2000 ಕೋಟಿ ರು. ಆಸ್ತಿ ವಿಚಾರಕ್ಕೆ ರಿಕಿ ಶೂಟೌಟ್‌?

KannadaprabhaNewsNetwork | Published : Apr 20, 2025 1:55 AM

ಸಾರಾಂಶ

ಭೂಗತ ಲೋಕದ ಮಾಜಿ ದೊರೆ ಮುತ್ತಪ್ಪ ರೈ ಬದುಕಿದ್ದಾಗಿನಿಂದ ಶುರುವಾಗಿದ್ದ ಆಸ್ತಿ ಸಂಬಂಧ ಗಲಾಟೆಗಳು ಕೋರ್ಟ್‌ನಲ್ಲಿ ರಾಜಿ ಆಗಿದ್ದರೂ ಹೊರಗೆ ಮುಂದುವರಿದಿವೆ. ಮುತ್ತಪ್ಪ ಅವರು ಬಿಡದಿ, ಕರಾವಳಿ ಪ್ರದೇಶ, ದುಬೈ, ರಷ್ಯಾ ಸೇರಿ ಹಲವು ಕಡೆಗಳಲ್ಲಿ ಸುಮಾರು 2000 ಕೋಟಿ ರು.ಗೂ ಹೆಚ್ಚು ಆಸ್ತಿ ಹೊಂದಿದ್ದು, ವಿಲ್‌ ಮೂಲಕ ಹಂಚಿಕೆ ಮಾಡಿದ್ದರೂ ಅಸಮಾಧಾನ ಮುಂದುವರಿದಿದ್ದು, ಶೂಟೌಟ್‌ಗೆ ಇದೇ ಕಾರಣ ಇರಬಹುದೇ ಎಂಬ ಅನುಮಾನ ವ್ಯಕ್ತವಾಗಿದೆ.

ಕನ್ನಡಪ್ರಭ ವಾರ್ತೆ ರಾಮನಗರ

ಭೂಗತ ಲೋಕದ ಮಾಜಿ ದೊರೆ ಮುತ್ತಪ್ಪ ರೈ ಬದುಕಿದ್ದಾಗಿನಿಂದ ಶುರುವಾಗಿದ್ದ ಆಸ್ತಿ ಸಂಬಂಧ ಗಲಾಟೆಗಳು ಕೋರ್ಟ್‌ನಲ್ಲಿ ರಾಜಿ ಆಗಿದ್ದರೂ ಹೊರಗೆ ಮುಂದುವರಿದಿವೆ. ಮುತ್ತಪ್ಪ ಅವರು ಬಿಡದಿ, ಕರಾವಳಿ ಪ್ರದೇಶ, ದುಬೈ, ರಷ್ಯಾ ಸೇರಿ ಹಲವು ಕಡೆಗಳಲ್ಲಿ ಸುಮಾರು 2000 ಕೋಟಿ ರು.ಗೂ ಹೆಚ್ಚು ಆಸ್ತಿ ಹೊಂದಿದ್ದು, ವಿಲ್‌ ಮೂಲಕ ಹಂಚಿಕೆ ಮಾಡಿದ್ದರೂ ಅಸಮಾಧಾನ ಮುಂದುವರಿದಿದ್ದು, ಶೂಟೌಟ್‌ಗೆ ಇದೇ ಕಾರಣ ಇರಬಹುದೇ ಎಂಬ ಅನುಮಾನ ವ್ಯಕ್ತವಾಗಿದೆ.

ಮುತ್ತಪ್ಪ ರೈ ತಮ್ಮ ಮೊದಲ ಪತ್ನಿ ರೇಖಾ ರೈ ಸಾವನ್ನಪ್ಪಿದ ನಂತರ ಅನುರಾಧ ರೈ ಅವರನ್ನು 2ನೇ ಮದುವೆ ಮಾಡಿಕೊಂಡಿದ್ದರು. ಮುತ್ತಪ್ಪಗೆ ಅನಾರೋಗ್ಯ ಸಮಸ್ಯೆ ಕಾಡುತ್ತಿದ್ದಂತೆ ಆಸ್ತಿ ಸಂಬಂಧ ಗಲಾಟೆಗಳು ಆರಂಭವಾಗಿದ್ದವು. ಹಾಗಾಗಿ ಮುತ್ತಪ್ಪ ತಾವು ನಿಧನರಾಗುವ ಒಂದು ವರ್ಷ ಮುನ್ನ ಅಂದರೆ 2019ರಲ್ಲಿ ಆಸ್ತಿಗೆ ಸಂಬಂಧಿಸಿದಂತೆ ವಿಲ್ ಮಾಡಿಟ್ಟಿದ್ದರು. 2000 ಕೋಟಿ ರು.ಗೂ ಅಧಿಕ ಮೌಲ್ಯದ ಆಸ್ತಿಗೆ ಸುಮಾರು 41 ಪುಟಗಳ ವಿಲ್ ಬರೆಸಿದ್ದ ಮುತ್ತಪ್ಪ ರೈ, ಪುತ್ರರಾದ ರಾಕಿ ರೈ, ರಿಕ್ಕಿ ರೈ, ಸಹೋದರನ ಪುತ್ರ ಅಶ್ವಿನ್ ರೈ, 2ನೇ ಪತ್ನಿ ಅನುರಾಧ ಸೇರಿ ಮನೆಗೆಲಸದವರ ಬಗ್ಗೆಯೂ ಉಲ್ಲೇಖ ಮಾಡಿದ್ದರು.

2020ರಲ್ಲಿ ಮುತ್ತಪ್ಪ ನಿಧನರಾದ ಬಳಿಕ ಕೋರ್ಟ್​ನಲ್ಲಿ ಆಸ್ತಿಯಲ್ಲಿ ಪಾಲು ಕೇಳಿ ಅವರ 2ನೇ ಪತ್ನಿ ಅನುರಾಧ ದಾವೆ ಹೂಡಿದ್ದರು. ರಾಕಿ ರೈ, ರಿಕ್ಕಿ ರೈರನ್ನು ಪ್ರತಿವಾದಿಗಳಾಗಿ ಮಾಡಿದ್ದರು. ರಾಜಿ ಮೂಲಕ ವಿವಾದ ಇತ್ಯರ್ಥಗೊಂಡಿತ್ತು. ಸುಮಾರು ನೂರು ಕೂಟಿ ರು. ಮೌಲ್ಯದ ಆಸ್ತಿಯನ್ನು ಅನುರಾಧಾ ಅವರಿಗೆ ನೀಡಲಾಗಿತ್ತು.

ಅನುರಾಧಾಗೆ ಚಿನ್ನಾಭರಣ, ಕಾರು, 7 ಕೋಟಿ ರು.ಹಣದ ಜೊತೆ ಎಚ್.ಡಿ. ಕೋಟೆ ಆಸ್ತಿ, ಮಂಡ್ಯ ಜಿಲ್ಲೆ ಪಾಂಡವಪುರದ ಬಳಿ 22 ಎಕರೆ, ಮೈಸೂರನಲ್ಲಿ 4800 ಚದರಡಿ ಸೈಟ್‌ ಹಾಗೂ ಮನೆ, ನಂದಿಬೆಟ್ಟ ಬಳಿಯ ಕೆಂಪತಿಮ್ಮನಹಳ್ಳಿಯಲ್ಲಿ ಐದೂವರೆ ಎಕರೆ ಜಮೀನು ಜೊತೆಗೆ ಸಹಕಾರ ನಗರದಲ್ಲಿ ಎರಡು ಅಂತಸ್ತಿನ ಕಟ್ಟಡವನ್ನು ನಿರ್ಮಿಸಿ ಕೊಡಲಾಗಿದೆ. ಆದರೂ ಅಸಮಾಧಾನ ಮುಂದುವರಿದಿದೆ ಎನ್ನಲಾಗಿದೆ.

2 ಸಾವಿರ ಕೋಟಿ ಬೆಲೆ ಬಾಳುವ ಆಸ್ತಿ?

ವಿಲ್ ಪ್ರಕಾರ ಸುಮಾರು 2 ಸಾವಿರ ಕೋಟಿಗೂ ಅಧಿಕ ಆಸ್ತಿ ಮುತ್ತಪ್ಪ ರೈ ಹೆಸರಿನಲ್ಲಿದೆ. ದೇವನಹಳ್ಳಿ, ಯಲಹಂಕ, ಬಿಡದಿಯಲ್ಲಿ 150ಕ್ಕೂ ಅಧಿಕ ಎಕರೆ ಜಾಗ, ಮೈಸೂರು, ಮಂಗಳೂರು, ಬಂಟ್ವಾಳ, ಪುತ್ತೂರು ಹಾಗೂ ಸಕಲೇಶಪುರದಲ್ಲಿ ನೂರಾರು ಎಕರೆ ಜಮೀನು ಮುತ್ತಪ್ಪ ರೈ ಹೆಸರಿನಲ್ಲಿದೆ.

ಹಂಚಿಕೆ ಹೇಗೆ?

ಮುತ್ತಪ್ಪ ರೈ ಅವರು ಒಟ್ಟು 600ಕ್ಕೂ ಅಧಿಕ ಎಕರೆ ಜಮೀನನ್ನು ತನ್ನಿಬ್ಬರು ಮಕ್ಕಳಾದ ರಿಕ್ಕಿ ಹಾಗೂ ರಾಖಿ ರೈಗೆ ಗಿಫ್ಟ್ ಡೀಡ್ ಮಾಡಿದ್ದಾರೆ. ಆಸ್ತಿಗಳ ಪೈಕಿ ಮೈಸೂರು, ಪುತ್ತೂರು, ಬಂಟ್ವಾಳ, ಮಂಗಳೂರು ಜಾಗವನ್ನು ಹಿರಿಯ ಪುತ್ರ ರಾಖಿ ರೈಗೆ ನೀಡಿದ್ದರೆ, ಸಕಲೇಶಪುರ, ಬಿಡದಿ, ಯಲಹಂಕ ಹಾಗೂ ದೇವನಹಳ್ಳಿ ಜಾಗವನ್ನು ಕಿರಿಯ ಪುತ್ರ ರಿಕ್ಕಿ ರೈಗೆ ಹಂಚಿಕೆ ಮಾಡಿದ್ದಾರೆ.

ಆಪ್ತರು, ಸಂಬಂಧಿಕರಿಗೆ ಶೇ.20 ರಷ್ಟು ಆಸ್ತಿ ನೀಡಬೇಕೆಂದು ಸೂಚಿಸಿದ್ದಾರೆ. ಬಿಡದಿ ಹಾಗೂ ಸದಾಶಿವನಗರದ ಎರಡೂ ಮನೆಗಳ ಜವಾಬ್ದಾರಿಯನ್ನು ರಿಕ್ಕಿ ರೈಗೆ ನೀಡಿದ್ದು ಟ್ರೇಡಿಂಗ್ ವ್ಯವಹಾರ ಕಂಪನಿಯನ್ನು ರಾಖಿ ರೈ ನೋಡಿಕೊಳ್ಳುವಂತೆ ಉಲ್ಲೇಖಿಸಿದ್ದಾರೆ. ಮನೆ ಕೆಲಸಗಾರರಿಗೆ ನಿವೇಶನ :

ನಂಬಿಕೆಯಿಂದ 15 ವರ್ಷಗಳ ಕಾಲ ತನ್ನ ಬಳಿ ಕೆಲಸ ಮಾಡಿದ 25 ಕೆಲಸಗಾರರಿಗೆ ಒಂದೊಂದು ನಿವೇಶನ ಹಾಗೂ ಕೈಲಾದಷ್ಟು ಹಣ ನೀಡುವಂತೆ ಕಿರಿಯ ಪುತ್ರ ರಿಕ್ಕಿ ರೈಗೆ ಸೂಚಿಸಿದ್ದರು. ತಂದೆಯ ಸೂಚನೆಯಂತೆ ರಿಕ್ಕಿ ತಲಾ ಒಬ್ಬೊಬ್ಬರಿಗೆ 3 ಲಕ್ಷ ರುಪಾಯಿಗಳನ್ನು ಹಂಚಿಕೆ ಮಾಡಿದ್ದರು.

Share this article