ಹರಪನಹಳ್ಳಿ: ಹರಪನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ವಿವಿಧ ಯೋಜನೆಗಳಲ್ಲಿ ₹200 ಕೋಟಿ ಅನುದಾನ ಬರುತ್ತಲಿದೆ ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಹೇಳಿದ್ದಾರೆ.
ಕಾಂಗ್ರೆಸ್ ಇಲ್ಲ ಎನ್ನುವವರಿಗೆ ಈ ಕಾರ್ಯಕ್ರಮ ಉತ್ತರ ಕೊಟ್ಟಿದೆ. ಚುನಾವಣೆ ಇರಲಿ, ಬಿಡಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಬೇಕು. ಈಗಿರುವ ಕಾಂಗ್ರೆಸ್ ಬುನಾದಿಯನ್ನು ಭದ್ರ ಬುನಾದಿಯನ್ನಾಗಿ ಮಾಡಬೇಕು ಎಂದು ಅವರು ಕಾರ್ಯಕರ್ತರಿಗೆ ತಿಳಿಸಿದರು.
ನೂತನವಾಗಿ ನೇಮಕವಾಗಿರುವ ಹರಪನಹಳ್ಳಿ ಹಾಗೂ ಚಿಗಟೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ವಿ. ಅಂಜಿನಪ್ಪ ಹಾಗೂ ಕುಬೇರಪ್ಪ ಅವರು ಪಕ್ಷ ಸಂಘಟಿಸುವರು, ಎಲ್ಲರೂ ಸಹಕಾರ ನೀಡಬೇಕು ಎಂದು ಅವರು ಕೋರಿದರು.ವಿಜಯನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿರಾಜ ಶೇಖ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಚುನಾವಣಾ ಪೂರ್ವದಲ್ಲಿ ಕೊಟ್ಟ ಭರವಸೆಯಂತೆ ಸಿದ್ದರಾಮಯ್ಯ ಸರ್ಕಾರ ಐದು ಗ್ಯಾರಂಟಿಗಳನ್ನು ಈಡೇರಿಸಿದೆ. ಸೌಲಭ್ಯ ಕೊಟ್ಟಿದ್ದೇವೆ. ಆದ್ದರಿಂದ ನಮಗೆ ಮತ ಕೇಳಲು ಹಕ್ಕಿದೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಲು ಕಾರ್ಯಕರ್ತರು ಮುಂದಾಗಬೇಕು ಎಂದು ಹೇಳಿದರು.
ನೂತನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಮೇಲೆ ಸಾಕಷ್ಟು ಜವಾಬ್ದಾರಿ ಇದೆ ಎಂದು ಹೇಳಿ, ಅವರಿಗೆ ಕಾಂಗ್ರೆಸ್ ಬಾವುಟ ಹಸ್ತಾಂತರ ಮಾಡಿದರು.ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಸಿ. ಚಂದ್ರಶೇಖರ ಭಟ್ ಮಾತನಾಡಿ, ನೂತನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು, ನಮ್ಮ ಸಹಕಾರ ಇರುತ್ತದೆ. ಶಾಸಕರು ಸಹ ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗುತ್ತೇವೆ ಎಂದು ಹೇಳಿದ್ದಾರೆ. ಅದರಿಂದ ಕಾಂಗ್ರೆಸ್ ಬಲಗೊಳ್ಳುತ್ತದೆ ಎಂದರು.
ಹರಪನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ ಮಾತನಾಡಿ, ಕಾಂಗ್ರೆಸ್ ಭದ್ರಕೋಟೆ ಹರಪನಹಳ್ಳಿ, ಸಮಬಾಳು, ಸಮಪಾಲು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ಸಣ್ಣಪುಟ್ಟ ಭಿನ್ನಾಭಿಪ್ರಾಯ ಬದಿಗಿಟ್ಟು ಕಾಂಗ್ರೆಸ್ ಬಲಪಡಿಸಲು ಎಲ್ಲರೂ ಸಹಕಾರ ನೀಡಬೇಕು ಎಂದು ಕೋರಿದರು.ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ, ರೇಷ್ಮೆ ಉದ್ಯಮ ನಿಗಮದ ಮಾಜಿ ಅಧ್ಯಕ್ಷ ಡಿ. ಬಸವರಾಜ, ಪುರಸಭಾ ಮಾಜಿ ಅಧ್ಯಕ್ಷ ಎಂ. ರಾಜಶೇಖರ, ಚಿಗಟೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುಬೇರಪ್ಪ, ಜಿಪಂ ಮಾಜಿ ಸದಸ್ಯ ಪಿ. ಮಹಾಬಲೇಶ್ವರಗೌಡ ಮಾತನಾಡಿ, ಕಾಂಗ್ರೆಸ್ ಸಂಘಟನೆಗೆ ಕರೆ ನೀಡಿದರು.
ಮುಖಂಡರಾದ ಬಿ.ಕೆ. ಪ್ರಕಾಶ, ತೆಲಿಗಿ ಈಶ್ವರಪ್ಪ, ವೈ.ಕೆ.ಬಿ. ದುರುಗಪ್ಪ, ಡಾ. ಬಿದ್ರಿ ಕೊಟ್ರೇಶ, ಎಚ್.ಎಂ. ಮಲ್ಲಿಕಾರ್ಜುನ, ಅಬ್ದುಲ್ ರಹಿಮಾನ್, ಜಾವೇದ್, ಮತ್ತಿಹಳ್ಳಿ ಅಜ್ಜಣ್ಣ, ಡಾ. ಎಂ.ಬಿ. ಅಧಿಕಾರ, ಆಲದಹಳ್ಳಿ ಷಣ್ಮುಖಪ್ಪ, ಡಿ. ಮಾರಣ್ಣ, ಬಂಡ್ರಿ ಗೋಣಿಬಸಪ್ಪ, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಜಯಲಕ್ಷ್ಮಿ, ಭಾಗ್ಯಮ್ಮ, ವಗ್ಗಾಲಿ ನಜೀರ, ಬಿ.ಬಿ. ಹೊಸೂರಪ್ಪ, ಗುಂಡಗತ್ತಿ ಕೊಟ್ರಪ್ಪ, ಕೆ.ಎಂ. ಬಸವರಾಜಯ್ಯ, ಮತ್ತಿಹಳ್ಳಿ ಶಿವಣ್ಣ, ಉದಯಶಂಕರ, ಪುರಸಭಾ ಸದಸ್ಯರಾದ ಗೊಂಗಡಿ ನಾಗರಾಜ, ಟಿ. ವೆಂಕಟೇಶ, ಲಾಟಿದಾದಾಪೀರ, ಜಾಕೀರ ಸರ್ಕಾವಸ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.