ಸಾರಾಂಶ
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮುಷ್ಕರ ನಡೆಸಲು ಮುಂದಾಗಿರುವ ಸಾರಿಗೆ ನೌಕರರ ಮನವೊಲಿಕೆಗೆ ಕಾರ್ಮಿಕ ಆಯುಕ್ತರ ನೇತೃತ್ವದಲ್ಲಿ ಶನಿವಾರ ನಡೆದ ಸಾರಿಗೆ ನೌಕರ ಸಂಘಟನೆಗಳ ಪ್ರಮುಖರು ಮತ್ತು ಸಾರಿಗೆ ನಿಗಮಗಳ ಅಧಿಕಾರಿಗಳ ನಡುವಿನ ರಾಜೀ ಸಂಧಾನ ಸಭೆ ವಿಫಲವಾಗಿದೆ.
ಬೆಂಗಳೂರು : ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮುಷ್ಕರ ನಡೆಸಲು ಮುಂದಾಗಿರುವ ಸಾರಿಗೆ ನೌಕರರ ಮನವೊಲಿಕೆಗೆ ಕಾರ್ಮಿಕ ಆಯುಕ್ತರ ನೇತೃತ್ವದಲ್ಲಿ ಶನಿವಾರ ನಡೆದ ಸಾರಿಗೆ ನೌಕರ ಸಂಘಟನೆಗಳ ಪ್ರಮುಖರು ಮತ್ತು ಸಾರಿಗೆ ನಿಗಮಗಳ ಅಧಿಕಾರಿಗಳ ನಡುವಿನ ರಾಜೀ ಸಂಧಾನ ಸಭೆ ವಿಫಲವಾಗಿದೆ. ಹೀಗಾಗಿ ಆ.4ರಂದು ನಡೆಯಲಿರುವ ಮುಖ್ಯಮಂತ್ರಿ ಅಧ್ಯಕ್ಷತೆಯ ಸಭೆಯಲ್ಲಿ ಮುಷ್ಕರದ ಭವಿಷ್ಯ ನಿರ್ಧಾರವಾಗಲಿದೆ.
ಇದರ ನಡುವೆಯೇ ಸಾರಿಗೆ ನೌಕರರು ಮುಷ್ಕರಕ್ಕೆ ಮುಂದಾದರೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವ ಉದ್ದೇಶದಿಂದ ಖಾಸಗಿ ಬಸ್, ಟ್ಯಾಕ್ಸಿ ಸೇರಿ ಇನ್ನಿತರ ವಾಹನ ಮಾಲೀಕರ ಜತೆಗೆ ಸಾರಿಗೆ ಇಲಾಖೆ ಆಯುಕ್ತರು ಸಭೆ ನಡೆಸಿದ್ದು, ಮುಷ್ಕರದ ವೇಳೆ ಸಾರಿಗೆ ಸೇವೆ ನೀಡಲು ಬೆಂಬಲ ಕೋರಿದರು. ಅದಕ್ಕೆ ಸಮ್ಮತಿಸಿರುವ ಖಾಸಗಿ ವಾಹನ ಮಾಲೀಕರು, ಬೆಂಬಲ ನೀಡುವುದಕ್ಕೆ ಬದಲಾಗಿ ತಮ್ಮ ಬೇಡಿಕೆಗಳ ಈಡೇರಿಕೆಗೂ ಸರ್ಕಾರ ಮುಂದಾಗಬೇಕು ಎಂದು ಷರತ್ತು ವಿಧಿಸಿದ್ದಾರೆ.
ವೇತನ ಹೆಚ್ಚಳ ಮತ್ತು ವೇತನ ಹೆಚ್ಚಳ ಹಿಂಬಾಕಿ ಪಾವತಿಗೆ ಆಗ್ರಹಿಸಿ ಕೆಎಸ್ಸಾರ್ಟಿಸಿ ನೌಕರ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ಆ.5ರಿಂದ ಕರ್ತವ್ಯ ಬಹಿಷ್ಕರಿಸಿ ಅನಿರ್ಧಿಷ್ಟಾವಧಿ ಮುಷ್ಕರ ಮಾಡುವುದಾಗಿ ಘೋಷಿಸಲಾಗಿದೆ. ನೌಕರರ ಮುಷ್ಕರ ತಡೆಯಲು ಸರ್ಕಾರ ಈಗಾಗಲೇ ಹಲವು ಕಸರತ್ತು ಆರಂಭಿಸಿದೆ. ಅದರ ಭಾಗವಾಗಿ ಶನಿವಾರ ಕಾರ್ಮಿಕ ಇಲಾಖೆ ಆಯುಕ್ತರ ಅಧ್ಯಕ್ಷತೆಯಲ್ಲಿ ಸಾರಿಗೆ ನೌಕರ ಸಂಘಟನೆಗಳ ಪ್ರಮುಖರು ಮತ್ತು ಸಾರಿಗೆ ನಿಗಮಗಳ ಅಧಿಕಾರಿಗಳ ನಡುವೆ ರಾಜೀ ಸಂಧಾನ ಸಭೆ ನಡೆಸಲಾಗಿದೆ.
ಸಭೆಯಲ್ಲಿ ಅಧಿಕಾರಿಗಳು, ನೌಕರರ ಬೇಡಿಕೆ ಈಡೇರಿಕೆ ಕುರಿತು ಯಾವುದೇ ಸ್ಪಷ್ಟ ಭರವಸೆ ನೀಡಲಿಲ್ಲ. ಅದರ ಬದಲು ಆ.4ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಾರಿಗೆ ನೌಕರ ಸಂಘಟನೆಯ ಪ್ರಮುಖರೊಂದಿಗೆ ಸಭೆ ನಡೆಸಲಿದ್ದಾರೆ. ಅಲ್ಲೇ ಸಮಸ್ಯೆ ಇತ್ಯರ್ಥವಾಗಲಿದೆ ಎಂದು ತಿಳಿಸಿದ್ದಾರೆ. ಹೀಗಾಗಿ ರಾಜೀ ಸಂಧಾನ ಸಭೆಯಲ್ಲಿ ಯಾವುದೇ ಸ್ಪಷ್ಟ ನಿಲುವು ತಾಳಲು ಸಾಧ್ಯವಾಗದ ಕಾರಣ ಸಂಧಾನ ಸಭೆ ವಿಫಲವಾಗುವಂತಾಗಿದೆ.
ಮುಷ್ಕರದಲ್ಲಿ ಪಾಲ್ಗೊಂಡರೆ ವೇತನವಿಲ್ಲ
ಮುಷ್ಕರದಲ್ಲಿ ಪಾಲ್ಗೊಂಡು ಕರ್ತವ್ಯಕ್ಕೆ ಹಾಜರಾಗದಿದ್ದರೆ ಅಂಥ ನೌಕರರಿಗೆ ವೇತನ ಪಾವತಿಸದಿರಲು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಿಗಮಗಳು ನಿರ್ಧರಿಸಿವೆ. ಈ ಕುರಿತು ನೌಕರರಿಗೂ ತಿಳಿಸಿದ್ದು, ಕೆಲಸ ಮಾಡದಿದ್ದಾಗ ವೇತನವಿಲ್ಲ ಎಂಬ ನಿಯಮದ ಪ್ರಕಾರ ಮುಷ್ಕರದಲ್ಲಿ ಪಾಲ್ಗೊಂಡು ಕರ್ತವ್ಯಕ್ಕೆ ಗೈರಾದವರಿಗೆ ವೇತನ ಸಿಗುವುದಿಲ್ಲ. ಹಾಗೆಯೇ, ಸಾರಿಗೆ ಸೇವೆ ಸಾರ್ವಜನಿಕ ಉಪಯುಕ್ತ ಸೇವಾ ಸಂಸ್ಥೆ ಅಡಿ ಬರುವ ಕಾರಣ, ಮುಷ್ಕರದಲ್ಲಿ ಪಾಲ್ಗೊಳ್ಳುವ ನೌಕರರ ವಿರುದ್ಧ ಎಸ್ಮಾ ಕಾಯ್ದೆ ಅಡಿಯಲ್ಲಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.
ಸಿಎಂ ಸಭೆ ಬಗ್ಗೆ ಅಪಸ್ವರ
ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಕರೆಯಲಾಗಿರುವ ಸಭೆ ಬಗ್ಗೆಯೂ ಕೆಎಸ್ಸಾರ್ಟಿಸಿ ನೌಕರ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಪ್ರಮುಖರು ಅಪಸ್ವರ ಎತ್ತಿದ್ದಾರೆ. ಆ. 4ರಂದು ಬೆಳಗ್ಗೆ 11.45ರಿಂದ 12.15ರವರೆಗೆ ನಮ್ಮೊಂದಿಗೆ ಸಭೆ ನಡೆಸುವುದಾಗಿ ತಿಳಿಸಲಾಗಿದೆ. ಆದರೆ, ಕೇವಲ 30 ನಿಮಿಷದಲ್ಲಿ ಸಭೆ ನಡೆಸಿ, ನೌಕರರ ಸಮಸ್ಯೆ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಲಿದೆಯೇ? ಅಲ್ಲದೆ, ನಮ್ಮೊಂದಿಗೆ ಸಭೆ ನಡೆಸಿದ ನಂತರ ಮುಷ್ಕರಕ್ಕೆ ವಿರೋಧ ವ್ಯಕ್ತಪಡಿಸಿರುವ ಸಂಘಟನೆಯೊಂದಿಗೂ ಸಿಎಂ ಸಭೆ ನಡೆಸಲಿದ್ದಾರೆ. ಇದು ಮುಖ್ಯಮಂತ್ರಿ ಅವರ ಇಬ್ಭಗೆಯ ನೀತಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಖಾಸಗಿ ಬಸ್ ಬೆಂಬಲ: ಆದರೆ ಷರತ್ತು ಅನ್ವಯ:
ವಿವಿಧ ಬೇಡಿಕೆ ಈಡೇರಿಕೆಗಾಗಿ ಸಾರಿಗೆ ನೌಕರರ ಜೊತೆ ಸಭೆ ವಿಫಲವಾಗಿದೆ. ಆದರೆ ಸರ್ಕಾರ ಪರ್ಯಾಯ ಮಾರ್ಗದ ಬಗ್ಗೆಯೂ ಚಿಂತನೆ ನಡೆಸಿದೆ. ಆ.4ರಂದು ಜೊತೆ ಮುಖ್ಯಮಂತ್ರಿ ಸಭೆಯಲ್ಲೂ ನೌಕರರ ಮನವೊಲಿಕೆ ಪ್ರಯತ್ನ ವಿಫಲವಾದರೆ, ಆ.5ರಿಂದ ರಾಜ್ಯದಲ್ಲಿ ಸಾರಿಗೆ ಸೇವೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಲು ಸರ್ಕಾರ ಖಾಸಗಿ ವಾಹನಗಳ ಬೆಂಬಲವನ್ನು ಸರ್ಕಾರ ಕೋರಿದೆ.
ಅದರಂತೆ ಶನಿವಾರ ಸಾರಿಗೆ ಇಲಾಖೆ ಕಚೇರಿಯಲ್ಲಿ ಸಾರಿಗೆ ಆಯುಕ್ತರ ಅಧ್ಯಕ್ಷತೆಯಲ್ಲಿ ಖಾಸಗಿ ವಾಹನ ಮಾಲೀಕ ಸಂಘಟನೆಗಳೊಂದಿಗೆ ಸಭೆ ನಡೆಸಲಾಗಿದೆ. ಈ ವೇಳೆ ಸಾರಿಗೆ ಆಯುಕ್ತ ಯೋಗೇಶ್ ಅವರು, ಸಾರಿಗೆ ನೌಕರರು ಆ.5ರಿಂದ ಮುಷ್ಕರ ಆರಂಭಿಸಿದರೆ, ರಾಜ್ಯದಲ್ಲಿ ಸಾರಿಗೆ ಸೇವೆಯಲ್ಲಿ ಸಮಸ್ಯೆ ಉಂಟಾಗಲಿದೆ. ಹೀಗಾಗಿ ಖಾಸಗಿ ಬಸ್, ಟ್ಯಾಕ್ಸಿ ಸೇರಿ ಮತ್ತಿತರ ವಾಣಿಜ್ಯ ವಾಹನಗಳು ಸೇವೆ ನೀಡಬೇಕು. ಕೆಎಸ್ಸಾರ್ಟಿಸಿ ಮತ್ತು ಬಿಎಂಟಿಸಿ ಬಸ್‌ಗಳಿಗೆ ನಿಗದಿ ಮಾಡಲಾಗಿರುವ ಪ್ರಯಾಣ ದರದಂತೆಯೇ ಸೇವೆ ನೀಡುವಂತೆಯೂ ಮನವಿ ಮಾಡಿದರು.
ಅದಕ್ಕೊಪ್ಪಿದ ಖಾಸಗಿ ಬಸ್, ಟ್ಯಾಕ್ಸಿ ಮಾಲೀಕರು, ಸರ್ಕಾರಕ್ಕೆ ಬೆಂಬಲವಾಗಿ ಸೇವೆ ನೀಡುತ್ತೇವೆ. ಅದಕ್ಕೆ ಬದಲಾಗಿ ತಮ್ಮ ಬೇಡಿಕೆಗಳನ್ನೂ ಈಡೇರಿಸುವಂತೆ ಷರತ್ತು ವಿಧಿಸಿದ್ದಾರೆ. ಪ್ರಮುಖವಾಗಿ ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಮೋಟಾರು ವಾಹನ ತೆರಿಗೆ ಹೆಚ್ಚಿದೆ. ಅದನ್ನು ಇಳಿಕೆ ಮಾಡಬೇಕು ಎಂದು ಕೋರಿದ್ದಾರೆ.
ಅದರ ಜತೆಗೆ ಮುಷ್ಕರದ ಸಂದರ್ಭದಲ್ಲಿ ಸೇವೆ ನೀಡುವ ವಾಹನಗಳಿಗೆ ಕನಿಷ್ಠ 15 ದಿನಗಳ ತೆರಿಗೆ ವಿನಾಯಿತಿ ನೀಡಬೇಕು. ಹಳೆಯ ವಿವಿಧ ರೀತಿಯ ದಂಡದ ಮೊತ್ತದಲ್ಲಿ ಶೇ.50ರಷ್ಟು ಕಡಿತಗೊಳಿಸಬೇಕು. ಸರ್ಕಾರಿ ಬಸ್‌ಗಳು ತಮ್ಮ ವ್ಯಾಪ್ತಿ ಹಾಗೂ ಮಾರ್ಗ ಮೀರಿ ಕಾರ್ಯಾಚರಣೆ ಮಾಡುತ್ತಿದ್ದು, ಅದನ್ನು ನಿಲ್ಲಿಸಬೇಕು. ಅದರ ಜತೆಗೆ 60:40ರ ಅನುಪಾತದ ಅಡಿ ಸರ್ಕಾರಿ ಮತ್ತು ಖಾಸಗಿ ಬಸ್ ಕಾರ್ಯಾಚರಣೆ ನಿಯಮ ರೂಪಿಸಬೇಕು. ಅದರ ಜತೆಗೆ ಮುಷ್ಕರದ ವೇಳೆ ಸೇವೆ ನೀಡುವ ಖಾಸಗಿ ವಾಹನಗಳಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಖಾಸಗಿ ಬಸ್ ಮಾಲೀಕರು ಸಾರಿಗೆ ಆಯುಕ್ತರಲ್ಲಿ ಮನವಿ ಮಾಡಿದರು.
ಅದಕ್ಕೆ ಪ್ರತಿಕ್ರಿಯಿಸಿದ ಸಾರಿಗೆ ಆಯುಕ್ತರು, ನಿಮ್ಮ ಎಲ್ಲ ಮನವಿಗಳನ್ನೂ ಸರ್ಕಾರಕ್ಕೆ ತಿಳಿಸಲಾಗುವುದು. ಅದನ್ನು ಈಡೇರಿಸಲು ಎಲ್ಲ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.