ಬಂಟ್ವಾಳವನ್ನು ದ್ವೀಪವನ್ನಾಗಿಸಿದ್ದ 1974ರ ನೆರೆ

KannadaprabhaNewsNetwork |  
Published : Jul 26, 2024, 01:36 AM IST
 ಬಂಟ್ವಾಲದ ನೆರೆಗೆ ೫೦ ವರ್ಷ | Kannada Prabha

ಸಾರಾಂಶ

1974ರಲ್ಲಿ ಬಂದಿದ್ದ ನೆರೆಯ ಪ್ರಮಾಣಕ್ಕೆ ಬಂಟ್ವಾಳವೆಂಬ ಪುಟ್ಟ ಊರು ಮುಳುಗಡೆಯಾಗಿ ದ್ವೀಪವಾಗಿ ಗೋಚರಿಸಿತ್ತು.

ಕನ್ನಡಪ್ರಭ ವಾರ್ತೆ ಬಂಟ್ವಾಳ

ತಾಲೂಕಿನ ಇತಿಹಾಸದಲ್ಲಿ ೧೯೭೪ರಲ್ಲಿ ಬಂದ ನೆರೆ ಹೆಚ್ಚು ಮಹತ್ವದ್ದಾಗಿದೆ. ಐವತ್ತು ವರ್ಷದ ಹಿಂದೆ ಅಂದರೆ 1974 ರ ಜುಲೈ ತಿಂಗಳಲ್ಲಿ ನೇತ್ರಾವತಿಯ ರೌದ್ರವತಾರಕ್ಕೆ ಬಂಟ್ವಾಳ ದ್ವೀಪವಾಗಿದ್ದಲ್ಲದೆ, ಹಲವಾರು ಮನೆಗಳು ಕುಸಿದು ಹೋಗಿದ್ದ ಘಟನೆಗಳನ್ನು ಹಿರಿಯರು ಮೆಲುಕು ಹಾಕುತ್ತಿದ್ದಾರೆ.

1923ರಲ್ಲಿ ಉಂಟಾಗಿದ್ದ ನೆರೆಯ ಮಾಹಿತಿ ಭಗವಾನ್ ನಿತ್ಯಾನಂದ ಪುಸ್ತಕ, ಶಿಲಾಕಲ್ಲಿನಲ್ಲಿ ಈಗಲೂ ಲಭ್ಯವಿದ್ದರೆ, 1974ರ ಜುಲೈ 26 ರಂದು ಬಂದ ಮಹಾನೆರೆಯನ್ನು ಕಂಡ ಪ್ರತ್ಯಕ್ಷದರ್ಶಿಗಳು ಸಾಕಷ್ಟು ಮಂದಿ ಸಿಗುತ್ತಾರೆ. ಈಗಿನ ತಲೆಮಾರಿಗೂ ಇದರ ಸ್ಪಷ್ಟ ಅರಿವಿದೆ.

ಐವತ್ತು ವರ್ಷಗಳ ಹಿಂದೆ ನೇತ್ರಾವತಿಯಲ್ಲಿ 8 ರಿಂದ 8.5 ಮೀಟರ್‌ ನೀರು ತುಂಬಿ ಹರಿಯಿತೆಂದರೆ ಬಂಟ್ವಾಳ ಪೇಟೆಯನ್ನು ನೀರು ಆವರಿಸಿತೆಂದೇ ಹಿರಿಯರ ಲೆಕ್ಕಾಚಾರ. ಆದರೆ ಈಗ 9 ಮೀ.ನಲ್ಲಿ‌ ನೀರು ತುಂಬಿ ಹರಿದರೂ ಬಂಟ್ವಾಳ ಪೇಟೆಗೆ ನೀರು ನುಗ್ಗಲು ಆರಂಭವಾಗಿ, ಬಂಟ್ವಾಳದ ಸುತ್ತಮುತ್ತಲಿನ ತಗ್ಗುಪ್ರದೇಶಗಳನ್ನು ಮಾತ್ರವೇ ನೀರು ಆವರಿಸುತ್ತದೆ.

ಇದೇ ಜು.19ರಂದು ಅಪಾಯದ ಮಟ್ಟವನ್ನು ದಾಟಿ ನೀರು ಹರಿಯಿತಾದರೂ ಬಂಟ್ವಾಳ ಪೇಟೆಗೆ ನೀರು ನುಗ್ಗಲಿಲ್ಲ. ಯಾಕೆಂದರೆ ನೇತ್ರಾವತಿಯಲ್ಲಿ ನಡೆಯುವ ಮರಳುಗಾರಿಕೆಯಿಂದಾಗಿ ನದಿ. ಆಳ, ಅಗಲವಾಗಿರುವುದರಿಂದ ನೀರು ತುಂಬಿ ಹರಿಯಲು ಘಟ್ಟಪ್ರದೇಶದಿಂದ ಸಾಕಷ್ಟು ನೀರುಹರಿದು ಬರಬೇಕಾಗುತ್ತದೆ. ದ್ವೀಪವಾಗಿದ್ದ ಬಂಟ್ವಾಳ: 1974ರಲ್ಲಿ ಬಂದಿದ್ದ ನೆರೆಯ ಪ್ರಮಾಣಕ್ಕೆ ಬಂಟ್ವಾಳವೆಂಬ ಪುಟ್ಟ ಊರು ಮುಳುಗಡೆಯಾಗಿ ದ್ವೀಪವಾಗಿ ಗೋಚರಿಸಿತ್ತು. ಪೇಟೆಯಲ್ಲಿದ್ದ ಅಂಗಡಿ, ಮನೆಗಳು, ಜಾನುವಾರು, ಕೃಷಿ ಎಲ್ಲವೂ ನೀರಿನಲ್ಲಿ ಕೊಚ್ಚಿ ಹೋಗಿತ್ತು. ಪರಿಣಾಮ ಬಂಟ್ವಾಳದ ಜನತೆ ದಿಕ್ಕು ಕಾಣದೆ ಕಂಗಾಲಾಗಿದ್ದರು.

ಹಿರಿಯರು ಶ್ರಮಪಟ್ಟು ನಿರ್ಮಿಸಿದ ಮಣ್ಣಿನ ಗೋಡೆ‌ಯ ಮನೆಗಳು ನೀರಿನ ರಭಸಕ್ಕೆ ಕಣ್ಣಮುಂದೆ ಕುಸಿಯುವ, ಸೊತ್ತುಗಳು ನೀರಿನಲ್ಲಿ ಕೊಚ್ಚಿಹೋಗುವ ದೃಶ್ಯಗಳು ಈಗಲು ನೆರೆಯ ಸಂದರ್ಭಗಳಲ್ಲೇ ಕಣ್ಣಮುಂದೆ ಬಂದು ನಿಲ್ಲುತ್ತವೆ ಎಂದು ಹಿರಿಯರೋರ್ವರು ನೆನಪಿಸುತ್ತಾರೆ.ಆ ಸಂದರ್ಭ ಬಂಟ್ವಾಳ ಭಾಮಿ ಜಂಕ್ಷನ್ ದಾಟಿ ನೀರು ಮುನ್ನಗಿತ್ತು. ನಾಲ್ಕು ದಿಕ್ಕುಗಳಿಂದಲೂ ನೀರು ಪೇಟೆಗೆ ನುಗ್ಗಿತ್ತು. ಎಲ್ಲಿ ನೋಡಿದರೂ, ಎತ್ತ ಸಾಗಿದರೂ ನೀರೇ ನೀರು.

ಸುರಕ್ಷಿತ ಸ್ಥಳಕ್ಕೆ ತೆರಳಲು ಪರ್ಯಾಯ ವ್ಯವಸ್ಥೆ ಇಲ್ಲದೆ ಸಂತ್ರಸ್ತರೆಲ್ಲರು ಹಳೆ ಪ್ರವಾಸಿಮಂದಿರದ ಕಾಳಜಿ ಕೇಂದ್ರವನ್ನೇ ಆಶ್ರಯಿಸಬೇಕಾಯಿತು. ಅಲ್ಲಿಗೂ ನೀರು ನುಗ್ಗುವ ಅಪಾಯ ಉಂಟಾಗಿತ್ತಾದರೂ ಕೊನೆಗಳಿಗೆಯಲ್ಲಿ ನೀರು ಇಳಿಮುಖವಾಗಿತ್ತು. ಇನ್ನೊಂದೆಡೆ ವಿದ್ಯುತ್ ಇಲ್ಲದೆ ಕತ್ತಲು ಆವರಿಸಿತ್ತು.

ಪುಟ್ಟಮಕ್ಕಳಿಂದ ಹಿಡಿದು ವೃದ್ಧರವರೆಗೂ ನೂರಾರು ಮಂದಿ ಸಂತ್ರಸ್ತರು ಈ ಪ್ರವಾಸಿಮಂದಿರದಲ್ಲಿ ವಾರಗಟ್ಟಲೇ ಕಾಲ ಕಳೆಯಬೇಕಾಯಿತು. ನೇತ್ರಾವತಿಯ ಆರ್ಭಟ ಕಡಿಮೆಯಾಗಿ ಸಂಪೂರ್ಣ ಇಳಿಮುಖವಾಗುವರೆಗೂ ರಸ್ತೆಗೆ ಇಳಿಯುವಂತಿಲ್ಲ, ಸುರಕ್ಷಿತ ಸ್ಥಳಕ್ಕೆ ತೆರಳಲು ಪರ್ಯಾಯ ರಸ್ತೆಯ ವ್ಯವಸ್ಥೆಯೂ ಇಲ್ಲದೆ ಜನತೆ ಪರದಾಡಬೇಕಾಗಿತ್ತು.

2024 ಜು.26 ಕ್ಕೆ 1974 ರ ನೆರೆಗೆ ಪೂರ್ತಿ ಐವತ್ತು ವರ್ಷ ತುಂಬುತ್ತದೆ. ಈ ವರ್ಷ ಆ ದಿನಾಂಕಕ್ಕೆ ವಾರದ ಮೊದಲೇ ನರೆಯ ಭೀತಿ ಸೃಷ್ಟಿಯಾಗಿದೆ. 1974ರಲ್ಲಿ ಬಂದ ನೆರೆಯ ಪ್ರಮಾಣದಲ್ಲಿ ನೀರು ಜು.19ರಂದು ಬಾರದಿದ್ದರೂ, ಅಂದಿನ ನೆನಪು ಮರುಕಳಿಸಿದೆ.

ವಿಶೇಷವೆಂದರೆ 1974 ಜು.26 ಶುಕ್ರವಾರವಾಗಿತ್ತು. ಕಾಕತಾಳೀಯ ಎಂಬಂತೆ 2024ರ ಜು.26 ಕೂಡ ಶುಕ್ರವಾರವೇ ಆಗಿದೆ. ಅಂದು ಬಂಟ್ವಾಳದ ನರೇಂದ್ರ ಆಚಾರ್ಯ ಅವರು ತೆಗೆದಿದ್ದ ನೆರೆಯ ಫೊಟೋಗಳು ಕಳೆದ ಒಂದು ವಾರದಿಂದ ಸಾಮಾಜಿಕ ಜಾಲತಾಣದಲಲೂ ವ್ಯಾಪಕವಾಗಿ ವೈರಲ್ ಆಗುತ್ತಿದ್ದು, ಹಳೆಯ ನೆನಪುಗಳನ್ನು ಮರುಕಳಿಸುವಂತೆ ಮಾಡಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎನ್‌ಡಿಎ ಮೈತ್ರಿ ಕೂಟದಿಂದ ಕೇಂದ್ರ ಸಚಿವ ಕುಮಾರಸ್ವಾಮಿ ಹುಟ್ಟುಹಬ್ಬ ಆಚರಣೆ
ಪತ್ರಕರ್ತರಿಗೆ ಸ್ಪಂದಿಸುತ್ತಿದ್ದ ಶಾಮನೂರು ಸದಾ ಸ್ಮರಣೀಯ