ಮುಂಗಾರು ಹಂಗಾಮಿನಲ್ಲಿ 2.82 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿ

KannadaprabhaNewsNetwork |  
Published : May 25, 2026, 02:15 AM IST
ಟ್ರ್ಯಾಕ್ಟರ್‌ ಮೂಲಕ ಉಳುಮೆ ಮಾಡುತ್ತಿರುವ ರೈತ | Kannada Prabha

ಸಾರಾಂಶ

ಹಲವು ನಿರೀಕ್ಷೆಗಳೊಂದಿಗೆ ಮುಂಗಾರು ಕೃಷಿ ಹಂಗಾಮು ಆಗಮಿಸಿದ್ದು, ರೈತರು ಬಿತ್ತನೆಗೆ ಬೇಕಾದ ಸಿದ್ಧತೆಯಲ್ಲಿದ್ದಾರೆ. ಕೃಷಿ ಇಲಾಖೆಯು ಈ ಬಾರಿ 2.82 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿ, ಅಗತ್ಯ ಬೀಜ, ರಸಗೊಬ್ಬರದ ತಯಾರಿಯಲ್ಲಿದೆ.

ವಿಶೇಷ ವರದಿ

ಧಾರವಾಡ: ಹಲವು ನಿರೀಕ್ಷೆಗಳೊಂದಿಗೆ ಮುಂಗಾರು ಕೃಷಿ ಹಂಗಾಮು ಆಗಮಿಸಿದ್ದು, ರೈತರು ಬಿತ್ತನೆಗೆ ಬೇಕಾದ ಸಿದ್ಧತೆಯಲ್ಲಿದ್ದಾರೆ. ಕೃಷಿ ಇಲಾಖೆಯು ಈ ಬಾರಿ 2.82 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿ, ಅಗತ್ಯ ಬೀಜ, ರಸಗೊಬ್ಬರದ ತಯಾರಿಯಲ್ಲಿದೆ.

ಒಂದು ತಿಂಗಳ ಅಂತರದಲ್ಲಿ ಆಗಾಗ ಅಡ್ಡ ಮಳೆಗಳಾಗಿದ್ದು ರೈತರು ತಮ್ಮ ಭೂಮಿಯನ್ನು ಮುಂಗಾರು ಹಂಗಾಮಿಗೆ ಹದಗೊಳಿಸಿದ್ದಾರೆ. ಜೊತೆಗೆ ಎರಡು ದಿನಗಳಲ್ಲಿ ವಾತಾವರಣದಲ್ಲಿ ಬದಲಾವಣೆಯಾಗಿದ್ದು, ಮೋಡ ಮುಸುಕಿದ, ಸಾಧಾರಣ ಮಳೆಯಾಗುತ್ತಿದ್ದು ಮಲೆನಾಡಿನ ಅಳ್ನಾವರ, ಕಲಘಟಗಿ ಭಾಗದಲ್ಲಿ ಈಗಾಗಲೇ ಭತ್ತ ಬಿತ್ತನೆ ಕಾರ್ಯ ನಡೆದಿದ್ದು, ಬೆಳುವಲದಲ್ಲಿ ಜೂನ್‌ ಮೊದಲ ವಾರದಿಂದ ಬಿತ್ತನೆ ಶುರುವಾಗಲಿದೆ.

ಪ್ರಸಕ್ತ ಸಾಲಿಗೆ ಅಳ್ನಾವರ ತಾಲೂಕಿನ 5,654 ಹೆಕ್ಟೇರ್, ಧಾರವಾಡ ತಾಲೂಕಿನ 57,855 ಹೆಕ್ಟೇರ್, ಕಲಘಟಗಿ ತಾಲೂಕಿನ 37,817 ಹೆಕ್ಟೇರ್‌, ಹುಬ್ಬಳ್ಳಿ ತಾಲೂಕಿನ 37,594 ಹೆಕ್ಟೇರ್, ಹುಬ್ಬಳ್ಳಿ ಶಹರ ತಾಲೂಕಿನ 6,810 ಹೆಕ್ಟೇರ್, ಕುಂದಗೋಳ ತಾಲೂಕಿನ 52,150 ಹೆಕ್ಟೇರ್‌, ನವಲಗುಂದದಲ್ಲಿ 58,843 ಹೆಕ್ಟೇರ್‌ ಮತ್ತು ಅಣ್ಣಿಗೇರಿ ತಾಲೂಕಿನ 26,554 ಹೆಕ್ಟೇರ್‌ ಭೂಪ್ರದೇಶ ಸೇರಿದಂತೆ ಧಾರವಾಡ ಜಿಲ್ಲೆಯಲ್ಲಿ ಒಟ್ಟು 2,82,677 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ.

ಬಿತ್ತನೆ ಬೀಜ ದಾಸ್ತಾನು

ಕೃಷಿ ಇಲಾಖೆ ಮಾಹಿತಿ ಪ್ರಕಾರ, 2026-27 ನೇ ಸಾಲಿನ ಮುಂಗಾರು ಹಂಗಾಮಿಗೆ ಬಿತ್ತನೆ ಗುರಿ ಹೊಂದಿರುವ ವಿವಿಧ ಪ್ರಕಾರದ ಬಿತ್ತನೆ ಬೀಜಗಳನ್ನು ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಹೊಂದಲಾಗಿದೆ. ಧಾರವಾಡ ಜಿಲ್ಲೆಯಲ್ಲಿ ಸೋಯಾಅವರೆ 11,123.89 ಕ್ವಿಂಟಲ್ ಬಿತ್ತನೆ ಗುರಿಹೊಂದಿದ್ದು, ಸದ್ಯ 2764.2 ಕ್ವಿಂಟಾಲ್ ದಾಸ್ತಾನಿದೆ. ಶೇಂಗಾ 936.25 ಕ್ವಿಂಟಾಲ್ ಬಿತ್ತನೆ ಗುರಿ ಪೈಕಿ 240 ಕ್ವಿಂಟಾಲ್ ದಾಸ್ತಾನಿದೆ. ಉದ್ದು 422.45 ಕ್ವಿಂಟಾಲ್ ಬಿತ್ತನೆ ಗುರಿ ಪೈಕಿ 133.2 ಕ್ವಿಂಟಾಲ್ ದಾಸ್ತಾನಿದೆ.ಮುಸುಕಿನ ಜೋಳ 2,397.29 ಕ್ವಿಂಟಲ್, ಹೆಸರು 1050.21 ಕ್ವಿಂಟಲ್, ಭತ್ತ 189.54 ಕ್ವಿಂಟಲ್, ತೊಗರಿ 37.04 ಕ್ವಿಂಟಲ್, ಅಲಸಂಧಿ 0.10 ಕ್ವಿಂಟಲ್ ಮತ್ತು ಸೂರ್ಯಕಾಂತಿ 0.28 ಕ್ವಿಂಟಾಲ್ ಬಿತ್ತನೆ ಗುರಿ ಹೊಂದಲಾಗಿದೆ.

31 ಕೇಂದ್ರಗಳಲ್ಲಿ ಬೀಜ ಮಾರಾಟ

ಜಿಲ್ಲೆಯ ರೈತರಿಗೆ ಅಗತ್ಯವಿರುವ ವಿವಿಧ ಪ್ರಕಾರದ ಬೀಜಗಳನ್ನು ವಿವಿಧ ತಾಲೂಕಿನ ರೈತ ಸಂಪರ್ಕ ಕೇಂದ್ರಗಳು ಹಾಗೂ ಹೆಚ್ಚುವರಿ ಕೇಂದ್ರಗಳ ಮೂಲಕ ವಿತರಿಸಲು ಕ್ರಮವಹಿಸಲಾಗಿದೆ. 14 ರೈತ ಸಂಪರ್ಕ ಕೇಂದ್ರಗಳು ಮತ್ತು 17 ಹೆಚ್ಚುವರಿ ಕೇಂದ್ರಗಳ ಮೂಲಕ ಕೃಷಿ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಬೀಜ ವಿತರಿಸಲಿದ್ದಾರೆ. ರೈತರು ಕಡ್ಡಾಯವಾಗಿ ತಮ್ಮ ಪ್ರೂಟ್ ಐಡಿ ಸಂಖ್ಯೆಯನ್ನು ನೀಡಿ, ಬೀಜ ಖರೀದಿಸಬೇಕು ಎಂದು ಕೃಷಿ ಇಲಾಖೆ ಈಗಾಗಲೇ ರೈತ ಸಮುದಾಯಕ್ಕೆ ಮಾಹಿತಿ ನೀಡಿದೆ.

6 ಸಾವಿರ ಟನ್‌ ಗೊಬ್ಬರ ದಾಸ್ತಾನು

ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ (ಜೂನ್‍ದಿಂದ ಸಪ್ಟೆಂಬರ್) ಯೂರಿಯಾ ರಸಗೊಬ್ಬರ 27,642 ಟನ್ ಬೇಡಿಕೆ ಅಂದಾಜಿಸಿದ್ದು, ಹಿಂದಿನ ಉಳಿಕೆ ಹಾಗೂ ಪ್ರಸಕ್ತ ವರ್ಷದ ಪೂರೈಕೆ ಸೇರಿ ಏಪ್ರಿಲ್‍ ವರೆಗೆ 9718.00 ಮೆಟ್ರಿಕ್ ಟನ್ ಯೂರಿಯಾ ರಸಗೊಬ್ಬರ ದಾಸ್ತಾನು ಇತ್ತು. ಏಪ್ರಿಲ್ ತಿಂಗಳಿಂದ ಮೇ 21 ರವರೆಗೆ 3,106.04 ಮೆಟ್ರಿಕ್ ಟನ್ ರಸಗೊಬ್ಬರ ಮಾರಾಟವಾಗಿದೆ. ಗೋದಾಮುಗಳು ಮತ್ತು ಮಾರಾಟ ಕೇಂದ್ರಗಳಲ್ಲಿ ಒಟ್ಟು 6,612.62 ಮೆಟ್ರಿಕ್ ಟನ್ ಯೂರಿಯಾ ರಸಗೊಬ್ಬರದ ದಾಸ್ತಾನು ಲಭ್ಯವಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಮಾಹಿತಿ ನೀಡಿದರು.

ಯಾವುದು ಎಷ್ಟೇಷ್ಟು?

ಡಿಎಪಿ ರಸಗೊಬ್ಬರ 4,526.72, ಪೋಟ್ಯಾಷ ರಸಗೊಬ್ಬರ 2,562.16, ಕಾಂಪ್ಲೆಕ್ಸ್ ರಸಗೊಬ್ಬರ 11,299.31, ಎಸ್.ಎಸ್.ಪಿ. ರಸಗೊಬ್ಬರ 453.95 ದಾಸ್ತಾನು ಇದೆ. ಒಟ್ಟಾರೆ ಧಾರವಾಡ ಜಿಲ್ಲೆಯಲ್ಲಿ ಯೂರಿಯಾ ಸೇರಿದಂತೆ ವಿವಿಧ ರಸಗೊಬ್ಬರಗಳು 24,793.76 ಮೆಟ್ರಿಕ್ ಟನ್ ದಾಸ್ತಾನು ಲಭ್ಯವಿದೆ. ಅಗತ್ಯಕ್ಕೆ ಅನುಗುಣವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಿಲ್ಲೆಗೆ ರಸಗೊಬ್ಬರಗಳನ್ನು ಪೂರೈಕೆ ಮಾಡುತ್ತಿದ್ದು, ಪ್ರತಿವಾರ ಬೇಡಿಕೆಗೆ ಅನುಗುಣವಾಗಿ ರಸಗೊಬ್ಬರದ ಸಾಗಾಣಿಕೆ ಪಡೆಯಲು ಕ್ರಮವಹಿಸಲಾಗಿದೆ. ಜಿಲ್ಲೆಯಲ್ಲಿ ರಸಗೊಬ್ಬರ ಪರವಾನಗಿ ಇರುವ 288 ಸಕ್ರಿಯ ಮಾರಾಟ ಕೇಂದ್ರಗಳಿವೆ. ಇವುಗಳ ಮೂಲಕ ಕೆ- ಕಿಸಾನ್ ತಂತ್ರಾಂಶದಲ್ಲಿ ದಾಖಲಿಸಿ, ವಿತರಿಸಲಾಗುತ್ತದೆ ಎಂದು ಅಂತರವಳ್ಳಿ ತಿಳಿಸಿದರು.

ರೈತರು ಬಿತ್ತನೆಗೆ ಅವಸರ ಮಾಡದೇ ಭೂಮಿ ಬಿತ್ತನೆಗೆ ಯೋಗ್ಯ, ಹದ ಮತ್ತು ತೇವಾಂಶ ಹೊಂದಿರುವಾಗ ಬಿತ್ತನೆ ಮಾಡಬೇಕು. ಆದಷ್ಟು ಕಾಳು ರಸಗೊಬ್ಬರಕ್ಕಿಂತ ನ್ಯಾನೊ ಯೂರಿಯಾ ಮತ್ತು ಡಿಎಪಿ ರಸಗೊಬ್ಬರಗಳನ್ನು ಬಳಸಬೇಕು. ಇದರಿಂದ ಉತ್ತಮ ಇಳುವರಿ ಮತ್ತು ಫಲಿತಾಂಶ ಬರುತ್ತದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್‌ ಆರ್‌. ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಟ್ಕಳದಲ್ಲಿ ಗುಡುಗು ಸಿಡಿಲು ಸಹಿತ ಭಾರೀ ಮಳೆ: ಹೊಳೆಯಾದ ಹೆದ್ದಾರಿಗೆ ತೋಡಿದ ರಸ್ತೆ
29ರಿಂದ ಶಾಲಾರಂಭ, ಪುಸ್ತಕಗಳು ಸಿದ್ಧ