ಸರ್ಕಾರಕ್ಕೆ ಎಂಎಡಿಬಿ ₹200 ಕೋ.ಪರಿಷ್ಕೃತ ಪ್ರಸ್ತಾವನೆ

KannadaprabhaNewsNetwork |  
Published : Sep 23, 2024, 01:16 AM IST
ಪೊಟೋ: 22ಎಸ್‌ಎಂಜಿಕೆಪಿ04ಶಿವಮೊಗ್ಗದ ಸಾಗರ ರಸ್ತೆಯ ಎಂಎಡಿಬಿ ಕಚೇರಿಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಮಂಡಳಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಮಾತನಾಡಿದರು. | Kannada Prabha

ಸಾರಾಂಶ

ಬೃಹತ್ ತೂಗು ಸೇತುವೆಗಳು, ತೂಗು ಸೇತುವೆಗಳು ಹಾಗೂ ಕಾಲು ಸಂಕಗಳಿಗೆ 200 ಕೋಟಿ ರು. ಪರಿಷ್ಕೃತ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಅನುಮೋದನೆಗೆ ಸಲ್ಲಿಸಲು ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ನಿರ್ಧರಿಸಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯ 2025ರ ಮಾರ್ಚ್‍ನೊಳಗೆ ಪ್ರಸಕ್ತ ಸಾಲಿನ ಎಲ್ಲ ಯೋಜನೆಗಳನ್ನು ಮುಕ್ತಾಯಗೊಳಿಸಬೇಕಿದೆ. ಅದಕ್ಕೆ ಎಲ್ಲ ಶಾಸಕರು, ಎಂಎಲ್‍ಸಿಗಳ ಸಹಕಾರ ಅತ್ಯಗತ್ಯವಾಗಿದೆ ಎಂದು ಮಂಡಳಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಮನವಿ ಮಾಡಿದರು. ಸಾಗರ ರಸ್ತೆಯ ಎಂಎಡಿಬಿ ಕಚೇರಿಯಲ್ಲಿ ಶನಿವಾರ ಮಂಡಳಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಅಧ್ಯಕ್ಷನಾದ ಬಳಿಕ ಮೊದಲ ಸಭೆ ಇದಾಗಿದೆ. ಈ ಬಾರಿ ನಬಾರ್ಡ್‍ನಿಂದ ಸಾಲ ಪಡೆಯುವ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದಾರೆ ಎಂದರು. ದೂರದ ಜಿಲ್ಲೆಗಳಿಂದ ಸಾಮಾನ್ಯ ಸಭೆಗೆ ಬರುವುದಕ್ಕೆ ಕೆಲ ಜನಪ್ರತಿನಿಧಿಗಳಿಗೆ ಸಮಸ್ಯೆಯಾಗುತ್ತಿದೆ. ಆ ಕಾರಣಕ್ಕೆ ಬೆಂಗಳೂರು ಅಥವಾ ಬೆಳಗಾವಿಯಲ್ಲಿ ಅಧಿವೇಶನ ನಡೆಯುವ ವೇಳೆ ಮಂಡಳಿಯ ಎಲ್ಲ ಸದಸ್ಯರ ಸಭೆ ನಡೆಸಿ ಯೋಜನೆಗಳ ಹಂಚಿಕೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಪರಿಷ್ಕೃತ ಪ್ರಸ್ತಾವನೆ:

ಬೃಹತ್ ತೂಗು ಸೇತುವೆಗಳು, ತೂಗು ಸೇತುವೆಗಳು ಹಾಗೂ ಕಾಲು ಸಂಕಗಳಿಗೆ 200 ಕೋಟಿ ರು. ಪರಿಷ್ಕೃತ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಅನುಮೋದನೆಗೆ ಸಲ್ಲಿಸಲು ಮಂಡಳಿ ನಿರ್ಧರಿಸಿತು. 2022-23ನೇ ಸಾಲಿನಲ್ಲಿ ಸಲ್ಲಿಕೆಯಾಗಿದ್ದ ಪ್ರಸ್ತಾವನೆಗಳಿಗೆ ಆರ್ಥಿಕ ನೆರವು ಪಡೆದು ಕಾಮಗಾರಿಗಳನ್ನು ಕಾರ್ಯಗತಗೊಳಿಸಲು ಯೋಜನೆ ರೂಪಿಸಲು ಬಜೆಟ್‍ನಲ್ಲಿ 100 ಕೋಟಿ ರು. ಅನುದಾನ ಹಂಚಿಕೆ ಮಾಡಲು ಸರ್ಕಾರಕ್ಕೆ ಕೋರಲಾಗಿತ್ತು. ಇದೀಗ ಅದನ್ನು 200 ಕೋಟಿ ರೂ.ಗೆ ಹೆಚ್ಚಿಸಲು ಮಂಡಳಿ ಅನುಮೋದಿಸಿತು.

ಸರ್ಕಾರದಿಂದ ಕಳೆದ ಆಯವ್ಯಯದಲ್ಲಿ ನಬಾರ್ಡ್ ಯೋಜನೆಯಡಿ ಅನುದಾನ ಹಂಚಿಕೆ ಮಾಡದೇ ಇರುವುದರಿಂದ 2024-25ನೇ ಸಾಲಿಗೆ ಬೃಹತ್ ತೂಗು ಸೇತುವೆಗಳಿಗೆ 115.73 ಕೋಟಿ ರು., ತೂಗುಸೇತುವೆ ಹಾಗೂ ಕಾಲು ಸಂಕಗಳನ್ನು ನಿರ್ಮಿಸಲು ತಲಾ 40 ಕೋಟಿ ರು. ಆರ್ಥಿಕ ನೆರವು ಪಡೆಯಲು ಪರಿಷ್ಕೃತ ಪ್ರಸ್ತಾವನೆ ತಯಾರಿಸಿ ಸರ್ಕಾರಕ್ಕೆ ಸಲ್ಲಿಸುವ ಬಗ್ಗೆ ಮಂಡಳಿಯ ಪ್ರಭಾರ ಕಾರ್ಯದರ್ಶಿ ಸಿ.ಎಸ್.ಗಾಯತ್ರಿ ಅವರು ಸಭೆಗೆ ಮಂಡಿಸಿದರು. ಇದಕ್ಕೆ ಸಭೆಯಲ್ಲಿದ್ದ ಎಲ್ಲ ಶಾಸಕರು, ಎಂಎಲ್‍ಸಿಗಳು ಸರ್ವಾನುಮತದಿಂದ ಅಂಗೀಕರಿಸಿದರು.

ಬಳಿಕ ಮಾತನಾಡಿದ ಮಂಡಳಿ ಅಧ್ಯಕ್ಷ ಮಂಜುನಾಥಗೌಡ, ನಬಾರ್ಡ್ ಪರಿಷ್ಕೃತ ಪ್ರಸ್ತಾವನೆಯಂತೆ ಹಣ ಕೊಡಲು ಸಿದ್ಧವಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಈ ಬಗ್ಗೆ ಚರ್ಚಿಸಿದ್ದಾರೆ. 20 ವರ್ಷಗಳ ಅವಧಿಗೆ ನಬಾರ್ಡ್ ಸಾಲ ನೀಡಲಿದ್ದು, ಬಡ್ಡಿ ಸಹಿತವಾಗಿ ಸರ್ಕಾರ ನಬಾರ್ಡ್‍ಗೆ ಮರುಪಾವತಿ ಮಾಡಲಿದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಎಂಎಲ್‍ಸಿ ಮಂಜುನಾಥ ಭಂಡಾರಿ, ಬೃಹತ್ ತೂಗುಸೇತುವೆಗಳು ಎಂದಷ್ಟೇ ಹೇಳಲಾಗಿದೆ. ಅವುಗಳ ಸ್ವರೂಪ, ಉದ್ದ, ಅಗಲ ಎಷ್ಟಿರಬೇಕು ? ಒಂದೊಂದಕ್ಕೂ ಎಷ್ಟು ಬಜೆಟ್ ಬೇಕು ? ಎಂಬ ನಿಖರ ಮಾಹಿತಿ ಇಲ್ಲ. ಮೀಸಲಿರುವ ಅನುದಾನ ಬೃಹತ್ ತೂಗು ಸೇತುವೆಗಳಿಗೆ ಸಾಕಾಗಲಿದೆ ಎಂಬ ಅನುಮಾನಗಳೂ ಇವೆ ಎಂದರು. ಅದಕ್ಕೆ ಶಾಸಕ ಭೀಮಣ್ಣ ನಾಯ್ಕ್ ಧ್ವನಿಗೂಡಿಸಿದರು.

ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ಗೋಪಾಲಕೃಷ್ಣ, ಕಾರ್ಯದರ್ಶಿ ಸಿ.ಎಸ್.ಗಾಯತ್ರಿ ಉಪಸ್ಥಿತರಿದ್ದರು.2 ವರ್ಷದ ಬಳಿಕ ನಡೆದ ಸಭೆಗೆ ವಿರಳ ಹಾಜರಾತಿ

ಎಂಎಡಿಬಿ ವ್ಯಾಪ್ತಿಯು 13 ಜಿಲ್ಲೆಗಳ 74 ತಾಲೂಕು ವ್ಯಾಪ್ತಿಗಳನ್ನು ಒಳಗೊಂಡಿದೆ. 12 ಲೋಕಸಭಾ ಸದಸ್ಯರು, 65 ಶಾಸಕರು, 21 ವಿಧಾನ ಪರಿಷತ್ ಸದಸ್ಯ ರನ್ನು ಒಳಗೊಂಡಿದೆ. ಎರಡು ವರ್ಷದ ಬಳಿಕ ಸಾಮಾನ್ಯ ಸಭೆ ನಡೆದಿದ್ದು, ಹಾಜರಾದವರ ಸಂಖ್ಯೆ ವಿರಳವಾಗಿತ್ತು. ಗೈರಾದವರ ಸಂಖ್ಯೆಯೇ ಸಿಂಹಪಾಲು. ಕೆಲವರು ಸಭೆ ಆರಂಭದಲ್ಲೇ ಎದ್ದು ಹೊರಟರೇ, ಮತ್ತೆ ಕೆಲವರು ಮುಗಿದ ಬಳಿಕ ಮಂಡಳಿಗೆ ಬಂದಿದ್ದರು. ಜಿಲ್ಲಾಧಿಕಾರಿಗಳು, ಜಿಪಂ ಸಿಇಒಗಳು, ಕಾರ್ಯದರ್ಶಿ ಸಭೆಯಲ್ಲಿ ಹಾಜರಾಗಲಿಲ್ಲ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!