ಜಿಲ್ಲೆಯಲ್ಲಿ 215 ಭಾರತ ಜೋಡೋ ಯುವ ಸಂಘ ಸ್ಥಾಪನೆ

KannadaprabhaNewsNetwork |  
Published : Aug 16, 2026, 03:15 AM IST
15ಕೆಕೆಆರ್3:ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಿದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಸಚಿವ ಶಿವರಾಜ ತಂಗಡಗಿ ಪರೇಡ್ ವಂದನೆ ಸಲ್ಲಿಸಿದರು.  | Kannada Prabha

ಸಾರಾಂಶ

ಜಿಲ್ಲೆಯ 7 ತಾಲೂಕುಗಳಲ್ಲಿ ಒಟ್ಟು 15,19,108 ಜಾತಿ ಪ್ರಮಾಣ ಪತ್ರಗಳು ಇದ್ದು, ಇವುಗಳಲ್ಲಿ ಇದುವರೆಗೂ 12,34,447 ಪ್ರಮಾಣಪತ್ರ ಫಲಾನುಭವಿಗಳ ಮನೆಬಾಗಿಲಿಗೆ ತಲುಪಿಸುವ ಕಾರ್ಯ ಜಿಲ್ಲಾಡಳಿತದಿಂದ ಕೈಗೊಳ್ಳಲಾಗಿದೆ

ಕೊಪ್ಪಳ: ರಾಜ್ಯಾದ್ಯಂತ 10000 ಭಾರತ ಜೋಡೋ ಯುವ ಸಂಘ ಸ್ಥಾಪಿಸಲು ಉದ್ದೇಶ ಹೊಂದಲಾಗಿದ್ದು, ಜಿಲ್ಲೆಯಲ್ಲಿ 215 ಸಂಘಗಳನ್ನು ಸ್ಥಾಪಿಸಲು ಗುರಿ ಹೊಂದಲಾಗಿದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಿದ 80ನೇ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ರಾಜ್ಯದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಸರ್ಕಾರವು ಮಹತ್ವದ 45 ಯೋಜನೆ ಕೈಗೆತ್ತಿಕೊಂಡಿದ್ದು, ಇದರಿಂದ ರಾಜ್ಯದ ಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯ ದೊರೆಯುವದರೊಂದಿಗೆ ಆರ್ಥಿಕ, ಸಮಾಜಿಕವಾಗಿ ಹಿಂದುಳಿದ ವರ್ಗಕ್ಕೆ ಯೋಜನೆಗಳು ವರದಾನವಾಗಿವೆ. ಜಿಲ್ಲೆಯಾದ್ಯಂತ ಒಟ್ಟು 152 ಗ್ರಾಪಂ ಮತ್ತು 10 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ 63 ವಾರ್ಡ್‌ಗಳು ಸೇರಿ 215 ಭಾರತ್ ಜೋಡೋ ಯುವ ಸಂಘ ಸ್ಥಾಪಿಸಲು ಗುರಿ ಹೊಂದಲಾಗಿದೆ. ಪ್ರತಿ ಒಂದು ಸಂಘದಲ್ಲಿ 16-35 ವರ್ಷ ವಯಸ್ಸಿನ ಯುವಕ/ಯುವತಿಯರು ಇರುತ್ತಾರೆ. ಪ್ರತಿ ಸಂಘಕ್ಕೆ ವಾರ್ಷಿಕ ತಲಾ ₹10.00 ಲಕ್ಷಗಳ ಅನುದಾನ ನೀಡಲಾಗುತ್ತದೆ. ಈ ಸಂಘಗಳ ಕಾರ್ಯಕಾರಿ ಸಮಿತಿಗೆ ಸೇರಲು 18 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಈ ಸಂಘಗಳ ಬಲವರ್ಧನೆಗಾಗಿ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಈಗಾಗಲೇ ಮಾರ್ಗದರ್ಶಕರನ್ನು ನೇಮಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯ 7 ತಾಲೂಕುಗಳಲ್ಲಿ ಒಟ್ಟು 15,19,108 ಜಾತಿ ಪ್ರಮಾಣ ಪತ್ರಗಳು ಇದ್ದು, ಇವುಗಳಲ್ಲಿ ಇದುವರೆಗೂ 12,34,447 ಪ್ರಮಾಣಪತ್ರ ಫಲಾನುಭವಿಗಳ ಮನೆಬಾಗಿಲಿಗೆ ತಲುಪಿಸುವ ಕಾರ್ಯ ಜಿಲ್ಲಾಡಳಿತದಿಂದ ಕೈಗೊಳ್ಳಲಾಗಿದೆ. ಸಾರ್ವಜನಿಕರ ಕುಂದುಕೊರತೆ ಆಲಿಸಿ, ಅವುಗಳಿಗೆ ಸಕಾಲದಲ್ಲಿ ಸೂಕ್ತ ಸಮಾಧಾನದ ಪರಿಹಾರ ನೀಡುವುದು ಸರ್ಕಾರದ ಆದ್ಯತೆ ಆಗಿದೆ. ಅದರಂತೆ ರಾಜ್ಯಾದ್ಯಂತ ಪ್ರತೀ ಜಿಲ್ಲೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸ್ಥಳೀಯ ಶಾಸಕರ ನೇತೃತ್ವದಲ್ಲಿ ಪ್ರತಿ ತಿಂಗಳ ಎಲ್ಲ ಶನಿವಾರದಂದು ಪ್ರಜಾಸೇವೆ ಆಂದೋಲನ ಸಭೆಗಳನ್ನು ಆಯೋಜಿಸಲು ಸರ್ಕಾರ ತೀರ್ಮಾನಿಸಿದೆ ಎಂದರು.

ರಾಜ್ಯದ ಯುವ ಜನರು ಕಾತರದಿಂದ ಎದುರು ನೋಡುತ್ತಿದ್ದ ಉದ್ಯೋಗ ನೇಮಕ ಪರ್ವ ಶುರುವಾಗಿದೆ. ಪರಿಶಿಷ್ಟ ಜಾತಿ ಒಳಮೀಸಲು ಹಂಚಿಕೆ ವಿಳಂಬ ಕಾರಣಕ್ಕೆ ನಿಂತಿದ್ದ ರಾಜ್ಯ ಸರ್ಕಾರದ ನಾನಾ ಇಲಾಖೆ ನೇಮಕ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ. 72,186 ಖಾಲಿ ಹುದ್ದೆಗಳ ನೇಮಕಾತಿ 6 ತಿಂಗಳಲ್ಲಿ ಪೂರ್ಣಗೊಳಿಸಿ ಅರ್ಹ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಕಡ್ಡಾಯವಾಗಿ ಹೊರಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಹುದ್ದೆಗಳ ಭರ್ತಿ ಪ್ರಕ್ರಿಯೆ ತ್ವರಿತವಾಗಿ ಪೂರ್ಣಗೊಳಿಸಲು ಮೇಲುಸ್ತುವಾರಿಗಾಗಿ ಉನ್ನತ ಮಟ್ಟದ ಅಧಿಕಾರಿ ನೇಮಿಸಲಾಗಿದೆ. ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ಈ ತೀರ್ಮಾನವು ಸರ್ಕಾರಿ ಹುದ್ದೆ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿರುವ ರಾಜ್ಯದ ಲಕ್ಷಾಂತರ ಸಂಖ್ಯೆಯ ಅಭ್ಯರ್ಥಿಗಳ ಮೊಗದಲ್ಲಿ ಸಂತೋಷ ಮೂಡಿಸಿದೆ ಎಂದು ತಿಳಿಸಿದರು.

ಈ ವೇಳೆ ಗಣ್ಯರ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.

18 ತಂಡಗಳಿಂದ ಪಥಸಂಚಲನ: ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಪೊಲೀಸ್ ಇಲಾಖೆ,ಸಶಸ್ತ್ರ ಮೀಸಲು ಪಡೆ, ಗೃಹ ರಕ್ಷಕದಳ, ಭಾರತ ಸೇವಾದಳ, ಎನ್.ಸಿ.ಸಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸೇರಿದಂತೆ 18 ತಂಡಗಳು ಜಿಲ್ಲಾ ಕ್ರೀಡಾಂಗಣದಲ್ಲಿ ಆಕರ್ಷಕ ಪಥಸಂಚಲನ ನಡೆಸಿ ಸಚಿವರಿಗೆ ಗೌರವ ವಂದನೆ ಸಲ್ಲಿಸಿದವು.

ಸಾಧಕ ವಿದ್ಯಾರ್ಥಿಗಳಿಗೆ, ಕ್ರೀಡಾಪಟುಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಶಾಲಾ, ಕಾಲೇಜು ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳಿಗೆ ನೃತ್ಯ ಮಾಡಿದರು. ಎಲ್ಲರ ಗಮನ ಸೆಳೆದ ವಿದ್ಯಾರ್ಥಿಗಳಿಗೆ ಮತ್ತು ಪಥಸಂಚಲನದಲ್ಲಿ ಭಾಗವಹಿಸಿದ ತಂಡಗಳಿಗೆ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು.

ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಸದ ಕೆ.ರಾಜಶೇಖರ ಹಿಟ್ನಾಳ, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರೆಡ್ಡಿ ಶ್ರೀನಿವಾಸ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಸನ್ನ ಗಡಾದ, ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ, ಡಿಎಫ್‌ಒ ನಿರ್ಮಲಾ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಎಸ್ಪಿ ಡಾ.ರಾಮ್ ಎಲ್.ಅರಸಿದ್ದಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಪ್ಪಳ ಪ್ರಾಧಿಕಾರದಲ್ಲಿ ಕೋಟಿ ಕೋಟಿ ಲೂಟಿ!
ಮಸೂದೆ ಹೆಸರಿನಲ್ಲಿ ಆರ್‌ಎಸ್‌ಎಸ್‌ ಗುರಿ: ಲಿಂಪಾ ಖಂಡನೆ