ಕನ್ನಡಪ್ರಭ ವಾರ್ತೆ ಮಂಗಳೂರು
ಕಳೆದ ಏಳು ವರ್ಷಗಳಲ್ಲಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 207 ನಕಲಿ ಪೌರ ಕಾರ್ಮಿಕರಿಗೆ ಒಟ್ಟು ಸುಮಾರು 27 ಕೋಟಿ ರು. ವೇತನ ಪಾವತಿಯಾಗಿದೆ. ಇದೊಂದು ಬೃಹತ್ ಭ್ರಷ್ಟಾಚಾರ ಪ್ರಕರಣವಾಗಿದ್ದು, ಸಮಗ್ರ ತನಿಖೆ ನಡೆಸಬೇಕು ಎಂದು ಪೌರ ಕಾರ್ಮಿಕರ ಹಾಗೂ 4 ನೇ ದರ್ಜೆ ನೌಕರರ ಸಂಘ ಗಂಭೀರ ಆರೋಪ ಮಾಡಿದೆ.ಸಂಘದ ದ.ಕ. ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಹಾಗೂ ಪ್ರಧಾನ ಕಾರ್ಯದರ್ಶಿ ಎಸ್‌ಪಿ. ಆನಂದ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಚಾರ ಬಹಿರಂಗಪಡಿಸಿದರು.
ಉಪ ಗುತ್ತಿಗೆದಾರರು ಅವರ ಸಂಬಂಧಿಕರ ಹೆಸರಿನಲ್ಲಿ ದಾಖಲೆಯಲ್ಲಿ 207 ಮಂದಿಗೆ (ನಕಲಿ ಪೌರ ಕಾರ್ಮಿಕರು) ಉದ್ಯೋಗ ತೋರಿಸಿದ್ದಾರೆ. ಏಳು ವರ್ಷದ ಹಿಂದಿನಿಂದ ಕಳೆದ ಆಗಸ್ಟ್‌ವರೆಗೆ 652 ಮಂದಿ ಪೌರ ಕಾರ್ಮಿಕರಿಗೆ ಮಾಸಿಕ 15 ಸಾವಿರ ರು. ವೇತನ ಪಾವತಿಯಾಗಿದ್ದು, ಇದರಲ್ಲಿ 207 ಮಂದಿ ಪೌರ ಕಾರ್ಮಿಕರು ನಕಲಿಯಾಗಿದ್ದಾರೆ. ಈ ನಕಲಿ ಪೌರ ಕಾರ್ಮಿಕರು ಕೆಲಸ ಮಾಡಿಲ್ಲ. ಆದರೆ ಅವರ ಹೆಸರಿನಲ್ಲಿ ಪ್ರತೀ ತಿಂಗಳು ಹಣ ಪಾವತಿಯಾಗಿದೆ ಎಂದವರು ಆರೋಪಿಸಿದರು.ಈ ಭ್ರಷ್ಟಾಚಾರ ಪ್ರಕರಣದ ಸಮಗ್ರ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರು, ಮಹಾನಗರ ಪಾಲಿಕೆ ಆಯುಕ್ತರು, ಮೇಯರ್ ಅವರಿಗೆ ದೂರು ನೀಡಲಾಗಿದೆ. ವ್ಯವಸ್ಥೆ ಸರಿಯಾಗಬೇಕು ಎಂದು ಬಯಸುವ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಕೂಡಲೆ ಸಭೆ ಕರೆಯಬೇಕು. ಪೂರಕ ದಾಖಲೆ, ಮಾಹಿತಿ ಕೊಡಲು ನಮ್ಮ ಸಂಘಟನೆ ಸಿದ್ಧವಿದೆ ಎಂದು ಅನಿಲ್ ಕುಮಾರ್ ಹಾಗೂ ಎಸ್.ಪಿ.ಆನಂದ್ ಒತ್ತಾಯಿಸಿದರು.
ಆಟೋ ಚಾಲಕರು, ಕೃಷಿಕರು!: ಎಲ್ಲ ಪೌರ ಕಾರ್ಮಿಕರಿಗೆ ಪಿಎಫ್, ಇಎಸ್‌ಐ ಕಳೆದು ಮಾಸಿಕ 13,506 ರು. ದೊರೆಯುತ್ತದೆ. ಕೆಲವು ಉಪ ಗುತ್ತಿಗೆದಾರರು ತಮ್ಮ ಸಂಬಂಧಿಕರ ಹೆಸರನ್ನು ಪೌರ ಕಾರ್ಮಿಕರೆಂದು ನಮೂದಿಸಿ, ಅವರ ಪಾಸ್ ಪುಸ್ತಕ, ಎಟಿಎಂ ತಮ್ಮ ಬಳಿಯಲ್ಲೇ ಇಟ್ಟುಕೊಂಡಿದ್ದಾರೆ. ಪೌರ ಕಾರ್ಮಿಕರು ಎಂದು ದಾಖಲೆಯಲ್ಲಿ ಹೆಸರು ಇರುವ ಕೆಲವು ವ್ಯಕ್ತಿಗಳು ಆಟೋ ಓಡಿಸುತ್ತಿದ್ದಾರೆ. ಇನ್ನು ಕೆಲವರು ಮಾಂಸದ ವ್ಯಾಪಾರ, ಕೃಷಿ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.ಕಳೆದ ಆಗಸ್ಟ್ ತಿಂಗಳಲ್ಲಿ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ನೇರ ಪಾವತಿಗೆ 652 ಪೌರ ಕಾರ್ಮಿಕರು ಎಂದು ಪಟ್ಟಿ ತಯಾರಿಸಿ ಆದೇಶಿಸಲಾಗಿತ್ತು. ಬಳಿಕ ಈ ಪಟ್ಟಿಯಲ್ಲಿ ನಕಲಿ ಹೆಸರುಗಳು ಇರುವ ಬಗ್ಗೆ ನಾವು ಸಂಘಟನೆಯಿಂದ ಆಕ್ಷೇಪ ಸಲ್ಲಿಸಿದ ಬಳಿಕ ಜಿಪಿಎಸ್ ತಂತ್ರಜ್ಞಾನ ಬಳಸಿ 445 ಮಂದಿ ಮಾತ್ರ ಕೆಲಸದಲ್ಲಿ ಇರುವುದನ್ನು ಪಾಲಿಕೆ ಅಧಿಕಾರಿಗಳು ಕಂಡುಕೊಂಡರು. ಈ ತಿಂಗಳಲ್ಲಿ 445 ಮಂದಿಯ ಪರಿಷ್ಕೃತ ಪಟ್ಟಿ ತಯಾರಿಸಿ ಆದೇಶ ಪತ್ರ ಒದಗಿಸಲಾಯಿತು. ಉಳಿದ 207 ಪೌರ ಕಾರ್ಮಿಕರು ಎಲ್ಲಿ ಎನ್ನುವುದನ್ನು ಅಧಿಕಾರಿ ವರ್ಗ ಸ್ಪಷ್ಟಪಡಿಸಬೇಕು ಎಂದು ಅವರು ಒತ್ತಾಯಿಸಿದರು.
ಪೌರ ಕಾರ್ಮಿಕರ ಜಿಲ್ಲಾ ಸಂಘದ ಸದಸ್ಯರಾದ ಸೇಸಪ್ಪ, ಸುರೇಶ್ ಗಾಂಧಿ ನಗರ, ಸಂಜೀವ ಮಂಕಿಸ್ಟ್ಯಾಂಡ್, ಶ್ರೀನಿವಾಸ ವಾಮಂಜೂರು, ಪ್ರಕಾಶ್ ಕಂಕನಾಡಿ, ನೀಲಯ್ಯ ಕುಲಾಲ್ ಇದ್ದರು.ಡಿ.1ರಂದು ಪ್ರತಿಭಟನೆಹೊರ ಗುತ್ತಿಗೆ ಪೌರ ಕಾರ್ಮಿಕರು, ಒಳಚರಂಡಿ ಸ್ವಚ್ಛತಾ ಕಾರ್ಮಿಕರು, ಲೋಡರ್ಸ್, ಕ್ಲೀನರ್ಸ್, ಚಾಲಕರು ಮತ್ತು ಸಹಾಯಕರನ್ನು ಕೂಡಲೆ ಕಾಯಂಗೊಳಿಸಬೇಕು ಎಂದು ಆಗ್ರಹಿಸಿ ಡಿ.1ರಂದು ಸಂಜೆ 4ಕ್ಕೆ ಜಿಲ್ಲಾಧಿಕಾರಿ ಕಚೇರಿ ಆವರಣ ಮುಂಭಾಗ ಪ್ರತಿಭಟನೆ ನಡಸಲಾಗುವುದು ಎಂದು ಸಂಘಟನೆಯ ದಕ ಜಿಲ್ಲಾ ಅಧ್ಯಕ್ಷ ಅನಿಲ್ ಕುಮಾರ್ ತಿಳಿಸಿದರು.