17ರಿಂದ ಕುಮಟಾ ವೈಭವ

KannadaprabhaNewsNetwork | Published : Oct 14, 2024 1:24 AM

ಸಾರಾಂಶ

ಅ. ೧೭ರಂದು ಸಂಜೆ ೮.೩೦ಕ್ಕೆ ದಿ. ಲಿಂಗಪ್ಪ ನಾಯ್ಕ ವೇದಿಕೆಯಲ್ಲಿ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಕುಮಟಾ: ಪಟ್ಟಣದ ಮಣಕಿ ಮೈದಾನದಲ್ಲಿ ಅ. ೧೭ರಿಂದ ೨೧ರ ವರೆಗೆ ಹಮ್ಮಿಕೊಂಡಿರುವ ಕುಮಟಾ ವೈಭವ ಕಾರ್ಯಕ್ರಮದಲ್ಲಿ ಈ ಬಾರಿ ಜಿಲ್ಲೆಯ ಗೌಳಿಗರ ಕುಣಿತ, ಸಿದ್ಧಿ ಕುಣಿತ, ಕೋಲಾಟ, ಟಿಬೇಟಿಯನ್ ನೃತ್ಯ, ಭಜನೆ ಪದ ಇನ್ನಿತರ ಸ್ಥಳೀಯ ಕಲೆಗೆ ವಿಶೇಷ ಒತ್ತು ನೀಡಲಾಗಿದೆ. ಜತೆಗೆ ರಾಜ್ಯದ ವಿವಿಧೆಡೆಯಿಂದ ಹೆಸರಾಂತ ಕಲಾವಿದರ ತಂಡವೂ ಪ್ರತಿನಿತ್ಯ ಮನರಂಜನೆಯೊಟ್ಟಿಗೆ ರಸದೌತಣ ನೀಡಲಿದೆ ಎಂದು ತಾಂಡವ ಕಲಾನಿಕೇತನದ ಸಂಸ್ಥಾಪಕ ಮಂಜುನಾಥ ನಾಯ್ಕ ತಿಳಿಸಿದರು.ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಮ್ಮ ತಂದೆ ದಿ. ಲಿಂಗಪ್ಪ ನಾಯ್ಕ ಸ್ಮರಣೆಯಲ್ಲಿ ತಾಂಡವ ಕಲಾನಿಕೇತನದ ಅಡಿಯಲ್ಲಿ ೭ನೇ ಕುಮಟಾ ವೈಭವ ಕಾರ್ಯಕ್ರಮವನ್ನು ಈ ಬಾರಿ ವಿಭಿನ್ನವಾಗಿ ಪ್ರಸ್ತುತಪಡಿಸುವ ಗುರಿ ಹೊಂದಿದ್ದೇವೆ. ಸರಿಗಮಪ ಖ್ಯಾತಿಯ ತಂಡ ಹಾಗೂ ಹೆಸರಾಂತ ಕಲಾವಿದರಿಂದ ನಮ್ಮ ನಾಡಿನ ಮಾತ್ರವಲ್ಲದೇ ದೇಶವಿದೇಶದ ಕಲೆ, ಸಂಗೀತ, ನೃತ್ಯದ ಪ್ರದರ್ಶನವೂ ಮೇಳೈಸಿದ್ದೇವೆ. ಮಿಮಿಕ್ರಿ ದಯಾನಂದ, ರಿಚರ್ಡ್‌ ಲೂಯಿಸ್ ಮುಂತಾದ ಹಾಸ್ಯ ಕಲಾವಿದರಿಂದ ನಗೆಹಬ್ಬವೂ ಇರಲಿದೆ ಎಂದರು.ಕುಮಟಾ ವೈಭವ ಸಮಿತಿ ಅಧ್ಯಕ್ಷ ಆರ್.ಎಚ್. ನಾಯ್ಕ ಮಾತನಾಡಿ, ಅ. ೧೭ರಂದು ಸಂಜೆ ೮.೩೦ಕ್ಕೆ ದಿ. ಲಿಂಗಪ್ಪ ನಾಯ್ಕ ವೇದಿಕೆಯಲ್ಲಿ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶಾಸಕ ದಿನಕರ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಿವೇದಿತ್ ಆಳ್ವಾ ಚಾಲನೆ ನೀಡಲಿದ್ದಾರೆ ಎಂದರು.

ಎಂ.ಎಚ್. ನಾಯ್ಕ, ಸಂತೋಷ ನಾಯ್ಕ, ಗಣಪತಿ ನಾಯ್ಕ, ಹರೀಶ ಶೇಟ, ಕೃಷ್ಣ ಪಟಗಾರ, ಮಹೇಶ ಕರ್ಕಿಕರ, ಮಂಜುನಾಥ ಭಂಡಾರಿ, ದಿನೇಶ ನಾಯ್ಕ, ಸಚಿನ ನಾಯ್ಕ ಇತರರು ಇದ್ದರು.

15ರಂದು ಸಿದ್ದಾಪುರದಲ್ಲಿ ಗಾಂಧಿ ಸ್ಮೃತಿ ಬೃಹತ್ ಜನಜಾಗೃತಿ ಸಮಾವೇಶ

ಸಿದ್ದಾಪುರ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಅ. 15ರಂದು ಗಾಂಧಿ ಜಯಂತಿ ಸಂಭ್ರಮಾಚರಣೆ ಪ್ರಯುಕ್ತ ಗಾಂಧಿ ಸ್ಮೃತಿ ಬೃಹತ್ ಜನಜಾಗೃತಿ ಜಾಥಾ ಮತ್ತು ಸಮಾವೇಶ ನಡೆಯಲಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಗಿರೀಶ ಜಿ.ಪಿ. ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಳಗ್ಗೆ 9ಕ್ಕೆ ನೆಹರು ಮೈದಾನದಿಂದ ಜನಜಾಗೃತಿ ಜಾಥಾ ಆರಂಭಗೊಳ್ಳಲಿದೆ. ನಂತರ ಶೃಂಗೇರಿ ಶಂಕರಮಠದ ಸಭಾಂಗಣದಲ್ಲಿ 11 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ತಹಸೀಲ್ದಾರ್‌ ಎಂ.ಆರ್. ಕುಲಕರ್ಣಿ ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾ ಜನಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷ ಸುಭಾಷ ನಾಯ್ಕ ಅಧ್ಯಕ್ಷತೆ ವಹಿಸುವರು. ಉಪನ್ಯಾಸಕ ರಾಮು ಕಿಣಿ ದಿಕ್ಸೂಚಿ ಮಾತನಾಡುವರು.ಪಪಂ ಅಧ್ಯಕ್ಷೆ ಚಂದ್ರಕಲಾ ಸುರೇಶ ನಾಯ್ಕ, ಜಿಲ್ಲಾ ನಿರ್ದೇಶಕ ಎ. ಬಾಬು ನಾಯ್ಕ, ಸಿಪಿಐ ಕುಮಾರ ಕೆ., ಬಿಇಒ ಎಂ.ಎಚ್. ನಾಯ್ಕ, ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಕಾಳಿಂಗರಾಜು, ಉಪಾಧ್ಯಕ್ಷೆ ಗೌರಿ ನಾಯ್ಕ, ಜಿಲ್ಲಾ ಜನಜಾಗೃತಿ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ವಿವೇಕ್ ರಾಯ್ಕರ್ ಹಾಗೂ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರು ಭಾಗವಹಿಸುವರು ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ರೂವಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಆಶಯದಂತೆ ಯೋಜನೆಗಳು ಜಾರಿಗೊಳಿಸಲಾಗುತ್ತಿದೆ. ತಾಲೂಕಿನ 2228 ಪ್ರಗತಿಬಂಧು ಹಾಗೂ ಸ್ವಸಹಾಯ ಸಂಘಗಳಿದ್ದು, 14347 ಸದಸ್ಯರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 68 ಒಕ್ಕೂಟಗಳು ಕಾರ್ಯನಿರ್ವಹಿಸುತ್ತಿದೆ. ಸಂಘದ ಸದಸ್ಯರಿಗಾಗಿ ಸಂಪೂರ್ಣ ಸುರಕ್ಷಾ ಯೋಜನೆಯಲ್ಲಿ 77 ಸದಸ್ಯರಿಗೆ ₹8.82 ಲಕ್ಷ, ಆರೋಗ್ಯ ರಕ್ಷಾ ಯೋಜನೆಯಲ್ಲಿ 111 ಸದಸ್ಯರಿಗೆ ₹8.13 ಲಕ್ಷ ಹಾಗೂ ಪ್ರಗತಿ ರಕ್ಷಾ ಕವಚದಡಿಯಲ್ಲಿ 372 ಸದಸ್ಯರಿಗೆ ₹2.36 ಲಕ್ಷ ವಿನಿಯೋಗಿಸಲಾಗಿದೆ ಎಂದರು.

Share this article