ಉಪ್ಪಿನಂಗಡಿ: ಸಿಡಿಲು ಬಡಿದು ೨ ಮನೆಗಳು ಭಾಗಶಃ ಹಾನಿ, ಒಬ್ಬರಿಗೆ ಗಾಯ

KannadaprabhaNewsNetwork | Published : Jun 6, 2024 12:30 AM

ಸಾರಾಂಶ

ಬಿ.ಟಿ. ಸಂಶುದ್ದೀನ್ ಅವರು ಹೊಸದಾಗಿ ಮನೆ ನಿರ್ಮಿಸಿದ್ದು, ಸರಳ ರೀತಿಯಲ್ಲಿ ಬುಧವಾರ ಬೆಳಗ್ಗೆ ಗೃಹ ಪ್ರವೇಶ ಮಾಡಿದ್ದರು. ಮನೆಗೆ ಪ್ರವೇಶ ಮಾಡಿದ ದಿನದಂದೇ ನಡೆದ ಅವಘಡದಿಂದ ಮನೆಯವರು ತೀರಾ ಆಘಾತಕ್ಕೆ ಒಳಗಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ಇಲ್ಲಿಗೆ ಸಮೀಪದ ಹಿರೇಬಂಡಾಡಿ ಗ್ರಾಮದ ಅಡೇಕಲ್ ಪೆರಾಬೆ ಎಂಬಲ್ಲಿ ಬುಧವಾರ ಮಧ್ಯಾಹ್ನ ಅಪ್ಪಳಿಸಿದ ಸಿಡಿಲಿಗೆ ೨ ಮನೆಗಳು ಭಾಗಶಃ ಹಾನಿಗೀಡಾಗಿದ್ದು, ವ್ಯಕ್ತಿಯೊಬ್ಬರು ಗಾಯಗೊಂಡು ಉಪ್ಪಿನಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ. ಈ ಪೈಕಿ ಒಂದು ಮನೆಯ ಗೃಹಪ್ರವೇಶ ಬುಧವಾರ ಬೆಳಗ್ಗೆಯಷ್ಟೇ ನಡೆದಿದ್ದು, ಅದೇ ದಿನ ಸಂಜೆ ಮನೆ ಸಿಡಿಲಿಗೆ ತುತ್ತಾಗಿದೆ.

ಉಪ್ಪಿನಂಗಡಿ ಪರಿಸರದಲ್ಲಿ ಸಂಜೆ ಕೆಲಹೊತ್ತು ಸಿಡಿಲು ಸಹಿತ ಸಾಧಾರಣ ಮಳೆಯಾಗಿದೆ.

ಪೆರಾಬೆಯ ನಿವಾಸಿ ಬಿ.ಟಿ. ಸುಲೈಮಾನ್ ಎಂಬವರ ಪುತ್ರ ಬಿ.ಟಿ. ಸಂಶುದ್ದೀನ್ ಮತ್ತು ಅವರ ಸಹೋದರ ಬಿ.ಟಿ. ಕರೀಂ ಎಂಬವರ ಮನೆಯ ಮೇಲೆ ಸಿಡಿಲು ಬಡಿದಿದೆ. ಸಂಶುದ್ದೀನ್ ಅವರಿಗೆ ಸಿಡಿಲು ಬಡಿದಿದ್ದು, ೨ ಕೈಗಳಿಗೆ ಗಾಯವಾಗಿದೆ. ಇವರನ್ನು ಉಪ್ಪಿನಂಗಡಿ ಸಮುದಾಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಮನೆಯ ಇನ್ನೊಂದು ಕೊಠಡಿಯಲ್ಲಿದ್ದ ಅವರ ತಾಯಿ, ಪತ್ನಿ ಮತ್ತು ಇಬ್ಬರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬಿ.ಟಿ. ಕರೀಂ ಮನೆಯಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ. ಸಿಡಿಲು ಬಡಿದ ಅಬ್ಬರಕ್ಕೆ ಬಿ.ಟಿ. ಸಂಶುದ್ದೀನ್ ಅವರ ಮನೆಯ ಗೋಡೆ ಮತ್ತು ನೆಲ ಬಿರುಕು ಬಿಟ್ಟಿದೆ. ಮನೆಯ ವಿದ್ಯುತ್ ಸಂಪರ್ಕದ ವೈರಿಂಗ್ ಸಂಪೂರ್ಣವಾಗಿ ಸುಟ್ಟು ಹೋಗಿದೆ. ಬಿ.ಟಿ. ಕರೀಂ ಅವರ ಮನೆಯಲ್ಲಿಯೂ ಹಾನಿ ಸಂಭವಿಸಿದೆ. ಗೃಹಪ್ರವೇಶ ನಡೆದ ದಿನವೇ ಸಂಭವಿಸಿದ ಅವಘಡ: ಬಿ.ಟಿ. ಸಂಶುದ್ದೀನ್ ಅವರು ಹೊಸದಾಗಿ ಮನೆ ನಿರ್ಮಿಸಿದ್ದು, ಸರಳ ರೀತಿಯಲ್ಲಿ ಬುಧವಾರ ಬೆಳಗ್ಗೆ ಗೃಹ ಪ್ರವೇಶ ಮಾಡಿದ್ದರು. ಮನೆಗೆ ಪ್ರವೇಶ ಮಾಡಿದ ದಿನದಂದೇ ನಡೆದ ಅವಘಡದಿಂದ ಮನೆಯವರು ತೀರಾ ಆಘಾತಕ್ಕೆ ಒಳಗಾಗಿದ್ದಾರೆ.ಸಿಡಿಲು ಬಡಿದು ದನ ಸಾವು

ಬೆಳ್ತಂಗಡಿ: ತಾಲೂಕಿನ ಕೊಯ್ಯೂರು ಗ್ರಾಮದ ಕೊಪ್ಪದಬೈಲು ಎಂಬಲ್ಲಿ ದನದ ಕೊಟ್ಟಿಗೆಗೆ ಸಿಡಿಲು ಬಡಿದು ದನವೊಂದು ಸಾವನ್ನಪ್ಪಿದ ಘಟನೆ ಬುಧವಾರ ಸಂಜೆ ಸಂಭವಿಸಿದೆ. ಇಲ್ಲಿನ ನಿವಾಸಿ ಬೇಬಿ ಪೂಜಾರಿ ಎಂಬವರಿಗೆ ಸೇರಿದ ಮನೆ ಸಿಡಿಲಿನ ಆಘಾತಕ್ಕೆ‌ ಬಲಿಯಾಗಿದೆ. ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ. ಬೆಳ್ತಂಗಡಿ ತಾಲೂಕಿನ ವಿವಿಧೆಡೆ ಸಾಧಾರಣ ಮಳೆಯಾಗಿದೆ.

Share this article