ಸ್ವಾಮಿ ವಿವೇಕಾನಂದರ 162ನೇ ಜನ್ಮ ದಿನಾಚರಣೆ

KannadaprabhaNewsNetwork | Published : Jan 13, 2025 12:45 AM

ಸಾರಾಂಶ

ಶ್ರೀ ವಿವೇಕಾನಂದ ಯೋಗಶಿಕ್ಷಣ ಶಾಲೆಯಲ್ಲಿ ವಿವೇಕಾನಂದರ 162ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಡಾ. ಎಚ್. ಎಲ್. ಜನಾರ್ದನ್‌ ಮಾತನಾಡಿದರು. ಒಳ್ಳೆಯದರಲ್ಲಿ ನಂಬಿಕೆ ಇಡಬೇಕು. ದ್ವೇಷ, ಅಸೂಯೆಗಳನ್ನು ತೊರೆದು ತಾವು ಒಳ್ಳೆಯವರಾಗಿ ಇತರರಿಗೆ ಸನ್ಮಾರ್ಗದಲ್ಲಿ ನಡೆಯಲು ಸಹಕರಿಸುವುದರಿಂದ ಮಾನವ ಜೀವನದ ಶ್ರೇಷ್ಠತೆಯು ಸಾಧಿತವಾಗುತ್ತದೆ ಎಂದು ವಿವೇಕಾನಂದರು ಪ್ರತಿಪಾದಿಸಿದರು ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಹಿಂದೂ ಧರ್ಮವನ್ನು ವಿಮರ್ಶಿಸಿ ಅದರ ಒಳಿತನ್ನು ಜಗಕ್ಕೆ ಸಾರಿದ ಕೀರ್ತಿ ವಿವೇಕಾನಂದರದ್ದು ಎಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಅಂಕಿತಾಧಿಕಾರಿ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಾ. ಎಚ್. ಎಲ್. ಜನಾರ್ದನ್ ತಿಳಿಸಿದರು.

ಅವರು ನಗರದ ಮಹಾರಾಜ ಉದ್ಯಾನದಲ್ಲಿರುವ ಶ್ರೀ ವಿವೇಕಾನಂದ ಯೋಗಶಿಕ್ಷಣ ಶಾಲೆಯಲ್ಲಿ ವಿವೇಕಾನಂದರ 162ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಒಳ್ಳೆಯದರಲ್ಲಿ ನಂಬಿಕೆ ಇಡಬೇಕು. ದ್ವೇಷ, ಅಸೂಯೆಗಳನ್ನು ತೊರೆದು ತಾವು ಒಳ್ಳೆಯವರಾಗಿ ಇತರರಿಗೆ ಸನ್ಮಾರ್ಗದಲ್ಲಿ ನಡೆಯಲು ಸಹಕರಿಸುವುದರಿಂದ ಮಾನವ ಜೀವನದ ಶ್ರೇಷ್ಠತೆಯು ಸಾಧಿತವಾಗುತ್ತದೆ ಎಂದು ವಿವೇಕಾನಂದರು ಪ್ರತಿಪಾದಿಸಿದರು. ನಿರ್ಭೀತ, ತ್ಯಾಗ, ಅವಿಶ್ರಾಂತ, ಕ್ರಿಯಾಶೀಲತೆ, ತಮ್ಮ ದೇಶಪ್ರೇಮ ಮತ್ತು ತಮ್ಮ ಆಳವಾದ ಅಧ್ಯಯನ ಹಾಗೂ ಸರಳತೆಯ ವ್ಯಕ್ತಿತ್ವ ಹಾಗೂ ಅವರ ಚಿಕಾಗೋ ಭಾಷಣದಿಂದಾಗಿ ಇಡೀ ವಿಶ್ವವನ್ನು ತಮ್ಮೆಡೆಗೆ ಸೆಳೆದುಕೊಂಡರು ಎಂದರು.

ಲೇಖಕ ಗೊರೂರು ಶಿವೇಶ್ ಮಾತನಾಡಿ, ಭಕ್ತಿ ಯೋಗ, ಅಷ್ಟಾಂಗ ಯೋಗ, ಜ್ಞಾನ ಯೋಗ, ಕ್ರಿಯೆಗಳನ್ನು ಸಂಯೋಜಿಸಿದ ರಾಜಯೋಗದ ಮೂಲಕ ವಿಶ್ವಕ್ಕೆ ಯೋಗವನ್ನು ಪರಿಚಯಿಸುವುದರ ಜೊತೆಗೆ ರಾಮಕೃಷ್ಣ ಮಿಷನ್ ಮತ್ತು ರಾಮಕೃಷ್ಣ ಮಠಗಳನ್ನು ವಿಶ್ವದೆಲ್ಲೆಡೆ ಸ್ಥಾಪಿಸುವುದರ ಮೂಲಕ ಹಿಂದೂ ಧರ್ಮದ ವೈಶಾಲ್ಯ ಮತ್ತು ವೇದಾಂತ ತತ್ವದ ಗಂಭೀರತೆಯನ್ನು ವಿಶ್ವಕ್ಕೆ ಪರಿಚಯಿಸಿದ ಮಹಾನ್ ಚೇತನ ಎಂದು ಬಣ್ಣಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಚ್.ಬಿ. ರಮೇಶ್ ಮಾತನಾಡಿ, ನಿಸ್ವಾರ್ಥತೆಯಿಂದ ಮಾಡುವ ಕೆಲಸ ನಮ್ಮ ಚಿತ್ತವನ್ನು ಶುದ್ಧಿಗೊಳಿಸುತ್ತದೆ ನಿಸ್ವಾರ್ಥತೆಯ ಪ್ರತೀಕವೇ ವಿವೇಕಾನಂದರು. 31ನೇ ವಯಸ್ಸಿನಲ್ಲಿ ಸನ್ಯಾಸತ್ವ ಸ್ವೀಕರಿಸಿ 39ನೇ ವಯಸ್ಸಿಗೆ ದೇಹಾಂತ್ಯವಾಗುವುದರ ನಡುವಿನ 8 ವರ್ಷಗಳ ಅವಧಿಯಲ್ಲಿ ಸಾಧಿಸಿದ್ದು ಅಪಾರ ಎಂದು ತಿಳಿಸಿದರು.

ಕಾರ್ಯಕ್ರಮದ ಅತಿಥಿಯಾಗಿದ್ದ ಯೋಗ ತರಬೇತುದಾರ ನಾಗರಾಜ್ ಮಾತನಾಡಿ, ಸರಳ ಆಹಾರ, ಸರಳ ಜೀವನದ ಮೂಲಕ ದೀರ್ಘಾಯುಷ್ಯವನ್ನು ಸಾಧಿಸಬಹುದು ಎಂದು ಯೋಗ ಗುರುಗಳು ಸಂತರು ತೋರಿಸಿಕೊಟ್ಟಿದ್ದಾರೆ. ಈ ಸಂತರ ಮೂಲಕ ಆಧ್ಯಾತ್ಮವನ್ನು ಪ್ರಪಂಚಕ್ಕೆ ಭರತಖಂಡ ಕೊಡುಗೆಯಾಗಿ ನೀಡಿದೆ ಎಂದರು.

ಕಾರ್ಯಕ್ರಮದ ಅಂಗವಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಾ. ಎಚ್ ಎಲ್ ಜನಾರ್ದನ್ ಶಾಲೆಯ ಆವರಣದಲ್ಲಿರುವ ವಿವೇಕಾನಂದರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಯೋಗ ಶಾಲೆಯ ಪರವಾಗಿ ಎಚ್‍ ಬಿ ರಮೇಶ್ ಅವರು ಡಾ. ಎಚ್‌.ಎಲ್ ಜನಾರ್ಧನ್ ಮತ್ತು ನಾಗರಾಜ್ ಅವರನ್ನು ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಣಾರ್ಥಿಗಳಾದ, ಪುಟ್ಟಪ್ಪ, ಧರ್ಮಪ್ಪ ಉದ್ಯಮಿಗಳಾದ, ಪರಮೇಶ್, ಚಂದ್ರು, ರವೀಶ್, ಗೋಪಿನಾಥ್, ಸುರೇಶ್, ರಾಜೇಶ್, ನಾಗೇಶ್, ವಿಜಯ್, ಅಧ್ಯಾಪಕ ಚೆಲುವೇಗೌಡ, ಹಿರಿಯ ವಕೀಲ ಶಂಕರ್, ಸುಶೀಲ, ಚಂದ್ರಕಲಾ, ಸುಮನ ,ಭಾರತಿ, ಗೌರಿ ಬಾಯಿ, ಕೋಮಲ, ರಮ್ಯಾ, ಜಯಂತಿ, ಶೋಭ, ಮೋಹನ ಕುಮಾರಿ, ಸಾವಿತ್ರಿ, ಪದ್ಮ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Share this article