ತುಮಕೂರು : ಪ್ರವಾಸೋದ್ಯಮ ಅಭಿವೃದ್ಧಿಗಾಗಿ ನಗರದ ಅಮಾನಿಕೆರೆಯಲ್ಲಿ 25 ಕೋಟಿ ರು. ವೆಚ್ಚದಲ್ಲಿ ಗ್ಲಾಸ್ ಬ್ರಿಡ್ಜ್(ಗಾಜಿನ ಸೇತುವೆ) ನಿರ್ಮಾಣಕ್ಕೆ ನೀಲ ನಕ್ಷೆಯನ್ನು ಸಿದ್ಧಪಡಿಸಲಾಗಿದೆ ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದರು.
ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ ತುಮಕೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು 200 ಕೋಟಿ ರು.ಗಳ ಅನುದಾನಕ್ಕೆ ಸರ್ಕಾರ ಅನುಮೋದನೆ ನೀಡಿದ್ದು, ಈ ಅನುದಾನದಲ್ಲಿ 25 ಕೋಟಿ ರು. ಬಳಸಿಕೊಂಡು ಗಾಜಿನ ಸೇತುವೆಯನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು
ಸ್ಮಾರ್ಟ್ ಸಿಟಿ ಯೋಜನೆಯಡಿ ಮಹಾನಗರ ಪಾಲಿಕೆ ವ್ಯಾಪ್ತಿಯ 5 ವಾರ್ಡುಗಳನ್ನು ಈಗಾಗಲೇ ಅಭಿವೃದ್ಧಿಪಡಿಸಲಾಗಿದ್ದು, ಉಳಿದ 30 ವಾರ್ಡುಗಳ ಅಭಿವೃದ್ಧಿಗಾಗಿ 200 ಕೋಟಿ ರು.ಗಳನ್ನು ವ್ಯಯಿಸಲಾಗುವುದು. ಈ ಅನುದಾನವನ್ನು ಬಳಸಿಕೊಂಡು ಬೆಂಗಳೂರಿನ ಲಾಲ್‌ಬಾಗ್ ಮಾದರಿಯಲ್ಲಿ ನಗರದ ಅಕ್ಕ-ತಂಗಿ ಕೆರೆ ಅಭಿವೃದ್ಧಿ, 137 ಕೋಟಿ ರು. ವೆಚ್ಚದಲ್ಲಿ 202 ರಸ್ತೆ ನಿರ್ಮಾಣ, ಅಮಾನಿಕೆರೆಯನ್ನು ಸ್ವಚ್ಛಗೊಳಿಸಿ ಮಕ್ಕಳಿಗಾಗಿ ಸಾಹಸ ಕ್ರೀಡೆಗೆ ಅವಕಾಶ ನೀಡುವುದರೊಂದಿಗೆ ಐಲ್ಯಾಂಡ್, ಬರ್ಡ್ ಪಾರ್ಕ್ ನಿರ್ಮಾಣ, 18 ಉದ್ಯಾನವನಗಳ ಅಭಿವೃದ್ಧಿ, ತಲಾ 6 ಕೋಟಿ ರು. ವೆಚ್ಚದಲ್ಲಿ ನಗರದ ಖಾಸಗಿ ಬಸ್ ನಿಲ್ದಾಣದ ಆಧುನೀಕರಣ ಹಾಗೂ ಗುಬ್ಬಿ ವೀರಣ್ಣ ಕಲಾ ಕ್ಷೇತ್ರದ ಕಟ್ಟಡವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.
ರಾಜ್ಯದ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತುಮಕೂರಿನ ಆಸುಪಾಸಿನಲ್ಲಿ ನಿರ್ಮಿಸುವಂತೆ ಐಟಿಬಿಟಿ ಸಚಿವರಿಗೆ ಮನವಿ ಮಾಡಲಾಗಿದ್ದು, ವಿಮಾನ ನಿಲ್ದಾಣ ನಿರ್ಮಾಣಕ್ಕೆ ಈಗಾಗಲೇ ಜಿಲ್ಲೆಯ ವಸಂತ ನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಂತೆ ರಾಷ್ಟ್ರೀಯ ಹೆದ್ದಾರಿ 48 ರ ಸಮೀಪ 3 ಸಾವಿರ ಎಕರೆ ಹಾಗೂ ಶಿರಾ ತಾಲೂಕಿನ ಸೀಬಿ ದೇವಸ್ಥಾನದ ಸಮೀಪ 5 ಸಾವಿರ ಎಕರೆ ಭೂಮಿಯನ್ನು ಗುರುತಿಸಲಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಹೆಲಿಕಾಪ್ಟರ್ ತಯಾರಿಕಾ ಘಟಕ ಕಾರ್ಯನಿರ್ವಹಿಸುತ್ತಿರುವ ಗುರುತಿಗಾಗಿ ನಗರದ ಹೃದಯಭಾಗದ ಟೌನ್‌ಹಾಲ್ ಪಕ್ಕದಲ್ಲಿ ಹೆಲಿಕಾಪ್ಟರ್ ಮಾದರಿಯನ್ನು ಇರಿಸಲಾಗುವುದು. ಪಾಲಿಕೆ ಆವರಣದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ಥಳಿ ನಿರ್ಮಿಸುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದ್ದು, ಸರ್ಕಾರದಿಂದ ಅನುಮತಿ ದೊರೆತ ನಂತರ ಪುತ್ಥಳಿಯನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿ ವಿವಿಧ ಇಲಾಖೆಗಳಲ್ಲಿ 2.50 ಲಕ್ಷ ಹುದ್ದೆಗಳು ಖಾಲಿಯಿದ್ದು, ಹಂತ-ಹಂತವಾಗಿ ಖಾಲಿ ಹುದ್ದೆಗಳ ನೇಮಕಾತಿ ಮಾಡಲಾಗುವುದು. ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜು ಹಾಗೂ ಇಂಜಿನಿಯರಿಂಗ್ ಕಾಲೇಜು ಮಂಜೂರು ಮಾಡುವ ಕುರಿತು ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಲಾಗಿದ್ದು, ಶೀಘ್ರದಲ್ಲೇ ಮಂಜೂರಾತಿಯ ಹಸಿರು ನಿಶಾನೆ ದೊರೆಯಲಿದೆ ಎಂದರು.ಮೈಕ್ರೋಫೈನಾನ್ಸ್ ಸಂಸ್ಥೆಗಳು ಸಾಲದ ಹಣ ವಸೂಲಿ ಮಾಡಲು ಬಡವರಿಗೆ ತೊಂದರೆ ನೀಡಿದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅನಧಿಕೃತ ಮೈಕ್ರೋಫೈನಾನ್ಸ್ ಹಾವಳಿಯನ್ನು ಮಟ್ಟ ಹಾಕಲು ಜಿಲ್ಲಾಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ನೀಡಲಾಗುವುದು. ಈ ಬಾರಿ ಕೇಂದ್ರದ ಆಯವ್ಯಯದಲ್ಲಿ ರಾಜ್ಯದ ಪಾಲಿನ ತೆರಿಗೆ ಹಣ ನೀಡುವ ಹಾಗೂ ಭದ್ರಾ ಮೇಲ್ದಂಡೆ ಯೋಜನೆಗಾಗಿ 5300 ಕೋಟಿ ರು. ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ತಿಳಿಸಿದರು.