200 ಕೋಟಿ ಮಹಿಳೆಯರಿಂದ ರಾಜ್ಯದಲ್ಲಿ ಫ್ರೀ ಬಸ್‌ ಯಾನ!

KannadaprabhaNewsNetwork | Updated : May 03 2024, 06:12 AM IST

ಸಾರಾಂಶ

ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣದ ಅವಕಾಶ ನೀಡುವ, ಕಳೆದ ವರ್ಷ ಜಾರಿಯಾದ ‘ಶಕ್ತಿ’ ಯೋಜನೆ ಯಶಸ್ವಿಗೊಂಡಿದ್ದು, ಏಪ್ರಿಲ್‌ ತಿಂಗಳ ಅಂತ್ಯದವರೆಗೆ 200 ಕೋಟಿ ಮಹಿಳಾ ಪ್ರಯಾಣಿಕರು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣದ ಅವಕಾಶ ನೀಡುವ, ಕಳೆದ ವರ್ಷ ಜಾರಿಯಾದ ‘ಶಕ್ತಿ’ ಯೋಜನೆ ಯಶಸ್ವಿಗೊಂಡಿದ್ದು, ಏಪ್ರಿಲ್‌ ತಿಂಗಳ ಅಂತ್ಯದವರೆಗೆ 200 ಕೋಟಿ ಮಹಿಳಾ ಪ್ರಯಾಣಿಕರು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಿದ್ದಾರೆ.

ಮಹಿಳೆಯರ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಶಕ್ತಿ ಯೋಜನೆ ಜಾರಿಗೊಳಿಸಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ 4 ನಿಗಮಗಳ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದೆ. 2023ರ ಜೂ.11ರಿಂದ ಆರಂಭವಾಗಿರುವ ಈ ಯೋಜನೆಯ ಲಾಭವನ್ನು 200 ಮಹಿಳಾ ಪ್ರಯಾಣಿಕರು ಪಡೆದುಕೊಂಡಿದ್ದಾರೆ. ಮೇ 1ರ ಅಂತ್ಯಕ್ಕೆ 200.43 ಕೋಟಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ ಎಂದು ಸರ್ಕಾರದ ಅಂಕಿ-ಅಂಶಗಳು ಹೇಳಿವೆ.

ಶಕ್ತಿ ಯೋಜನೆ ಜಾರಿಯಾದಾಗಿನಿಂದ ಒಟ್ಟು 348.97 ಕೋಟಿ ಪ್ರಯಾಣಿಕರು ಬಸ್‌ ಪ್ರಯಾಣ ಮಾಡಿದ್ದು, ಅದರಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆಯೇ ಹೆಚ್ಚಿದೆ. ಅಲ್ಲದೆ, ಈವರೆಗೆ ಒಟ್ಟು 4,836 ಕೋಟಿ ರು. ಮೌಲ್ಯದ ಉಚಿತ ಟಿಕೆಟ್‌ಗಳನ್ನು ನೀಡಲಾಗಿದೆ. ಅಷ್ಟು ಮೊತ್ತವನ್ನು ರಾಜ್ಯ ಸರ್ಕಾರ ಸಾರಿಗೆ ನಿಗಮಗಳಿಗೆ ನೀಡಲಿದ್ದು, ಅದರಲ್ಲಿ ಈಗಾಗಲೇ 3 ಸಾವಿರ ಕೋಟಿ ರು.ಗೂ ಹೆಚ್ಚಿನ ಮೊತ್ತವನ್ನು ನಿಗಮಗಳಿಗೆ ಹಂಚಿಕೆ ಮಾಡಲಾಗಿದೆ.

ಕಳೆದ 3 ತಿಂಗಳಿನಿಂದ ಪ್ರಯಾಣಿಕರ ಸಂಖ್ಯೆ ಕುಸಿತ:

ಶಕ್ತಿ ಯೋಜನೆ ಜಾರಿ ನಂತರ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಮಾಸಿಕ ಸರಾಸರಿ 19 ಕೋಟಿಗೂ ಹೆಚ್ಚಿನ ಮಹಿಳಾ ಪ್ರಯಾಣಿಕರು ಸರ್ಕಾರಿ ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸಿದ್ದಾರೆ. ಯೋಜನೆ ಆರಂಭವಾದ 2023ರ ಜೂನ್ ತಿಂಗಳಲ್ಲಿ ಮಾತ್ರ 10 ಕೋಟಿ ಮಹಿಳಾ ಪ್ರಯಾಣಿಕರು ಯೋಜನೆ ಲಾಭ ಪಡೆದಿದ್ದರು. ಅದಾದ ನಂತರದಿಂದ ಸರಾಸರಿ 19 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದರು.

ಆದರೆ, ಕಳೆದ ಫೆಬ್ರವರಿ, ಮಾರ್ಚ್‌, ಏಪ್ರಿಲ್‌ನಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ 18 ಕೋಟಿಗೆ ಇಳಿಕೆಯಾಗಿದೆ. ಅಲ್ಲದೆ ಪ್ರತಿದಿನ 63 ಲಕ್ಷಕ್ಕೂ ಹೆಚ್ಚಿರುತ್ತಿದ್ದ ಮಹಿಳಾ ಪ್ರಯಾಣಿಕರ ಸಂಖ್ಯೆ 54ರಿಂದ 56 ಲಕ್ಷಕ್ಕೆ ಇಳಿಕೆಯಾಗಿದೆ. ಬೇಸಿಗೆ ಬಿಸಿಲಿನ ಜತೆಗೆ ಮಕ್ಕಳ ಪರೀಕ್ಷೆ ಕಾರಣದಿಂದಾಗಿ ಮಹಿಳಾ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ ಎಂದು ಅಂದಾಜಿಸಲಾಗುತ್ತಿದೆ.

Share this article