ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ನಾನು ಶಾಸಕನಾದ ನಂತರ ನನ್ನ ಕ್ಷೇತ್ರಕ್ಕೆ ೧೦೦ ಕೋಟಿಯಷ್ಟು ಅನುದಾನ ಬಂದಿದೆ, ಅನುದಾನಕ್ಕೇನು ಕೊರತೆಯಾಗಿಲ್ಲ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ೧೮ ಕೋಟಿ ವೆಚ್ಚದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ಭೂಮಿ ಪೂಜೆ ನೆರವೇರಿಸಿದ ಬಳಿಕ ಮಾತನಾಡಿ ೨೫ ಕೋಟಿ ಸಿಎಂ ವಿಶೇಷ ಅನುದಾನ,೧೮ ಕೋಟಿ ವೆಚ್ಚದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ, ೧೮ ಕೋಟಿ ವೆಚ್ಚದಲ್ಲಿ ಗರಗನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಸಣ್ಣ ನೀರಾವರಿ ಇಲಾಖೆಯ ೫ ಕೋಟಿ, ೫.೫ ಕೋಟಿ ವೆಚ್ಚದಲ್ಲಿ ಬೇಗೂರು ಬಳಿ ಹತ್ತಿ ಮಾರುಕಟ್ಟೆ, ಮುಂದುವರಿದ ಕಾಮಗಾರಿಗೆ ೩ ಕೋಟಿ, ಎಸ್‌ಇಪಿ, ಟಿಎಸ್‌ಪಿ ಅನುದಾನ ಸೇರಿದರೆ ನೂರು ಕೋಟಿಗೂ ಹೆಚ್ಚು ಅನುದಾನದಿಂದ ಅಭಿವೃದ್ಧಿ ಶುರುವಾಗಿದೆ ಎಂದರು.
ಕಳೆದ ಸರ್ಕಾರದ ಅವಧಿಯ ಕೊನೆಯಲ್ಲಿ ಗುದ್ದಲಿ ಪೂಜೆಯಾದ ಬಹುತೇಕ ಕಾಮಗಾರಿಗಳಿಗೆ ಅನುದಾನ ಬಂದಿರಲಿಲ್ಲ. ನಮ್ಮ ಸರ್ಕಾರದಲ್ಲಿ ಮುಂದುವರಿದ ಕಾಮಗಾರಿಗೆ ಅನುದಾನ ನೀಡಿದ್ದು ಸ್ಥಗಿತಗೊಂಡಿದ್ದ ಕಾಮಗಾರಿಗೆ ಚಾಲನೆ ದೊರೆತಿದೆ ಎಂದರು.೨೫ ಕೋಟಿ ಬಿಡುಗಡೆ:
೨೫ ಕೋಟಿ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಕ್ಷೇತ್ರದ ೬೩ ಹಳ್ಳಿಗಳಲ್ಲಿ ಸಿಸಿ ರಸ್ತೆ, ಚರಂಡಿ ಕಾಮಗಾರಿಗೆ ಅನುದಾನ ನೀಡಲಾಗಿದೆ. ತಾಲೂಕಿನ ರಾಘವಾಪುರ, ಕಬ್ಬಹಳ್ಳಿಯಲ್ಲಿ ಸಾಂಕೇತಿಕವಾಗಿ ಸೋಮವಾರ ಚಾಲನೆ ದೊರೆತಿದೆ ಎಂದರು. ನೇರ ಸಾಲ, ವಾಹನ ಸಾಲ, ಗಂಗಾ ಕಲ್ಯಾಣ ಯೋಜನೆಗಾಗಿ ಸಾವಿರಾರು ಮಂದಿ ಆನ್ ಲೈನ್ ಮೂಲಕ ಅರ್ಜಿಗಳು ಬಂದಿವೆ ಆದರೆ ವಾಹನಗಳ ಸಾಲಕ್ಕೆ ೫೦೯ ಅರ್ಜಿ ಬಂದಿವೆ ಕಾರು ಸಿಗೋದು ಇಬ್ಬರಿಗೆ ಮಾತ್ರ ಆಯ್ಕೆ ಮಾಡೋದು ಹೇಗೆ ಎಂಬುದು ತಿಳಿಯುತ್ತಿಲ್ಲ ಎಂದರು.ನುಡಿದಂತೆ ನಡೆದ ಸರ್ಕಾರ:
ಕಾಂಗ್ರೆಸ್ ಪಕ್ಷ ಚುನಾವಣಾ ಪೂರ್ವದಲ್ಲಿ ಹೇಳಿದಂತೆ ಐರು ಗ್ಯಾರಂಟಿಗಳನ್ನು ರಾಜ್ಯ ಸರ್ಕಾರ ಅನುಷ್ಠಾನ ಮಾಡುವ ಮೂಲಕ ನುಡಿದಂತೆ ನಡೆದ ಸರ್ಕಾರ ನಮ್ಮದಾಗಿದೆ. ಐದು ಗ್ಯಾರಂಟಿಗಳಲ್ಲಿ ಗೃಹ ಲಕ್ಷ್ಮೀ ಶೇ.೯೫ ರಷ್ಟು ಅನುಷ್ಠಾನವಾಗಿದೆ ಇನ್ನುಳಿದ ಎಲ್ಲಾ ಗ್ಯಾರಂಟಿಗಳು ಶೇ.೧೦೦ ರಷ್ಟು ಅನುಷ್ಠಾನವಾಗಿವೆ ಎಂದರು. ಕ್ಷೇತ್ರಕ್ಕೆ ಕೆರೆ ನೀರು ತುಂಬಿಸುವಲ್ಲಿ ದಿ.ಎಚ್.ಎಸ್.ಮಹದೇವಪ್ರಸಾದ್ ಪಾತ್ರ ಪ್ರಮುಖವಾಗಿದ್ದು ನಾನು ಕೂಡ ಕೆರೆಗಳಿಗೆ ನೀರು ತುಂಬಿಸುವ ಪ್ರಯತ್ನ ನಡೆಸುತ್ತಿದ್ದೇನೆ. ಸಿಎಂ ಕೂಡ ಕೆರೆ ನೀರು ತುಂಬಿಸುವ ಯೋಜನೆಗೆ ಆಸಕ್ತಿ ತೋರಿದ್ದಾರೆ ಎಂದರು.ಪಟ್ಟಣದ ಬಳಿಯ ಚಿಕ್ಕತುಪ್ಪೂರು ಸರ್ಕಾರಿ ಜಾಗದಲ್ಲಿ ೧೫ ಎಕರೆ ಪ್ರದೇಶದಲ್ಲಿ ಡಿ.ದೇವರಾಜ ಅರಸ್ ಟ್ರಕ್ ಟರ್ಮಿನಲ್ ಆರಂಭವಾಗಲಿದ್ದು, ಟ್ರಕ್ ಟರ್ಮಿನಲ್‌ನಿಂದ ಸ್ಥಳೀಯರಿಗೆ ಕೆಲಸ ಕೂಡ ಸಿಗಲಿದೆ ಎಂದರು. ಸಮಾರಂಭದಲ್ಲಿ ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ಜಿ.ಮಡಿವಾಳಪ್ಪ, ಎಪಿಎಂಸಿ ಅಧ್ಯಕ್ಷ ಮೊಳ್ಳಯ್ಯನಹುಂಡಿ ಬಸವರಾಜು, ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್.ಮಹೇಶ್, ಪಿ.ಮಹದೇವಪ್ಪ,ಎಪಿಎಂಸಿ ಮಾಜಿ ಅಧ್ಯಕ್ಷ ಕರಕಲಮಾದಹಳ್ಳಿ ಪ್ರಭುಸ್ವಾಮಿ, ತಾಪಂ ಮಾಜಿ ಅಧ್ಯಕ್ಷ ಎಚ್.ಎನ್.ಬಸವರಾಜು, ಗ್ರಾಪಂ ಅಧ್ಯಕ್ಷ ಸಿದ್ದರಾಜಶೆಟ್ಟಿ,ಮುಖಂಡರಾದ ಟಿ.ಪಿ.ನಾಗರಾಜು,ವೈ.ಎನ್.ರಾಜಶೇಖರ್,ಎಸ್‌ಆರ್‌ಎಸ್ ರಾಜು,ಕೆ.ಎಂ.ಮಾದಪ್ಪ, ಕಬ್ಬಹಳ್ಳಿ ದೀಪು,ಕುಂದಕೆರೆ ಶಾಂತಪ್ಪ,ಪಟೇಲ್ ರಾಜಪ್ಪ,ವಡ್ಡಗೆರೆ ನಾಗಪ್ಪ ಸೇರಿದಂತೆ ಹಲವರಿದ್ದರು.