ಬಳ್ಳಾರಿ: ವಿದ್ಯಾರ್ಥಿ ಭವಿಷ್ಯ ರೂಪಿಸುವ ಪ್ರಮುಖ ಘಟ್ಟವಾದ ಎಸ್ಸೆಸ್ಸೆಲ್ಸಿ ಪರೀಕ್ಷೆ ಮಾ. 18ರಿಂದ ಶುರುಗೊಳ್ಳಲಿದ್ದು, ಬಳ್ಳಾರಿ ಜಿಲ್ಲೆಯ 19,733 ರೆಗ್ಯುಲರ್ ವಿದ್ಯಾರ್ಥಿಗಳು, 1328 ಖಾಸಗಿ ಹಾಗೂ 2009 ಪುನರಾವರ್ತಿತ, 212 ಖಾಸಗಿ ಪುನರಾವರ್ತಿತರು ಸೇರಿದಂತೆ ಒಟ್ಟು 23,282 ಅಭ್ಯರ್ಥಿಗಳು ಈ ಬಾರಿ ಪರೀಕ್ಷೆ ಎದುರಿಸಲಿದ್ದಾರೆ.
ಪರೀಕ್ಷೆ ಸುಗಮವಾಗಿ ನಡೆಯಲು ಈಗಾಗಲೇ ಅಂತಿಮ ಸಿದ್ಧತೆ ಮಾಡಿಕೊಂಡಿದ್ದು ಟೇಬಲ್‌ಗಳಿಗೆ ಪರೀಕ್ಷಾರ್ಥಿಯ ನೋಂದಣಿ ಸಂಖ್ಯೆ ಬರೆಯುವ ಕೆಲಸ ಮಂಗಳವಾರ ಕಂಡು ಬಂತು. ಡಿಡಿಪಿಐ ಸೇರಿದಂತೆ ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪರೀಕ್ಷಾ ತಯಾರಿಯಲ್ಲಿ ಬಿಡುವಿಲ್ಲದ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಪರೀಕ್ಷಾ ಮಂಡಳಿಯ ಉಪ ನಿರ್ದೇಶಕ ಜಗದೀಶ್ ಅವರು ಬಳ್ಳಾರಿಗೆ ಆಗಮಿಸಿ, ಪರೀಕ್ಷಾ ಸಿದ್ಧತೆಯನ್ನು ಪರಿಶೀಲಿಸಿದರು.
ಜಿಲ್ಲೆಯ ಪೈಕಿ ಕುರುಗೋಡು ತಾಲೂಕಿನಲ್ಲಿ ಅತಿ ಹೆಚ್ಚು 9,104 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಕಂಪ್ಲಿ ತಾಲೂಕು ಕುರುಗೋಡು ವಲಯದಲ್ಲಿ ಸೇರಿಕೊಂಡಿರುವುದರಿಂದ ಪರೀಕ್ಷಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಸಿರುಗುಪ್ಪ ತಾಲೂಕಿನಲ್ಲಿ ಅತಿ ಕಡಿಮೆ 4,580 ಜನರು ಪರೀಕ್ಷೆ ಎದುರಿಸಲಿದ್ದಾರೆ ಎಂದು ಡಿಡಿಪಿಐ ಉಮಾದೇವಿ ಅವರು ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು. ಸಂಡೂರು ವಲಯದಲ್ಲಿ 3,853 ಹಾಗೂ ಬಳ್ಳಾರಿ ವಲಯದ 5,745 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸುವರು.ದೂರದ ಊರುಗಳಿಂದ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಕೆಕೆಆರ್‌ಟಿಸಿಯಿಂದ ಉಚಿತ ಬಸ್ ಪ್ರಯಾಣದ ಅವಕಾಶ ಕಲ್ಪಿಸಿದೆ. ಪರೀಕ್ಷಾಪ್ರವೇಶ ಪತ್ರ ತೋರಿಸಿ ವಿದ್ಯಾರ್ಥಿಗಳು ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸಬಹುದು.
ಕೋಟ್...ಅನೇಕ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಎಲ್ಲ ಕಡೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೊಠಡಿ ಮೇಲ್ವಿಚಾರಕರಿಗೆ ಒಂದು ದಿನದ ತರಬೇತಿ ಸಹ ನೀಡಲಾಗಿದೆ. ಪರೀಕ್ಷೆ ಸುಗಮವಾಗಿ ನಡೆಯಲು ಬೇಕಾದ ಪೂರಕ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು
ಕರ್ನಾಟಕ ಪರೀಕ್ಷಾ ಮಂಡಳಿ, ಬಳ್ಳಾರಿ ಜಿಲ್ಲಾವೀಕ್ಷಕರು ಹಾಗೂ ಜಂಟಿ ನಿರ್ದೇಶಕ ಜಗದೀಶ್ ತಿಳಿಸಿದ್ದಾರೆ.ಕಳೆದ ವರ್ಷ ಬಳ್ಳಾರಿ ಜಿಲ್ಲೆ ರಾಜ್ಯದಲ್ಲಿ 28ನೇ ಸ್ಥಾನದಲ್ಲಿತ್ತು. ಈ ಬಾರಿ ನಾವು ಟಾಪ್ 10 ಬರಲಿದ್ದೇವೆ ಎಂದು ಹೇಳುವುದಿಲ್ಲ. ಕನಿಷ್ಠ ಟಾಪ್ 20ರಲ್ಲಿ ಸ್ಥಾನ ಪಡೆಯಬಹುದು ಎಂಬ ನಿರೀಕ್ಷೆಯಂತೂ ಇದೆ. ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆ ಹಿನ್ನೆಲೆಯಲ್ಲಿ ಇಲಾಖೆಯಿಂದ ಗರಿಷ್ಠ ಪ್ರಮಾಣದ ಪ್ರಯತ್ನವಂತೂ ಆಗಿದೆ. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಯಶಸ್ವಿಗೊಳಿಸಲಿ ಎಂದು ಬಳ್ಳಾರಿ ಡಿಡಿಪಿಐ ಬಿ.ಉಮಾದೇವಿ ಹಾರೈಸಿದ್ದಾರೆ.