ಕನ್ನಡಪ್ರಭ ವಾರ್ತೆ ಗೋಕಾಕ
ಸಾರ್ವಜನಿಕ ಸಂಚಾರಕ್ಕೆ ಅಗತ್ಯವಿರುವ ಮನ್ನಿಕೇರಿಯಿಂದ ಬೆಟಗೇರಿ ಮತ್ತು ಮನ್ನಿಕೇರಿಯಿಂದ ಕೌಜಲಗಿವರೆಗಿನ ರಸ್ತೆ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆಯಿಂದ ₹25 ಕೋಟಿ ಮಂಜೂರಾಗಿದ್ದು, ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಂಡು ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ ಹೇಳಿದರು.ಕೌಜಲಗಿ ಸಮೀಪದ ಮನ್ನಿಕೇರಿ ಗ್ರಾಮದ ಹತ್ತಿರ ಭಾನುವಾರ ಜರುಗಿದ ಲೋಕೋಪಯೋಗಿ ಇಲಾಖೆಯ ಎಸ್ಎಚ್ಡಿಪಿ 5ನೇ ಹಂತದ ಯೋಜನೆಯ ₹13 ಕೋಟಿ ವೆಚ್ಚದ ಬೆಟಗೇರಿ-ಬಗರನಾಳ-ಮನ್ನಿಕೇರಿ ರಸ್ತೆ ಅಭಿವೃದ್ಧಿ ಮತ್ತು ಅಗಲೀಕರಣ ಕಾಮಗಾರಿ ಮತ್ತು ₹12 ಕೋಟಿ ವೆಚ್ಚದ ಬಾದಾಮಿ-ಗೊಡಚಿ-ಗೋಕಾಕ ಫಾಲ್ಸ್ ರಾಜ್ಯ ಹೆದ್ದಾರಿ-134ರ ಮನ್ನಿಕೇರಿಯಿಂದ ಕೌಜಲಗಿವರೆಗಿನ ರಸ್ತೆ ಅಭಿವೃದ್ಧಿ ಮತ್ತು ಅಗಲೀಕರಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರ ಪ್ರಯತ್ನದಿಂದ ಈ ಎರಡೂ ರಸ್ತೆ ಅಭಿವೃದ್ಧಿಗೆ ₹25 ಕೋಟಿ ಬಿಡುಗಡೆಗೊಂಡಿದೆ ಎಂದು ತಿಳಿಸಿದರು.
ಕೌಜಲಗಿ, ಮನ್ನಿಕೇರಿ, ಬೆಟಗೇರಿ, ಬಗರನಾಳ ಸಾರ್ವಜನಿಕರ ಸಂಚಾರಕ್ಕೆ ಅಡಚಣೆಯಾಗಿದ್ದು, ಸಂಚಾರ ಸುಗಮವಾಗಿರಲಿಲ್ಲ. ಗ್ರಾಮಸ್ಥರು ನೀಡಿರುವ ಮನವಿ ಆಧರಿಸಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸರ್ಕಾರದ ಮೇಲೆ ಒತ್ತಡ ತಂದು ಅಭಿವೃದ್ಧಿಗೆ ನೆರವು ತಂದಿದ್ದಾರೆ. ಈ ಮೂಲಕ ಸಾರ್ವಜನಿಕರ ಕುಂದು-ಕೊರತೆ ನೀಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ ಎಂದರು.ಮನ್ನಿಕೇರಿಯ ಮಹಾಂತ ಸಿದ್ದೇಶ್ವರ ಸ್ವಾಮೀಜಿ, ವೇದಮೂರ್ತಿ ಮಹಾಂತಯ್ಯ ಹಿರೇಮಠ, ಜಿಪಂ ಮಾಜಿ ಸದಸ್ಯರಾದ ರಾಜೇಂದ್ರ ಸಣ್ಣಕ್ಕಿ, ಪರಮೇಶ್ವರ ಹೊಸಮನಿ, ರವಿ ಪರುಶೆಟ್ಟಿ, ಗ್ರಾಪಂ ಮಾಜಿ ಅಧ್ಯಕ್ಷ ಬಾಳಪ್ಪ ಗೌಡರ, ಮುದುಕಪ್ಪ ಗೋಡಿ, ಸುಭಾಸ ಹಾವಾಡಿ, ಪುಂಡಲೀಕ ದಳವಾಯಿ, ಬಸನಗೌಡ ಪಾಟೀಲ, ಪ್ರಮುಖರಾದ ಸತೀಶ ಗಡಾದ, ಬಸವರಾಜ ನಾಯಿಕರ, ಹಣಮಂತ ಹಾವಾಡಿ, ಪಿಡಬ್ಲುಡಿ ಎಇ ಎಸ್.ಎಸ್.ಗಸ್ತಿ, ಗುತ್ತಿಗೆದಾರರಾದ ಮನೀಷ್ ಶೆಟ್ಟಿ, ಸುಧಾಕರ ಶೆಟ್ಟಿ, ಕೌಜಲಗಿ-ಮನ್ನಿಕೇರಿ-ಬಗರನಾಳ ಗ್ರಾಮಗಳ ಮುಖಂಡರು ಉಪಸ್ಥಿತರಿದ್ದರು.ಮನ್ನಿಕೇರಿಯಿಂದ ಕೌಜಲಗಿವರೆಗಿನ ರಸ್ತೆ ಅಭಿವೃದ್ಧಿಗೆ ₹12 ಕೋಟಿ ಮತ್ತು ಮನ್ನಿಕೇರಿಯಿಂದ ಬಗರನಾಳ, ಬೆಟಗೇರಿವರೆಗಿನ ರಸ್ತೆ ಕಾಮಗಾರಿಗೆ ₹13 ಕೋಟಿ ಅನುದಾನ ಬಂದಿದೆ. ಗುಣಮಟ್ಟದ ರಸ್ತೆ ಅಭಿವೃದ್ಧಿ ಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಲೋಕೋಪಯೋಗಿ ಇಲಾಖೆಯಿಂದ ಕ್ಷೇತ್ರದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಕೊಟ್ಟಿರುವ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ.
-ಬಾಲಚಂದ್ರ ಜಾರಕಿಹೊಳಿ, ಶಾಸಕ ಅರಬಾವಿ.ಗುಣಮಟ್ಟದ ರಸ್ತೆ ನಿರ್ಮಾಣ ಮಾಡಬೇಕು. ಈ ಭಾಗದಲ್ಲಿ ದಿನನಿತ್ಯ ಸಾರ್ವಜನಿಕ ಸಂಚಾರ ಹೆಚ್ಚುತ್ತಿರುವುದರಿಂದ ಉತ್ತಮ ರಸ್ತೆ ನಿರ್ಮಾಣಕ್ಕೆ ಅಧಿಕಾರಿಗಳು ರಸ್ತೆ ಕೆಲಸ ನಡೆಯುವ ಸ್ಥಳಕ್ಕೆ ಭೇಟಿ ನೀಡುವ ಮೂಲಕ ಚುರುಕಿನ ಕೆಲಸಕ್ಕೆ ಮುಂದಾಗಬೇಕು.
-ಸರ್ವೋತ್ತಮ ಜಾರಕಿಹೊಳಿ, ಯುವ ಮುಖಂಡರು.