ಕಿತ್ತೂರು ಕರ್ನಾಟಕದಿಂದ 2.4 ಲಕ್ಷ ವಿದ್ಯಾರ್ಥಿಗಳ ಪರೀಕ್ಷೆ

KannadaprabhaNewsNetwork | Published : Mar 20, 2025 1:16 AM

ಸಾರಾಂಶ

ಮಾ.21ರಿಂದ ಆರಂಭಗೊಳ್ಳುವ ಎಸ್ಎಸ್ಎಲ್‌ಸಿ ವಾರ್ಷಿಕ ಪರೀಕ್ಷೆಗೆ ಕಿತ್ತೂರು ಕರ್ನಾಟಕ ಶೈಕ್ಷಣಿಕ ವಲಯದ 9 ಜಿಲ್ಲೆಗಳಿಂದ ಒಟ್ಟು 2,41,150 ವಿದ್ಯಾರ್ಥಿಗಳು ಹಾಜರು

ಕನ್ನಡಪ್ರಭವಾರ್ತೆ ಬೆಳಗಾವಿ

ಮಾ.21ರಿಂದ ಆರಂಭಗೊಳ್ಳುವ ಎಸ್ಎಸ್ಎಲ್‌ಸಿ ವಾರ್ಷಿಕ ಪರೀಕ್ಷೆಗೆ ಕಿತ್ತೂರು ಕರ್ನಾಟಕ ಶೈಕ್ಷಣಿಕ ವಲಯದ 9 ಜಿಲ್ಲೆಗಳಿಂದ ಒಟ್ಟು 2,41,150 ವಿದ್ಯಾರ್ಥಿಗಳು ಹಾಜರಾಗಲಿದ್ದು, ಈ ಪೈಕಿ 1,22,598 ಬಾಲಕರು ಹಾಗೂ 1,18,552 ಬಾಲಕಿಯರು ಪರೀಕ್ಷೆ ಬರೆಯಲಿದ್ದಾರೆಂದು ಶಾಲಾ ಶಿಕ್ಷಣ ಇಲಾಖೆಯ ಕಿತ್ತೂರು ಕರ್ನಾಟಕ ಶೈಕ್ಷಣಿಕ ವಲಯದ (ಬೆಳಗಾವಿ ವಿಭಾಗದ) ಹೆಚ್ಚುವರಿ ಆಯುಕ್ತರಾದ ಜಯಶ್ರೀ ಶಿಂತ್ರಿ ತಿಳಿಸಿದ್ದಾರೆ.

ಪ್ರಸ್ತುತ ಕಿತ್ತೂರು ಕರ್ನಾಟಕ ಭಾಗದ 9 ಜಿಲ್ಲೆಗಳಲ್ಲಿ 1449 ಸರ್ಕಾರಿ, 1217 ಅನುದಾನಿತ ಹಾಗೂ 1205 ಅನುದಾನ ರಹಿತ ಪ್ರೌಢ ಶಾಲೆಗಳು ಸೇರಿ ಒಟ್ಟು 3871 ಶಾಲೆಗಳಲ್ಲಿ 2024-25ರಲ್ಲಿ ಒಟ್ಟು 2,54.965 ವಿದ್ಯಾರ್ಥಿಗಳು ಎಸ್ಎಸ್ಎಲ್‌ಸಿ ವ್ಯಾಸಂಗ ಮಾಡುತ್ತಿದ್ದಾರೆ. ಈ ಪೈಕಿ 1,28,964 ಬಾಲಕರು ಹಾಗೂ 1,26,001 ಬಾಲಕಿಯರಿದ್ದಾರೆ. ಇದರಲ್ಲಿ ವಿಜಯಪೂರ-40626, ಬಾಗಲಕೋಟೆ-33209, ಬೆಳಗಾವಿ-33072, ಧಾರವಾಡ-28666 , ಗದಗ-16458 , ಹಾವೇರಿ-24736 , ಉತ್ತರಕನ್ನಡ -9180 , ಶೈಕ್ಷಣಿಕ ಜಿಲ್ಲೆಗಳಾದ ಶಿರಸಿಯಲ್ಲಿ 9963 ಮತ್ತು ಚಿಕ್ಕೋಡಿಯಲ್ಲಿ 45240 ವಿದ್ಯಾರ್ಥಿಗಳು ಈ ಬಾರಿಯ ಪರೀಕ್ಷೆಗೆ ಹಾಜರಾಗಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪರೀಕ್ಷಾ ಕೇಂದ್ರಗಳು:

ಕಿತ್ತೂರು ಕರ್ನಾಟಕ ಭಾಗದ 9 ಜಿಲ್ಲೆಗಳ ವ್ಯಾಪ್ತಿಯಲ್ಲಿ ಒಟ್ಟು 773 ಪರೀಕ್ಷಾ ಕೇಂದ್ರಗಳಿವೆ. ಕೊಠಡಿ ಮೇಲ್ವಿಚಾರಕರು, ಪರೀಕ್ಷಾ ಕೇಂದ್ರಗಳ ಅಧೀಕ್ಷಕರು, ವಿವಿಧ ಅಧಿಕಾರಿಗಳು ಸೇರಿ ಒಟ್ಟು 15486 ಸಿಬ್ಬಂದಿ ಸುಗಮ ಪರೀಕ್ಷಾ ಸಂಘಟನೆಗೆ ನಿಯೋಜಿಸಲಾಗಿದೆ. ಒಟ್ಟು 156 ಅಧಿಕಾರಿಗಳನ್ನು ಒಳಗೊಂಡ 52 ವಿಚಕ್ಷಕ ದಳ ರಚಿಸಲಾಗಿದ್ದು ಇವರು ನಿರಂತರವಾಗಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ. 9 ಜಿಲ್ಲೆಗಳ ವ್ಯಾಪ್ತಿಯಲ್ಲಿ ಎಸ್ಎಸ್ಎಲ್‌ಸಿ ಪರೀಕ್ಷೆಗೆಂದೇ ಒಟ್ಟು 400 ವಾಹನಗಳನ್ನು ಬಳಸಿಕೊಳ್ಳಲಾಗುತ್ತಿದೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ 45240 ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು, ಇಲ್ಲಿ 130 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಉತ್ತರಕನ್ನಡ ಜಿಲ್ಲೆಯಲ್ಲಿ ಅತಿ ಕಡಿಮೆ ಅಂದರೆ 9180 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಇಲ್ಲಿ 37 ಪರೀಕ್ಷಾ ಕೇಂದ್ರಗಳಿವೆ ಎಂದೂ ಜಯಶ್ರೀ ಶಿಂತ್ರಿ ಮಾಹಿತಿ ನೀಡಿದ್ದಾರೆ.

ವೆಬ್ ಕಾಸ್ಟಿಂಗ್ ಜಾಲಬಂಧ:

ಸರಕಾರದ ಆದೇಶದಂತೆ ರಾಜ್ಯದೆಲ್ಲೆಡೆ ವೆಬ್ ಕಾಸ್ಟಿಂಗ್ ಜಾಲಬಂಧ ರಚಿಸಲಾಗಿದೆ. ವಿಭಾಗದ 9 ಜಿಲ್ಲೆಗಳ 773 ಪರೀಕ್ಷಾ ಕೇಂದ್ರಗಳನ್ನು ವೆಬ್ ಕಾಸ್ಟಿಂಗ್ ಜಾಲಬಂಧಕ್ಕೆ ಅಳವಡಿಸಲಾಗಿದೆ. ಪ್ರತೀ ಪರೀಕ್ಷಾ ಕೇಂದ್ರದ ಎಲ್ಲಾ ಕೊಠಡಿಗಳಲ್ಲಿಯ ವಿದ್ಯಮಾನಗಳ ಮೇಲೆ ಜಿಲ್ಲಾ ಮಟ್ಟದ ವೆಬ್ ಕಾಸ್ಟಿಂಗ್ ವೀಕ್ಷಣಾ ಕೇಂದ್ರಗಳ ಸಿಬ್ಬಂದಿಯವರು ನಿರಂತರ ನಿಗಾವಹಿಸಿರುತ್ತಾರೆ. ತಾಲೂಕು ಮತ್ತು ಜಿಲ್ಲಾ ಹಂತದ ಜೊತೆಗೆ ಕಲಬುರ್ಗಿ ಮತ್ತು ಧಾರವಾಡದ ಅಪರ ಆಯುಕ್ತರ ಕಚೇರಿಗಳಲ್ಲಿ ಮತ್ತು ರಾಜ್ಯ ಮಟ್ಟದಲ್ಲಿಯೂ ವೆಬ್ ಕಾಸ್ಟಿಂಗ್ ಜಾಲಬಂಧದ ಮೂಲಕ ರಾಜ್ಯದ ಯಾವುದೇ ಪರೀಕ್ಷಾ ಕೇಂದ್ರವನ್ನು ವೀಕ್ಷಿಸುವ ಅವಕಾಶವನ್ನು ಹೊಂದಲಾಗಿದೆ ಎಂದೂ ಅವರು ತಿಳಿಸಿದ್ದಾರೆ.

ಪಾರದರ್ಶಕ ಪರೀಕ್ಷೆ:

ಈಗಾಗಲೇ 9 ಜಿಲ್ಲೆಗಳ ಇಲಾಖೆಯ ಎಲ್ಲಾ ಹಂತಗಳ ಅಧಿಕಾರಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ನಿಯಮಾನುಸಾರ ಸಂಪೂರ್ಣ ಪಾರದರ್ಶಕ ನೆಲೆಯಲ್ಲಿ ನಡೆಸುವಂತೆ ತಿಳಿವಳಿಕೆ ನೀಡಿದ್ದಾರೆ. ಪರೀಕ್ಷಾ ಕೇಂದ್ರಗಳಿಗೆ ನಿಯೋಜನೆಗೊಂಡಿರುವ ಸಿಬ್ಬಂದಿಗೆ ಸೂಕ್ತ ತರಬೇತಿಯನ್ನೂ ನೀಡಲಾಗಿದೆ. ಇಲಾಖಾ ನಿಯಮಗಳನ್ನು ಮೀರಿ ಪರೀಕ್ಷಾ ಅಕ್ರಮಗಳು ಕಂಡು ಬಂದರೆ ಸಂಬಂಧಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿ ಮೇಲೆ ಸೂಕ್ತ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರಾದ ಜಯಶ್ರೀ ಶಿಂತ್ರಿ ಎಚ್ಚರಿಸಿದ್ದಾರೆ.

Share this article