ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ದೇವಸ್ಥಾನಗಳಲ್ಲಿ ನಿತ್ಯ ಭಜನೆ ಪದಗಳನ್ನು ಹಾಡಲಾಗುತ್ತದೆ. ಆ ಎಲ್ಲ ಭಜನೆ ಪದಗಳು ತತ್ವಪದಗಳನ್ನೇ ಹೊಂದಿವೆ. ಈ ಭಜನಾ ಮಂಡಳಿಗಳು ಹಳ್ಳಿಗಳಲ್ಲಿ ಇಂದಿಗೂ ತತ್ವಪದಗಳನ್ನು ಜೀವಂತವಾಗಿರಿಸಿವೆ ಎಂದು ಬಿ.ಎಲ್.ಡಿ.ಇ ಸಂಸ್ಥೆಯ ಸಮ ಕುಲಾಧಿಪತಿ ಡಾ.ವೈ.ಎಂ.ಜಯರಾಜ ಹೇಳಿದರು.ನಗರದ ಬಿಎಲ್‌ಡಿಇ ಸಂಸ್ಥೆಯ ಎಸ್.ಬಿ.ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಬೆಂಗಳೂರಿನ ಸಂತಕವಿ ಕನಕದಾಸ ಮತ್ತು ತತ್ವಪದಕಾರ ಅಧ್ಯಯನ ಕೇಂದ್ರ ಹಾಗೂ ಐಕ್ಯೂಎಸಿ, ಕನ್ನಡ ವಿಭಾಗ, ಎಸ್.ಬಿ ಕಲಾ ಮತ್ತು ಕೆ.ಸಿ.ಪಿ.ವಿಜ್ಞಾನ ಮಹಾವಿದ್ಯಾಲಯದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ತತ್ವಪದಗಾರ್ತಿಯರ ಲೋಕ ದೃಷ್ಟಿ ಎಂಬ ವಿಷಯದ ಕುರಿತ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು. ವಚನ ಸಾಹಿತ್ಯ ಜಗತ್ತಿನಲ್ಲಿ ಸಾಮಾಜಿಕ ಕ್ರಾಂತಿ ಮೂಡಿಸಿ ಸಾಮಾಜಿಕ ಬದಲಾವಣೆಯನ್ನೇ ಮೂಡಿಸಿತು. ಅದರ ನೆನಪಿಗಾಗಿಯೇ ಬಿಎಲ್‌ಡಿಈ ಆವರಣದಲ್ಲಿ 770 ಲಿಂಗಗಳನ್ನು ಸ್ಥಾಪನೆ ಮಾಡಲಾಗಿದೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಹಳ್ಳಿಗಾಡಿನ ಸೊಗಡು, ಸಂಸ್ಕೃತಿ ಶ್ರೀಮಂತಿಕೆಯ ಮೇಲೆ ಬೆಳಕು ಚಲ್ಲುವ ಜಾನಪದ ಸಾಹಿತ್ಯ ಭಾರತ ಶ್ರೀಮಂತ ಸಾಹಿತ್ಯವಾಗಿ ಹೊರ ಹೊಮ್ಮಿತು. ಜೈನ ಸಾಹಿತ್ಯ ವಿಶಾಲವಾಗಿದೆ. ಜೈನ ಕವಿಗಳು ಅಹಿಂಸಾವಾದಿಗಳು. ಜಗತ್ತಿಗೆ ಅಂಹಿಸಾ ಮಾರ್ಗವನ್ನು ತೋರುವಲ್ಲಿ ಜೈನ ಸಾಹಿತ್ಯ ಅತೀ ಮಹತ್ವದ್ದು. ಸಾಮಾಜಿಕ ಕ್ರಾಂತಿಗೆ ಅನೇಕ ಧರ್ಮಗಳು ತಮ್ಮದೇ ಆದ ಕೊಡುಗೆ ನೀಡಿದ್ದಾಗಿ ತಿಳಿಸಿದರು.ಶಿಶುನಾಳ ಶರೀಫರ ತತ್ವಪದಗಳು ಮನುಕುಲದ ಒಳಿತನ್ನು ಹೇಳುತ್ತವೆ. ಶರೀಪರ ಅಜ್ಞಾನದಿಂದ ಸೋರುತ್ತಿದೆ ಮನೆ ಮಾಳಿಗೆ.... ಎನ್ನುವ ತತ್ವಪದ ಹಾಗೂ ಒಗಟುಗಳ ಮೂಲಕ ಸಾಹಿತ್ಯವನ್ನು ರಚಿಸಿ ಜಗತ್ತಿಗೆ ಆಧ್ಯಾತ್ಮದ ಜ್ಞಾನವನ್ನು ನೀಡಿದ್ದಾರೆ ಎಂದು ಹೇಳಿದರು.
ಬೆಂಗಳೂರಿನ ಸಂತಕವಿ ಕನಕದಾಸ ಮತ್ತು ತತ್ವಪದಕಾರ ಅಧ್ಯಯನ ಕೇಂದ್ರದ ಸದಸ್ಯ ಡಾ.ದಸ್ತಗೀರಸಾಬ್ ದಿನ್ನಿ ಮಾತನಾಡಿ, ಸಂತಕವಿ ಕನಕದಾಸ ಮತ್ತು ತತ್ವಪದಗಳ ಅಧ್ಯಯನ ಕೇಂದ್ರದಲ್ಲಿ ಪುಸ್ತಕ ಪ್ರಕಟಣೆ, ಮಾರಾಟ ನಿರಂತರವಾಗಿ ನಡೆಯುತ್ತಿವೆ. ತತ್ವಪದಗಳ ದಾಖಲೀಕರಣ ನಡೆಯಬೇಕು, ತತ್ವಪದಗಾರ್ತಿಯರು ಬಹಳಷ್ಟು ಕಡಿಮೆ ಇದ್ದಾರೆ. ನಾವು ಅವರನ್ನು ಹುಡುಕುವ ಕೆಲಸ ಮಾಡುತ್ತಿದ್ದೇವೆ. ಜೀವನದ ಮೌಲ್ಯಗಳನ್ನು ಹುಡುಕಿ ಕೊಟ್ಟಿರುವ ತತ್ವಪದಗಾರ್ತಿಯರನ್ನು ಹುಡುಕುವ ಕೆಲಸವನ್ನು ನಮ್ಮ ಅಧ್ಯಯನ ಕೇಂದ್ರ ಮಾಡಲಿದೆ ಎಂದು ತಿಳಿಸಿದರು.ಈ ವೇಳೆಯಲ್ಲಿ ಮೂರು ಗೋಷ್ಠಿಗಳು ನಡೆಸಲಾಯಿತು. ತತ್ವಪದಗಾರ್ತಿಯರ ಕಟ್ಟು ಬಯಸುವ ಸಮಾಜ- ಡಾ.ಗರುಲಿಂಗಪ್ಪ ದಬಾಲೆ, ತತ್ವಪದ ಗಾರ್ತಿಯರ ತಾತ್ವಿಕ ಜಿಜ್ಞಾಸೆ ಬಗ್ಗೆ ಡಾ.ಸಂಗಮನಾಥ ಲೋಕಾಪುರ ಹಾಗೂ ತತ್ವಪದಗಾರ್ತಿಯರ ಕಾಯ ಮತ್ತು ಮನಸ್ಸುಗಳ ಕಲ್ಪನೆ ಎಂಬ ವಿಷಯದ ಕುರಿತು ಡಾ.ಗೌರಮ್ಮ.ಎಸ್.ಎಂ ವಿಚಾರವನ್ನು ಮಂಡಿಸಿದರು.
ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಪ್ರೊ.ವಿ.ಎಸ್.ಬಗಲಿ, ಪ್ರಾಚಾರ್ಯೆ ಡಾ.ಆರ್.ಎಂ.ಮಿರ್ಧೆ, ಐಕ್ಯೂಎಸಿ ನಿರ್ದೇಶಕ ಡಾ.ಪಿ.ಎಸ್.ಪಾಟೀಲ, ಕನ್ನಡ ವಿಭಾಗ ಮುಖ್ಯಸ್ಥ ಡಾ.ಶ್ರೀನಿವಾಸ್ ದೊಡಮನಿ, ಡಾ.ಉಷಾದೇವಿ ಹಿರೇಮಠ, ಡಾ.ಆರ್.ಜಿ.ಕಮತರ, ಪ್ರೊ.ಎಸ್.ವೈ.ಅಂಗಡಿ, ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಸ್ವಪ್ನಾ ಸಂಗಡಿಗರು ಪ್ರಾರ್ಥಿಸಿದರು. ಡಾ.ಶುಭಾಸಚಂದ್ರ ಕನ್ನೂರ ನಿರೂಪಿಸಿದರು, ಡಾ.ಪಿ.ಎಸ್.ಪಾಟೀಲ ವಂದಿಸಿದರು.