- ನರಸಿಂಹರಾಜಪುರ ಪಟ್ಟಣ ಪಂಚಾಯಿತಿ ಸರ್ವ ಸದಸ್ಯರ ಸಾಮಾನ್ಯ ಸಭೆ
ಕೇಂದ್ರ ಪುರಸ್ಕೃತ ಅಮೃತ 2.0 ಯೋಜನೆಯಡಿ ಮುತ್ತಿನಕೊಪ್ಪ ತುಂಗಾ ನದಿಯಿಂದ ಪಟ್ಟಣದ ಶಾಶ್ವತ ಕುಡಿಯುವ ನೀರಿನ ಪೂರೈಕೆಗೆ ಮಂಜೂರಾದ ₹22.63 ಕೋಟಿಯಡಿ ಕಾಮಗಾರಿ ಪ್ರಾರಂಭ ವಾಗಿದೆ ಎಂದು ಕುಡಿಯುವ ನೀರು ಸರಬರಾಜು ಇಲಾಖೆ ಕೊಪ್ಪ ಡಿವಿಜನ್ ನ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಆನಂದ್ ಮಾಹಿತಿ ನೀಡಿದರು.
ಶುಕ್ರವಾರ ಪಟ್ಟಣ ಪಂಚಾಯಿತಿಯಲ್ಲಿ ಅಧ್ಯಕ್ಷೆ ಜುಬೇದಾ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಪಟ್ಟಣದ 1800 ಮನೆಗಳಿಗೆ ಹೊಸದಾಗಿ ಪೈಪ್ ಲೈನ್ ಅಳವಡಿಸಿ ಮೀಟರ್ ಸಹಿತ ಪ್ರತಿಯೊಬ್ಬ ವ್ಯಕ್ತಿಗೆ ದಿನಕ್ಕೆ 135 ಲೀ. ನೀರಿನಂತೆ 10 ಲಕ್ಷ ಲೀ. ನೀರು ಸರಬರಾಜು ಮಾಡಲಾಗುವುದು. ಇದಕ್ಕೆ 2.50 ಲಕ್ಷ ಲೀ. ಸಾಮಾರ್ಥ್ಯದ ಟ್ಯಾಂಕ್ ನಿರ್ಮಿಸಲಾ ಗುವುದು.ಈಗಾಗಲೇ ಪಟ್ಟಣದಲ್ಲಿ ಪೈಪ್ ಲೈನ್ ಕಾಮಗಾರಿ ಪ್ರಾರಂಭವಾಗಿದೆ ಎಂದು ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಪಪಂ ಅಧ್ಯಕ್ಷೆ ಜುಬೇದಾ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತಶೆಟ್ಟಿ ಹಾಗೂ ಸದಸ್ಯರು ಮಾತನಾಡಿ, ಪಟ್ಟಣದ ಎರಡು ಬದಿಯಲ್ಲೂ ಪೈಪ್ ಲೈನ್ ಅಳವಡಿಸಬೇಕು. ಹಿಂದೆ ಶಾಶ್ವತ ಕುಡಿಯುವ ನೀರು ಯೋಜನೆ ವಿಫಲವಾದಂತೆ ಆಗದೆ ಸಮರ್ಪಕವಾಗಿ ಈ ಯೋಜನೆ ಕಾಮಗಾರಿ ಮಾಡಬೇಕು ಎಂದು ಸೂಚಿಸಿದರು.
ಕಸವಿಲೇವಾರಿ ಘಟಕದ ಟೆಂಡರ್ ಪಡೆದ ಗುತ್ತಿಗೆದಾರರು ಸಮರ್ಪಕ ಕಾರ್ಯನಿರ್ವಹಿಸುತ್ತಿಲ್ಲ ಎಂದು ಕಂದಾಯ ನಿರೀಕ್ಷಕ ವಿಜಯಕುಮಾರ್ ಸಭೆ ಗಮನಕ್ಕೆ ತಂದರು. ಅಂತಹ ಗುತ್ತಿಗೆದಾರನ ಟೆಂಡರ್ ರದ್ದು ಪಡಿಸುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು. ಪಟ್ಟಣದ ಶಾರದ ವಿದ್ಯಾಮಂದಿರದ ಬಳಿ ಕೆರೆ ಕಾಮಗಾರಿ ಕಳಪೆಯಾಗಿದೆ. ಕೆರೆಗೆ ತಡೆಗೋಡೆ ನಿರ್ಮಿಸಲು ಅನುದಾನ ಮೀಸಲಿಟ್ಟರೂ ಅನುಮೋದನೆ ನೀಡದಿರುವ ಬಗ್ಗೆ ಪ್ರಶಾಂತ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದ ನೂತನವಾಗಿ ನಿರ್ಮಾಣ ವಾಗುತ್ತಿರುವ ಆಶ್ರಯ ಬಡಾವಣೆಗೆ ಶಾಸಕರು ₹4 ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದು ರಸ್ತೆ ಮತ್ತು ಪಾರ್ಕ್ ಗೆ ಟಿ.ಡಿ.ರಾಜೇಗೌಡರ ಹೆಸರಿಡುವಂತೆ ಸಭೆ ತೀರ್ಮಾನಿಸಿತು.
ವೇದಿಕೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತಶೆಟ್ಟಿ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಉಮಾಕೇಶವ್, ಮುಖ್ಯಾಧಿಕಾರಿ ಆರ್.ವಿ. ಮಂಜುನಾಥ್ ಇದ್ದರು. ಪಟ್ಟಣ ಪಂಚಾಯಿತಿ ಸದಸ್ಯರಾದ ಮುಕಂದ, ಮುನಾವರ್ ಪಾಷಾ, ಕುಮಾರ ಸ್ವಾಮಿ, ಸುರೈಯಾಭಾನು, ಮಹಮ್ಮದ್ ವಸೀಂ, ರೀನಾಮೋಹನ್, ರೇಖಾ, ನಾಮಿನಿ ಸದಸ್ಯರಾದ ರಜಿ, ಅಣ್ಣಪ್ಪ, ಸುಬ್ರಮಣ್ಯ , ಲೆಕ್ಕಾಧಿಕಾರಿ ಉಷಾ, ಸಮುದಾಯ ಸಂಘಟಕ ಅಧಿಕಾರಿ ಲಕ್ಷ್ಮಣಗೌಡ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.