229 ಇ-ಶೌಚಾಲಯಗಳನಿರ್ವಹಣೆಗೆ ಟೆಂಡರ್‌: ಪಾಲಿಕೆ

KannadaprabhaNewsNetwork | Published : Jan 25, 2024 2:05 AM

ಸಾರಾಂಶ

ಬೆಂಗಳೂರಿನಲ್ಲಿ ಇ-ಶೌಚಾಲಯ ನಿರ್ವಹಣೆಗೆ ಟೆಂಡರ್‌ ಕರೆಯಲಾಗಿದೆ ಎಂದು ಬಿಬಿಎಂಪಿ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬಿಬಿಎಂಪಿ ವ್ಯಾಪ್ತಿಯಲ್ಲಿ ಹೊಸದಾಗಿ 246 ಸಾರ್ವಜನಿಕ ಶೌಚಾಲಯ, 85 ಹಾಲಿ ಶೌಚಾಲಯಗಳನ್ನು ಮೇಲ್ದರ್ಜೆಗೇರಿಸಲು ಮತ್ತು 229 ಇ-ಶೌಚಾಲಯಗಳ ಕಾರ್ಯಚರಣೆ ಹಾಗೂ ನಿರ್ವಹಣೆಗೆ ಟೆಂಡರ್‌ ಕರೆಯಲಾಗಿದೆ ಎಂದು ಹೈಕೋರ್ಟ್‌ಗೆ ಶುಕ್ರವಾರ ಮಾಹಿತಿ ನೀಡಲಾಗಿದೆ.

ಬೆಂಗಳೂರು ನಗರದಲ್ಲಿ ಸಾರ್ವಜನಿಕ ಶೌಚಾಲಯ ಕೊರತೆಯಿರುವ ಸಂಬಂಧ ಲೆಟ್ಜ್‌ ಕಿಟ್ ಫೌಂಡೇಷನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ಬುಧವಾರ ವಿಚಾರಣೆಗೆ ಬಂದಿತ್ತು.

ಈ ವೇಳೆ ಬಿಬಿಎಂಪಿ ಪರ ವಕೀಲರು ಹಾಜರಾಗಿ, ಸಾರ್ವಜನಿಕ ಶೌಚಾಲಯ ಕೊರತೆ ನೀಗಿಸಲು ಕೈಗೊಂಡಿರುವ ಕ್ರಮಗಳ ಕುರಿತು ಪಾಲಿಕೆಯ ಘನತ್ಯಾಜ್ಯ ನಿರ್ವಹಣಾ ವಿಭಾಗದ ಮುಖ್ಯ ಎಂಜಿನಿಯರ್‌ ಪ್ರವೀಣ್‌ ಲಿಂಗಯ್ಯ ಸಲ್ಲಿಸಿರುವ ವಸ್ತುಸ್ಥಿತಿ ವರದಿಯನ್ನು ನ್ಯಾಯಪೀಠಕ್ಕೆ ಒದಗಿಸಿದರು. ಈ ವರದಿ ದಾಖಲಿಸಿಕೊಂಡ ನ್ಯಾಯಪೀಠ ವಿಚಾರಣೆ ಮುಂದೂಡಿತು.

ನಗರದಲ್ಲಿ ಜನರು ಮತ್ತು ಮಹಿಳೆಯರಿಗಾಗಿ ಸಾರ್ವಜನಿಕ ಶೌಚಾಲಯ ನಿರ್ಮಾಣ ಮತ್ತು ನಿರ್ವಹಣೆ ಮಾಡಲು ಬಿಬಿಎಂಪಿ ಮುಖ್ಯ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ನಗರದಲ್ಲಿರುವ 172 ಇಂದಿರಾ ಕ್ಯಾಂಟೀನ್‌ಗಳಲ್ಲಿರುವ ಶೌಚಾಲಯಗಳನ್ನು ಸಾರ್ವಜನಿಕರ ಬಳಕೆಗೆ ಅನುಮತಿಸುವಂತೆ ಸಮಿತಿ ಅಧ್ಯಕ್ಷರು ಪಾಲಿಕೆಯ ಆರೋಗ್ಯ ವಿಭಾಗದ ವಿಶೇಷ ಆಯುಕ್ತರಿಗೆ ಸೂಚಿಸಿದ್ದಾರೆ. ತಮ್ಮ ವಲಯದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಪ್ರಮುಖ ಪ್ರದೇಶಗಳನ್ನು ಗುರುತಿಸುವಂತೆ ಎಲ್ಲ ವಲಯಗಳ ಆಯುಕ್ತರಿಗೆ ನಿರ್ದೇಶಿಸಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಅಲ್ಲದೇ, ಜನಸಂಚಾರ/ಜನಸಂದಣಿ ಹೆಚ್ಚಿರುವ ಪ್ರದೇಶದಲ್ಲಿ ಹೊಸ ಶೌಚಾಲಯಗಳನ್ನು ನಿರ್ಮಿಸಲು ಘನತ್ಯಾಜ್ಯ ನಿರ್ವಹಣೆ ವಿಭಾಗದ (ಎಸ್‌ಡಬ್ಲ್ಯೂಎಂ) ವಿಶೇಷ ಆಯುಕ್ತರು, ಜಂಟಿ ಆಯುಕ್ತರು, ಮುಖ್ಯ ಎಂಜಿನಿಯರ್‌ಗಳಿಗೆ ನಿರ್ದೇಶಿಸಿದ್ದಾರೆ. ಆ ವಿಭಾಗದ ಮುಖ್ಯಸ್ಥರೊಂದಿಗೆ ಶೀ (SHE) ಶೌಚಾಲಯ ನಿರ್ಮಿಸಲು ವಲಯ ಆಯುಕ್ತರಿಗೆ, 229 ಇ-ಶೌಚಾಲಯಗಳ ಕಾರ್ಯಚರಣೆ ಹಾಗೂ ನಿರ್ವಹಿಸಲು ಕ್ರಮ ವಹಿಸಲು ಎಸ್‌ಡಬ್ಲ್ಯೂಎಂ ಮುಖ್ಯ ಎಂಜಿನಿಯರ್‌ಗೆ ಸಮಿತಿ ಅಧ್ಯಕ್ಷರು ಸೂಚಿಸಿದ್ದಾರೆ. ಸಾರ್ವಜನಿಕ ರೆಸ್ಟೋರೆಂಟ್‌ ಮತ್ತು ಹೋಟೆಲ್‌ಗಳಲ್ಲಿನ ಶೌಚಾಲಯಗಳನ್ನು ಸಾರ್ವಜನಿಕರು ಬಳಸಲು ಸೂಕ್ತ ಆದೇಶ ಹೊರಡಿಸಲು ಕ್ರಮ ಜರುಗಿಸುವಂತೆ ಪಾಲಿಕೆಯ ಆರೋಗ್ಯ ಆಯುಕ್ತರಿಗೆ ಸೂಚಿಸಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಅಲ್ಲದೆ, ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ 100 ಶೀ (ಮಹಿಳೆಯರ ಬಳಕೆಗೆ) ನಿರ್ಮಿಸಲು ಶೀಘ್ರ ಟೆಂಡರ್‌ ಆಹ್ವಾನಿಸಲಾಗುವುದು. ಅದಕ್ಕಾಗಿ 25 ಕೋಟಿ ರು. ಅನುದಾನವನ್ನು 2024-25ನೇ ಬಜೆಟ್‌ನಲ್ಲಿ ಮೀಸಲಿಡಲು ಪ್ರಸ್ತಾವಿಸಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಹೊಸದಾಗಿ 246 ಸಾರ್ವಜನಿಕ ಶೌಚಾಲಯ ನಿರ್ಮಿಸಲು ಈಗಾಗಲೇ ಟೆಂಡರ್‌ ಅಧಿಸೂಚನೆ ಹೊರಡಿಸಲಾಗಿದೆ. 46 ಒಡಿಎಫ್‌++ ನಿರ್ಮಾಣಕ್ಕೆ ಖಾಸಗಿ ಕಂಪನಿಯೊಂದಕ್ಕೆ ಗುತ್ತಿಗೆ ನೀಡಲಾಗಿದೆ. ಹೊಸ ಶೌಚಾಲಯಗಳಲ್ಲಿ ತೃತೀಯ ಲಿಂಗಿಯರು ಮತ್ತು ವಿಕಲಚೇತನರ ಬಳಕೆಗೆ ಪ್ರತ್ಯೇಕ ಶೌಚಾಲಯ ಬ್ಲಾಕ್‌ ಒದಗಿಸಲು ಕ್ರಮ ವಹಿಸಲಾಗಿದೆ. 185 ಹಾಲಿ ಶೌಚಾಲಯಗಳನ್ನು ಮೇಲ್ದರ್ಜೆಗೇರಿಸಲು ಟೆಂಡರ್‌ ಕರೆಯಲಾಗಿದೆ. 229 ಇ-ಶೌಚಾಲಯಗಳ ಕಾರ್ಯಚರಣೆ/ನಿರ್ವಹಣೆಗೆ ಟೆಂಡರ್‌ ಕರೆಯಲಾಗಿದೆ ಎಂದು ವರದಿಯಲ್ಲಿ ಎಂದು ಬಿಬಿಎಂಪಿ ವಿವರಿಸಿದೆ.

Share this article