ಗದಗ ಜಿಲ್ಲೆಯಲ್ಲಿ 18 ಸಾವಿರ ಅನರ್ಹ ಪಿಂಚಣಿ ಫಲಾನುಭವಿಗಳು!

KannadaprabhaNewsNetwork |  
Published : Oct 14, 2025, 01:01 AM IST
ಗದಗ ಜಿಲ್ಲಾಡಳಿತ ಪೋಟೋ. | Kannada Prabha

ಸಾರಾಂಶ

ಅನರ್ಹ ಫಲಾನುಭವಿಗಳಿಗೆ ಸರ್ಕಾರ ವಯೋಮಿತಿ ಹಾಗೂ ಆದಾಯ ಪ್ರಮಾಣಪತ್ರ ಕೊಟ್ಟವರು ಯಾರು ಎನ್ನುವುದಕ್ಕೆ ಹಿರಿಯ ಅಧಿಕಾರಿಗಳೇ ಉತ್ತರಿಸಬೇಕಿದೆ.

ಶಿವಕುಮಾರ ಕುಷ್ಟಗಿ

ಗದಗ: ಸರ್ಕಾರದ ವಿವಿಧ ಪಿಂಚಣಿ ಯೋಜನೆಗಳ ಮಂಜೂರಾತಿಯ ಹೊಣೆ ಹೊತ್ತಿರುವ ಕಂದಾಯ ಇಲಾಖೆಯ ಅಧಿಕಾರಿಗಳು ನಡೆಸಿದ ಅಕ್ರಮದಿಂದಾಗಿ ಜಿಲ್ಲಾದ್ಯಂತ 18 ಸಾವಿರಕ್ಕೂ ಅಧಿಕ ಅನರ್ಹ ಫಲಾನುಭವಿಗಳು ಸೌಲಭ್ಯ ಪಡೆಯುತ್ತಿರುವುದು ಬೆಳಕಿಗೆ ಬಂದಿದೆ.

ಈ ಕುರಿತು ಕೆಲ ಸಾರ್ವಜನಿಕರಿಂದ ಕೇಳಿ ಬಂದ ದೂರಿನ ಆಧಾರದಲ್ಲಿ ಪರಿಶೀಲನೆ ನಡೆಸಿದ ವೇಳೆ ಈ ಆತಂಕಕಾರಿ ವಿಷಯ ಬೆಳಕಿಗೆ ಬಂದಿದ್ದು, ನಿಗದಿತ ವಯಸ್ಸಿಗಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳಿಗೆ ಹಿರಿಯ ನಾಗರಿಕರ ಮಾಸಾಶನ ನೀಡುತ್ತಿರುವುದು, ಪತಿ ಇದ್ದೂ ವಿಧವಾ ವೇತನ ಪಡೆಯುತ್ತಿರುವ ಮಹಿಳೆಯರು ಪತ್ತೆಯಾಗಿದ್ದಾರೆ.

ಜಿಲ್ಲೆಯಲ್ಲಿ ಅನರ್ಹರು: ಗದಗ, ರೋಣ ಮತ್ತು ಶಿರಹಟ್ಟಿ ತಾಲೂಕುಗಳಲ್ಲಿ ಅತಿ ಹೆಚ್ಚು ಅನರ್ಹರು ಇದ್ದಾರೆ. ಸದ್ಯಕ್ಕೆ18206 ಅನರ್ಹರನ್ನು ಗುರುತಿಸಲಾಗಿದೆ. ಅವರಲ್ಲಿ 209 ಜನ ನಿಧನರಾಗಿದ್ದಾರೆ. 1822 ಜನ ಎಪಿಎಲ್ ಕಾರ್ಡ್ ಹೊಂದಿದ್ದಾರೆ. 4307 ಜನ ಹೆಚ್ಚಿನ ಆದಾಯ ಇರುವವರು, ಕಡಿಮೆ ವಯೋಮಿತಿಯ 11820 ಜನರು ಸೇರಿ ಒಟ್ಟು 18206 ಅನರ್ಹರನ್ನು ಜಿಲ್ಲೆಯಲ್ಲಿ ಗುರುತಿಸಲಾಗಿದೆ.

ಈ ಅನರ್ಹ ಫಲಾನುಭವಿಗಳಿಗೆ ಸರ್ಕಾರ ವಯೋಮಿತಿ ಹಾಗೂ ಆದಾಯ ಪ್ರಮಾಣಪತ್ರ ಕೊಟ್ಟವರು ಯಾರು ಎನ್ನುವುದಕ್ಕೆ ಹಿರಿಯ ಅಧಿಕಾರಿಗಳೇ ಉತ್ತರಿಸಬೇಕಿದೆ.

ರಾಜ್ಯದಲ್ಲಿ ಪ್ರಾಥಮಿಕ ವರದಿ ಆಧಾರದಲ್ಲಿ 54 ಲಕ್ಷಕ್ಕೂ ಅಧಿಕ ಅನರ್ಹ ಫಲಾನುಭವಿಗಳು ಇದ್ದಾರೆ ಎಂದು ಗುರುತಿಸಲಾಗಿದೆ. ಇಷ್ಟೊಂದು ಜನರಿಗೆ ಪ್ರತಿ ತಿಂಗಳು ನೂರಾರು ಕೋಟಿ ಹಣ ಪೋಲಾಗುತ್ತಿರುವುದು ಪತ್ತೆಯಾಗಿದೆ.

ಈ ಸೋರಿಕೆ ತಡೆಯಲು ಮತ್ತು ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ತನಿಖೆ ನಡೆಸಿ ವಿಸ್ತೃತ ವರದಿ ಸಲ್ಲಿಸಲು ಆಯಾ ತಾಲೂಕಿನ ತಹಸೀಲ್ದಾರರನ್ನೇ ಸರ್ಕಾರ ತನಿಖಾಧಿಕಾರಿಗಳಾಗಿ ನೇಮಿಸಿ ನಿರ್ದೇಶನ ನೀಡಿದೆ. ಅನರ್ಹರನ್ನು ಗುರುತಿಸಿ, ಅಂಥವರನ್ನು ಪಟ್ಟಿಯಿಂದ ಡಿಲೀಟ್ ಮಾಡುವ ಮತ್ತು ಕಾನೂನು ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸು ಮಾಡಲು ಅವಕಾಶ ಕಲ್ಪಿಸಲಾಗಿದೆ.

ಸಾಮಾಜಿಕ ಭದ್ರತೆಯ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರದ ಕಟ್ಟುನಿಟ್ಟಿನ ಷರತ್ತುಗಳಿವೆ. ಆದರೆ, ಯಾವುದೇ ಅರ್ಹತೆ ಇಲ್ಲದಿದ್ದರೂ ವೃದ್ಧರು ಎಂದು ಪ್ರಮಾಣಪತ್ರ ಪಡೆದು ಸರ್ಕಾರ ಯೋಜನೆಯನ್ನು ದುರುಪಯೋಗ ಪಡಿಸಿಕೊಳ್ಳುವ ಒಂದು ವ್ಯವಸ್ಥಿತ ಜಾಲವೇ ಗದಗ ಸೇರಿದಂತೆ ರಾಜ್ಯಾದ್ಯಂತ ಸಕ್ರಿಯವಾಗಿದೆ. ಜಿಲ್ಲೆಯಲ್ಲಿ 11 ಸಾವಿರ ಅನರ್ಹ ಸಂಧ್ಯಾ ಸುರಕ್ಷಾ ಹಾಗೂ 7 ಸಾವಿರ ಅನರ್ಹರು ವೃದ್ಧಾಪ್ಯದ ಪಿಂಚಣಿ ಪಡೆಯುತ್ತಿದ್ದಾರೆ. ಇದೇ ರೀತಿ ರಾಜ್ಯದಲ್ಲಿ ವೃದ್ಧಾಪ್ಯ ವೇತನ ಯೋಜನೆಯಡಿ 9 ಲಕ್ಷ ಅನರ್ಹರು, ಸಂಧ್ಯಾ ಸುರಕ್ಷಾ ಯೋಜನೆಯಲ್ಲಿ 14 ಲಕ್ಷ ಅನರ್ಹರು ಪಿಂಚಣಿ ಪಡೆಯುವುದು ಸರ್ಕಾರದ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎನ್ನುತ್ತಾರೆ ಹಿರಿಯ ಅಧಿಕಾರಿಗಳು.

ಅಕ್ರಮದ ಬಗ್ಗೆ ಗಮನಕ್ಕೆ ಬರುತ್ತಿದ್ದಂತೆ ಸ್ವತಃ ನಾನೇ ತಹಸೀಲ್ದಾ‌ರ್ ಕಚೇರಿಗೆ ತೆರಳಿ ಪರಿಶೀಲನೆ ನಡೆಸಿದ್ದೇನೆ. ಅನರ್ಹರನ್ನು ಪಟ್ಟಿಯಿಂದ ತಕ್ಷಣವೇ ಕೈಬಿಡಲು ಸೂಚಿಸಿದ್ದೇನೆ. ಈಗಾಗಲೇ ಅಧಿಕಾರಿಗಳಿಗೆ ಎಚ್ಚರಿಕೆ ಕೂಡಾ ನೀಡಲಾಗಿದ್ದು. ಒಬ್ಬ ಉಪ ತಹಸೀಲ್ದಾ‌ರರನ್ನು ಅಮಾನತು ಕೂಡಾ ಮಾಡಲಾಗಿದೆ. ಈ ರೀತಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ತನಿಖೆ ನಡೆಸಿ ಈ ರೀತಿಯ ಅಕ್ರಮ ತಡೆಗೆ ವಿಶೇಷ ಗಮನ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.

PREV

Recommended Stories

ದೀಪಾವಳಿ ಹಬ್ಬ : ಕೆಎಸ್ಸಾರ್ಟಿಸಿಯಿಂದ 2500 ಹೆಚ್ಚುವರಿ ಬಸ್‌
ಆರೆಸ್ಸೆಸ್‌ ಚಟುವಟಿಕೆ ನಿಷೇಧ ಬಗ್ಗೆ ತಮಿಳುನಾಡು ಮಾದರಿ ಪರಿಶೀಲನೆ : ಸಿದ್ದರಾಮಯ್ಯ