ಕನ್ನಡಪ್ರಭ ವಾರ್ತೆ ಬೆಂಗಳೂರು
133 ಕೋಟಿ ರು ಮೌಲ್ಯದ 1.33 ಕೋಟಿ ಲೀಟರ್ ಮದ್ಯ, 5.48 ಕೋಟಿ ರು. ಮೌಲ್ಯದ 323 ಕೆಜಿ ಮಾದಕ ವಸ್ತು, 9.49 ಕೋಟಿ ರು. ಮೌಲ್ಯದ 16.10 ಕೆಜಿ ಚಿನ್ನ, 27 ಲಕ್ಷ ರು. ಮೌಲ್ಯದ ಬೆಳ್ಳಿ ಜಪ್ತಿ ಮಾಡಲಾಗಿದೆ ಎಂದು ಮುಖ್ಯಚುನಾವಣಾಧಿಕಾರಿ ಕಚೇರಿ ತಿಳಿಸಿದೆ.
ನಗದು, ಮದ್ಯ ಸೇರಿದಂತೆ ವಶಪಡಿಸಿಕೊಂಡ ವಿವಿಧ ವಸ್ತುಗಳ ಪ್ರಕರಣಗಳಿಗೆ ಸಂಬಂಧಿಸಿದಂತೆ 1,337 ಎಫ್‌ಐಆರ್ ದಾಖಲಿಸಲಾಗಿದೆ. ಬೆಂಗಳೂರು ಕೇಂದ್ರ ಕ್ಷೇತ್ರದ ಗುಂಜೂರಪಾಳ್ಯದಲ್ಲಿ 10 ಲಕ್ಷ ರು. ಮೌಲ್ಯದ 5.5 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಲಾಗಿದೆ.ಖರ್ಗೆ, ಸಿದ್ದು, ಬೇಳೂರು ವಿರುದ್ಧ ಬಿಜೆಪಿ ದೂರು:ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ಆಧಾರ ರಹಿತ ಆರೋಪ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿ ಅಧಾರ ಮೇಲೆ ಮತ ಕೇಳಿರುವ ವಿಚಾರ ಸಂಬಂಧ ಕಾಂಗ್ರೆಸ್ ವಿರುದ್ಧ ಮುಖ್ಯ ಚುನಾವಣಾಧಿಕಾರಿ ಕಚೇರಿಗೆ ಬಿಜೆಪಿ ದೂರು ನೀಡಿದೆ.
ಪುಲ್ವಾಮ ದಾಳಿಗೆ ಬಿಜೆಪಿಯವರೇ ಕಾರಣ ಎಂಬ ಕಾಂಗ್ರೆಸ್ ಶಾಸಕರು ಮತ್ತು ಗೃಹ ಸಚಿವರ ಹೇಳಿಕೆ ಖಂಡನೀಯ. ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗಳಾಗಿದ್ದು, ಪುಲ್ವಾಮ ದಾಳಿಗೆ ಪಾಕಿಸ್ತಾನವೇ ಕಾರಣ ಎಂಬುದಕ್ಕೆ ಸ್ಪಷ್ಟವಾದ ಆಧಾರಗಳು ಸಿಕ್ಕಿವೆ. ಆದರೂ ಬಿಜೆಪಿಯವರೇ ಕಾರಣ ಎಂಬ ಹೇಳಿಕೆ ಸರಿಯಲ್ಲ. ಇಂತಹ ಸಚಿವರು ಮತ್ತು ಶಾಸಕರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ.ಚೀನಾ ಯುದ್ಧದ ಸಂದರ್ಭದಲ್ಲಿ ಪ್ರಧಾನಿ ಅಫೀಮು ಸೇವಿಸಿ ಮಲಗಿದ್ದರು ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಕ್ಕಲಿಗ ಜಾತಿ ಆಧಾರದ ಮೇಲೆ ಮತ ಕೇಳುತ್ತಿದ್ದು, ಒಕ್ಕಲಿಗ ಮತಗಳು ಕಾಂಗ್ರೆಸ್‌ಗೆ ಹಾಕಬೇಕು ಎಂದಿದ್ದಾರೆ. ಕಾಂಗ್ರೆಸ್ಸಿಗರ ಹೇಳಿಕೆಗಳು ನೀತಿಸಂಹಿತೆ ಉಲ್ಲಂಘನೆಯಾಗಿರುವ ಹಿನ್ನೆಲೆಯಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.
ರಾಜ್ಯ ಆರೋಗ್ಯ ಮಂತ್ರಿ ಹಾಗೂ ಗಾಂಧಿನಗರದ ಕ್ಷೇತ್ರದ ಶಾಸಕ ದಿನೇಶ್ ಗೂಂಡಾರಾವ್‌ರವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕ್ರಮ ಜರುಗಿಸುವಂತೆ ಶೇಷಾದ್ರಿಪುರ ಠಾಣೆಗೆ ಶನಿವಾರ ಗಾಂಧಿನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ದೂರು ನೀಡಿದೆ.