ಶ್ರೀ ನಾರಾಯಣ ಗುರುಗಳ 170ನೇ ಜಯಂತಿ ಆಚರಣೆ

KannadaprabhaNewsNetwork |  
Published : Aug 27, 2024, 01:38 AM IST
ಚಿತ್ರ : 25ಎಂಡಿಕೆ1 : ಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದ ಅತಿಥಿಗಳು. | Kannada Prabha

ಸಾರಾಂಶ

ಸಮಾಜದ ಮುಂದುವರಿದ ಭಾಗವಾಗಲು ಸಂಘಟನೆಯಿಂದ ಸದೃಢರಾಗಿ ವಿದ್ಯೆಯಿಂದ ಪ್ರಬಲರಾಗಬೇಕು ಎಂದು ನಿವೃತ್ತ ಶಿಕ್ಷಕ ವಿನಯನ್‌ ಹೇಳಿದರು. ಅವರು ನಾರಾಯಣ ಗುರುಗಳ 170 ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಗೋಣಿಕೊಪ್ಪ

ಹಿಂದುಳಿದ ಸಮುದಾಯಗಳು ಸಮಾಜದ ಮುಂದುವರಿದ ಭಾಗವಾಗಲು ಸಂಘಟನೆಯಿಂದ ಸದೃಢರಾಗಿ ವಿದ್ಯೆಯಿಂದ ಪ್ರಬಲರಾಗಬೇಕು ಎಂದು ಕೇರಳ ತಲಶೇರಿ ನಿವೃತ್ತ ಶಿಕ್ಷಕ ವಿನಯನ್ ಕರೆ ನೀಡಿದರು.

ಗೋಣಿಕೊಪ್ಪ ಪಟೇಲ್ ನಗರದಲ್ಲಿರುವ ಶ್ರೀ ನಾರಾಯಣ ಗುರು ಸಭಾಂಗಣದಲ್ಲಿ ಗೋಣಿಕೊಪ್ಪಲು ಎಸ್‌ಎನ್‌ಡಿಪಿ ಶಾಖ ಯೋಗಂ ಆಯೋಜಿಸಿದ ಶ್ರೀ ನಾರಾಯಣ ಗುರುಗಳ 170ನೇ ಜಯಂತಿ ಆಚರಣೆಯಲ್ಲಿ ಮುಖ್ಯ ಭಾಷಣಗಾರರಾಗಿ ಮಾತನಾಡಿದರು.

ಕತ್ತಲೆಯಿಂದ ಬೆಳಕಿನೆಡೆಗೆ ನಮ್ಮನ್ನು ದಾಟಿಸುವ ವ್ಯಕ್ತಿತ್ವ ಉಳ್ಳವರು ಗುರುಗಳಾಗುತ್ತಾರೆ. ಅಂತಹ ಮಹಾನ್ ಗುರು ನಾರಾಯಣ ಗುರುಗಳಾಗಿದ್ದಾರೆ. ಅವರ ಆದರ್ಶ ಪಾಲನೆ, ತತ್ವ, ಚಿಂತನೆಗಳು ನಮ್ಮೆಲ್ಲರ ಬದುಕಿನ ಬೆಳಕಾಗಬೇಕು ಎಂದು ಸಲಹೆ ನೀಡಿದರು.

ಜ್ಞಾನಕ್ಕಾಗಿ ಪ್ರಾರ್ಥಿಸುವುದರಿಂದ ಮನುಷ್ಯನಲ್ಲಿ ಶಾಂತಿ ನೆಲೆಸುತ್ತದೆ. ಜೀವನವನ್ನು ಸುಂದರವಾಗಿಸಿಕೊಳ್ಳಲು ಜ್ಞಾನದ ಬೆಳಕಿನಲ್ಲಿ ಹೊತ್ತಿಸಿಕೊಳ್ಳುವ ಪ್ರಾರ್ಥನೆಯಾಗಲಿ ಎಂದು ಅಭಿಪ್ರಾಯ ಮಂಡಿಸಿದರು.

ನಂತರ ನಾರಾಯಣ ಗುರುಗಳ ಜೀವನವನ್ನು ಸಂಕ್ಷಿಪ್ತವಾಗಿ ವಿವರಿಸಿದರು. ಜಯಂತಿ ಆಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಮೋದ್ ಗಣಪತಿ, ಒಂದೇ ಜಾತಿ, ಒಂದೇ ಮತ ಎಂಬುವುದು ಶಾಶ್ವತವಾಗಿ ಉಳಿದುಕೊಳ್ಳಲಿ. ಗುರುಗಳು ಹಾಕಿಕೊಟ್ಟ ಆದರ್ಶ ಪಾಲನೆ ನಮ್ಮ ಬದುಕಿನ ಬೆಳಕಾಗಲಿ. ಸಂಘಟನಾತ್ಮಕವಾಗಿ ಬಲಗೊಂಡು ಸಮುದಾಯದ ಬೆಳವಣಿಗೆಯು ಸಾಗಲಿ ಎಂದು ಹಾರೈಸಿದರು.

ಎಸ್‌ಎನ್‌ಡಿಪಿ ಯೂನಿಯನ್ ಜಿಲ್ಲಾಧ್ಯಕ್ಷ ಲೋಕೇಶ್ ಮಾತನಾಡಿ, ಹಿಂದುಳಿದ ಸಮುದಾಯ ಸಮಾಜದ ಮುಂದುವರಿಕೆಯ ಭಾಗವಾಗಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯ. ಪ್ರತಿಯೊಬ್ಬರು ಶಿಕ್ಷಣವಂತರಾಗುವ ಮೂಲಕ ಈ ಸಮಾಜದಲ್ಲಿ ಪ್ರಬಲವಾಗಿ ಉಳಿದುಕೊಳ್ಳಬೇಕು ಎಂದು ತಿಳಿಸಿದರು.

ಆಚರಣೆ ಸಮಿತಿ ಅಧ್ಯಕ್ಷ ಪಿ.ಜಿ. ರಾಜಶೇಖರ್ ಅಧ್ಯಕ್ಷತೆಯಲ್ಲಿ ಮಾತನಾಡಿ, ಜಾತಿಯ ವಿಷ ಬೀಜದ ವರ್ತುಲದಲ್ಲಿ ನಲುಗಿಹೋಗಿದ್ದ ಜನರನ್ನು ಮೇಲೆಕೆತ್ತಲು ನಾರಾಯಣ ಗುರುಗಳು ಬಹುದೊಡ್ಡ ಸಾಮಾಜಿಕ ಆಂದೋಲನವನ್ನು ಮಾಡಿದರು. ದಾರ್ಶನಿಕರಾಗಿದ್ದ ಗುರುಗಳು ತನ್ನ ಅನುಯಾಯಿಗಳಿಗೆ ಬುದ್ದಿ ಮಾತನ್ನು ಹೇಳುತ್ತಾ ‘ಯಾರು ಸಹ ಧರ್ಮ ಭ್ರಷ್ಟರಾಗದಿರಿ, ಯಾವುದೇ ಕಾರಣಕ್ಕೂ ಧರ್ಮವನ್ನು ಬಿಟ್ಟೂ ಮತಾಂತರವಾಗದಿರಿ’ ಎಂಬ ಕಿವಿಮಾತನ್ನು ಹೇಳಿದರು. ಸಮಾಜಕ್ಕೆ ಬಹುದೊಡ್ಡ ಶಾಪವಾದ ಜಾತಿ ವ್ಯವಸ್ಥೆಯ ವಿರುದ್ಧ ನಿರಂತರ ಹೋರಾಡಿದರು.

ಮನುಕುಲದ ಏಳಿಗೆಗಾಗಿ ಸರ್ವಸ್ವವನ್ನು ತ್ಯಜಿಸಿ ಸನ್ಯಾಸಿಗಳಾದರು. ಅವರು ಹಾಕಿಕೊಟ್ಟ ಚಿಂತನೆಯ ಮಾರ್ಗ ಇಂದು ನಾವು ಪಾಲಿಸುತ್ತಾ ಬಂದಿದ್ದೇವೆ. ನಾರಾಯಣ ಗುರುಗಳ ತತ್ವ, ಆದರ್ಶಗಳನ್ನು ಮೈಗೂಡಿಸಿಕೊಂಡು ಹೊಸ ಯುಗವನ್ನು ನಿರ್ಮಿಸುವಲ್ಲಿ ಸಫಲತೆಯನ್ನು ನಾವುಗಳು ಕಾಣಬೇಕು ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಸದಸ್ಯರಾದ ಬಿ.ಎನ್ ಪ್ರಕಾಶ್, ಧಾನ್ ಸುಬ್ಬಯ್ಯ, ಎಸ್‌ಎನ್‌ಡಿಪಿ ಶಾಖ ಯೋಗಂ ಅಧ್ಯಕ್ಷ ಪುರುಷೋತ್ತಮ್ ಟಿ.ಕೆ, ಮಹಿಳಾ ವಿಭಾಗ ಅಧ್ಯಕ್ಷೆ ರಮಾವತಿ, ನಾರಾಯಣ ಗುರುಗಳ ಆದರ್ಶ ತತ್ವ ಪಾಲನೆಗಳ ಬಗ್ಗೆ ಮಾತನಾಡಿದರು. ಗೋಣಿಕೊಪ್ಪಲು ಎಸ್‌ಎನ್‌ಡಿಪಿ ಶಾಖ ಯೋಗಂ ಪ್ರಧಾನ ಕಾರ್ಯದರ್ಶಿ ವಿ. ಭಾಸ್ಕರ್ ಪ್ರಾಸ್ತವಿಕವಾಗಿ ಮಾತನಾಡಿದರು.

ಇದೇ ಸಂದರ್ಭ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದು ಸಾಧನೆ ಮಾಡಿರುವ ಸಂಘದ ಸದಸ್ಯರ ಮಕ್ಕಳಾದ ಮೈಸೂರಮ್ಮ ನಗರದ ಕೆ.ಆರ್. ಸುನಿಲ್, ಶಾಲಿನಿ ದಂಪತಿ ಪುತ್ರಿ ಕೆ.ಎಸ್. ಶಿವಾಲಿ, ಎ.ಆರ್. ಸುರೇಶ್, ಪಿ.ಎನ್. ಸಿಂದು ದಂಪತಿಗಳ ಪುತ್ರಿ ಎ.ಎಸ್ ಲಕ್ಷ್ಯ, ಪಿ.ಯು.ಸಿ. ವಾಣಿಜ್ಯ ವಿಭಾಗದಲ್ಲಿ ಅಧಿಕ ಅಂಕ ಪಡೆದು ಸಾಧನೆ ಮಾಡಿರುವ ಗೋಣಿಕೊಪ್ಪಲುವಿನ ಸಂಜಯ್ ಕೆ.ಕೆ, ಅಪರ್ಣ ಸಂಜಯ್ ದಂಪತಿಗಳ ಪುತ್ರಿ ಆದಿತಿ ಸಂಜಯ್, ಜೋಡುಬೀಟಿ ನಿವಾಸಿ ಸಿ.ಕೆ. ದಿನೇಶ್, ಲತಿಕ ಸಿ.ಕೆ ದಂಪತಿ ಪುತ್ರಿ ಸಿ.ಡಿ. ದೀಕ್ಷಿತ ಮತ್ತು ವಿಜ್ಞಾನ ವಿಭಾಗದಲ್ಲಿ ಅಧಿಕ ಅಂಕ ಗಳಿಸಿದ ಗೋಣಿಕೊಪ್ಪಲುವಿನ ವಿ.ವಿ. ಅರುಣ್‌ಕುಮಾರ್, ಜ್ಯೋತಿ ಅರುಣ್ ದಂಪತಿಗಳ ಪುತ್ರ ಚಿಂತನ್ ವಿ.ಎ, ಬಿ.ಸಿ. ಉಮೇಶ್, ಪವಿತ್ರ ಉಮೇಶ್ ಅವರ ಪುತ್ರಿ ಮೋನಿಕ, ಎಂ.ವಿ. ಮದುಸೂಧನ್, ಪ್ರೀತು. ಎಂ. ದಂಪತಿಗಳ ಪುತ್ರಿ ಆಶ್ವಿನಿ ಎಂ ಅವರನ್ನು ಸನ್ಮಾನಿಸಲಾಯಿತು.

ಹಿರಿಯ ಸಾಧಕರಾದ ಎಂ.ಪಿ. ಜನಾರ್ಧನ ಇವರ ಪರವಾಗಿ ಎಂ.ಪಿ. ರಮಾವತಿ ಜತೆಗೆ ಕೆ.ಜೆ. ಜಯೇಂದ್ರನ್, ಪಿ.ಕೆ. ವಿಜಯನ್, ವೇಣುಗೋಪಾಲ್, ವಿಕ್ರಮನ್ ಪಿಳ್ಳೆ, ಯು. ಆರ್. ಮೋಹನ್‌ರಾಜ್, ಶ್ರೀ ಮೋಹನ್‌ದಾಸ್ ಕೆ.ಎನ್, ರಾಜಶೇಖರ್ ಪಿ.ಜಿ, ಸಿ. ಕೆ. ರಾಜೇಂದ್ರನ್, ರುಕ್ಮಿಣಿ ಕೃಷ್ಣ, ಕೆ.ವೈ. ಸಂಜಿತ್ , ಪಿ. ಕೆ. ಪ್ರವೀಣ್ ಅವರನ್ನು ಗೌರವಿಸಲಾಯಿತು.

ಮಕ್ಕಳಿಂದ ಸಾಂಸ್ಕೃತಿ ಕಾರ್ಯಕ್ರಮ ನಡೆಯಿತು. ಆಡಳಿತ ಮಂಡಳಿ ಸದಸ್ಯರು, ಆಚರಣಾ ಸಮಿತಿ ಸದಸ್ಯರು, ಮಹಿಳಾ ಘಟಕ ಸದಸ್ಯರು ಇದ್ದರು.

PREV

Recommended Stories

ಮಲೆನಾಡು, ಕರಾವಳಿಯಲ್ಲಿ ಮಳೆ : ಜನಜೀವನ ಅಸ್ತವ್ಯಸ್ತ
ಚಿತ್ತಾಪುರದಲ್ಲಿ ನ.2ರಂದು ಪಥ ಸಂಚಲನ: ಅನುಮತಿ ಕೋರಿ ಹೊಸದಾಗಿ ಅರ್ಜಿ