ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಹಳುವಾಡಿ ಗ್ರಾಮ ಪಂಚಾಯ್ತಿಯ ಸಾಮಾನ್ಯ ಸಭೆಯ ಗಮನಕ್ಕೆ ತಾರದೆ, ಕ್ರಿಯಾಯೋಜನೆ ರೂಪಿಸಿ ಅನುಮೋದನೆಯನ್ನೂ ಪಡೆಯದೆ ಪಂಚಾಯ್ತಿಯ ಅಂದಿನ ಅಧ್ಯಕ್ಷೆ ಎಚ್.ಎಸ್.ಪ್ರೇಮಾ ಮತ್ತು ಪಿಡಿಒ ನರಸಿಂಹಮೂರ್ತಿ ಇಬ್ಬರೂ ಸೇರಿ ೨೨ ಲಕ್ಷ ರು. ಹಣ ದುರುಪಯೋಗ ಪಡಿಸಿಕೊಂಡಿದ್ದಾರೆಂದು ಗ್ರಾಪಂ ಉಪಾಧ್ಯಕ್ಷ ಎಚ್.ಕೆ.ಮಂಜುನಾಥ್ ಆರೋಪಿಸಿ ನೀಡಿದ್ದ ದೂರಿಗೆ ಸಾಮಾಜಿಕ ಪರಿಶೋಧನಾ ವರದಿಯಲ್ಲೂ ಹಲವಾರು ದೋಷಗಳು ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.೨೦೨೨-೨೩ನೇ ಸಾಲಿನ ಹದಿನೈದನೇ ಹಣಕಾಸು ಯೋಜನೆಯಡಿ ಬಿಡುಗಡೆಯಾದ ಅನುದಾನದಲ್ಲಿ ಅಧ್ಯಕ್ಷ ಮತ್ತು ಪಿಡಿಒ ಅವರು ಜೂ.೨೯, ಜು.೭, ಜು.೧೫ ಹಾಗೂ ನವೆಂಬರ್ ೨೦ರಂದು ೨೨ ಲಕ್ಷ ರು.ಗೂ ಅಧಿಕ ಮೊತ್ತವನ್ನು ಡ್ರಾ ಮಾಡಿಕೊಂಡು ದುರುಪಯೋಗ ಪಡಿಸಿಕೊಂಡಿರುವ ಕುರಿತು ಮಂಡ್ಯ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ತಾಲೂಕು ಪಂಚಾಯ್ತಿ ಇಒ ಅವರಿಗೆ ಕಳೆದ ವರ್ಷ ಜು.೪ರಂದು ದೂರು ನೀಡಿದ್ದರು.
ಹಳುವಾಡಿ ಗ್ರಾಮ ಪಂಚಾಯ್ತಿಯ ಅಧ್ಯಕ್ಷ ಮತ್ತು ಪಿಡಿಒ ಹದಿನೈದನೇ ಹಣಕಾಸು ಯೋಜನೆಯ ಅನುದಾನದಲ್ಲಿ ಯಾವುದೇ ಸಾಮಗ್ರಿ, ನೀರು ಸರಬರಾಜು ಸಾಮಗ್ರಿಗಳು, ಕಂಪ್ಯೂಟರ್ ಸಾಮಗ್ರಿ ಖರೀದಿಸದಿದ್ದರೂ ಹಣ ಡ್ರಾ ಮಾಡಿಕೊಂಡು ಅವ್ಯವಹಾರ ಮಾಡಿದ್ದಾರೆ. ಸಾಮಗ್ರಿಗಳ ಖರೀದಿಗೆ ಸಂಬಂಧಿಸಿದಂತೆ ಸಾಮಾನ್ಯ ಸಭೆಯ ಗಮನಕ್ಕೆ ತರದೆ ಕ್ರಿಯಾ ಯೋಜನೆ, ಅನುಮೋದನೆ ಪಡೆಯದೆ ಅಕ್ರಮ ನಡೆಸಿದ್ದರೆಂದು ದೂರಲಾಗಿತ್ತು.ಈ ಸಂಬಂಧ ೨೦೨೪ರ ಮೇ ೧೬ರಂದು ಜಿಪಂ ಸಿಇಒ ಅವರಿಗೆ ದೂರು ನೀಡಿ ಸೂಕ್ತ ತನಿಖೆ ಹಾಗೂ ಪರಿಶೀಲನೆ ನಡೆಸಿ ಪಿಡಿಒ ನರಸಿಂಹಮೂರ್ತಿ, ಅಂದಿನ ಅಧ್ಯಕ್ಷರಾಗಿದ್ದ ಎಚ್.ಎಸ್.ಪ್ರೇಮಾ ಮತ್ತು ಸಿ.ಆರ್.ಕೃಷ್ಣ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದರು. ಅಲ್ಲದೇ, ಪ್ರತಿಯನ್ನು ರಾಜ್ಯ ಲೋಕಾಯುಕ್ತಕ್ಕೂ ಸಲ್ಲಿಸಲಾಗಿತ್ತು. ಆದರೆ, ಈವರೆಗೂ ಕ್ರಮ ವಹಿಸಿದ ಬಗ್ಗೆ ವರದಿಯಾಗಿರಲಿಲ್ಲ.
ಇದೀಗ ಮಾ.೨೯ರಂದು ಹಳುವಾಡಿ ಗ್ರಾಪಂನ ಸಾಮಾಜಿಕ ಪರಿಶೋಧನಾ ಗ್ರಾಮ ಸಭೆಯಲ್ಲಿ ತಾಲೂಕು ಸಾಮಾಜಿಕ ಪರಿಶೋಧನಾ ವ್ಯವಸ್ಥಾಪಕರು ಡಿಸಿಬಿವಾರು ಕಡತಗಳನ್ನು ನಿರ್ವಹಿಸುತ್ತಿಲ್ಲ. ಡಿಸಿಪಿ ರಿಜಿಸ್ಟರ್ ನಿರ್ವಹಿಸಿಲ್ಲ. ೧೭ ಕಡತಗಳನ್ನು ಸಾಮಾಜಿಕ ಪರಿಶೋಧನೆಗೆ ಒದಗಿಸಿಲ್ಲ. ಸೋಲಾರ್ ದೀಪಗಳನ್ನು ಖರೀದಿಸಿರುವ ದಾಖಲೆಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲ, ಈ ದೀಪಗಳನ್ನು ಅಳವಡಿಸಿರುವ ಸ್ಥಳಗಳ ವಿವರಗಳಿಲ್ಲ, ಲ್ಯಾಪ್‌ಟಾಪ್ ಖರೀದಿಸಿರುವ ಬಗ್ಗೆ ಮಾಹಿತಿ ಇಲ್ಲ, ದಾಸ್ತಾನು ಪುಸ್ತಕ ನಿರ್ವಹಣೆ ಮಾಡಲಾಗಿಲ್ಲ, ಸಿಸಿ ಟಿವಿ ಖರೀದಿ ಬಗ್ಗೆ ದಾಖಲಾತಿಗಳು ಇದ್ದು ಅದನ್ನು ಎಲ್ಲಿ ಅಳವಡಿಸಲಾಗಿದೆ ಎಂಬ ಮಾಹಿತಿಯೇ ಇಲ್ಲ, ಹೀಗೆ ಸಾಮಗ್ರಿಗಳನ್ನೇ ಖರೀದಿಸದೆ ಒಟ್ಟು ೨೯ ಪ್ರಕರಣಗಳಲ್ಲಿ ೧೭.೮೮ ಲಕ್ಷ ರು. ದುರುಪಯೋಗವಾಗಿದೆ ಎಂಬುದನ್ನು ದಾಖಲಿಸಿದ್ದಾರೆ.ಆದ್ದರಿಂದ ಕಾಮಗಾರಿಗಳ ಕಡತಗಳನ್ನು ಕೂಲಂಕುಶವಾಗಿ ಪರಿಶೀಲಿಸಿ, ಸ್ಥಳ ಪರಿಶೀಲನೆ ನಡೆಸಿ ನಂತರ ಕಂಡು ಬಂದ ಅಂಶಗಳಿಗೆ ಅನುಗುಣವಾಗಿ ಕಾಮಗಾರಿಗಳಿಗೆ ಸಂಬಂಧಪಟ್ಟ ಮೊತ್ತವನ್ನು ವಸೂಲಾತಿ ಮಾಡುವ ಅಥವಾ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಅನುಷ್ಠಾನ ಇಲಾಖೆಯು ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಶಿಫಾರಸು ಮಾಡಿರುವುದು ಬೆಳಕಿಗೆ ಬಂದಿದೆ.