ಸಿವಿಲ್‌ ಗುತ್ತಿಗೆದಾರರ ₹ 25 ಸಾವಿರ ಕೋಟಿ ಬಿಲ್‌ ಬಾಕಿ!

KannadaprabhaNewsNetwork |  
Published : Nov 29, 2024, 01:04 AM IST
454 | Kannada Prabha

ಸಾರಾಂಶ

ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಸಿವಿಲ್‌ ಗುತ್ತಿಗೆದಾರರ ಹಣ ನೀಡುತ್ತಲೇ ಇಲ್ಲ ಎಂದು ಕಾಂಗ್ರೆಸ್ಸಿಗರು ಆರೋಪಿಸುತ್ತಿದ್ದರು.ಇದೀಗ ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬಂದರೂ ಸಿವಿಲ್‌ ಗುತ್ತಿಗೆದಾರರ ಹಣ ಮಾತ್ರ ಬಿಡುಗಡೆಯಾಗುತ್ತಿಲ್ಲ.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ಗ್ಯಾರಂಟಿ ಯೋಜನೆಗಳಿಂದಾಗಿ ಶಾಸಕರ ಕ್ಷೇತ್ರಗಳಿಗೆ ಅನುದಾನವೇ ಸಿಗುತ್ತಿಲ್ಲ ಎಂದು ಕಾಂಗ್ರೆಸ್‌ ಶಾಸಕರೇ ಆರೋಪಿಸುವುದು ಮಾಮೂಲಿಯಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಉತ್ತರ ಕರ್ನಾಟಕದಲ್ಲಿ ವಿವಿಧ ಯೋಜನೆಗಳ ಕೆಲಸ ಮಾಡಿದ ಸಿವಿಲ್‌ ಗುತ್ತಿಗೆದಾರರಿಗೆ ₹ 25 ಸಾವಿರ ಕೋಟಿಗೂ ಅಧಿಕ ಹಣವನ್ನು ಕಾಂಗ್ರೆಸ್‌ ಸರ್ಕಾರ ಬಾಕಿಯುಳಿಸಿಕೊಂಡಿದೆ. ಸಾಲ ಮಾಡಿ ತಂದು ಕೆಲಸ ನಿರ್ವಹಿಸಿದ್ದೇವೆ. ಬಾಕಿ ಬಿಲ್‌ ನೀಡಿ ಪುಣ್ಯಕಟ್ಟಿಕೊಳ್ಳಿ ಎಂಬ ಕೂಗು ಸಿವಿಲ್‌ ಗುತ್ತಿಗೆದಾರರದು.

ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಸಿವಿಲ್‌ ಗುತ್ತಿಗೆದಾರರ ಹಣ ನೀಡುತ್ತಲೇ ಇಲ್ಲ ಎಂದು ಕಾಂಗ್ರೆಸ್ಸಿಗರು ಆರೋಪಿಸುತ್ತಿದ್ದರು. ಗುತ್ತಿಗೆದಾರನೊಬ್ಬ ಆತ್ಮಹತ್ಯೆಯನ್ನೂ ಮಾಡಿಕೊಂಡಿದ್ದ. ಆಗ ಸಚಿವರಾಗಿದ್ದ ಕೆ.ಎಸ್‌. ಈಶ್ವರಪ್ಪ ರಾಜೀನಾಮೆ ಕೂಡ ನೀಡಿದ್ದರು. ಇದೀಗ ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬಂದರೂ ಸಿವಿಲ್‌ ಗುತ್ತಿಗೆದಾರರ ಹಣ ಮಾತ್ರ ಬಿಡುಗಡೆಯಾಗುತ್ತಿಲ್ಲ. ಹಾಗಂತ ಗುತ್ತಿಗೆದಾರರ ಹಣವನ್ನೇ ಬಿಡುಗಡೆ ಮಾಡುತ್ತಿಲ್ಲ ಅಂತೇನೂ ಇಲ್ಲ. ಹಿಂದೆ ಬಿಜೆಪಿ ಸರ್ಕಾರವಿದ್ದಾಗಲೂ ಎರಡು ತಿಂಗಳಿಗೊಮ್ಮೆ ಅಷ್ಟೋ ಇಷ್ಟೋ ಹಣ ಬಿಡುಗಡೆ ಮಾಡುತ್ತಿತ್ತಂತೆ. ಈಗಿನ ಸರ್ಕಾರ ಕೂಡ ಎರಡ್ಮೂರು ತಿಂಗಳಿಗೊಮ್ಮೆ ಬಾಕಿಯಿರುವ ಹಣದಲ್ಲಿ ಪ್ರತಿಶತ 5ರಿಂದ 10ರಷ್ಟು ಬಿಡುಗಡೆ ಮಾಡುತ್ತಿದೆಯಂತೆ. ಆದರೆ ಅಷ್ಟರೊಳಗೆ ಬಿಡುಗಡೆಯಾಗಿದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮತ್ತಷ್ಟು ಕಾಮಗಾರಿಯ ಬಿಲ್‌ಗಳು ಬಂದು ಸೇರುತ್ತಲೇ ಇರುತ್ತವೆ. ಹೀಗಾಗಿ ಬಿಲ್‌ನ ಬಾಕಿ ಹಣ ಹಾಗೆ ಬೆಳೆಯುತ್ತಲೇ ಇದೆ.

ಎಷ್ಟೆಷ್ಟಿದೆ?:

ವಿವಿಧ ಇಲಾಖೆಯಡಿ ಕೈಗೊಳ್ಳಲಾದ ವಿವಿಧ ಕಾಮಗಾರಿಗಳ ₹ 25 ಸಾವಿರ ಕೋಟಿಗೂ ಅಧಿಕ ಬಿಲ್‌ ಬರುವುದು ಬಾಕಿಯುಳಿದಿದೆ. ಬೃಹತ್‌ ನೀರಾವರಿ ಇಲಾಖೆಯಡಿ ಕೈಗೊಳ್ಳಲಾದ ಕಾಲುವೆ ನಿರ್ಮಾಣ ಹಾಗೂ ದುರಸ್ತಿ, ಡ್ಯಾಂ ನಿರ್ವಹಣೆ ಸೇರಿದಂತೆ ವಿವಿಧ ಕಾಮಗಾರಿಗಳ ₹ 10 ಸಾವಿರ ಕೋಟಿ, ಲೋಕೋಪಯೋಗಿ ಇಲಾಖೆಯಡಿ ಕೈಗೊಳ್ಳಲಾದ ರಸ್ತೆ, ಬಿಲ್ಡಿಂಗ್‌ ಕಾಮಗಾರಿಗಳ ₹ 7 ಸಾವಿರ ಕೋಟಿ, ಸಣ್ಣ ನೀರಾವರಿ ಇಲಾಖೆಯಿಂದ ₹ 3 ಸಾವಿರ ಕೋಟಿ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌, ಸಮಾಜ ಕಲ್ಯಾಣ, ಹಿಂದುಳಿದ ವರ್ಗ ಸೇರಿದಂತೆ ವಿವಿಧ ಕಾಮಗಾರಿಗಳಿಂದ ₹ 5 ಸಾವಿರ ಕೋಟಿಗೂ ಅಧಿಕ ಹಣ ಬರಬೇಕಿದೆ.

ಹೋರಾಟಕ್ಕೆ ಅಣಿ:

ಈ ಎಲ್ಲ ಕಾಮಗಾರಿಗಳೂ ಉತ್ತರ ಕರ್ನಾಟಕದ 13 ಜಿಲ್ಲೆಗಳ ವ್ಯಾಪ್ತಿಯಲ್ಲಿ ಕೈಗೊಂಡಂತಹ ಕಾಮಗಾರಿಗಳಾಗಿವೆ. ಬಾಕಿ ಬಿಲ್‌ ಬಿಡುಗಡೆ ಮಾಡುವಂತೆ ಆಗ್ರಹಿಸಿ ಉತ್ತರ ಕರ್ನಾಟಕ ಸಿವಿಲ್‌ ಗುತ್ತಿಗೆದಾರರ ಸಂಘದಿಂದ ಹಲವಾರು ಬಾರಿ ಪ್ರತಿಭಟನೆ ನಡೆಸಲಾಗಿದೆ. ಜಿಲ್ಲಾಧಿಕಾರಿ, ತಹಸೀಲ್ದಾರ್‌ ಮೂಲಕ ಮುಖ್ಯಮಂತ್ರಿ ಸೇರಿದಂತೆ ಸಂಬಂಧ ಪಟ್ಟ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಆದರೆ, ಸ್ಪಂದನೆ ದೊರಕಿಲ್ಲ.

ಸಾಲ ಮಾಡಿ ಕಾಮಗಾರಿ ಕೈಗೊಂಡಿರುತ್ತೇವೆ. ಅದರ ಬಡ್ಡಿ ಬೆಳೆಯುತ್ತಿದೆಯೇ ಹೊರತು ಗುತ್ತಿಗೆದಾರರಿಗೆ ಸರ್ಕಾರದಿಂದ ಬರಬೇಕಾದ ಹಣ ಮಾತ್ರ ಬರುತ್ತಲೇ ಇಲ್ಲ. ಈಗಾಗಲೇ ಸಂಕಷ್ಟಕ್ಕೆ ಸಿಲುಕಿದ್ದೇವೆ. ಇನ್ನೂ ತಡಮಾಡಿದರೆ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಇನ್ನಾದರೂ ಸರ್ಕಾರ ಸಿವಿಲ್‌ ಗುತ್ತಿಗೆದಾರರ ಬಾಕಿ ಹಣ ಕೂಡಲೇ ಬಿಡುಗಡೆ ಮಾಡಬೇಕು. ಇಲ್ಲದಿದ್ದಲ್ಲಿ ಅಧಿವೇಶನದ ವೇಳೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ಉತ್ತರ ಕರ್ನಾಟಕ ಸಿವಿಲ್‌ ಗುತ್ತಿಗೆದಾರರ ಸಂಘ ನೀಡಿದೆ.ವಿವಿಧ ಇಲಾಖೆಯಡಿ ಕೈಗೊಂಡಂತಹ ಕಾಮಗಾರಿಗಳ ಬಿಲ್‌ ₹ 25 ಸಾವಿರ ಕೋಟಿ ಬರಬೇಕಿದೆ. ಪ್ರತಿ ಎರಡ್ಮೂರು ತಿಂಗಳಿಗೊಮ್ಮೆ ಶೇ.10ರಷ್ಟು ಹಣ ನೀಡುತ್ತದೆ. ಆದರೆ ಅಷ್ಟರೊಳಗೆ ಮತ್ತಷ್ಟು ಬಿಲ್‌ ಸೇರ್ಪಡೆಯಾಗಿರುತ್ತವೆ. ಸರ್ಕಾರ ಒಮ್ಮಿಗೆ ಎಲ್ಲ ಕಾಮಗಾರಿಗಳ ಹಣ ಬಿಡುಗಡೆ ಮಾಡಲಿ ಉತ್ತರ ಕರ್ನಾಟಕ ಸಿವಿಲ್‌ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸುಭಾಸ ಪಾಟೀಲ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಪ್ತ ಶಾಸಕರ ಜತೆ ಸದನದ ಕೊನೆ ಸಾಲಲ್ಲಿ ಡಿಕೆಶಿ ಚರ್ಚೆ
ಅಹಂಕಾರ, ದರ್ಪ ತೋರದೇ ಎಲ್ಲ ಜನರನ್ನೂ ಗೌರವಿಸಿದ ಶಾಮನೂರು: ಅಣಬೇರು ರಾಜಣ್ಣ