ಹೊಸಪೇಟೆ:
ವಿಜಯನಗರ ಜಿಲ್ಲೆಯಲ್ಲಿ 2 ಲಕ್ಷ 69 ಸಾವಿರ ಹೆಕ್ಟೇರ್ ಮಳೆಯಾಶ್ರಿತ ಬೆಳೆ ಹಾಗೂ 4 ಸಾವಿರ ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ ಎಂದು ವಿಜಯನಗರ ಜಿಲ್ಲಾಡಳಿತ ಕೇಂದ್ರ ಬರ ಅಧ್ಯಯನ ತಂಡಕ್ಕೆ ವರದಿ ಸಲ್ಲಿಸಿದೆ.ವಿಜಯನಗರ ಜಿಲ್ಲೆಯಲ್ಲಿ ಶನಿವಾರ ಕೇಂದ್ರ ಬರ ಅಧ್ಯಯನ ತಂಡ ಪರಿಶೀಲನೆ ನಡೆಸಿದ್ದು, ಈ ವೇಳೆ ಜಿಲ್ಲಾಡಳಿತ ಜಿಲ್ಲೆಯಲ್ಲಿ ಸಂಭವಿಸಿರುವ ಹಾನಿಯ ಕುರಿತು ತಂಡಕ್ಕೆ ಮಾಹಿತಿ ನೀಡಿತು. 2,69,264.28 ಹೆಕ್ಟೇರ್ ಪ್ರದೇಶದಲ್ಲಿ ಮಳೆಯಾಶ್ರಿತ ಬೆಳೆ ಹಾನಿಯಾದರೆ, 3999.45 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ ಎಂದು ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಕೇಂದ್ರ ಬರ ಅಧ್ಯಯನ ತಂಡಕ್ಕೆ ವರದಿ ಸಲ್ಲಿಸಿದ್ದಾರೆ.
ಕೇಂದ್ರದ ಕುಡಿಯುವ ನೀರು ಹಾಗು ಸ್ವಚ್ಛತಾ ಸಚಿವಾಲಯದ ಹೆಚ್ಚುವರಿ ಸಲಹೆಗಾರ ಡಿ. ರಾಜೇಶ್ವರ ರಾವ್, ಪಶುಸಂಗೋಪನೆ ಇಲಾಖೆ ನಿರ್ದೇಶಕ ವಿಜಯ್ ಠಾಕ್ರೆ, ಗ್ರಾಮೀಣಾಭಿವೃದ್ಧಿ ಇಲಾಖೆಯ ಸಹಾಯಕ ಆಯುಕ್ತ ಮೋತಿರಾವ್ ಹಾಗೂ ರಾಜ್ಯದ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರದ ನಿರ್ದೇಶಕ ಕರೀಗೌಡ ಅವರ ನೇತೃತ್ವದ ತಂಡ ಜಿಲ್ಲೆಯಲ್ಲಿ ಬರ ಅಧ್ಯಯನ ನಡೆಸಿತು. ಈ ತಂಡಕ್ಕೆ ವಿಜಯನಗರ ಜಿಲ್ಲೆಯ ಆರು ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.ತಾಲೂಕುವಾರು ಬೆಳೆ ಹಾನಿ:
ಹೊಸಪೇಟೆ ತಾಲೂಕಿನಲ್ಲಿ ಮಳೆಯಾಶ್ರಿತ 5612.90 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಹಡಗಲಿ 52083.34 ಹೆ., ಹಗರಿಬೊಮ್ಮನಹಳ್ಳಿ 41601.20 ಹೆ., ಹರಪನಹಳ್ಳಿ 83986.80 ಹೆ., ಕೊಟ್ಟೂರು 30710.44 ಹೆ. ಮತ್ತು ಕೂಡ್ಲಿಗಿಯಲ್ಲಿ 55269.60 ಹೆಕ್ಟೇರ್ ಪ್ರದೇಶದಲ್ಲಿ ಹಾನಿಯಾಗಿದೆ. ಇನ್ನೂ ಹೊಸಪೇಟೆ ತಾಲೂಕಿನಲ್ಲಿ 67.30 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿ ಆಗಿದೆ. ಹಡಗಲಿ 840.04 ಹೆ., ಹಗರಿಬೊಮ್ಮನಹಳ್ಳಿ 375.20 ಹೆ., ಹರಪನಹಳ್ಳಿ 900 ಹೆ., ಕೊಟ್ಟೂರು 1498.98 ಹೆ. ಮತ್ತು ಕೂಡ್ಲಿಗಿ ತಾಲೂಕಿನಲ್ಲಿ 317.93 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದು ವರದಿ ಸಲ್ಲಿಸಲಾಗಿದೆ.ನಂದಿಬಂಡಿಯಲ್ಲಿ ಮಾತನಾಡಿದ ಕೇಂದ್ರ ತಂಡದ ಅಧಿಕಾರಿ ವಿಜಯ್ ಠಾಕ್ರೆ, ಈ ತಂಡ ನಾಲ್ಕು ಜಿಲ್ಲೆಗಳಿಗೆ ಭೇಟಿ ನೀಡುತ್ತದೆ.
ಗದಗ ಜಿಲ್ಲೆಗಿಂತಲೂ ಹೆಚ್ಚಿನ ಹಾನಿ ಈ ಭಾಗದಲ್ಲಿ ಉಂಟಾಗಿದೆ. ಅಧಿಕಾರಿಗಳಿಂದ, ರೈತರಿಂದ ಪಡೆದ ಮಾಹಿತಿ ಜತೆಗೆ ರಾಜ್ಯ ಸರ್ಕಾರದ ಬೇಡಿಕೆಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ ಎಂದರು.ಮೆಕ್ಕೆಜೋಳ ಬೆಳೆ ಶೇ. 95ರಷ್ಟು ಹಾನಿ:
ಜಿಲ್ಲಾಧಿಕಾರಿ ದಿವಾಕರ್ ಎಂ.ಎಸ್. ಸುದ್ದಿಗಾರರೊಂದಿಗೆ ಮಾತನಾಡಿ, ವಿಜಯನಗರ ಜಿಲ್ಲೆಯಲ್ಲಿ ಈ ಬಾರಿ 3.03 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 2.69 ಲಕ್ಷ ಹೆಕ್ಟೇರ್ ಕೃಷಿ ಮತ್ತು 4 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಮೆಕ್ಕೆಜೋಳದ ಶೇ. 95ರಷ್ಟು ಹಾನಿಯಾಗಿದೆ. ಈ ಭಾಗ ಖುಷ್ಕಿ ಬೇಸಾಯ ಇರುವ ಕಾರಣದಿಂದ ಶೇಂಗಾ ಸೇರಿದಂತೆ ಇತರ ಬೆಳೆಗಳು ಹಾನಿಯಾಗಿದೆ. ತಂಡದ ಅಧಿಕಾರಿಗಳ ಜತೆ ಇದ್ದು, ಇಲ್ಲಿನ ಪರಿಸ್ಥಿತಿಯ ಒಟ್ಟಾರೆ ವರದಿಯನ್ನು ಮನವರಿಕೆ ಮಾಡಿಕೊಡಲಾಗುತ್ತದೆ ಎಂದರು.ನಂದಿಬಂಡಿ ಆನಂತರ ಹಗರಿಬೊಮ್ಮನಹಳ್ಳಿ ತಾಲೂಕಿನ ನಾರಾಯಣದೇವರ ಕೆರೆ, ಹಂಪಾಪಟ್ಟಣ, ಆನೆಕಲ್ ತಾಂಡಾ, ಮಾದೂರು, ತಿಮ್ಮಾಪುರ ಹಾಗೂ ಈಚಲುಬೊಮ್ಮನಹಳ್ಳಿ ಗ್ರಾಮಕ್ಕೆ ತೆರಳಿ ಅಲ್ಲಿ ಉಂಟಾದ ಬೆಳೆ ನಷ್ಟದ ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡರು.
ಕೇಂದ್ರ ತಂಡದ ಅಧಿಕಾರಿಗಳ ಜತೆ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸದಾಶಿವ ಪ್ರಭು ಬಿ., ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದಗಲ್ ಸೇರಿದಂತೆ ಕಂದಾಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಇದ್ದರು.