ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಸಾರಿಗೆ ನೌಕರರ 38 ತಿಂಗಳ ವೇತನ ಪರಿಷ್ಕರಣೆ ಹಿಂಬಾಕಿಯ ತಕ್ಷಣ ಪಾವತಿಸಿದಿದ್ದರೆ ಆ.5 ರಿಂದ ಅನಿರ್ದಿಷ್ಟಾವಧಿ ಮುಷ್ಕರವನ್ನು ಕೈಗೊಳ್ಳುವುದಾಗಿ ಏಐಟಿಯುಸಿ ಕಾರ್ಮಿಕ ಸಂಘಠನೆಯ ಜಿಲ್ಲಾ ಮಂಡಳಿಯ ಅಧ್ಯಕ್ಷ ಜಿ.ಸುರೇಶ್ ಬಾಬು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೆಎಸ್‍ಆರ್‍ಟಿಸಿ ನೌಕರರು ಹಗಲು ರಾತ್ರಿ ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ. ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತಿಲ್ಲ.ಸಿಎಂ ಸಿದ್ದರಾಮಯ್ಯ ಹೇಳುವುದು ಒಂದು ಮಾಡುವುದು ಮತ್ತೊಂದು ಎನ್ನುವಂತಾಗಿದೆ. ವೇತನ ಪರಿಷ್ಕರಣೆಯ 38 ತಿಂಗಳ ಹಿಂಬಾಕಿ ಕೇಳಿದರೆ ಸಾರಿಗೆ ಸಚಿವರು, ಹಿಂದಿನ ಸರ್ಕಾರದ ಮೇಲೆ ಬೆರಳಿಟ್ಟು ತೋರಿಸುತ್ತಿದ್ದಾರೆ ಇದರಿಂದ ಸಮಸ್ಯೆ ಬಗೆಹರಿಯದೆ ಉಳಿದೆ ಎಂದು ಕಳವಳ ವ್ಯಕ್ತಡಿಸಿದರು.
ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ಮಾಡಿದಾಗ ಎಸ್ಮೋ ಜಾರಿ ಮಾಡುತ್ತೇವೆ ಎಂದು ಹೆದರಿಸುವ ತಂತ್ರಗಾರಿಕೆಯ ಸರ್ಕಾರ ಮಾಡುತ್ತಿದೆ. ಅಲ್ಲದೆ ಸರ್ಕಾರಿ ಬಸ್‍ಗಳನ್ನು ನಿಲ್ಲಿಸುತ್ತೇವೆ. ಖಾಸಗಿ ಬಸ್‍ಗಳನ್ನು ಓಡಿಸುತ್ತೇವೆ ಎಂದು ಹೇಳುವ ಮೂಲಕ ಬೆದರಿಕೆ ಒಡ್ಡುತ್ತಿದ್ದಾರೆ. ನಮ್ಮ ಮುಷ್ಕರಿದಿಂದ ಸಾರ್ವಜನಿಕರಿಗೆ ತೊಂದರೆಯಾಗಬಹುದು ಆದರೆ ಇದು ನಮಗೆ ಅನಿವಾರ್ಯವಾಗಿದೆ. ಸರ್ಕಾರ ನಮ್ಮ ನ್ಯಾಯಯುತ ಬೇಡಿಕೆ ಈಡೇರಿಸಿದ್ದರೆ ನಾವು ಮುಷ್ಕರದ ಹಾದಿ ತುಳಿಯುತ್ತಿರಲಿಲ್ಲ. ಸರ್ಕಾರ ನಮ್ಮ ಮಾತಿಗೆ ಬೆಲೆ ನೀಡದೆ ಉದ್ದಟತನ ಮಾಡುತ್ತದೆ ಇದರಿಂದ ಮುಷ್ಕರ ಅನಿವಾರ್ಯವಾಗಿದೆ ಎಂದರು.ಪಂಚ ಗ್ಯಾರಂಟಿಗಳನ್ನು ನೀಡಿದ್ದೇವೆ ಎಂದು ಸಾಧನಾ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಾ ಬಂದಿದ್ದಾರೆ. ಆದರೆ ಸಾರಿಗೆ ನೌಕರರ 38 ತಿಂಗಳ ಪರಿಷ್ಕರಣೆ ವೇತನ ಹಿಂಬಾಕಿಯನ್ನು ನೀಡಲು ಆಗುತ್ತಿಲ್ಲ ಏಕೆ ಎಂದು ಪ್ರಶ್ನಿಸಿದ ಅವರು ಸಾರಿಗೆ ನೌಕರರ ಬೇಡಿಕೆ ಈಡೇರವರೆಗೂ ಆ.05ರಿಂದ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿದ್ದೆವೆ ಎಂದು ತಿಳಿಸಿದರು.
ಆ.5 ರಂದು ನಡೆಯುವ ಮುಷ್ಕರದಲ್ಲಿ ಕೆಎಸ್‍ಆರ್‍ಟಿಸಿ ಸ್ಟಾಪ್ ಅಂಡ್ ವರ್ಕರ್ಸ್ ಫೆಡರೇಶನ್, ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಫೆಡರೇಶನ್, ಕೆಎಸ್‍ಆರ್‍ಟಿಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನೌಕರರ ಸಂಘ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಅಧಿಕಾರಿಗಳ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಂಘಗಳು ಸೇರಿದಂತೆ ಇತರೆ ಸಂಘ ಸಂಸ್ಥೆಗಳು ಸಹ ಭಾಗವಹಿಸಲಿವೆ ಎಂದು ತಿಳಿಸಿದರು.ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಕಾರ್ಮಿಕ ಸಂಘಟನೆ ಚಿತ್ರದುರ್ಗ ವಿಭಾಗದ ಅಧ್ಯಕ್ಷ ಕಾಂತರಾಜ್,ಕಾರ್ಯಾಧ್ಯಕ್ಷ ರಹೀಂಸಾಬ್, ಪ್ರಧಾನ ಕಾರ್ಯದರ್ಶಿ ಟಿ.ಅಶೋಕ್, ಉಪಾಧ್ಯಕ್ಷ ಉಮೇಶ್, ಟಿ.ಅಜ್ಜಣ್ಣ, ಮೂರ್ತಿ ನಾಯ್ಕ್, ಸಂಘಟನಾ ಕಾರ್ಯದರ್ಶಿ ರಾಮಾಂಜನೇಯ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ರಾಜಪ್ಪ, ಗೌರ ಅಧ್ಯಕ್ಷ ಎ.ಕೆ.ಮಹದೇವಪ್ಪ, ಎಸ್.ಟಿ. ನೌಕರರ ಸಂಘದ ಅಧ್ಯಕ್ಷ ಎನ್.ಪಿ.ರವಿ, ಗೊಲ್ಲಾಳಪ್ಪ ಗೌಡ ಹಾಗೂ ಉಮಾಪತಿ ಸುದ್ದಿಗೋಷ್ಠಿಯಲ್ಲಿದ್ದರು.