿ ಯಲ್ಲಿ 20.93 ಕೋಟಿ, ಶಕ್ತಿ ಯೋಜನೆಯಡಿ 37.14 ಕೋಟಿ, ಅನ್ನಭಾಗ್ಯ ಯೋಜನೆಯಲ್ಲಿ 30.87 ಕೋಟಿ ಪ್ರಯೋಜನ ಪಡೆದುಕೊಂಡಿದ್ದಾರೆ ಎಂದು ಹೇಳಿದರು.ಹೊಸ ಕಾಮಗಾರಿಗಳ ಜತೆಗೆ ಮುಂದುವರಿದ ಕಾಮಗಾರಿಗೂ ಅನುದಾನ ನೀಡಿರುವ ಜತೆಗೆ ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರಕ್ಕೆ 25 ಕೋಟಿ ರು. ವಿಶೇಷ ಅನುದಾನವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ ಎಂದು ವಿವರಿಸಿದರು.
ಚಿಕ್ಕಮಗಳೂರಿನ ಕೆಂಪನಹಳ್ಳಿಯಿಂದ ತರೀಕೆರೆ ರಾಜ್ಯ ಹೆದ್ದಾರಿಗೆ ಸಂಪರ್ಕಿಸುವ ರಸ್ತೆ ಡಾಂಬರೀಕರಣ ಕಾಮಗಾರಿಗೆ 2 ಕೋಟಿ ರು. ಮಂಜೂರಾಗಿದ್ದು ಕಾಮಗಾರಿ ಪ್ರಗತಿಯಲ್ಲಿದೆ. ಜಿಲ್ಲಾ ಮುಖ್ಯ ರಸ್ತೆ ಅಭಿವೃದ್ಧಿಗೆ 2 ಕೋಟಿ, ಜಿಲ್ಲಾ ಮುಖ್ಯ ರಸ್ತೆ ಗಳ ವಾರ್ಷಿಕ ನಿರ್ವಹಣೆಗೆ 90 ಲಕ್ಷ, ರಾಂಪುರ ಮಳಲೂರು ಕೆ.ಆರ್. ಪೇಟೆ ವ್ಯಾಪ್ತಿಯ ರಸ್ತೆ ಅಭಿವೃದ್ಧಿಗೆ 8 ಕೋಟಿ, ಮಾಗಡಿ- ಜಾವ್ಗಲ್ ರಸ್ತೆ ಅಭಿವೃದ್ಧಿಗೆ 2 ಕೋಟಿ ರು. ಮಂಜೂರಾಗಿದ್ದು ಟೆಂಡರ್ ಪ್ರಕ್ರಿಯೆ ಮುಕ್ತಾಯವಾಗಿದ್ದು ಕಾರ್ಯಾದೇಶ ಸಹ ನೀಡಲಾಗಿದೆ ಎಂದು ಹೇಳಿದರು.ಅರಣ್ಯ ಭವನ ಕಾಮಗಾರಿಗೆ 9.80 ಕೋಟಿ ರು.ಗಳ ಪೈಕಿ 50 ಲಕ್ಷ ಹಣ ಬಿಡುಗಡೆ ಮಾಡಲಾಗಿದೆ. ಜಿಲ್ಲಾ ಸಕೀರ್ಣ ನಿರ್ಮಾಣ ಕಾಮಗಾರಿಗೆ 8 ಕೋಟಿ, ನ್ಯಾಯಾಧೀಶರ ವಸತಿ ಗೃಹ ನಿರ್ಮಾಣಕ್ಕೆ 3.95 ಕೋಟಿ ಮಂಜೂರು ಮಾಡ ಲಾಗಿದ್ದು, ಕಾರ್ಯಾದೇಶ ನೀಡಬೇಕಾಗಿದೆ. ಡಿಎಸಿಜಿ ಪಾಲಿಟೆಕ್ನಿಕ್ ಕಾಲೇಜು ದುರಸ್ತಿ ಹಾಗೂ ನಿರ್ವಹಣೆಗೆ 4.10 ಕೋಟಿ ಮಂಜೂರಾಗಿದೆ. ಬಿಸಿಎಂ ಬಾಲಕಿಯರ ವಸತಿ ನಿಲಯ ನಿರ್ಮಾಣಕ್ಕೆ 1.16 ಕೋಟಿ, ಜಿಲ್ಲಾ ನ್ಯಾಯಾಲಯ ಸಂಕೀರ್ಣ ನಿರ್ಮಾಣದ ಮುಂದುವರಿದ ಕಾಮಗಾರಿಗೆ 16 ಕೋಟಿ ಮಂಜೂರು ಮಾಡಲಾಗಿದ್ದು, ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಚಿಕ್ಕಮಗಳೂರಿನ ಮೆಡಿಕಲ್ ಕಾಲೇಜಿಗೆ 59.22 ಕೋಟಿ ಹಾಗೂ ಮೆಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ 3 ಕಂತುಗಳಲ್ಲಿ 25.5 ಕೋಟಿ ರು. ಹಣ ಬಿಡುಗಡೆ ಮಾಡಿದೆ ಎಂದು ತಿಳಿಸಿದರು.ಸುದ್ಧಿಗೋಷ್ಠಿಯಲ್ಲಿ ವಿಧಾನಪರಿಷತ್ ಮಾಜಿ ಸದಸ್ಯೆ ಎ.ವಿ. ಗಾಯತ್ರಿ ಶಾಂತೇಗೌಡ, ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ, ಸಖರಾಯಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಡಿಮನೆ ಸತೀಶ್, ಜಿಲ್ಲಾ ವಕ್ತಾರ ರೂಬಿನ್ ಮೋಸಸ್, ನಗರಾಧ್ಯಕ್ಷ ನಯಾಜ್ ಅಹಮದ್, ಎಸ್ಸಿ ಘಟಕ ಜಿಲ್ಲಾಧ್ಯಕ್ಷ ಮಲ್ಲೇಶ್‌ಸ್ವಾಮಿ ಉಪಸ್ಥಿತರಿದ್ದರು.
--ಬಾಕ್ಸ್---ನಿವೇಶನಕ್ಕೆ ಜಾಗ ಗುರುತು ಗ್ರಾಮಾಂತರ ಪ್ರದೇಶಗಳಲ್ಲಿ ನಿವೇಶನಕ್ಕಾಗಿ ವಿವಿಧ ಗ್ರಾಮ ಪಂಚಾಯ್ತಿಗಳಲ್ಲಿ ಸುಮಾರು 39 ಎಕರೆ ಪ್ರದೇಶವನ್ನು ಗುರುತು ಮಾಡಲಾಗಿದೆ. ಇನ್ನು 100 ಎಕರೆ ಜಾಗವನ್ನು ಗುರುತು ಮಾಡುವಂತೆ ಕಂದಾಯ ಇಲಾಖೆಗೆ ಸೂಚನೆ ನೀಡ ಲಾಗಿದೆ. ಆದರೆ, ಚುನಾವಣೆ ನಡೆಸಲು ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದರಿಂದ ತಡವಾಯಿತು. ನೀತಿ ಸಂಹಿತೆ ಮುಗಿಯುತ್ತಿದ್ದಂತೆ ಜಾಗ ಗುರುತು ಮಾಡುವ ಕೆಲಸ ಚುರುಕುಗೊಳಿಸಲಾಗುವುದು ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು. ಚಿಕ್ಕಮಗಳೂರು ನಗರದಲ್ಲಿ ಕೈಗೊಂಡಿರುವ ಅಮೃತ್ ಯೋಜನೆ ಹಾಗೂ ಒಳ ಚರಂಡಿ ಕಾಮಗಾರಿಗಳ ಬಗ್ಗೆ ತನಿಖೆ ನಡೆಸಬೇಕೆಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಲಾಗಿದೆ ಎಂದು ತಿಳಿಸಿದರು.ಪೋಟೋ ಫೈಲ್ ನೇಮ್ 22 ಕೆಸಿಕೆಎಂ 1ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಎಚ್.ಡಿ. ತಮ್ಮಯ್ಯ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.