ನಗರದಲ್ಲಿ ಇನ್ನೂ 2 ಸಾವಿರ ರಸ್ತೆ ಗುಂಡಿ ದುರಸ್ತಿ ಬಾಕಿ: ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್

KannadaprabhaNewsNetwork | Updated : Sep 14 2024, 09:52 AM IST

ಸಾರಾಂಶ

ಬೆಂಗಳೂರಿನಲ್ಲಿ ಇನ್ನೂ 2 ಸಾವಿರ ರಸ್ತೆ ಗುಂಡಿಗಳು ಮುಚ್ಚಲು ಬಾಕಿ ಇವೆ. ಇದಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ   ತುಷಾರ್‌ ಗಿರಿನಾಥ್ ಹೇಳಿದ್ದಾರೆ.

 ಬೆಂಗಳೂರು :  ನಗರದ ರಸ್ತೆಗಳಲ್ಲಿರುವ ಗುಂಡಿ ಮುಚ್ಚಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೆ.20ರವರೆಗೆ ಗಡುವು ನೀಡಿರುವ ಹಿನ್ನಲೆಯಲ್ಲಿ, ಬಾಕಿ ಉಳಿದಿರುವ ಸುಮಾರು 2 ಸಾವಿರ ರಸ್ತೆ ಗುಂಡಿಗಳನ್ನು ತ್ವರಿತವಾಗಿ ಮುಚ್ಚಿಸಲು ಪಾಲಿಕೆ ಸಕಲ ಸಿದ್ಧತೆ ನಡೆಸಿದೆ ಎಂದು ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದರು.

ಶುಕ್ರವಾರ ಮಹದೇವಪುರ ವಲಯದಲ್ಲಿ ರಸ್ತೆ ಗುಂಡಿ ಮುಚ್ಚುವ ಕಾರ್ಯಕ್ಕೆ ಪಾಲಿಕೆ ಅಧಿಕಾರಿಗಳು ಮತ್ತಷ್ಟು ವೇಗ ನೀಡಿದ್ದಾರೆ. ಮಹದೇಪುರ ವಲಯದ ಐಟಿಪಿಎಲ್ ರಸ್ತೆ ದೊಡ್ಡನೆಕುಂದಿ ಬಳಿ ರಸ್ತೆ ಗುಂಡಿ ಮುಚ್ಚುವ ಕಾರ್ಯವನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದರು. ಪಾಲಿಕೆ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಗಳು ರಸ್ತೆ ಕತ್ತರಿಸಿರುವ ಭಾಗ ಹೊರತುಪಡಿಸಿ, ಉಳಿದೆಲ್ಲಾ ಕಡೆ ರಸ್ತೆ ಗುಂಡಿ ಮುಚ್ಚುವ ಕಾರ್ಯ ಸಕ್ರಿಯವಾಗಿ ನಡೆಯುತ್ತಿದೆ.

ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಜಲಮಂಡಳಿ, ಬೆಸ್ಕಾಂ ಸೇರಿದಂತೆ ಇತರೆ ಇಲಾಖೆಗಳು ರಸ್ತೆ ಕತ್ತರಿಸಿರುವ ಭಾಗದಲ್ಲಿ ಕೆಲಸ ಪೂರ್ಣಗೊಂಡ ಬಳಿಕ ಸಂಬಂಧಪಟ್ಟ ಇಲಾಖೆಯಿಂದಲೇ ದುರಸ್ತಿ ಕಾರ್ಯ ಮಾಡಬೇಕಿರುತ್ತದೆ. ಈ ನಿಟ್ಟಿನಲ್ಲಿ ರಸ್ತೆ ಕತ್ತರಿಸುವ ಕಡೆ ಕಾಮಗಾರಿ ಪೂರ್ಣಗೊಂಡಲ್ಲಿ ಸದರಿ ಇಲಾಖೆಯಿಂದಲೇ ದುರಸ್ತಿ ಕಾರ್ಯ ಮಾಡಬೇಕಿದೆ.

ಮಹದೇವಪುರ ವಲಯದಲ್ಲಿ ‘ರಸ್ತೆ ಗುಂಡಿ ಗಮನ’ ಆ್ಯಪ್‌ ಹಾಗೂ ‘ಸಹಾಯ ತಂತ್ರಾಂಶ’ದಲ್ಲಿ ಬಂದ ದೂರುಗಳಿಗೆ ಸಂಬಂಧಿಸಿದಂತೆ ಬಹುತೇಕ ದೂರುಗಳನ್ನು ಈಗಾಗಲೇ ಪೂರ್ಣಗೊಳಿಸಲಾಗಿದೆ. ಅಲ್ಲದೆ ಎಂಜಿನಿಯರ್‌ಗಳೂ ರಸ್ತೆ ಪರಿಶೀಲಿಸಿ ರಸ್ತೆ ಗುಂಡಿ ಮುಚ್ಚುವ ಕೆಲಸ ಮಾಡುತ್ತಿದ್ದಾರೆ. ಈ ವಲಯ ಹೆಚ್ಚು ಕೈಗಾರಿಕಾ, ಖಾಸಗಿ ಸಂಸ್ಥೆಗಳನ್ನು ಹೊಂದಿದ್ದು, ಹೆಚ್ಚು ಸಂಚಾರ ದಟ್ಟಣೆ ಹೊಂದಿರುವ ಪ್ರದೇಶವಾಗಿದೆ. ಈ ನಿಟ್ಟಿನಲ್ಲಿ ಪ್ರಮುಖ ರಸ್ತೆಗಳಲ್ಲಿ ಎಲ್ಲಿಯೂ ಗುಂಡಿಗಳಿರದಂತೆ ದುರಸ್ತಿ ಕಾರ್ಯ ಮಾಡಲಾಗುತ್ತಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದರು.436 ಕಿ.ಮೀ ರಸ್ತೆಗೆ ಡಾಂಬರು

ಮಹದೇವಪುರ ವ್ಯಾಪ್ತಿಯಲ್ಲಿ 2,136 ಕಿ.ಮೀ ಉದ್ದದ ರಸ್ತೆಯ ಪೈಕಿ 4,36 ಕಿ.ಮೀ. ಉದ್ದದ 4348 ರಸ್ತೆಗಳಲ್ಲಿ ಮೇಲ್ಮೈ ಪದರ ಹಾಳಾಗಿದ್ದು, ಮರು ಡಾಂಬರೀಕರಣ ಮಾಡಬೇಕಿದೆ. ಈ ಸಂಬಂಧ ಕೆಲ ರಸ್ತೆಗಳಲ್ಲಿ ಡಾಂಬರೀಕರಣ ನಡೆಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಡಾಂಬರೀಕರಣ ಮಾಡಬೇಕಿರುವ ರಸ್ತೆಗಳನ್ನು ಹಂತ-ಹಂತವಾಗಿ ಪೂರ್ಣಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಲಾಗುವುದೆಂದು ಮುಖ್ಯ ಅಭಿಯಂತರ ಲೋಕೇಶ್ ತಿಳಿಸಿದರು.

42 ಹಳ್ಳಿಗಳ ಬಾಕಿ 150  ಕಿ.ಮೀ. ರಸ್ತೆ ಅಭಿವೃದ್ಧಿ

ಬಿಬಿಎಂಪಿ ವ್ಯಾಪ್ತಿಗೆ ಒಳಪಡುವ 110 ಹಳ್ಳಿಗಳ ಪೈಕಿ ಮಹದೇವಪುರ ವಲಯ ವ್ಯಾಪ್ತಿಯಲ್ಲಿ 42 ಹಳ್ಳಿಗಳಿದ್ದು, 748.68 ಕಿ.ಮೀ ಉದ್ದದ ರಸ್ತೆಗಳು ಬರಲಿವೆ. ಈ ಪೈಕಿ ಈಗಾಗಲೇ 598.68 ಕಿ.ಮೀ ಉದ್ದದ ರಸ್ತೆ ಅಭಿವೃದ್ಧಿಯಾಗಿದ್ದು, ಬಾಕಿ 150 ಕಿ.ಮೀ ಉದ್ದದ ರಸ್ತೆ ಅಭಿವೃದ್ಧಿಯಾಗಬೇಕಿದೆ.ರಸ್ತೆ ಗುಂಡಿ ಮುಚ್ಚುವ ಕಾರ್ಯಪರಿಶೀಲಿಸಿದ ಮುಖ್ಯ ಆಯುಕ್ತ

ನಗರದ ದಕ್ಷಿಣ ವಲಯದ ಲಾಲ್‌ಬಾಗ್ ಮುಖ್ಯ ರಸ್ತೆ ಸಿದ್ದಾಪುರ ಜಂಕ್ಷನ್‌ ರಸ್ತೆ ಮೇಲ್ಮೈ ಪದರ ಹಾಳಾಗಿದ್ದು, ಶುಕ್ರವಾರ ರಾತ್ರಿ ಅದಕ್ಕೆ ಡಾಂಬರೀಕರಣ ಹಾಕುವುದನ್ನು‌ ಪರಿಶೀಲಿಸಿ, ಗುಣಮಟ್ಟ ಕಾಪಾಡುವಂತೆ ಪಾಲಿಕೆ ಅಧಿಕಾರಿಗಳಿಗೆ ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್ ಸೂಚಿಸಿದರು.ನಗರದ ಪ್ರಮುಖ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳು ಹಾಗೂ ಪಾಲಿಕೆ ವತಿಯಿಂದ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಶುಕ್ರವಾರ ರಾತ್ರಿ ಪರಿಶೀಲನೆ ನಡೆಸಿದರು. ಈ ವೇಳೆ ವಲಯ ಆಯುಕ್ತೆ ವಿನೋತ್ ಪ್ರಿಯಾ, ಜಂಟಿ ಆಯುಕ್ತ ಶಿವಕುಮಾರ್, ಪ್ರಧಾನ ಅಭಿಯಂತರ ಪ್ರಹ್ಲಾದ್, ಮುಖ್ಯ ಅಭಿಯಂತರ ರಾಜೇಶ್, ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Share this article