ಮೂಡುಬಿದಿರೆ ತಾಲೂಕಿನಲ್ಲಿ ೨೫ ಡೆಂಘೀ ಪ್ರಕರಣಗಳು ಪತ್ತೆ

KannadaprabhaNewsNetwork | Published : Jul 11, 2024 1:40 AM

ಸಾರಾಂಶ

ಮೂಡುಬಿದಿರೆ ತಾಲೂಕಿನಲ್ಲಿ ಇಲ್ಲಿಯವರೆಗೆ ಒಟ್ಟು ೨೫ ಡೆಂಘೀ ಪ್ರಕರಣ ಪತ್ತೆಯಾಗಿದೆ. ಕೆಲವರು ಖಾಸಗಿ ಆಸ್ಪತ್ರೆಗೆ ಹೋಗುವುದರಿಂದ ಡೆಂಘೀ ಪ್ರಕರಣಗಳ ಮಾಹಿತಿಗಳು ತಡವಾಗಿ ಲಭ್ಯವಾಗುತ್ತಿದೆ ಎಂದು ವೈದ್ಯಾಧಿಕಾರಿ ಶರತ್ ಹೇಳಿದರು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಮೂಡುಬಿದಿರೆ ತಾಲೂಕಿನಲ್ಲಿ ಸಾಂಕ್ರಾಮಿಕ ರೋಗಗಳು ತಡೆಗೆ ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆರೋಗ್ಯ ಸುರಕ್ಷಾ ಸಿಬ್ಬಂದಿ ಜನರಲ್ಲಿ ಸೂಕ್ತ ಸಮಯಕ್ಕೆ ಮುನ್ನೆಚ್ಚರಿಕೆ ಕ್ರಮಗಳ ಮಾಹಿತಿ ನೀಡುತ್ತಿದ್ದಾರೆ. ಇಲ್ಲಿಯವರೆಗೆ ಒಟ್ಟು ೨೫ ಡೆಂಘೀ ಪ್ರಕರಣ ಪತ್ತೆಯಾಗಿದೆ. ಕೆಲವರು ಖಾಸಗಿ ಆಸ್ಪತ್ರೆಗೆ ಹೋಗುವುದರಿಂದ ಡೆಂಘೀ ಪ್ರಕರಣಗಳ ಮಾಹಿತಿಗಳು ತಡವಾಗಿ ಲಭ್ಯವಾಗುತ್ತಿದೆ ಎಂದು ವೈದ್ಯಾಧಿಕಾರಿ ಶರತ್ ಹೇಳಿದರು.

ಮೂಡುಬಿದಿರೆ ಸಮಾಜಮಂದಿರದಲ್ಲಿ ಮಂಗಳವಾರ ನಡೆದ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಡೆಂಘೀ ಕುರಿತು ಅವರು ಮಾಹಿತಿ ನೀಡಿದರು.

ತಾಪಂ ಆಡಳಿತಾಧಿಕಾರಿ, ಮಂಗಳೂರು ಪಶು ಸಂಗೋಪನೆ ಮತ್ತು ವೈದ್ಯಕೀಯ ಇಲಾಖೆಯ ಉಪನಿರ್ದೇಶಕ ಅರುಣ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಡೆಂಘೀ ಸಹಿತ ಸಾಂಕ್ರಾಮಿಕ ರೋಗಗಳ ತಡೆಗೆ ಹೆಚ್ಚಿನ ಮುತುವರ್ಜಿವಹಿಸುವುದು ಅಗತ್ಯ. ಪ್ರಕೃತಿ ವಿಕೋಪಕಕ್ಕೆ ಮೊದಲೇ ಆಯಾಯ ಇಲಾಖೆಯವರು ಮುಂಜಾಗ್ರತ ಕ್ರಮವನ್ನು ಕೈಗೊಳ್ಳುವುದರ ಮೂಲಕ ಹಾನಿಗಳನ್ನು ತಪ್ಪಿಸಬೇಕು. ತಾಲೂಕಿನಲ್ಲಿ ಅನುಷ್ಠಾನ ಇಲಾಖೆಯವರು ನರೇಗಾವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕಾಗಿದೆ. ಸರ್ಕಾರಿ ಹಾಸ್ಟೆಲ್‌ಗಳ ಪರಿಸ್ಥಿತಿ, ಗುಣಮಟ್ಟದ ಆಹಾರ ಪೂರೈಕೆಯ ಕುರಿತು ಅಧಿಕಾರಿಗಳು ಸೂಕ್ತ ಸಮಯದಲ್ಲಿ ಪರಿಶೀಲನೆ ನಡೆಸಬೇಕು ಎಂದು ಅವರು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.

ಮೆಸ್ಕಾಂ ಸಹಾಯಕ ಕಾರ್ಯನಿರ್ವಹಕ ಅಭಿಯಂತರ ಮೋಹನ ಕುಮಾರ್ ಇಲಾಖೆಯ ಮಾಹಿತಿ ನೀಡಿ, ಕಂಬಗಳಿಗೆ ಹಾನಿ, ತಂತಿ ಬದಲಾವಣೆ, ವಿದ್ಯುತ್‌ಗೆ ತೊಂದರೆಯಾಗುವ ಅಪಾಯಕಾರಿ ಮರಗಳ ತೆರವು ಸಹಿತ ಸಾರ್ವಜನಿಕರಿಂದ ಬರುವ ದೂರುಗಳಿಗೆ ತಕ್ಷಣ ಸ್ಪಂದಿಸುತ್ತಿದ್ದೇವೆ. ಮಳೆಗಾಲದಲ್ಲಿ ಕೆಲಸ ಮಾಡಲು ೧೭ ಗ್ಯಾಂಗ್‌ಮ್ಯಾನ್ ಹಾಗೂ ೧ ವಾಹನವನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ೨೯ ಸಾವಿರ ಗ್ರಾಹಕರಲ್ಲಿ ಸುಮಾರು ೨೮ ಸಾವಿರ ಗ್ರಾಹಕರು ಗೃಹಜ್ಯೋತಿ ಯೋಜನೆಯ ಪ್ರಯೋಜನವನ್ನು ಪಡೆಯುತ್ತಿದ್ದಾರೆ ಎಂದರು.

೨೪ ಸಾವಿರ ಗಿಡಗಳನ್ನು ವಿತರಿಸಲಾಗಿದೆ ಎಂದು ಸಾಮಾಜಿಕ ಅರಣ್ಯ ಅಧಿಕಾರಿ ಆನಂದ್‌ ಸಭೆಗೆ ತಿಳಿಸಿದರು. ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಲೋಕೇಶ್‌, ಪ್ರೊಬೆಶನರಿ ಐಎಎಸ್ ಅಧಿಕಾರಿ ಶ್ರವಣ್ ಕುಮಾರ್ ಉಪಸ್ಥಿತರಿದ್ದರು. ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕ ಸಾಯೀಶ್ ಚೌಟ ಕಾರ್ಯಕ್ರಮ ನಿರೂಪಿಸಿದರು.

Share this article