22ಕ್ಕೆ ಅನುದಾನ ರಹಿತ ಕನ್ನಡ ಶಾಲಾ ಕಾಲೇಜುಗಳ ಸಮಾವೇಶ: ಕೆಟಿಶ್ರೀ

KannadaprabhaNewsNetwork | Published : Nov 20, 2024 12:30 AM

ಸಾರಾಂಶ

ಕನ್ನಡ ಶಾಲೆಗಳ ಉಳಿವಿಗೆ ಯೋಜನೆ ರೂಪಿಸದೆ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುತ್ತಿರುವುದು ಸರಿಯಲ್ಲ. ಮಕ್ಕಳಿಗೆ ಮೊದಲು ಕನ್ನಡವನ್ನು ಕಲಿಸುವ ಕೆಲಸ ಆಗಬೇಕು. ಆನಂತರ ಸಾಹಿತ್ಯ ಚಟುವಟಿಕೆಯತ್ತ ಗಮನ ಹರಿಸುವುದು ಅಗತ್ಯ .

ಅನುದಾನ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಲು ಸಮಾವೇಶ ಆಯೋಜನೆ

ಕನ್ನಡಪ್ರಭ ವಾರ್ತೆ ಮಂಡ್ಯ

ಅನುದಾನ ರಹಿತ ಕನ್ನಡ ಮಾಧ್ಯಮ ಶಾಲಾ ಕಾಲೇಜುಗಳಿಗೆ ಅನುದಾನ ನೀಡುವಂತೆ ಒತ್ತಾಯಿಸಿ ನ.22ರಂದು ಹುಬ್ಬಳ್ಳಿಯ ಬಯೋಟೆಕ್ ಭವನದಲ್ಲಿ ರಾಜ್ಯ ಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕನ್ನಡ ಶಾಲೆಗಳನ್ನು ಉಳಿಸಿ ಅಭಿಯಾನ ಅಂಗವಾಗಿ 1995ರ ನಂತರ ಪ್ರಾರಂಭವಾದ ಕನ್ನಡ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಸರ್ಕಾರಗಳು ಪ್ರೋತ್ಸಾಹ ನೀಡಬೇಕು ಎಂದು ಆಗ್ರಹಿಸಿದರು.

ಕನ್ನಡ ಶಾಲೆಗಳ ಉಳಿವಿಗೆ ಯೋಜನೆ ರೂಪಿಸದೆ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುತ್ತಿರುವುದು ಸರಿಯಲ್ಲ. ಮಕ್ಕಳಿಗೆ ಮೊದಲು ಕನ್ನಡವನ್ನು ಕಲಿಸುವ ಕೆಲಸ ಆಗಬೇಕು. ಆನಂತರ ಸಾಹಿತ್ಯ ಚಟುವಟಿಕೆಯತ್ತ ಗಮನ ಹರಿಸುವುದು ಅಗತ್ಯ ಎಂದು ಹೇಳಿದರು.

ಹಲವು ವರ್ಷಗಳಿಂದ ಕನ್ನಡ ಶಾಲಾ ಕಾಲೇಜುಗಳಿಗೆ ಅನುದಾನ ನೀಡುವಂತೆ ಒತ್ತಾಯಿಸಿದ್ದರೂ ಆಳುವ ಸರ್ಕಾರಗಳು ಕಣ್ಣೊರೆಸುವ ತಂತ್ರ ಮಾಡುತ್ತಿವೆ. ಈ ಹಿಂದೆ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ 1985 ರಿಂದ 95ರ ವರೆಗಿನ ಕನ್ನಡ ಶಾಲೆಗಳಿಗೆ ಅನುದಾನ ನೀಡಿದ್ದರು. ಆದರೆ, ನಂತರ ಬಂದ ಯಾವುದೇ ಸರ್ಕಾರಗಳು ಅನುದಾನ ನೀಡುವಲ್ಲಿ ಮೀನಮೇಷ ಎಣಿಸುತ್ತಿವೆ ಎಂದು ಆರೋಪಿಸಿದರು.

ಶಾಸಕರಾಗಿದ್ದ ವೇಳೆ ವಿಧಾನ ಪರಿಷತ್ತಿನಲ್ಲೂ ಚರ್ಚೆ ಮಾಡಿದ್ದೇನೆ. ಈ ಹಿಂದೆ ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿ ಅವರೂ ಕೊಡಲು ಒಪ್ಪಿಕೊಂಡಿದ್ದರು. ಆದರೆ, ಅದನ್ನು ಅನುಷ್ಠಾನಗೊಳಿಸುವಲ್ಲಿ ವಿಫಲರಾದರು ಎಂದರು.

ಹಂತ ಹಂತವಾಗಿ 95 ರಿಂದ 2005ರವರೆಗಿನ ಅವಧಿಯೊಳಗಿನ ಶಾಲಾ ಕಾಲೇಜುಗಳನ್ನು ಅನುದಾನಕ್ಕೊಳಪಡಿಸಬೇಕು. ಈಗಾಗಲೇ ಹಲವು ಶಾಲಾ-ಕಾಲೇಜುಗಳು ಮುಚ್ಚಿಹೋಗಿವೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸಲಹೆ ನೀಡಿದರು.

ನ.22ರಂದು ರಾಜ್ಯಮಟ್ಟದ ಸಮಾವೇಶ ಹಮ್ಮಿಕೊಂಡಿದ್ದೇವೆ. ಸಮ್ಮೇಳನ ನಡೆಯುವುದರೊಳಗೆ ನಮ್ಮ ಬೇಡಿಕೆ ಈಡೇರಿಸಿ ಇಲ್ಲದಿದ್ದರೆ ಸಮ್ಮೇಳನದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸುದ್ಧಿಗೋಷ್ಠಿಯಲ್ಲಿ ರಾಜ್ಯ ಅನುದಾನರಹಿತ ಶಾಲಾ ಕಾಲೇಜುಗಳ ಆಡಳಿತ ಮಂಡಳಿಗಳ ಮತ್ತು ನೌಕರರ ಒಕ್ಕೂಟದ ರಾಜ್ಯಾಧ್ಯಕ್ಷ ಬಿ.ಸಿ. ಶಿವಪ್ಪ, ಪ್ರಾಂಶುಪಾಲರ ಸಂಘದ ಅಧ್ಯಕ್ಷ ಭೈರೇಗೌಡ, ಸರ್ಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ ಕೆ. ಕಾಳೇಗೌಡ, ಜಿಲ್ಲಾಧ್ಯಕ್ಷ ಶಿವಕುಮಾರ್, ಜಯಪ್ರಕಾಶ್, ಸುರೇಶ್ ಇದ್ದರು.

------

19ಕೆಎಂಎನ್ ಡಿ16 ಸುದ್ಧಿಗೋಷ್ಠಿಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಮಾತನಾಡಿದರು.

Share this article