ಶಿವಕುಮಾರ ಕುಷ್ಟಗಿ ಗದಗ
ಸಂಪೂರ್ಣ ಬರ ಪೀಡಿತ ಜಿಲ್ಲೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ಗದಗ ಜಿಲ್ಲೆಯಲ್ಲಿ 232 ಕ್ಕೂ ಹೆಚ್ಚು ವಿವಿಧ ಜಾತಿಯ ಪಕ್ಷಿಗಳು ಪತ್ತೆಯಾಗಿರುವುದು ಪರಿಸರ ಪ್ರೇಮಿ, ಪಕ್ಷಿ ಪ್ರಿಯರಲ್ಲಿ ಹೊಸ ಉತ್ಸಾಹಕ್ಕೆ ಕಾರಣವಾಗಿದೆ.ಜ. 20, 2025 ರಿಂದ 23ರವರೆಗೆ ನಡೆದ ಗದಗ ಪಕ್ಷಿ ಸಮೀಕ್ಷೆಯಲ್ಲಿ ಈ ಮಹತ್ವದ ಅಂಕಿಗಳು ಪತ್ತೆಯಾಗಿದ್ದು, ಗದಗ ಜಿಲ್ಲೆಯ ಜೀವವೈವಿಧ್ಯ ಸಂರಕ್ಷಣೆ ಮತ್ತು ಸಂಶೋಧನೆಯಲ್ಲಿ ಮಹತ್ವದ ಹೆಜ್ಜೆಯಾಗಿ ದಾಖಲಾಗಿದೆ.
ಗದಗ ಅರಣ್ಯ ವಿಭಾಗ ಮತ್ತು ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯ ಸಹಯೋಗದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಮತ್ತು ಅಧಿಕಾರಿ, ತಜ್ಞರ ಮುಂದಾಳತ್ವದಲ್ಲಿ 35 ಜನ ವನ್ಯಜೀವಿ ವಿದ್ಯಾರ್ಥಿಗಳು, ಸ್ವಯಂ ಸೇವಕರು ಮತ್ತು ಅರಣ್ಯ ಸಿಬ್ಬಂದಿ ಮತ್ತು ಅಧಿಕಾರಿಗಳು ಒಳಗೊಂಡಂತೆ ಒಟ್ಟು 120 ಜನರ ತಂಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ಪಕ್ಷಿಗಳನ್ನು ಪತ್ತೆ ಮಾಡಿದ್ದಾರೆ.15 ಜನರ ಪ್ರತ್ಯೇಕ ತಂಡ: ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ 120 ಜನರಲ್ಲಿ 15 ಜನರನ್ನು ಒಳಗೊಂಡ ಪ್ರತ್ಯೇಕ ತಂಡಗಳನ್ನಾಗಿ ರಚಿಸಲಾಗಿತ್ತು. ಪ್ರತಿಯೊಂದು ತಂಡ ಇಬ್ಬರು ವಿದ್ಯಾರ್ಥಿ ಮತ್ತು ಇಬ್ಬರು ಅರಣ್ಯಾಧಿಕಾರಿಗಳನ್ನು ಒಳಗೊಂಡಿದೆ. ಈ ತಂಡಗಳು ಗದಗ ಅರಣ್ಯ ವಿಭಾಗದ ಗದಗ, ಮುಂಡರಗಿ, ಶಿರಹಟ್ಟಿ ವ್ಯಾಪ್ತಿಗಳಲ್ಲಿ ವ್ಯಾಪಕವಾಗಿ ಸಮೀಕ್ಷೆ ನಡೆಸಿ ಅರಣ್ಯ ಪ್ರದೇಶಗಳು ಸೇರಿದಂತೆ ವಿವಿಧ ಪಕ್ಷಿಗಳು ವಾಸವಿರುವ ಸ್ಥಳ ಮತ್ತು ಜೌಗು ಪ್ರದೇಶಗಳು ಮತ್ತು ಕೃಷಿ ಭೂಮಿ ಸೇರಿದಂತೆ ಅರಣ್ಯೇತರ ಪ್ರದೇಶಗಳಲ್ಲಿಯೂ ಸಮೀಕ್ಷೆ ನಡೆಸಿದ್ದಾರೆ.
ಸಮೀಕ್ಷೆಯಲ್ಲಿ ಒಟ್ಟು 232 ಪಕ್ಷಿ ಪ್ರಭೇದಗಳು ಪತ್ತೆಯಾಗಿದ್ದು, ಅದರಲ್ಲಿ 35 ಪ್ರಭೇದಗಳು ವಲಸೆ ಹಕ್ಕಿಗಳು ಎಂದು ಗುರುತಿಸಲಾಗಿದೆ. ಅದರಲ್ಲಿಯೂ ಪ್ರಮುಖವಾಗಿ ಗ್ರೇ-ನೆಕ್ಡ್ ಬಂಟಿಂಗ್, ಸಾಮಾನ್ಯ ರೆಡ್‌ಸ್ಟಾರ್ಟ್, ಪೆಸಿಫಿಕ್ ಗೋಲ್ಡನ್ ಪ್ಲವರ್, ಗ್ರೇಲ್ಯಾಗ್ ಗೂಸ್, ಬಾರ್- ಹೆಡೆಡ್ ಗೂಸ್, ಅರಣ್ಯ ವ್ಯಾಗ್ಟೇಲ್, ಗ್ರೇಟರ್ ಸ್ಪಾಟೆಡ್ ಈಗಲ್, ಸ್ಟೆಪ್ಪೆ ಈಗಲ್, ಪೆರೆಗ್ರಿನ್ ಫಾಲ್ಕನ್, ಕಪ್ಪು ಬಾಲದ ಗಾಡ್ವಿಟ್, ಬೈಲನ್ಸ್ ಕ್ರೇಕ್, ರಡ್ಡಿ ಶೆಲ್ಡಕ್ ಪ್ರಭೇದಗಳು ಗುರುತಿಸಲ್ಪಟ್ಟಿವೆ.ಜೀವವೈವಿಧ್ಯತೆಯ ಅರಿವು ಮತ್ತು ವೈಜ್ಞಾನಿಕ ತಿಳಿವಳಿಕೆ ಬೆಳೆಸುವಲ್ಲಿ ಇಂತಹ ಸಮೀಕ್ಷೆ ಹೆಚ್ಚು ಸಹಕಾರಿಯಾಗಿವೆ. ಈ ಸಮೀಕ್ಷೆಯು ಗದಗ ಪರಿಸರದಲ್ಲಿರುವ ಪಕ್ಷಿ ಸಂಪತ್ತನ್ನು ದಾಖಲಿಸುವ ಮೂಲಕ ಅದನ್ನು ಜಗತ್ತಿಗೆ ಗೊತ್ತುಪಡಿಸುವ ಮಹತ್ವದ ಕಾರ್ಯವಾಗಿದೆ. ಪಕ್ಷಿ ಸಂಕುಲ ಉಳಿಸುವುದು ಮತ್ತು ಉತ್ತೇಜಿಸುವಲ್ಲಿ ಸಮುದಾಯದ ಒಳಗೊಳ್ಳುವಿಕೆ ಅತೀ ಮುಖ್ಯವಾಗಿದೆ ಎಂದು ಜೀವ ವೈವಿಧ್ಯ ಸಂಶೋಧಕ ಮಂಜುನಾಥ ನಾಯಕ ತಿಳಿಸಿದ್ದಾರೆ.ಗದಗ ಪಕ್ಷಿ ಸಮೀಕ್ಷೆ 2025 ರಲ್ಲಿ 232 ವಿವಿಧ ಜಾತಿಯ ಹಕ್ಕಿಗಳನ್ನು ದಾಖಲಿಸಲಾಗಿದ್ದು, ಅದರಲ್ಲಿ 35 ವಲಸೆ ಹಕ್ಕಿಗಳಾಗಿವೆ, ಈ ಸಮೀಕ್ಷೆ ಅಧಿಕೃತ ಅಂಕಿ ಅಂಶಗಳಿಂದ ಹೆಚ್ಚಿನ ಸಂಶೋಧನೆ ಮತ್ತು ಸಂರಕ್ಷಣಾ ಯೋಜನೆಗೆ ಕೊಡುಗೆ ನೀಡುತ್ತವೆ. ಗದಗ ಜಿಲ್ಲೆಯ ಅನನ್ಯ ಜೀವವೈವಿಧ್ಯತೆ ಇದೆ, ಅದಕ್ಕೆ ನಿರಂತರ ರಕ್ಷಣೆ ಅವಶ್ಯಕತೆಯೂ ಇದೆ ಎಂದು ಗದಗ ಡಿಸಿಎಫ್ ಸಂತೋಷ ಕುಮಾರ ಕೆಂಚಪ್ಪನವರ ತಿಳಿಸಿದ್ದಾರೆ.
ಗದಗ ಪಕ್ಷಿ ಸಮೀಕ್ಷೆಯಲ್ಲಿ ಭಾಗವಹಿಸಿ ಜೀವ ವೈವಿಧ್ಯತೆ ದಾಖಲಿಸುವ ಅವಕಾಶ ನನಗೆ ಸಿಕ್ಕಿರುವುದು ಸಂತಸ ತಂದಿದೆ. ಈ ಸಮೀಕ್ಷೆಯು ಪಕ್ಷಿಗಳ ಜನಸಂಖ್ಯೆ ಮತ್ತು ಅವುಗಳ ವಾಸಸ್ಥಾನ, ಅರ್ಥಮಾಡಿಕೊಳ್ಳಲು ಸಹಕಾರಿಯಾಗಿದೆ ಎಂದು ವನ್ಯಜೀವಿ ಸಂಶೋಧನಾ ವಿದ್ಯಾರ್ಥಿ ಕಾರ್ತಿಕ್.ಎನ್.ಜೆ ಹೇಳಿದ್ದಾರೆ.