ಕನ್ನಡಪ್ರಭ ವಾರ್ತೆ ಬೀದರ್
ಜಿಲ್ಲೆಯ ವಿವಿಧೆಡೆ ನಡೆದಿದ್ದ ದ್ವಿಚಕ್ರ ವಾಹನಗಳು, ಮೊಬೈಲ್, ರಾಶಿ ಯಂತ್ರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಚಿನ್ನದ ಸರ ಕದ್ದು ಪರಾರಿಯಾಗಿದ್ದ ಘಟನೆಗೆ ಸಂಬಂಧಿಸಿದಂತೆ 18 ಜನ ಆರೋಪಿಗಳನ್ನು ಬಂಧಿಸಿ 24.26ಲಕ್ಷ ರು.ಗಳ ಮೌಲ್ಯದ ಚಿನ್ನಾಭರಣ, ನಗದು ಹಾಗೂ ವಾಹನ ಯಂತ್ರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್ ತಿಳಿಸಿದರು.ಈ ಕುರಿತಂತೆ ಮಂಗಳವಾರ ಪೊಲೀಸ್ ಪೆರೇಡ್ ಮೈದಾನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಡಿಸಂಬರ್ ತಿಂಗಳಿಂದ ಇಲ್ಲಿಯವರೆಗೆ ಹುಮನಾಬಾದ್ ಉಪವಿಭಾಗದ 10 ಪ್ರಕರಣಗಳಲ್ಲಿ ರು.8.34ಲಕ್ಷ ಮೌಲ್ಯದ ಸಾಮಗ್ರಿಗಳನ್ನ ಪತ್ತೆ ಹಚ್ಚಿ 8 ಆರೋಪಿಗಳನ್ನು ಬಂಧಿಸಲಾಗಿದೆ. ಭಾಲ್ಕಿಯ 4 ಪ್ರಕರಣಗಳಲ್ಲಿ 8.15ಲಕ್ಷ ರು.ಮೌಲ್ಯದ ಸಾಮಗ್ರಿಗಳನ್ನು ವಶಕ್ಕೆ ಪಡೆದು 5 ಆರೋಪಿಗಳನ್ನು ಮತ್ತು ಬೀದರ್ ಉಪವಿಭಾಗದ 17 ಪ್ರಕರಣಗಳಲ್ಲಿ 7.77ಲಕ್ಷ ರು.ಗಳ ಮೌಲ್ಯದ ಸಾಮಗ್ರಿಗಳನ್ನು ವಶಕ್ಕೆ ಪಡೆದು 5 ಆರೋಪಿಗಳು ಸೇರಿ ಒಟ್ಟು 24.26ಲಕ್ಷ ರು. ಮೌಲ್ಯದ ಸ್ವತ್ತು ವಶಪಡಿಸಿಕೊಂಡು 18 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಹೊಲಗದ್ದೆಗಳಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರಿಗೆ ರಸ್ತೆ ಮಾರ್ಗ ಕೇಳುವ ನೆಪದಲ್ಲಿಯೋ, ಕುಡಿವ ನೀರು ಕೇಳುವ ನೆಪದಲ್ಲಿಯೋ ಅವರ ಹತ್ತಿರ ಬಂದು ಕೊರಳಲ್ಲಿದ್ದ ಮಾಂಗಲ್ಯದ ಸರ, ನೆಕ್ಲೇಸ್ ಮತ್ತಿತರವುಗಳನ್ನು ಕಸಿದು ಪರಾರಿಯಾಗಿರುವ ಘಟನೆಗಳನ್ನು ಪತ್ತೆ ಹಚ್ಚಲಾಗಿದೆ. ಈ ಕಾರ್ಯದಲ್ಲಿ ಶ್ರಮಿಸಿದ ಪೊಲೀಸರಿಗೆ ಅಭಿನಂದಿಸಲಾಗುತ್ತದೆ ಎಂದು ಎಸ್‌ಪಿ ತಿಳಿಸಿದರು.ಬೀದರ್ ಜಿಲ್ಲೆಯಲ್ಲಿ ಅಕ್ರಮ ಅಕ್ಕಿ ಸಾಗಾಣಿಕೆಯ 86 ಪ್ರಕರಣಗಳು ಪತ್ತೆಇಡಿ ರಾಜ್ಯದಲ್ಲಿಯೇ 2023ರಲ್ಲಿ ಅಕ್ರಮ ಅಕ್ಕಿ ಸರಬರಾಜಿಗೆ ಸಂಬಂಧಿಸಿದಂತೆ 272 ಪ್ರಕರಣ ದಾಖಲಾಗಿದ್ದರೆ ಬೀದರ್ ಜಿಲ್ಲೆಯೊಂದರಲ್ಲಿಯೇ 86 ಪ್ರಕರಣಗಳು ದಾಖಲಾಗಿವೆ. ಪಡಿತರ ಅಕ್ಕಿ ಗ್ರಾಹಕರಿಂದ 10ರು.ಗೆ ಅಕ್ಕಿ ಖರೀದಿಸಿ 30ರು. ಕೆಜಿಗೆ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪವಿದೆ ಹೀಗೆ ಹೆಚ್ಚಿನ ಲಾಭ ಸಿಗುವ ಈ ಧಂಧೆ ಇದಾಗಿದೆ ಎಂದರು.42 ಜನರ ವಿರುದ್ಧ ರೌಡಿಶೀಟ್
ಅಕ್ರಮ ಅಕ್ಕಿ ಮಾರಾಟದ ಧಂಧೆಯಲ್ಲಿ ಶಾಮಿಲಾಗಿದ್ದ ಜಿಲ್ಲೆಯ ಒಟ್ಟು 42 ಜನರ ವಿರುದ್ದ ರೌಡಿಶೀಟ್ ಓಪನ್ ಮಾಡಲಾಗಿದೆ. ಅಕ್ರಮ ಅಕ್ಕಿ ಸಾಗಾಣಿಕೆಗೆ ಸಂಬಂಧಿಸಿದ ಪ್ರಕರಣದ ತನಿಖೆಯು ಎಎಸ್ಪಿ ಚಂದ್ರಕಾಂತ ಪೂಜಾರಿ ಅವರ ನೇತೃತ್ವದಲ್ಲಿ ನಡೆಯಲಿದೆ ಇನ್ನು ಜಿಲ್ಲೆಯಲ್ಲಿ ಈ ಹಿಂದೆ ಹಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ರೌಡಿ ಶೀಟ್ ಪಟ್ಟಿಯಲ್ಲಿರುವವರ ನಡುವಳಿಕೆಯನ್ನಾಧರಿಸಿ ಅಂಥ ಸುಮಾರು 100 ಜನರನ್ನು ಪಟ್ಟಿಯಿಂದ ಕೈಬಿಡಲು ಶಿಫಾರಸು ಮಾಡಲಾಗುತ್ತಿದೆ. ಹಾಗೆಯೇ ಅವರಿಗೆ ಸಮಾಜದಲ್ಲಿ ಉತ್ತಮ ನಡುವಳಿಕೆ ರೂಪಿಸಿಕೊಳ್ಳಲು ಸೂಕ್ತ ತರಬೇತಿ ನಡೆಸಲಾಗುತ್ತದೆ ಎಂದು ಎಸ್.ಪಿ ಚನ್ನಬಸವಣ್ಣ ಎಸ್.ಎಲ್ ತಿಳಿಸಿದರು.ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ ಪೂಜಾರಿ, ಡಿಎಸ್‌ಪಿ ಶಿವಾನಂದ ಪಾಟೀಲ್, ನ್ಯೂಟೌನ್ ಸಿಪಿಐ ವಿಜಯಕುಮಾರ ಇದ್ದರು.ಅಕ್ರಮ ಪಡಿತರ ಅಕ್ಕಿ ಕಳ್ಳ ಸಾಗಣೆ ಕಿಂಗ್‌ಪಿನ್ ಬಂಧನ
ಜಿಲ್ಲೆಯಲ್ಲಿನ ಪಡಿತರ ಅಕ್ಕಿಯನ್ನು ಪಕ್ಕದ ತೆಲಂಗಾಣ ಹಾಗೂ ಮಹಾರಾಷ್ಟ್ರಕ್ಕೆ ಕಳ್ಳ ಸಾಗಾಣೆ ಮಾಡುತ್ತಿದ್ದ ಪ್ರಮುಖ ಸೂತ್ರಧಾರಿ ಆರೋಪಿಯನ್ನು (ಕಿಂಗ್‌ಪಿನ್) ಯಾದಗಿರಿ ಪೊಲೀಸರು ಬಂಧಿಸಿದ್ದಾರೆ ಎಂದು ಎಸ್ಪಿ ಚನ್ನಬಸವಣ್ಣ ಎಸ್‌ಎಲ್ ತಿಳಿಸಿದರು.ಈ ಹಿಂದೆ ಶಾರುಖ ಎಂಬಾತನನ್ನು ಬಂಧಿಸಿದ ನಂತರ ಕಿಂಗ್ ಮಾಹಿತಿ ಸಿಕ್ಕಿತ್ತು. ಹೀಗಾಗಿ ನಾವು ಕಿಂಗ್‌ಪಿನ್ ಬಂಧನಕ್ಕೆ ಜಾಲ ಬಿಸಿದ್ದೇವು. ಆದರೆ ಯಾದಗಿರಿಯಲ್ಲಿ ಕೂಡ 2 ಪ್ರಕರಣ ದಾಖಲಾಗಿದ್ದ ಕಾರಣ ರಾಜು ರಾಠೋಡ ಎಂಬ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯ ಬಾಡಿ ವಾರೆಂಟ್‌ಗಾಗಿ ನಾವು ಕೇಳಿದ್ದೇವೆ ಎಂದರು.
ಈಗಾಗಲೇ ಅಕ್ಕಿ ಕಳ್ಳಸಾಗಣೆಗೆ ಸಂಬಂಧಿಸಿದಂತೆ 3 ಜನರನ್ನು ಬಂಧಿಸಿದ್ದೇವೆ. ಪ್ರಮುಖ ಆರೋಪಿಯ ವಿರುದ್ಧ ಯಾದಗಿರಿಯಲ್ಲಿ 2 ಪ್ರಕರಣ, ಕಲಬುರಗಿಯಲ್ಲಿ 1 ಹಾಗೂ ಬೀದರ್‌ನಲ್ಲಿ ಕೂಡ 1 ಪ್ರಕರಣ ದಾಖಲಾಗಿದ್ದರಿಂದ 3 ಜಿಲ್ಲೆಯ ಪೊಲೀಸರಿಗೆ ಬೇಕಾಗಿದ್ದ ವ್ಯಕ್ತಿ ಎಂದು ಮಾಹಿತಿ ನೀಡಿದರು.