ಬೆಂಗಳೂರು : ಬರೋಬ್ಬರಿ 3.2 ಕೋಟಿ ಮೌಲ್ಯದ 1949 ಮೊಬೈಲ್‌ ಜಪ್ತಿ

KannadaprabhaNewsNetwork |  
Published : Oct 30, 2025, 04:00 AM IST
Mobile Theft

ಸಾರಾಂಶ

ನಗರದ ವಿವಿಧೆಡೆ ಮೊಬೈಲ್‌ ಕಳವು ಮಾಡುತ್ತಿದ್ದ 42 ಮಂದಿ ಆರೋಪಿಗಳನ್ನು ಬಂಧಿಸಿರುವ ನಗರ ಪೊಲೀಸರು, ಆರೋಪಿಗಳಿಂದ ಸುಮಾರು 3.02 ಕೋಟಿ ರು. ಮೌಲ್ಯದ 1,949 ಮೊಬೈಲ್‌ಗಳನ್ನು ಜಪ್ತಿ ಮಾಡಿದ್ದಾರೆ

 ಬೆಂಗಳೂರು :  ನಗರದ ವಿವಿಧೆಡೆ ಮೊಬೈಲ್‌ ಕಳವು ಮಾಡುತ್ತಿದ್ದ 42 ಮಂದಿ ಆರೋಪಿಗಳನ್ನು ಬಂಧಿಸಿರುವ ನಗರ ಪೊಲೀಸರು, ಆರೋಪಿಗಳಿಂದ ಸುಮಾರು 3.02 ಕೋಟಿ ರು. ಮೌಲ್ಯದ 1,949 ಮೊಬೈಲ್‌ಗಳನ್ನು ಜಪ್ತಿ ಮಾಡಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ನಗರ ಪೊಲೀಸ್‌ ಆಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌, ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಮಹಿಳಾ ಸಂರಕ್ಷಣಾ ದಳದ ಅಧಿಕಾರಿಗಳು ನಗರದ ಜನಸಂದಣಿ ಪ್ರದೇಶಗಳು, ಬಸ್‌ ನಿಲ್ದಾಣಗಳು, ರೈಲು ನಿಲ್ದಾಣಗಳು, ದೇವಸ್ಥಾನಗಳ ಆವರಣ ಸೇರಿದಂತೆ ವಿವಿಧೆಡೆ ಮೊಬೈಲ್‌ ಕಳವು, ಸುಲಿಗೆ ಮಾಡುತ್ತಿದ್ದ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 70 ಲಕ್ಷ ರು. ಮೌಲ್ಯದ 422 ಸ್ಮಾರ್ಟ್‌ ಫೋನ್‌ ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ದ್ವಿಚಕ್ರ ವಾಹನ ಹಾಗೂ ಆಟೋವನ್ನು ಜಪ್ತಿ ಮಾಡಿದ್ದಾರೆ. ಈ ಸಂಬಂಧ ಸಿಟಿ ಮಾರ್ಕೆಟ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದರು.

ಸಿಇಐಆರ್‌ ಪೋರ್ಟಲ್‌ನಿಂದ 894 ಮೊಬೈಲ್‌ ಜಪ್ತಿ:

ಸಾರ್ವಜನಿಕರು ತಮ್ಮ ಮೊಬೈಲ್‌ ಕಳ್ಳತನ ಕುರಿತು ಕೆಎಸ್‌ಪಿ ಅಪ್ಲಿಕೇಷನ್‌ ಹಾಗೂ ನಗರದ ವಿವಿಧ ಪೊಲೀಸ್‌ ಠಾಣೆಗಳಿಗೆ ದೂರು ನೀಡಿದ್ದಾರೆ. ಈ ದೂರುಗಳ ಸಂಬಂಧ ನಗರದ ಇಂಟಿಗ್ರೇಟೆಡ್‌ ಕಮಾಂಡ್‌ ಆ್ಯಂಡ್‌ ಕಂಟ್ರೋಲ್‌ ಸೆಂಟರ್‌ ಮುಖಾಂತರ 2024ರ ಮಾರ್ಚ್‌ನಿಂದ ಈವರೆಗೆ ಸೆಂಟ್ರಲ್‌ ಎಕ್ಯೂಪ್‌ಮೆಂಟ್ ಐಡೆಂಟಿಟಿ ರಿಜಿಸ್ಟ್ರಾರ್‌(ಸಿಇಐಆರ್‌) ಪೋರ್ಟಲ್‌ನಲ್ಲಿ ಕಳೆದು ಹೋದ ಮೊಬೈಲ್‌ಗಳ ಐಎಂಇಐ ನಂಬರ್‌ ಆಧಾರದ ಮೇಲೆ ಮೊಬೈಲ್‌ ಫೋನ್‌ ಬಳಕೆಯ ಬಗ್ಗೆ ತಾಂತ್ರಿಕ ಮಾಹಿತಿ ಕಲೆ ಹಾಕಿ ಒಟ್ಟು 894 ಸ್ಮಾರ್ಟ್‌ ಪೋನ್‌ ಜಪ್ತಿ ಮಾಡಲಾಗಿದೆ. ಈ ಪೈಕಿ 522 ಮೊಬೈಲ್‌ಗಳನ್ನು ವಾರಸುದಾರರಿಗೆ ಹಿಂದಿರುಗಿಸಲಾಗಿದೆ. ಇಳಿದ 372 ಫೋನ್‌ಗಳ ಸಂಬಂಧ ವಾರಸುದಾರರಿಂದ ಅಗತ್ಯ ದಾಖಲೆ ಪಡೆದು ವಾಪಾಸ್‌ ನೀಡಲಾಗುವುದು ಎಂದು ಹೇಳಿದರು.

ಕಾರಿನಲ್ಲಿ 28 ಮೊಬೈಲ್‌ ಪತ್ತೆ:

ಅಮೃತಹಳ್ಳಿ ಠಾಣಾ ವ್ಯಾಪ್ತಿಯ ಹೆಬ್ಬಾಳ ಮೇಲ್ಸೇತುವೆ ಕೆಳಗಿನ ಬಸ್‌ ನಿಲ್ದಾಣದ ಬಳಿ ಅ.23ರಂದು ಕಾರೊಂದು ಅನುಮಾನಾಸ್ಪದವಾಗಿ ನಿಂತಿರುವುದು ಕಂಡು ಬಂದಿದೆ. ಈ ವೇಳೆ ಕರ್ತವ್ಯಕ್ಕೆ ತೆರಳುತ್ತಿದ್ದ ಪೊಲೀಸ್‌ ಸಿಬ್ಬಂದಿ ಕಾರಿನ ಬಳಿ ತೆರಳಿದಾಗ ಆ ಕಾರಿನಲ್ಲಿ ಇದ್ದವರು ಕೆಳಗೆ ಇಳಿದು ಪರಾರಿಯಾಗಿದ್ದಾರೆ. ಕಾರನ್ನು ಪರಿಶೀಲಿಸಿದಾಗ ವಿವಿಧ ಕಂಪನಿಗಳ 28 ಮೊಬೈಲ್‌ಗಳು ಪತ್ತೆಯಾಗಿವೆ. ಬಳಿಕ ಆ ಮೊಬೈಲ್‌ಗಳು ಹಾಗೂ ಕಾರನ್ನು ಜಪ್ತಿ ಮಾಡಲಾಗಿದೆ. ಈ ಸಂಬಂಧ ಅಮೃತಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಠಾಣೆಯ ಸಿಇಐಆರ್‌ ಪೋರ್ಟಲ್‌ನಲ್ಲಿ ದಾಖಲಾಗಿದ್ದ ಮೊಬೈಲ್‌ ಕಳವು ಪ್ರಕರಣಗಳ ಪೈಕಿ 12 ಮೊಬೈಲ್‌ಗಳು ಪತ್ತೆಯಾಗಿವೆ ಎಂದು ಮಾಹಿತಿ ನೀಡಿದರು.

ಉಪ್ಪಾರಪೇಟೆ 90 ಮೊಬೈಲ್‌ ಜಪ್ತಿ:

ಉಪ್ಪಾರಪೇಟೆ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, 4.10 ಲಕ್ಷ ರು. ಮೌಲ್ಯದ 90 ಮೊಬೈಲ್‌ ಜಪ್ತಿ ಮಾಡಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿ, 35 ಲಕ್ಷ ರು. ಮೌಲ್ಯದ ಎಲೆಕ್ಟ್ರಾನಿಕ್‌ ಸಿಗರೇಟ್ಸ್‌, ವಿದೇಶಿ ಸಿಗರೇಟ್‌ ಬಾಕ್ಸ್‌, 13 ಲ್ಯಾಪ್‌ಟಾಪ್‌ ಮತ್ತು 11 ಐಫೋನ್‌, 17 ಪ್ರೋಮ್ಯಾಕ್ಸ್ ಮೊಬೈಲ್‌ ಜಪ್ತಿ ಮಾಡಿದ್ದಾರೆ. ಈ ಸಂಬಂಧ ಉಪ್ಪಾರಪೇಟೆ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ ಎಂದರು.

ವರ್ತೂರು ಪೊಲೀಸರಿಂದ 39 ಮೊಬೈಲ್‌ ವಶ:

ವಿಜಯನಗರ ಠಾಣೆ ಪೊಲೀಸರು 6.75 ಲಕ್ಷ ರು. ಮೌಲ್ಯದ 20 ಮೊಬೈಲ್‌ ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಜಪ್ತಿ ಮಾಡಿದ್ದಾರೆ. ವರ್ತೂರು ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ, 40.50 ಲಕ್ಷ ರು. ಮೌಲ್ಯದ 39 ಮೊಬೈಲ್‌ಗಳು, 1 ಡಿಜಿಟೆಲ್‌ ಕ್ಯಾಮರಾ, ವಾಚ್‌, 8 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿದ್ದಾರೆ. ನೈಋತ್ಯ ವಿಭಾಗದ ಏಳು ಪೊಲೀಸ್ ಠಾಣೆಗಳ ಸಿಇಐಆರ್‌ ಪೋರ್ಟಲ್‌ನಲ್ಲಿ ವರದಿಯಾಗಿದ್ದ ಮೊಬೈಲ್‌ ಕಳವು ಹಾಗೂ ಇತರೆ ಪ್ರಕರಣಗಳ ಸಂಬಂಧ 26 ಲಕ್ಷ ರು. ಮೌಲ್ಯದ 224 ಮೊಬೈಲ್‌ ಜಪ್ತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

160 ಮೊಬೈಲ್‌ ವಾರಸುದಾರರಿಗೆ:

ರಾಮಮೂರ್ತಿನಗರ ಠಾಣೆ ಪೊಲೀಸರು ಕಳೆದ ಜನವರಿಂದ ಈವರೆಗೆ ಆರು ಮೊಬೈಲ್‌ ಕಳವು ಪ್ರಕರಣ ಪತ್ತೆ ಹಚ್ಚಿ 11 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಇವರಿಂದ 1.80 ಲಕ್ಷ ರು. ಮೌಲ್ಯದ 6 ಮೊಬೈಲ್‌ ಜಪ್ತಿ ಮಾಡಿದ್ದಾರೆ. ಸಿಇಐಆರ್ ಪೊರ್ಟಲ್‌ನಲ್ಲಿ ದಾಖಲಾಗಿದ್ದ ಪ್ರಕರಣಗಳ ಪೈಕಿ 160 ಮೊಬೈಲ್‌ ಪತ್ತೆ ಹಚ್ಚಿ ವಾರಸುದಾರರಿಗೆ ಹಿಂದಿರುಗಿಸಿದ್ದಾರೆ. ಬಾಣಸವಾಡಿ ಠಾಣೆ ಪೊಲೀಸರು ಕಳೆದ 10 ತಿಂಗಳಲ್ಲಿ 6 ಮೊಬೈಲ್‌ ಕಳವು ಪ್ರಕರಣ ಪತ್ತೆ ಹಚ್ಚಿ 3 ಲಕ್ಷ ರು. ಮೌಲ್ಯದ 15 ಮೊಬೈಲ್‌ ಜಪ್ತಿ ಮಾಡಿದ್ದಾರೆ. ಹೆಣ್ಣೂರು ಠಾಣೆ ಪೊಲೀಸರು 15 ಪ್ರಕರಣಗಳಲ್ಲಿ 4.95 ಲಕ್ಷ ರು. ಮೌಲ್ಯದ 15 ಮೊಬೈಲ್‌ ಜಪ್ತಿ ಮಾಡಿದ್ದಾರೆ. ಬೊಮ್ಮನಹಳ್ಳಿ ಠಾಣೆ ಪೊಲೀಸರು 2 ಲಕ್ಷ ರು. ಮೌಲ್ಯದ 20 ಮೊಬೈಲ್‌ ಜಪ್ತಿ ಮಾಡಿದ್ದಾರೆ ಎಂದು ತಿಳಿಸಿದರು.ಸಿನಿಮೀಯ ಶೈಲಿಯಲ್ಲಿ ಮೊಬೈಲ್‌ ಕಳವು

ಮೊಬೈಲ್‌ ಕಳವು ಸಂಬಂಧ ಸಿಸಿಬಿ ಪೊಲೀಸರು ಮೈಸೂರು ರಸ್ತೆಯ ನಿವಾಸಿಗಳಾದ ಅರ್ಬಾಜ್, ಚಂದ್ರಶೇಖರ್, ಅಪ್ರೋಜ್‌, ಮದನ್, ಶಾಂತಕುಮಾರ್ ಮತ್ತು ಮೊಹಮ್ಮದ್ ಯಾಸಿನ್ ಎಂಬುವರನ್ನು ಬಂಧಿಸಿ 450 ಮೊಬೈಲ್‌ ಜಪ್ತಿ ಮಾಡಲಾಗಿದೆ. ಈ ಆರೋಪಿಗಳು ಬಸ್‌ಗಳು, ಸಾರ್ವಜನಿಕ ದಟ್ಟಣೆ ಪ್ರದೇಶಗಳಲ್ಲಿ ಮೊಬೈಲ್‌ ಎಗರಿಸುತ್ತಿದ್ದರು. ಆರು ಮಂದಿಯೂ ಒಟ್ಟಿಗೆ ಕೃತ್ಯಕ್ಕೆ ಇಳಿಯುತ್ತಿದ್ದರು. ಒಬ್ಬ ಮೊಬೈಲ್ ಎಗರಿಸಿ ಬಳಿಕ ಮತ್ತೊಬ್ಬನಿಗೆ ಕೊಡುತ್ತಿದ್ದ. ಆತ ಇನ್ನೊಬ್ಬನಿಗೆ ಹೀಗೆ ಕೈಯಿಂದ ಕೈಗೆ ಬದಲಿಸುತ್ತಿದ್ದರು ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.

ಕದ್ದ ಮೊಬೈಲ್‌ಗೆ ಅಲ್ಯುಮಿನಿಯಂ ಫಾಯಿಲ್‌ ಪೇಪರ್‌!

ಈ ಆರು ಮಂದಿ ಆರೋಪಿಗಳು ಮೊಬೈಲ್‌ ಕಳ್ಳತನಕ್ಕೆ ಹೊಸ ಮಾರ್ಗ ಕಂಡುಕೊಂಡಿದ್ದರು. ಮೊಬೈಲ್‌ ಕದ್ದ ಬಳಿಕ ಅಲ್ಯುಮಿನಿಯಂ ಫಾಯಿಲ್‌ ಸುತ್ತಿ ಜೇಬಿಗೆ ಇರಿಸಿಕೊಳ್ಳುತ್ತಿದ್ದರು. ಈ ಅಲ್ಯುಮಿನಿಯಂ ಫಾಯಿಲ್‌ ಪೇಪರ್‌ ಸುತ್ತುವುದರಿಂದ ಮೊಬೈಲ್‌ ನೆಟ್‌ ವರ್ಕ್‌ ಜಾಮ್‌ ಆಗುತ್ತದೆ. ಮೊಬೈಲ್‌ ಕಳೆದುಕೊಂಡವರು ತಕ್ಷಣ ಕರೆ ಮಾಡಿದರೂ ಮೊಬೈಲ್‌ ರಿಂಗ್‌ ಆಗುವುದಿಲ್ಲ. ಸ್ವಿಚ್‌ ಆಫ್‌ ಆಥವಾ ನಾಟ್‌ ರೀಚಬಲ್‌ ಬರುತ್ತದೆ. ಹೀಗೆ ಆರೋಪಿಗಳು ಸುಲಭವಾಗಿ ಮೊಬೈಲ್‌ ಎಗರಿಸಿ ಎಸ್ಕೇಪ್‌ ಆಗುತ್ತಿದ್ದರು. ಕದ್ದ ಮೊಬೈಲ್‌ಗಳನ್ನು ಪರಿಚಿತರ ಮೂಲಕ ವಿಲೇವಾರಿ ಮಾಡುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಒಲವಿನ ಊಟ ಬಡಿಸಲು ಸಿದ್ಧವಾದ ಅಕ್ಕ ಕೆಫೆ
ಚನ್ನಮ್ಮ ಮೂರ್ತಿ ಉದ್ಘಾಟನಾ ಸಮಾರಂಭಕ್ಕೆ ಬಹಿಷ್ಕಾರ