ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಕಾರೊಂದು ಆಕ್ಸಸ್ ಮೊಫೆಡ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದು ಮೊಫೆಡ್‌ನಲ್ಲಿದ್ದ ಇಬ್ಬರು ಸಾವನ್ನಪ್ಪಿದ ಘಟನೆ ತಾಲೂಕಿನ ಬೇಗೂರಿನ ಬಿಎಂಪಿ ಪ್ಯೂಯಲ್ಸ್ (ಪೆಟ್ರೋಲ್ ಬಂಕ್) ಬಳಿ ಶನಿವಾರ ಸಂಜೆ ನಡೆದಿದೆ. ತಾಲೂಕಿನ ಸೋಮಹಳ್ಳಿ ಗ್ರಾಮದ ನಾಗೇಂದ್ರ (೫೦) ಅಪಘಾತ ನಡೆದ ಸ್ಥಳದಲ್ಲೇ ಸಾವನ್ನಪ್ಪಿದರೆ, ಮಹದೇವಸ್ವಾಮಿ (೬೦) ಮೈಸೂರಿಗೆ ಸಾಗಿಸುವಾಗ ಮಾರ್ಗ ಮಧ್ಯೆ ನಂಜನಗೂಡು ಬಳಿ ಸಾವನ್ನಪ್ಪಿದ್ದಾರೆ.ಗುಂಡ್ಲುಪೇಟೆ ಕಡೆಯಿಂದ ಬರುತ್ತಿದ್ದಾಗ ಕೆಎ ೦೪ ಪಿ ೮೮೧೬ ನಂಬರಿನ ಕೆಂಪು ಬಣ್ಣದ ಮಹೀಂದ್ರ ಕಂಪನಿಯ ಕಾರು ಮೈಸೂರು ಕಡೆಗೆ ತೆರುತ್ತಿದ್ದಾಗ ಬೇಗೂರು ಬಿಎಂಪಿ ಪ್ಯೂಯಲ್ಸ್ ಮುಂದೆ ಹೋಗುತ್ತಿದ್ದ ಆಕ್ಸಸ್ ಮೊಫೆಡ್ ಕೆಎ ೦೯ ಇಡಬ್ಲ್ಯೂ ೦೭೦೧ ನಂಬರಿನ (ನಂಬರ್ ಸರಿಯಾಗಿ ಕಾಣುತ್ತಿಲ್ಲ) ಮೊಫೆಡ್‌ಗೆ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಮೊಫೆಡ್ ಮೇಲಿದ್ದ ಸವಾರರು ಹೆದ್ದಾರಿಯ ಬದಿಗೆ ಬಿದ್ದರು. ಮೊಫೆಡ್ ಸಂಪೂರ್ಣ ನಜ್ಜು ಗುಜ್ಜಾಗಿ, ಮೊಫೆಡ್ ಕೆಲ ಭಾಗಗಳು ಚೆಲ್ಲಾ ಪಿಲ್ಲಿಯಾಗಿ ಬಿದ್ದಿದೆ. ಅಪಘಾತದ ಸ್ಥಳದಲ್ಲಿದ್ದ ಸಾವನ್ನಪ್ಪಿದ ಸೋಮಹಳ್ಳಿಯ ನಾಗೇಂದ್ರನನ್ನು ಬೇಗೂರು ಸಮುದಾಯ ಆರೋಗ್ಯಕ್ಕೆ ಕೇಂದ್ರದ ಶವಾಗಾರಕ್ಕೆ ಪೊಲೀಸರು ಸಾಗಿಸಿದ್ದಾರೆ. ತೀವ್ರವಾಗಿ ಗಾಯಗೊಂಡ ಗಾಯಾಳು ಮಹದೇವಸ್ವಾಮಿಯನ್ನು ೧೦೮ ವಾಹನದ ಮೂಲಕ ಮೈಸೂರಿಗೆ ಕರೆದುಕೊಂಡು ಹೋಗುವಾಗ ಮಾರ್ಗ ಮದ್ಯೆ ನಂಜನಗೂಡು ಬಳಿ ಪ್ರಾಣ ಹೋಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕಾರು ಪರಾರಿ: ಆಕ್ಸಸ್ ಮೊಫೆಡ್ ಡಿಕ್ಕಿ ಹೊಡೆದು ಇಬ್ಬರ ಸಾವಿಗೆ ಕಾರಣವಾದ ಎನ್ನಲಾದ ಕಾರು ಅಪಘಾತದ ಸ್ಥಳದಿಂದ ಪರಾರಿಯಾಗಿದೆ. ಈ ಸಂಬಂಧ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.ತಡವಾಗಿ ಬಂದ ಪೊಲೀಸರು?: ಬೇಗೂರು ಬಿಎಂಪಿ ಪ್ಯೂಯಲ್ಸ್ ಮುಂದೆ ಅಪಘಾತದಲ್ಲಿ ಸ್ಥಳದಲ್ಲೇ ಸಾವನ್ನಪ್ಪಿ, ಓರ್ವ ತೀವ್ರ ಸ್ವರೂಪದ ಗಾಯವಾದ ಘಟನೆ ನಡೆದರೂ ಬೇಗೂರು ಪೊಲೀಸರು ಅಪಘಾತ ನಡೆದ ಸ್ಥಳಕ್ಕೆ ತಡವಾಗಿ ಬಂದರೆಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ. ಬೇಗೂರಲ್ಲೇ ಪೊಲೀಸ್ ಠಾಣೆ ಇದೆ, ಎಸ್‌ಐ, ಸರ್ಕಲ್ ಇನ್ಸ್‌ಪೆಕ್ಟರ್ ಠಾಣೆ ಇದ್ದರೂ ಅಪಘಾತದ ನಡೆದ ಸ್ಥಳ ಒಂದು ಕಿಮೀನಷ್ಟು ದೂರವಿದ್ದರೂ ಪೊಲೀಸರು ತಡವಾಗಿ ಬಂದಿದ್ದು ಪೊಲೀಸರ ನಿರ್ಲಕ್ಷ್ಯ ವಲ್ಲವೇ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.