ದುಬೈನಿಂದ ಸುರಕ್ಷಿತವಾಗಿ 200 ಜನ ತಾಯ್ನಾಡಿಗೆ

KannadaprabhaNewsNetwork |  
Published : Mar 04, 2026, 02:00 AM ISTUpdated : Mar 04, 2026, 04:12 AM IST
Dubai

ಸಾರಾಂಶ

ಇಸ್ರೇಲ್‌-ಇರಾನ್‌ ನಡುವಿನ ಯುದ್ಧದ ಪರಿಣಾಮ ಮಧ್ಯಪ್ರಾಚ್ಯ ದೇಶಗಳ ನಡುವೆ ಸ್ಥಗಿತಗೊಂಡಿದ್ದ ವಿಮಾನ ಸೇವೆ ಸೋಮವಾರದಿಂದ ಸೀಮಿತವಾಗಿ ಆರಂಭವಾಗಿದ್ದು, ಸೋಮವಾರ ರಾತ್ರಿ ಅಬುಧಾಬಿ ಮತ್ತು ದುಬೈನಿಂದ ತಲಾ ಒಂದು ವಿಮಾನಗಳು ಬೆಂಗಳೂರಿಗೆ ಆಗಮಿಸಿವೆ.

  ಬೆಂಗಳೂರು : ಇಸ್ರೇಲ್‌-ಇರಾನ್‌ ನಡುವಿನ ಯುದ್ಧದ ಪರಿಣಾಮ ಮಧ್ಯಪ್ರಾಚ್ಯ ದೇಶಗಳ ನಡುವೆ ಸ್ಥಗಿತಗೊಂಡಿದ್ದ ವಿಮಾನ ಸೇವೆ ಸೋಮವಾರದಿಂದ ಸೀಮಿತವಾಗಿ ಆರಂಭವಾಗಿದ್ದು, ಸೋಮವಾರ ರಾತ್ರಿ ಅಬುಧಾಬಿ ಮತ್ತು ದುಬೈನಿಂದ ತಲಾ ಒಂದು ವಿಮಾನಗಳು ಬೆಂಗಳೂರಿಗೆ ಆಗಮಿಸಿವೆ.

ಸೋಮವಾರ ರಾತ್ರಿ 10 ಗಂಟೆಗೆ ಅಬುಧಾಬಿಯಿಂದ ಬಂದಿದ್ದ ಎಥಿಹಾದ್‌ ವಿಮಾನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಆಗಮಿಸಿತ್ತು. ಅದರಲ್ಲಿ 200ಕ್ಕೂ ಹೆಚ್ಚಿನ ಪ್ರಯಾಣಿಕರನ್ನು ಕರೆತಲಾಗಿತ್ತು. ಹಾಗೆಯೇ, ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್‌ ಆಟಗಾರ್ತಿ ಪಿ.ವಿ. ಸಿಂಧು ಸೇರಿ 250ಕ್ಕೂ ಹೆಚ್ಚಿನ ಪ್ರಯಾಣಿಕರಿದ್ದ ಎಮಿರೇಟ್ಸ್‌ ವಿಮಾನ ಸೋಮವಾರ ಮಧ್ಯರಾತ್ರಿ ಬೆಂಗಳೂರಿಗೆ ಬಂದಿದೆ.

ದುಬೈನಿಂದ ಆಗಮಿಸಿದ್ದ ವಿಧಾನಪರಿಷತ್‌ ಸದಸ್ಯ ಬೋಜೇಗೌಡ

ದುಬೈನಿಂದ ಆಗಮಿಸಿದ್ದ ವಿಧಾನಪರಿಷತ್‌ ಸದಸ್ಯ ಬೋಜೇಗೌಡ ತಮ್ಮ ಅನುಭವವನ್ನು ಸುದ್ದಿಗಾರರೊಂದಿಗೆ ಹಂಚಿಕೊಂಡಿದ್ದು, ನಾನು ದಕ್ಷಿಣ ಆಫ್ರಿಕಾಗೆ ತೆರಳಿದ್ದೆ. ಅಲ್ಲಿಂದ ದುಬೈ ಮೂಲಕ ಬರುತ್ತಿದ್ದೆ. ಅಷ್ಟರಲ್ಲಿ ಯುದ್ಧ ಆರಂಭವಾಗಿತ್ತು. ಹೀಗಾಗಿ ಅಲ್ಲೇ ಉಳಿಯಬೇಕಾಯಿತು. ದುಬೈ ಸರ್ಕಾರ, ಸ್ಥಳೀಯರು, ಕರ್ನಾಟಕ ಸರ್ಕಾರ ನಮಗೆ ನೆರವಾದರು. ಆದರೆ, ಭಾರತ ರಾಯಭಾರ ಕಚೇರಿಯಿಂದ ಯಾವುದೇ ನೆರವು ದೊರೆಯಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಕೃಷ್ಣ ಬೈರೇಗೌಡ, ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಎಲ್ಲರೂ ಕರೆ ಮಾಡಿ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದು ಧೈರ್ಯ ಹೇಳಿದ್ದರು. ನಾವು ಇದ್ದ ಹೋಟೆಲ್ ಪಕ್ಕದಲ್ಲಿಯೇ ಸ್ಫೋಟದ ಶಬ್ದ ಕೇಳಿಸುತ್ತಿತ್ತು. ಒಟ್ಟಿನಲ್ಲಿ ನಾವು ಸುರಕ್ಷಿತವಾಗಿ ವಾಪಸಾಗಿದ್ದೇವೆ ಎಂದರು. 

ದುಬೈಗೆ ಹೊರಟಿದ್ದ ವಿಮಾನ ವಾಪಸ್‌:

ದುಬೈ ವಿಮಾನ ನಿಲ್ದಾಣದಿಂದ ಕ್ಲಿಯರೆನ್ಸ್‌ ದೊರೆತ ಹಿನ್ನೆಲೆಯಲ್ಲಿ ಮಂಗಳವಾರ ಮುಂಜಾನೆ 4.30 ಗಂಟೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಿಂದ ಹೊರಟಿದ್ದ ಇಕೆ569 ಸಂಖ್ಯೆಯ ಎಮಿರೇಟ್ಸ್‌ ವಿಮಾನ, ನಂತರ ದುಬೈ ವಿಮಾನ ನಿಲ್ದಾಣದಿಂದ ಕ್ಲಿಯರೆನ್ಸ್‌ ಹಿಂಪಡೆದ ಕಾರಣ ಬೆಳಗಾವಿ ವಾಯುಪ್ರದೇಶದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಾಪಸಾಯಿತು. ಅದಾದ ನಂತರ ಸಂಜೆ 6.40ಕ್ಕೆ ವಿಮಾನ ಹಾರಾಟದ ಶೆಡ್ಯೂಲ್‌ ಮಾಡಲಾಯಿತಾದರೂ, ನಂತರ ಅದನ್ನು 7.35ಕ್ಕೆ ವಿಸ್ತರಿಸಲಾಯಿತು. ಕೊನೆಗೆ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಯಿತು.

ಇನ್ನು, ಇಕೆ8567 ಸಂಖ್ಯೆ ಎಮಿರೇಟ್ಸ್‌ ವಿಮಾನ ರಾತ್ರಿ 8.19ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ಹಾರಾಟ ನಡೆಸಿದೆ. ಈ ವಿಮಾನದಲ್ಲಿ ಯುಎಇ ಪ್ರಜೆಗಳು ಮತ್ತು ಅಲ್ಲಿನ ನಿವಾಸಿ ಪರವಾಗಿ ಹೊಂದಿರುವವರು ಮಾತ್ರ ಹಾರಾಟ ನಡೆಸಲು ಅನುಮತಿಸಲಾಗಿತ್ತು. ಉಳಿದವರಿಗೆ ವೀಸಾ ಹೊಂದಿದ್ದರೂ ಅವಕಾಶ ನೀಡಲಿಲ್ಲ.

-ಬಾಕ್ಸ್‌-

42 ವಿಮಾನಗಳ ಹಾರಾಟ ರದ್ದು:

ಮಧ್ಯ ಪ್ರಾಚ್ಯ ದೇಶಗಳಲ್ಲಿನ ಉದ್ವಿಘ್ನ ಪರಿಸ್ಥಿತಿಯಿಂದಾಗಿ ಮಂಗಳವಾರ ದುಬೈ, ಅಬುದಾಬಿ, ದೋಹಾ ಸೇರಿ ಮತ್ತಿತರ ನಗರಗಳಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಿಂದ ತೆರಳಬೇಕಿದ್ದ ಮತ್ತು ಅಲ್ಲಿಂದ ಬರಬೇಕಿದ್ದ 42 ವಿಮಾನಗಳ ಸೇವೆ ರದ್ದಾಗಿದೆ. ಅದರಲ್ಲಿ ತಲಾ 21 ನಿರ್ಗಮನ ಮತ್ತು ಆಗಮನ ವಿಮಾನಗಳು ಸೇರಿವೆ.ದೋಹಾದಲ್ಲಿ ಭಾರತ ಬಾಸ್ಕೆಟ್‌ಬಾಲ್‌ ತಂಡಕ್ಕೆ ಕತಾರ್‌ ಕನ್ನಡ ಸಂಘ ನೆರವು:

2027ರ ಫಿಬಾ ವಿಶ್ವಕಪ್‌ನ ಏಷ್ಯನ್‌ ಅರ್ಹತಾ ಸುತ್ತಿನಲ್ಲಿ ಪಾಲ್ಗೊಳ್ಳಲು ಕತಾರ್‌ನ ದೋಹಾಗೆ ತೆರಳಿದ್ದ ತಂಡ, ಅಮೆರಿಕ/ಇಸ್ರೇಲ್‌-ಇರಾನ್‌ ಯುದ್ಧದಿಂದಾಗಿ ವಿಮಾನ ಹಾರಾಟದಲ್ಲಿ ವ್ಯತ್ಯಯವಾಗಿರುವ ಕಾರಣ ದೋಹಾದಲ್ಲೇ ಸಿಲುಕಿದೆ. ಫಿಬಾ ಏಷ್ಯಾ ಅಧ್ಯಕ್ಷ ಡಾ.ಕೆ.ಗೋವಿಂದರಾಜು ಅವರು ಕತಾರ್‌ನಲ್ಲಿ ಭಾರತೀಯ ರಾಯಭಾರಿ ಕಚೇರಿ ಹಾಗೂ ಕತಾರ್‌ ಬಾಸ್ಕೆಟ್‌ಬಾಲ್‌ ಫೆಡರೇಶನ್‌ ಜೊತೆ ಮಾತುಕತೆ ನಡೆಸಿ, ತಂಡದ ಸುರಕ್ಷತೆಗೆ ಬೇಕಿರುವ ಅಗತ್ಯ ಕ್ರಮಕೈಗೊಳ್ಳುವಂತೆ ಕೇಳಿಕೊಂಡ ಬಳಿಕ, ಕತಾರ್‌ ಬಾಸ್ಕೆಟ್‌ಬಾಲ್‌ ಫೆಡರೇಶನ್‌ ಭಾರತೀಯ ಆಟಗಾರರಿಗೆ ಹೋಟೆಲ್ ವ್ಯವಸ್ಥೆ ಮಾಡಿಕೊಟ್ಟಿದೆ. ವಿಮಾನ ಹಾರಾಟ ಪುನಾರಂಭಗೊಂಡ ಬಳಿಕ ತಂಡ ಭಾರತಕ್ಕೆ ವಾಪಸಾಗಲಿದೆ. ಇದೇ ವೇಳೆ ಮಂಗಳವಾರ ಕತಾರ್‌ ಕರ್ನಾಟಕ ಸಂಘ ಹಾಗೂ ಕತಾರ್‌ ಕರ್ನಾಟಕ ಕನ್ನಡ ಸಂಘದ ಸದಸ್ಯರು ಭಾರತ ತಂಡ ಉಳಿದುಕೊಂಡಿರುವ ಹೋಟೆಲ್‌ಗೆ ತೆರಳಿ ಆಟಗಾರರನ್ನು ಭೇಟಿ ಮಾಡಿದರು. ತಂಡಕ್ಕೆ ಅಗತ್ಯವಿರುವ ನೆರವನ್ನು ಕನ್ನಡ ಸಂಘಗಳ ಸದಸ್ಯರು ಒದಗಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಒಪಿಎಸ್‌ ಜಾರಿಗೆ ಸರ್ಕಾರಕ್ಕೆ ಒತ್ತಾಯಿಸುವೆ
ರೈತ ಭವನ ಶಿಥಿಲ, ವಾಸಿಸಲು ಜಟಿಲ!