ನೋಡು ನೋಡುತ್ತಿದ್ದಂತೆ 2024 ಮುಗಿಯುತ್ತಾ ಬಂದಿದೆ. ಹೀಗೆ ಅವಸರದಲ್ಲಿಯೇ ಮುಗಿದಂತೆ ಕಾಣುವ 2024 ಮಾತ್ರ ಕೊಪ್ಪಳ ಜಿಲ್ಲೆಯಲ್ಲಿ ರಾಜಕೀಯ ಏರುಪೇರಾಗಲು ಕಾರಣವಾಗಿದೆ.
ಕನ್ನಡಪ್ರಭ ವಾರ್ತೆ ಕೊಪ್ಪಳ
ಲೋಕಸಭಾ ಚುನಾವಣೆಗೂ ಮುನ್ನ ನಡೆದ ರಾಜಕೀಯ ಹೈಡ್ರಾಮಾ ನಾನಾ ಮಜಲುಗಳಿಗೆ ಸಾಕ್ಷಿಯಾಯಿತು. ಇದು, 2024ರಲ್ಲಿ ನಡೆದ ರಾಜಕೀಯದ ಭಾರಿ ಮಹತ್ವದ ಬೆಳವಣಿಗೆಗೂ ನಾಂದಿಯಾಯಿತು.ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಸತತ ಗೆಲುವು ಸಾಧಿಸುತ್ತಿದ್ದ ಬಿಜೆಪಿ ಹಾಲಿ ಸಂಸದ ಸಂಗಣ್ಣ ಕರಡಿ ಟಿಕೆಟ್ ಕೈ ತಪ್ಪಿದ್ದರಿಂದ ಬಿಜೆಪಿಗೆ ಗುಡ್ ಬೈ ಹೇಳಿ, ಕಾಂಗ್ರೆಸ್ ಸೇರ್ಪಡೆಯಾದರು. ಇದರಿಂದ ಹ್ಯಾಟ್ರಿಕ್ ಬಾರಿಸಿ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಬಿಗುತ್ತಿದ್ದ ಬಿಜೆಪಿ ಪರಾಭವಗೊಂಡು ಕಾಂಗ್ರೆಸ್ ಗೆಲುವು ದಾಖಲಿಸಿತು.
ಹಾಲಿ ಸಂಸದ ಸಂಗಣ್ಣ ಕರಡಿ ಅವರಿಗೆ ಟಿಕೆಟ್ ಕೈತಪ್ಪಿತು. ಕೊನೆಯವರೆಗೂ ಟಿಕೆಟ್‌ಗಾಗಿ ಪ್ರಯತ್ನಿಸಿದ್ದ ಸಂಗಣ್ಣ ಕರಡಿ ಟಿಕೆಟ್ ತಪ್ಪಿದ ಮೇಲೆಯೂ ಬಿಜೆಪಿ ಅಭ್ಯರ್ಥಿಯಾಗಿದ್ದ ಡಾ. ಬಸವರಾಜ ಕ್ಯಾವಟರ್ ಅವರ ಪರವಾಗಿ ಪ್ರಚಾರ ನಡೆಸಿದರು. ಅಚ್ಚರಿ ಎಂದರೆ ನನ್ನ ಹಿರಿತನಕ್ಕೆ ಬಿಜೆಪಿಯಲ್ಲಿ ಗೌರವ ಸಿಗುತ್ತಿಲ್ಲ, ನನ್ನನ್ನು ಅತ್ಯಂತ ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶಗೊಂಡು ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿ, ಕಾಂಗ್ರೆಸ್ ಸೇರ್ಪಡೆಯಾದರು.
ಸತತ ಪ್ರಯತ್ನಿಸಿ ವಿಫಲವಾಗಿದ್ದ ಹಿಟ್ನಾಳ ಕುಟುಂಬಕ್ಕೆ ಗೆಲುವು ಸುಲಭವಾಯಿತು. ಸ್ಪರ್ಧಿಸಿದ್ದ ರಾಜಶೇಖರ ಹಿಟ್ನಾಳ ಗೆಲುವು ದಾಖಲಿಸುವ ಮೂಲಕ ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಡಗಿ ಹೋಗಿದ್ದ ಕಾಂಗ್ರೆಸ್ ಪ್ರಭಾವವನ್ನು ಮತ್ತೆ ಮುನ್ನೆಲೆಗೆ ತರುವಲ್ಲಿ ಯಶಸ್ವಿಯಾದರು. ಜೊತೆಗೆ ತಾವೂ ಸಹ ಸತತ ಸೋಲಿನ ಸುಳಿಯಿಂದ ಪಾರಾದರು.
ಅಲ್ಲಿಯವರೆಗೂ ಬಿಜೆಪಿಯೊಂದಿಗೆ ಬದ್ಧ ವೈರಿಯಂತೆ ಇದ್ದ ಗಾಲಿ ಜನಾರ್ದನರೆಡ್ಡಿ ಅವರು ಮತ್ತೆ ಬಿಜೆಪಿ ಸೇರುವ ಮೂಲಕ ಬಿಜೆಪಿ ನಾಯಕರೊಂದಿಗೆ ಇದ್ದ ಮುನಿಸು ಶಮನ ಮಾಡಿಕೊಂಡರು.
ಸ್ಥಳೀಯ ಸಂಸ್ಥೆಯಲ್ಲಿ ಅಧಿಕಾರ:
ಕಾಂಗ್ರೆಸ್ ಮತ್ತು ಬಿಜೆಪಿ ಜಿಲ್ಲಾಧ್ಯಕ್ಷರು ಬದಲಾಗಿದ್ದು 2024ರಲ್ಲಿಯೇ. ಇದು ಜಿಲ್ಲೆಯ ರಾಜಕೀಯದಲ್ಲಿ ಬಹುದೊಡ್ಡ ಬೆಳವಣಿಗೆಯಾಗಿದೆ. ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಮಾಜಿ ಸಚಿವ ಅಮರೇಗೌಡ ಭಯ್ಯಾಪುರ ನೇಮಕವಾದರೆ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ನವೀನ ಗುಳಗಣ್ಣವರ ನೇಮಕವಾದರು. ಕಾಂಗ್ರೆಸ್‌ನಲ್ಲಿ ಅಷ್ಟಾಗಿ ಪೈಪೋಟಿ ಇರಲಿಲ್ಲವಾದರೂ ಬಿಜೆಪಿಯಲ್ಲಿ ಮಾತ್ರ ಭಾರಿ ಪೈಪೋಟಿಯಾಗಿ ಕೊನೆಗೆ ಹೈಕಮಾಂಡ್ ತೀರ್ಮಾನದಂತೆ ನೇಮಕ ಮಾಡಲಾಯಿತು.