ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಕಳೆದ 2024-25ನೇ ಹಂಗಾಮಿನಲ್ಲಿ ಕಬ್ಬು ಪೂರೈಸಿದ ರೈತರಿಗೆ ನೀಡಬೇಕಾದ ಬಾಕಿ ಹಣವನ್ನು ಸಂಪೂರ್ಣವಾಗಿ ಪಾವತಿಸುವಂತೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಅವರು ಸಕ್ಕರೆ ಕಾರ್ಖಾನೆಗಳಿಗೆ ಎರಡು ದಿನಗಳ ಕಾಲ ಗಡುವು ನೀಡಿದರು.ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಬುಧವಾರ ನಡೆದ ಸಕ್ಕರೆ ಕಾರ್ಖಾನೆ ಮಾಲೀಕರ, ವ್ಯವಸ್ಥಾಪಕ ನಿರ್ದೇಶಕರುಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರೈತರಿಗೆ ನೀಡಬೇಕಾದ ಬಾಕಿ ಬಿಲ್ಲಿನ ಮಾಹಿತಿಯನ್ನು ಜಿಲ್ಲಾಡಳಿತ ಹಾಗೂ ಸಕ್ಕರೆ ಆಯುಕ್ತರಿಗೆ ಸರಿಯಾಗಿ ಮಾಹಿತಿ ನೀಡುತ್ತಿಲ್ಲ. ಅಲ್ಲದೇ ರೈತರಿಗೆ ಬಿಲ್ ಪಾವತಿ ಮಾಡಿರುವ ಬಗ್ಗೆಯೂ ಸರಿಯಾದ ಮಾಹಿತಿ ನೀಡುತ್ತಿಲ್ಲ. ಇನ್ನು ಎರಡು ದಿನಗಳಲ್ಲಿ ರೈತರಿಗೆ ನೀಡಬೇಕಾಗ ಬಾಕಿ ಹಣ ಸಂಪೂರ್ಣ ಪಾವತಿಯಾಗಬೇಕು. ಈ ಬಗ್ಗೆ ತಹಸೀಲ್ದಾರರು ಪಾವತಿಯಾದ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡುವಂತೆ ಸೂಚನೆ ನೀಡಿದರು.ಜಿಲ್ಲೆಯ 12 ಸಕ್ಕರೆ ಕಾರ್ಖಾನೆಗಳು ಕಬ್ಬಿನ ಬಿಲ್ ಪಾವತಿಗೆ ಬಾಕಿ ಉಳಿಸಿಕೊಂಡಿದ್ದು, ಇದರಲ್ಲಿ 5 ಕಾರ್ಖಾನೆ ಮಾಲೀಕರು ಬಿಲ್ ಪಾವತಿಗೆ ಕಾಲಾವಕಾಶ ಕೋರಿ ಹೈಕೋರ್ಟ್‌ಗೆ ರಿಟ್ ಅರ್ಜಿ ದಾಖಲಿಸಿರುವ ಮಾಹಿತಿಯನ್ನು ಜಿಲ್ಲಾಧಿಕಾರಿ ಪಡೆದುಕೊಂಡರು.
ರೈತರು ಸಂಕಷ್ಟದಲ್ಲಿದ್ದಾರೆ, ಪ್ರತಿ ಬಾರಿಯೂ ಕಬ್ಬು ಪೂರೈಸಿದ ರೈತರಿಗೆ ಬಿಲ್ ಪಾವತಿಸುವಲ್ಲಿ ಕಾರ್ಖಾನೆಯವರು ವಿಳಂಬ ಮಾಡುತ್ತಿದ್ದೀರಿ. ನಿಮ್ಮ ಸಮಸ್ಯೆಗಿಂತ ರೈತರ ಸಮಸ್ಯೆ ಬಹಳಷ್ಟು ಇವೆ. ನಿಗದಿತ ಅವಧಿಯಲ್ಲಿ ಬಿಲ್ ಪಾವತಿ ಮಾಡದಿದ್ದರೇ ಹೇಗೆ ಎಂಬ ಪ್ರಶ್ನೆ ಮಾಡಿದರು. ಯಾವುದೇ ರೀತಿಯಲ್ಲಿ ಕಾಲಾವಕಾಶ ಕೊಡಲು ಅವಕಾಶ ನೀಡಲ್ಲ. ಎರಡು ದಿನಗಳಲ್ಲಿ ರೈತರ ಬಾಕಿ ಹಣ ಸಂಪೂರ್ಣ ಪಾವತಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.ಕಾರ್ಖಾನೆಗಳಿಗೆ ಕಬ್ಬು ಪೂರೈಸಿದ ರೈತರಿಗೆ ಬಾಕಿ ಹಣ ಪಾವತಿ ಕುರಿತಂತೆ ಸಕ್ಕರೆ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳು ಭೂಕಂದಾಯ ವಸೂಲಾತಿಗಾಗಿ ತಹಸೀಲ್ದಾರರಿಗೆ ಆದೇಶ ಜಾರಿ ಮಾಡಿದ್ದರೂ ಸಹ ವಸೂಲಾತಿ ಪ್ರಕ್ರಿಯೆ ಸಂಪೂರ್ಣವಾಗಿ ನಡೆಸದ ಹಾಗೂ ಈ ಬಗ್ಗೆ ಸರಿಯಾಗಿ ಮಾಹಿತಿ ನೀಡದ ಹಿನ್ನೆಲೆಯಲ್ಲಿ ತಹಸೀಲ್ದಾರರಿಗೆ ನೋಟಿಸ್ ಜಾರಿ ಮಾಡಲು ಡಿಸಿ ಸೂಚಿಸಿದರು. ಇನ್ನು ಎರಡು ದಿನಗಳಲ್ಲಿ ರೈತರ ಕಬ್ಬಿನ ಬಾಕಿ ಹಣ ಸಂಪೂರ್ಣವಾಗಿ ಪಾವತಿಗೆ ಕ್ರಮವಹಿಸಬೇಕು. ಕ್ರಮವಹಿಸದಿದ್ದರೆ ತಹಸೀಲ್ದಾರರ ಮೇಲೆ ಸೂಕ್ತ ಕ್ರಮಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.
ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕಾರ್ಖಾನೆಗಳು ಸರಿಯಾಗಿ ಕರ ಪಾವತಿಸುತ್ತಿಲ್ಲ. ಕಾರ್ಖಾನೆ ಮೆಜರಮೆಂಟ್ ಮಾಡಲು ಗ್ರಾಮ ಪಂಚಾಯಿತಿ ತಂಡ ಬಂದಾಗ ಸರಿಯಾದ ಸಹಕಾರ ನೀಡುತ್ತಿಲ್ಲ. ಕಾನೂನು ರೀತಿಯಲ್ಲಿ ಕರ ಪಾವತಿಯಾಗಬೇಕು. ವಾರದಲ್ಲಿ ಮೆಜರಮೆಂಟ್ ಮಾಡಲು ತಂಡ ಕಾರ್ಖಾನೆಗಳಿಗೆ ಬರಲಿದ್ದು, ಸಂಪೂರ್ಣ ಸಹಕಾರ ನೀಡಬೇಕು. ಇಲ್ಲವಾದಲ್ಲಿ ಸ್ವತಃ ತಾವೇ ಭೇಟಿ ನೀಡುವುದಾಗಿ ತಿಳಿಸಿದರು.ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ, ಆಯಾ ತಾಲೂಕಿನ ತಹಸೀಲ್ದಾರರು, ಆಹಾರ ಇಲಾಖೆಯ ಲೆಕ್ಕ ಅಧೀಕ್ಷಕ ಆರ್.ಎಸ್.ಚೌದರಿ ಸೇರಿದಂತೆ ವಿವಿಧ ಸಕ್ಕರೆ ಕಾರ್ಖಾನೆಗಳ ಮಾಲಿಕರು ಹಾಗೂ ವ್ಯವಸ್ಥಾಪಕ ನಿರ್ದೇಶಕರು ಉಪಸ್ಥಿತರಿದ್ದರು.